Advertisement

ದೇಶಾಭಿಮಾನ ಮೂಡಿಸುವ ಗೀತೆಗಳ ಸಮ್ಮಿಲನ

12:57 PM Aug 16, 2018 | Team Udayavani |

ಬೆಂಗಳೂರು: ಜನಪದ ಸೊಗಡು, ಅದಕ್ಕೆ ಪೂರಕವಾಗಿ ನೃತ್ಯರೂಪಕಗಳ ಮೆರಗು, ದೇಶಾಭಿಮಾನ ಮೂಡಿಸುವ ಗೀತೆಗಳ ಸಮ್ಮಿಲನದ ಸಂಸ್ಕೃತಿಯ ಅನಾವರಣಕ್ಕೆ ರವೀಂದ್ರ ಕಲಾಕ್ಷೇತ್ರ ಬುಧವಾರ ವೇದಿಕೆಯಾಯಿತು. 

Advertisement

ಸ್ವಾತಂತ್ರೊéàತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವು ಗಣ್ಯರ ಗೈರುಹಾಜರಿ ನಡುವೆಯೂ ಪ್ರೇಕ್ಷಕರ ಮನಗೆದ್ದಿತು. ನಾಡಹಬ್ಬದ ಪ್ರಯುಕ್ತ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ರಾಜ್ಯಪಾಲರು ವಜೂಭಾಯಿ ವಾಲಾ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಆಹ್ವಾನಿಸಲಾಗಿತ್ತು ಹಾಗೂ ಆಹ್ವಾನ ಪತ್ರಿಕೆಯಲ್ಲಿ ಗಣ್ಯರ ಹೆಸರೂ ಇತ್ತು.

ಆದರೆ, ಅವರಾರೂ ಆಗಮಿಸಲಿಲ್ಲ. ಈ ಗೈರುಹಾಜರಿ ನಡುವೆಯೇ ಕಲಾವಿದರು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಕೊರತೆ ನೀಗಿಸಿತು.ಮಂಡ್ಯದ ಕೆ.ಎಂ.ನಾಗೇಶ್‌ ಮತ್ತು ತಂಡದ ಪೂಜಾ ಕುಣಿತ, ಚಾಮರಾಜನಗರದ ಬಾಲು ಮತ್ತು ತಂಡದ ಗೊರವರ ಕುಣಿತ, ಮೂಡಬಿದರೆ ಲೀಲಾಧರ ಹಾಗೂ ತಂಡದ ಕಂಗೀಲು ನೃತ್ಯ, ವಿಜಯಪುರದ ಹುಚ್ಚಪ್ಪ ಮಾದಾರ ಹಾಗೂ ತಂಡದ ಕೀಲುಕುದುರೆ, ಚಿತ್ರದುರ್ಗದ ಶ್ರೀನಿವಾಸ ಮತ್ತು ತಂಡದ ಗಾರುಡಿ ಗೊಂಬೆ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.

ಪ್ರೇಮಲತಾ ದಿವಾಕರ ಶಾಸಿ ಮತ್ತು ತಂಡದ ದೇಶಭಕ್ತಿ ಹಾಗೂ ಸುಗಮ ಸಂಗೀತ, ಶಿವಮೊಗ್ಗದ ಗಣೇಶ್‌ ದೇಸಾಯಿ ಮತ್ತು ತಂಡದಿಂದ ಜನಪದ ಗೀತೆ, ನಗರದ ಪದ್ಮಿನಿ ಅಚ್ಚಿ ಮತ್ತು ತಂಡದ ನೃತ್ಯ ರೂಪಕ, ಬೆಂಗಳೂರು ಗ್ರಾಮಾಂತರದ ರವಿತೇಜ್‌ ನಾಗ್‌ ಮತ್ತು ತಂಡ ಪ್ರದರ್ಶಿಸಿದ ಡೊಳ್ಳು ಕುಣಿತಕ್ಕೆ ನೆರೆದ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next