ಬೆಂಗಳೂರು: ಮಾನಸಿಕ ಖನ್ನತೆಯಿಂದ ಆರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಅತ್ರೇಯಿ ಮಾಜುಂದಾರ್ (35) ಪತ್ತೆಯಾಗಿದ್ದಾರೆ. ನಗರದ ತಾಜ್ ವಿವಂತ್ ಹೋಟೆಲ್‌ನಲ್ಲಿ ತಂಗಿದ್ದ ಅತ್ರೇಯಿ ಅವರನ್ನು ಕಂಡ ಭದ್ರತಾ ಸಿಬ್ಬಂದಿ ಕೂಡಲೇ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದ್ದರು. ಅನಂತರ ಮಾರತ್ತಹಳ್ಳಿ ಪೊಲೀಸರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಅತ್ರೇಯಿ ಅವರನು ಪೋಷಕರಿಗೆ ಒಪ್ಪಿಸಿದ್ದಾರೆ. ಸದ್ಯ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏ.4ರಂದು ಕೆನಾಡದಿಂದ ಬೆಂಗಳೂರಿಗೆ ಆಗಮಿಸಿದ ಅತ್ರೇಯಿ ಅವರನ್ನು ತಂದೆ ಬಿ.ಮಾಜುಂದಾರ್ ವಿಮಾನ ನಿಲ್ದಾಣದಿಂದ ಬೆಳ್ಳಂದೂರಿನ ಮನೆಗೆ ಕರೆತಂದಿದ್ದರು. ಕೆಲ ಗಂಟೆಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆದ ಅತ್ರೇಯಿ, ರಾತ್ರಿ 9 ಗಂಟೆ ಸುಮಾರಿಗೆ ಇದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿ ಮಾರತ್ತಹಳ್ಳಿ ಠಾಣೆಗೆ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ಹತ್ತಿರದ ಎಲ್ಲ ಹೋಟೆಲ್‌ಗಳು, ಪಿಜಿಗಳಿಗೆ ಫೋಟೋ ಸಮೇತ ಮಾಹಿತಿ ಕೊಟ್ಟು ಪತ್ತೆಗೆ ಮನವಿ ಮಾಡಿದ್ದರು. ಅಷ್ಟೇ ಅಲ್ಲದೇ, ಆಕೆಯ ಸ್ನೇಹಿತರು, ಸಂಬಂಧಿಕರು ಅತ್ರೇಯಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಪತ್ತೆಯಾದರೆ ದಯವಿಟ್ಟು ಮಾಹಿತಿ ನೀಡುವಂತೆ ಮೊಬೈಲ್ ನಂಬರ್ ಪ್ರಕಟಿಸಿದ್ದರು.
ಸ್ಕಿಜೋಫೇರ್ನಿಯಾ ಕಾಯಿಲೆ: ಅತ್ರೇಯಿ ಕಳೆದ ಐದು ವರ್ಷಗಳಿಂದ ಸ್ಕಿಜೋಫೇರ್ನಿಯಾ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈಕೆ ಅಪರಿಚಿತರು ತಮ್ಮನ್ನು ಕೊಲ್ಲುತ್ತಾರೆ ಎಂಬ ಆತಂಕದಿಂದಲೇ ಓಡಾಡುತ್ತಿದ್ದರು.
ಹೀಗಾಗಿ ಒಂದೆಡೆ ನೆಲೆಸದೆ ಬೇರೆ ಬೇರೆ ಕಡೆಗಳಲ್ಲಿ ತಂಗುತ್ತಿದ್ದರು. ಅಷ್ಟೇ ಅಲ್ಲದೇ, ಇತ್ತೀಚೆಗೆ ಖನ್ನತೆಗೊಳಗಾಗಿ ಓಂಟಿಯಾಗಿ ವಾಸಿಸಲು ಇಷ್ಟ ಪಡುತ್ತಿದ್ದ ಆತ್ರೇಯಿ, ಯಾರಿಗೂ ಮಾಹಿತಿ ನೀಡದೇ ಹೋಟೆಲ್‌ಗಳಲ್ಲಿ ತಂಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ರಾಷ್ಟ್ರೀಯ ಕಾನೂನು ಕಾಲೇಜು ವಿದ್ಯಾರ್ಥಿಯಾಗಿರುವ ಅತ್ರೇಯಿ, ಯಾಲೆ ವಿವಿಯಲ್ಲಿ ವ್ಯಾಸಂಗ ಮಾಡಿದ್ದಾರೆ. ಪಿ.ಎಚ್‌ಡಿ ನಂತರ ಸಂಶೋಧನಾ ಅಧ್ಯಯನಕ್ಕಾಗಿ ಟೊರಂಟೋಗೆ ತೆರಳಿದ್ದರು.