Advertisement

ಎತ್ತಿನ ಬಂಡಿ ಸ್ಪರ್ಧೆಗೆ ಸಾಕ್ಷಿಯಾದ ಜನಸಮೂಹ

11:13 AM Jun 11, 2018 | |

ವಿಜಯಪುರ: ನಗರದ ದರ್ಗಾ ಪ್ರದೇಶದಲ್ಲಿನ ಹಜರತ್‌ ಖ್ವಾಜಾ ಅಮೀನ್‌ ದರ್ಗಾದ ಉರುಸಿನ ಅಂಗವಾಗಿ ಜಾನಪದ ಗ್ರಾಮೀಣ ಕ್ರೀಡಾಕೂಟಕ್ಕಾಗಿ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಎತ್ತಿನಗಾಡಿ ಸ್ಪರ್ಧೆ ರೋಮಾಂಚನ ಮೂಡಿಸಿತು.

Advertisement

ರವಿವಾರ ನಗರದ ಸರ್ವಧರ್ಮ ಸಮನ್ವಯತೆ ಕೇಂದ್ರವಾಗಿರುವ ಹಜರತ್‌ ಖ್ವಾಜಾ ಅಮೀನ್‌ ದರ್ಗಾದ ಉತ್ಸವ ನಿಮಿತ್ತ ರಾಷ್ಟ್ರ ಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಹಜರತ್‌ ಖ್ವಾಜಾ ಅಮೀನ್‌ ದರ್ಗಾದ ಉರುಸಿನ ಅಂಗವಾಗಿ ಹಲವು ವರ್ಷಗಳಿಂದ ಗ್ರಾಮೀಣ ಸೊಗಡಿನ ಸಾಹಸ ಕ್ರೀಡೆಗಳನ್ನು ಆಯೋಜಿಸುತ್ತ ಬರಲಾಗುತ್ತದೆ. ಇದರ ಅಂಗವಾಗಿ ಪ್ರಸಕ್ತ ವರ್ಷ ರಾಷ್ಟ್ರ ಮಟ್ಟದ ಎತ್ತಿನಗಾಡಿ ಸ್ಪರ್ಧೆ ಆಯೋಜಿಸಲಾಗಿತ್ತು.

ಮಾಲೀಕನ ಮನೋಭಾವಕ್ಕೆ ತಕ್ಕಂತೆ ಎತ್ತುಗಳು ಬಂಡಿಗಳನ್ನು ಹೊತ್ತು ಓಡುತ್ತಿದ್ದ ದೃಶ್ಯ ನೆರೆದ ಜನರಲ್ಲಿ ರೋಮಾಂಚನ ಮೂಡಿಸುವಂತೆ ಮಾಡಿತ್ತು. ದರ್ಗಾ ಪ್ರದೇಶದ ರಿಂಗ್‌ ರಸ್ತೆಯಿಂದ ರೇಡಿಯೋ ಮೈದಾನದವರೆಗೆ ಬಂಡಿಯ ನೊಗೆ ಹೊತ್ತ ಜೋಡೆತ್ತುಗಳು ಓಡುತ್ತಲೇ ಇದ್ದವು.
 
ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಗ್ರಾಮೀಣ ಸಾಹಸ ಕ್ರೀಡಾಸಕ್ತರು ಚಪ್ಪಾಳೆ ಮೂಲಕ ಎತ್ತುಗಳನ್ನು ಹಾಗೂ ಚಕ್ಕಡಿಯಲ್ಲಿ ಕುಳಿತ ಸವಾರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದ್ದರು. ಸದರಿ ಸ್ಪರ್ಧೆಯಲ್ಲಿ ಕರ್ನಾಟಕ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಸೀಮಾಂಧ್ರ, ಗೋವಾ ರಾಜ್ಯಗಳ ಸುಮಾರು 60ಕ್ಕೂ ಹೆಚ್ಚು ಎತ್ತಿನ ಗಾಡಿ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ವಿಭಾಗದ ಸ್ಪರ್ಧೆಯನ್ನೂ ಪ್ರತ್ಯೇಕವಾಗಿಯೇ ನಡೆಸಲಾಯಿತು.

ಒಂದು ಕುದುರೆ ಮತ್ತು ಎತ್ತುಗಳ ಜೊತೆಯಾಗಿ ಸ್ಪರ್ಧೆ, ಮಧ್ಯ ವಯಸ್ಸಿನ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಹಾಗೂ ಎರಡು ಮತ್ತು ನಾಲ್ಕು ಹಲ್ಲು ಹಚ್ಚಿದ ಎತ್ತುಗಳ ಓಟದ ಸ್ಪರ್ಧೆ ನಡೆಯಿತು. ಯುವ ಮುಖಂಡ ಜಾವೇದ್‌ ಜಮಾದಾರ ಸ್ಪರ್ಧೆಗೆ ಚಾಲನೆ ನೀಡಿದರು. ಗ್ರಾಮೀಣ ಕ್ರೀಡಾ ಸಾಹಸ ಸ್ಪರ್ಧೆ ಸಂಘಟಕ ಹಾಸಿಂಪೀರ್‌ ವಾಲೀಕಾರ ಮಾತನಾಡಿದರು. ನಬಿಲಾಲ್‌ ಕರ್ಜಗಿ, ಮುಖಂಡರಾದ ಜಹಾಂಗಿರ ಮಮದಾಪುರ, ಮೆಹಬೂಬ ಮಮದಾಪುರ,
ಅಪ್ಪುಗೌಡ ಪಾಟೀಲ, ಕಾಂತು ಹದನೂರ, ಬಸಪ್ಪ ಶೆಟಗಾರ, ಮಸ್ತಾನ್‌ ಯಾದಗಿರ, ಬಾಳು ಹದನೂರ ಇದ್ದರು.

13.25 ಲಕ್ಷ ರೂ. ಬಹುಮಾನ: ಒಂದು ಕುದುರೆ ಮತ್ತು ಎತ್ತುಗಳ ಜೊತೆಯಾಗಿ ಸ್ಪರ್ಧೆಯಲ್ಲಿ ಪಾಪಟ ಸಿಂಧೆ ಚಿಕ್ಕೋಡಿ ಪ್ರಥಮ ಬಹುಮಾನ ಒಂದು ಲಕ್ಷ ರೂ. ಗಿಟ್ಟಿಸಿಕೊಂಡರು. ನಿಪ್ಪಾಣಿಯ ಹೇಮಂತ ಹರಿರಾ 50 ಸಾವಿರ ರೂ. ಬಂದಾ ಕಿಲಾರಿ ಕೊಲ್ಹಾರ ತೃತೀಯ 25 ಸಾವಿರ ರೂ. ಬಹುಮಾನ ಪಡೆದುಕೊಂಡರು. 

Advertisement

ಎರಡನೇಯದಾಗಿ ಮಧ್ಯವಯಸ್ಸಿನ ಜೋಡಿ ಎತ್ತಿನ ಸ್ಪರ್ಧೆಯಲ್ಲಿ ಶಂಕರ ಜೊಗನಿ ಪ್ರಥಮ ಸ್ಥಾನ ಪಡೆದು 2 ಲಕ್ಷ ರೂ. ನಗದು ಬಹುಮಾನ, ರಾಮದುರ್ಗದ ತಿಪ್ಪಣ್ಣ ಹುದ್ದಾರ ದ್ವಿತೀಯ ಬಹುಮಾನ ಪಡೆದು 1 ಲಕ್ಷ ರೂ. ಹಾಗೂ ಮುಸಾ ಮುಜಾವರ ಕೊಲ್ಹಾರ 50 ಸಾವಿರ ರೂ. ತೃತೀಯ ಬಹುಮಾನ ಗಿಟ್ಟಿಸಿದರು. ಮೂರನೆಯದಾಗಿ ಎರಡು ಮತ್ತು ನಾಲ್ಕು ಹಲ್ಲು ಹಚ್ಚಿದ ಎತ್ತುಗಳ ಓಟದಲ್ಲಿ ಪ್ರಥಮ ಬಹುಮಾನ ಬಂಡಾ ಸಿದ್ದೇವಾಡಿ ಮಿರಜ 5 ಲಕ್ಷ ರೂ. ಪಡೆದರು. ದ್ವಿತೀಯ ಬಹುಮಾನ ಸಾದಿಕ ಅಜರಾ ಕೊಲ್ಹಾಪುರ 2.50 ಲಕ್ಷ ರೂ. ಪಡೆದರು. ತೃತೀಯ ಬಹುಮಾನ ಅಪ್ಪುಗೌಡ ಪಾಟೀಲ, ಗೋವಿಂದಪುರ ಸಾಂಗ್ಲಿ 1.50 ಲಕ್ಷ ರೂ. ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next