ಮನಸ್ಸಿನಲ್ಲಿ ಸದಾ ಒಳ್ಳೆಯ ಆಲೋಚನೆಗಳು, ನಾಲಗೆಯ ಮೇಲೆ ಸರ್ವಥಾ ಒಳ್ಳೆಯ ನುಡಿಗಳು ಇರಬೇಕು ಎಂಬುದು ನಮ್ಮ ಹಿರಿಯರ ಮಾತು. ಸಕಾರಾತ್ಮಕ ಯೋಚನೆಗಳಿಂದ ನಮ್ಮ ಸುತ್ತ ಧನಾತ್ಮಕ ವಲಯವೊಂದು ನಿರ್ಮಾಣವಾಗುತ್ತದೆ ಎನ್ನುತ್ತಾರೆ. ಹಾಗೆಯೇ ಒಳ್ಳೆಯ ಮಾತುಗಳು ಕೂಡ ಒಳ್ಳೆಯದನ್ನೇ ಮಾಡುತ್ತವೆ. ಸದಾ ಸಿಡುಕುತ್ತ, ಕೇಡನ್ನು ಆಲೋಚಿಸುತ್ತ ಇದ್ದರೆ ಋಣಾತ್ಮಕ ಪರಿಸರ ಸೃಷ್ಟಿಯಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ, ಕಚೇರಿಯ ಒಳಹೊಕ್ಕ ಕೂಡಲೇ, ಕೆಲಸ ವೊಂದನ್ನು ಆರಂಭಿಸು ವುದಕ್ಕೆ ಮುನ್ನ ದೇವರನ್ನು ನೆನೆಯುವುದು, ಒಳಿತಾ ಗುತ್ತದೆ ಎಂಬ ಆಲೋ ಚನೆ ಮಾತ್ರದಿಂದಲೇ ಉಂಟಾಗುವ ಪರಿ ಣಾಮ ವಿಭಿನ್ನವಾಗಿ ರುತ್ತದೆ. ದೇವರು ಒಳ್ಳೆಯದು ಮಾಡು ತ್ತಾನೆಯೋ ಇಲ್ಲವೋ; ಕೆಲಸದಲ್ಲಿ ಜಯವೇ ಆಗುತ್ತದೆಯೋ ಇಲ್ಲವೋ ಎಂಬುದನ್ನು ಬದಿಗಿಡಿ. ಆದರೆ ಮಾಡುವ ಕೆಲಸವನ್ನು ಪೂರ್ಣ ಸಾಮರ್ಥ್ಯದೊಂದಿಗೆ, ಒಳ್ಳೆಯದೇ ಆಗುತ್ತದೆ ಎಂಬ ವಿಶ್ವಾಸದೊಂದಿಗೆ ಮಾಡಲು ನಮಗೆ ಸಾಧ್ಯವಾಗುತ್ತದೆ ಯಲ್ಲ! ಇಷ್ಟು ಮಾತ್ರದಿಂದಲೇ ಅಪೂರ್ವ ಪರಿವರ್ತನೆ ಸಾಧ್ಯ.
ಹೀಗೊಂದು ಕಥೆ.
ಒಂದು ಕಾಲದಲ್ಲಿ ಒಬ್ಬ ವೃದ್ಧ ರೈತ ಇದ್ದ. ಅವನ ಪುಟಾಣಿ ಮೊಮ್ಮಗ ಎಲ್ಲ ಕೆಲಸಗಳಲ್ಲೂ ಅಜ್ಜನಿಗೆ ಸಂಗಾತಿ.
ಪ್ರತೀ ದಿನ ಬೆಳ್ಳಂಬೆಳಗ್ಗೆ ಎದ್ದು ನಿತ್ಯವಿಧಿಗಳನ್ನು ಪೂರೈಸಿ ಸ್ನಾನ ಮಾಡಿ ಭಗವದ್ಗೀತೆಯನ್ನು ಪಠಿಸುವುದು ವೃದ್ಧನ ರೂಢಿ. ಅಜ್ಜ ಎದ್ದ ಸ್ವಲ್ಪ ಹೊತ್ತಿನಲ್ಲಿಯೇ ಮೊಮ್ಮಗನೂ ಹಾಸಿಗೆ ಬಿಟ್ಟೇಳುತ್ತಿದ್ದ. ಅಜ್ಜನನ್ನು ಅನುಸರಿಸುತ್ತಿದ್ದ. ತಾನೂ ಅಜ್ಜನ ಹಾಗೆ ಆಗಬೇಕು ಎಂಬುದು ಮೊಮ್ಮಗನ ಹಂಬಲ. ಅಜ್ಜನ ಪಾರಾಯಣ ಮುಗಿದ ಬಳಿಕ ಗೀತೆಯನ್ನು ತಾನೂ ಕೈಗೆತ್ತಿಕೊಂಡು ಓದಲು ಪ್ರಯತ್ನಿಸುತ್ತಿದ್ದ.
ಒಂದು ದಿನ ಅಜ್ಜ ಬಚ್ಚಲು ಒಲೆಗೆ ಬೆಂಕಿ ಹಾಕುತ್ತಿದ್ದಾಗ ಮೊಮ್ಮಗ ಅಲ್ಲಿಗೆ ಬಂದು ಕೇಳಿದ, “ಅಜ್ಜಾ, ನಾನು ಕೂಡ ನಿಮ್ಮ ಹಾಗೆ ಭಗವದ್ಗೀತೆ ಓದಬೇಕು ಎಂದು ಆಶೆ. ಓದಲು ಪ್ರಯತ್ನಿಸುತ್ತೇನೆ ಕೂಡ. ಆದರೆ ನನಗೇನೂ ಅರ್ಥವಾಗು ವುದಿಲ್ಲ. ಅಲ್ಲದೆ ಇವತ್ತು ಓದಿದ್ದು ನಾಳೆಗೆ ಮರೆತು ಹೋಗುತ್ತದೆ. ಹಾಗಾದರೆ ಇಷ್ಟರ ತನಕ ಓದಿದ್ದು ನಿಷ#ಲವೇ?’
ಅಜ್ಜ ಏನೂ ಹೇಳಲಿಲ್ಲ. ಬದಲಿಗೆ ತಾನು ಇದ್ದಿಲುಗಳನ್ನು ತುಂಬಿಸಿ ಇರಿಸಿದ್ದ ಬೆತ್ತದ ಸಣ್ಣ ಬುಟ್ಟಿಯನ್ನು ಮೊಮ್ಮಗನ ಕೈಗೆ ಕೊಟ್ಟ ಮತ್ತು ಹತ್ತಿರವೇ ಇರುವ ತೊರೆ ಯಿಂದ ನೀರು ತುಂಬಿ ತರುವಂತೆ ಹೇಳಿದ.
ಮೊಮ್ಮಗ ಅಜ್ಜ ಹೇಳಿ ದಂತೆಯೇ ತೊರೆಯತ್ತ ಹೋಗಿ ಬುಟ್ಟಿಯಲ್ಲಿ ನೀರು ತುಂಬಿಕೊಂಡು ಬಂದ. ಆದರೆ ಮನೆಯ ಹತ್ತಿರ ಬರುವಷ್ಟರಲ್ಲಿ ನೀರೆಲ್ಲ ಸೋರಿಹೋಯಿತು. ಇನ್ನೊಮ್ಮೆ ಪ್ರಯತ್ನಿಸಿದ. ಆಗಲೂ ಆಗಲಿಲ್ಲ.
ಮನೆಗೆ ಬಂದು “ಇಲ್ಲ ಅಜ್ಜಾ ನೀರು ಸೋರಿ ಹೋಯಿತು’ ಎಂದು ಹೇಳಿದ.
“ಪ್ರಾಯಃ ವೇಗವಾಗಿ ಓಡಿ ಬಂದರೆ ಸಾಧ್ಯವಾಗಬಹುದು’ ಎಂದ ಅಜ್ಜ.
ಹುಡುಗ ನೀರು ತುಂಬಿಸಿಕೊಂಡು ಓಡೋಡಿ ಬಂದ. ಆದರೂ ನೀರು ಸೋರಿ ಹೋಯಿತು. ಎರಡೂ¾ರು ಬಾರಿ ಪ್ರಯತ್ನಿಸಿದರೂ ಆಗಲಿಲ್ಲ.
“ಇಲ್ಲ, ಇದು ಸಾಧ್ಯವೇ ಇಲ್ಲ. ಈ ಪ್ರಯತ್ನ ನಿರರ್ಥಕ’ ಎಂದು ಮೊಮ್ಮಗ ಅಜ್ಜನಿಗೆ ವಿವರಿಸಿದ.
“ನಿನ್ನ ಕೆಲಸ ಅರ್ಥವಿಲ್ಲದ್ದು ಎನ್ನುತ್ತೀಯಾ? ಬುಟ್ಟಿಯನ್ನೊಮ್ಮೆ ಗಮನವಿಟ್ಟು ನೋಡು’ ಎಂದ ಅಜ್ಜ.
ನಿಜ! ಇದ್ದಿಲು ತುಂಬಿ ಮಸಿ ಮೆತ್ತಿ ಕೊಂಡಿದ್ದ ಬುಟ್ಟಿ ನೀರು ತರುವ ಪ್ರಯತ್ನದಲ್ಲಿ ತೊರೆಯಲ್ಲಿ ಮುಳುಗಿಸಿ ಮುಳುಗಿಸಿ ಸ್ವತ್ಛವಾಗಿತ್ತು.
“ಗೊತ್ತಿಧ್ದೋ ಗೊತ್ತಿಲ್ಲದೆಯೋ; ಅರ್ಥವಾಗಿಯೋ ಅರ್ಥವಾಗದೆಯೋ ನೀನು ದಿನವೂ ಗೀತೆಯನ್ನು ಅಷ್ಟಿಷ್ಟು ಓದುವುದರಿಂದ ಮನಸ್ಸು ಈ ಬುಟ್ಟಿ ಯಂತೆ ಸ್ವತ್ಛವಾಗುತ್ತದೆ, ಶುಭ್ರವಾಗು ತ್ತದೆ’ ಎಂದ ಅಜ್ಜ.
ಸಕಾರಾತ್ಮಕ ಆಲೋಚನೆಗಳು, ಮಾತು, ನಡತೆಯ ಪರಿಣಾಮವೂ ಹೀಗೆಯೇ.
( ಸಾರ ಸಂಗ್ರಹ)