Advertisement

ಸೇನೆಗೆ ತಲೆನೋವಾದ ಕಾರ್‌ ಬಾಂಬ್‌ ಭೀತಿ

12:30 AM Feb 17, 2019 | Team Udayavani |

ಕಾಶ್ಮೀರದಲ್ಲಿ ಉಗ್ರರು ತಮ್ಮ ಕಾರ್ಯತಂತ್ರವನ್ನು ಆಗಾಗ ಬದಲಿಸುತ್ತಲೇ ಇರುತ್ತಾರೆ. ಆದರೆ ಈ ಬಾರಿ ಅತ್ಯಂತ ಭೀಕರ ಹಾಗೂ ಕ್ರೂರವಾದ ದಾರಿ ಹಿಡಿದಿರುವ ಉಗ್ರರು ಸ್ಫೋಟ ನಡೆಸುವುದಕ್ಕಾಗಿ, ವಾಹನಗಳಲ್ಲಿ ಐಇಡಿಗಳನ್ನಿಡುವ ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ. ಗುಪ್ತಚರ ಪಡೆಗಳು ಇನ್ನೂ ಇಂತಹ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆ ನೀಡಿರುವುದು ಈಗ ಭಾರತೀಯ ಸೇನೆಯ ನಿದ್ದೆಗೆಡಿಸಿದೆ.

Advertisement

ಐಇಡಿಗಳು ಅತ್ಯಂತ ವೆಚ್ಚದಾಯಕವಾಗಿದ್ದರಿಂದ ಹಾಗೂ ಇದನ್ನು ಕಾರಿಗೆ ಅಳವಡಿಸಲು ಪರಿಣಿತಿ ಅಗತ್ಯವಿರುವುದರಿಂದ ಒಂದೇ ಬಾರಿಗೆ ಉಗ್ರರು ಹಲವು ಕಾರುಗಳಿಗೆ ಐಇಡಿ ಅನ್ನು ಅಳವಡಿಸಿರುವ ಸಾಧ್ಯತೆಯಿದೆ. ಪಾಕಿಸ್ಥಾನದ ಗಡಿ ದಾಟಿ ಬಂದ ಪರಿಣಿತ ಉಗ್ರರು ಈ ಐಇಡಿಗಳನ್ನು ವಾಹನಗಳಿಗೆ ಅಳವಡಿಸಿ ಗಡಿಯಾಚೆ ತೆರಳಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದರಲ್ಲಿ ಪರಿಣಿತಿ ಹೊಂದಿದ್ದಾನೆ ಎನ್ನಲಾದ ಜೈಶ್‌ ಎ ಮೊಹಮ್ಮದ್‌ ಕಮಾಂಡರ್‌ ಅಬ್ದುಲ್‌ ರಶೀದ್‌ ಘಾಜಿಯನ್ನು ಹುಡುಕಲು ಸೇನೆ ನಿರ್ಧರಿಸಿದೆ. ಅಲ್ಲದೆ, ಈ ಐಇಡಿಗಳನ್ನು ಅಳವಡಿಸಿದ ಸ್ಥಳವನ್ನು ಪತ್ತೆ ಮಾಡಲೂ ನಿರ್ಧರಿಸಲಾಗಿದೆ. ಇನ್ನೊಂದೆಡೆ ಇಂತಹ ದಾಳಿಯನ್ನು ನಿರ್ವಹಿಸುವ ಬಗ್ಗೆಯೂ ಸೇನೆ ರೂಪುರೇಷೆ ರಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜೀವಹಾನಿ ಹೆಚ್ಚು: ವಾಹನಗಳಲ್ಲಿ  ಐಇಡಿಗಳನ್ನು ಇಟ್ಟು ಸ್ಫೋಟಗೊಳಿಸುವುದರಿಂದ ಅತ್ಯಂತ ಹೆಚ್ಚಿನ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಯುದ್ಧದ ಪ್ರದೇಶಗಳಲ್ಲಿ ಇದನ್ನು ಉಗ್ರರು ಹೆಚ್ಚಾಗಿ ಬಳಸುತ್ತಾರೆ. ಇಂತಹ ದಾಳಿಗಳಲ್ಲಿ ವಾಹನದ ಭಾಗಗಳೇ ಆಯುಧಗಳಾಗಿ ಕೆಲಸ ಮಾಡುತ್ತವೆ. ಇಂಧನ ಟ್ಯಾಂಕ್‌ ಸಿಡಿಯುವುದರಿಂದ, ಸ್ಫೋಟದ ತೀವ್ರತೆಯೂ ಹೆಚ್ಚುತ್ತದೆ. ಸ್ಫೋಟಗೊಂಡ ಸ್ಥಳದಲ್ಲಿ ಬೇಗ ಬೆಂಕಿ ಹೊತ್ತಿಕೊಳ್ಳುವುದರಿಂದ ಜೀವಹಾನಿಯೂ ಹೆಚ್ಚುತ್ತದೆ.

ಸ್ಫೋಟಿಸುವುದು ಹೇಗೆ?: ಇರಾಕ್‌ ಮತ್ತು ಅಪಾ^ನಿಸ್ತಾನದಲ್ಲಿ ಕಾರ್‌ ಬಾಂಬ್‌ಗಳು ಸೇನೆಗೆ ಭಾರಿ ತಲೆನೋವಾಗಿತ್ತು. ಇವುಗಳನ್ನು ಒಮ್ಮೆ ಅಳವಡಿಸಿದರೆ ಯಾವುದೇ ಕ್ಷಣದಲ್ಲಾದರೂ ಸಿಡಿಸಬಹುದು. ಕಾರು ಚಲನೆಯಲ್ಲಿರುವಾಗ ಬಾಂಬ್‌ ಪತ್ತೆ ಸಾಧ್ಯವೂ ಇಲ್ಲ. ಕಾರ್‌ ಪರಿಶೀಲನೆ ಮಾಡುವಾಗಲೇ ಸಿಡಿಸುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಇದನ್ನು ತಡೆಯುವುದು ಅತ್ಯಂತ ಕಷ್ಟಕರ ಎಂದು ಹೇಳಲಾಗುತ್ತದೆ. ಕಾರ್‌ನಲ್ಲಿನ ಹಿಂಬದಿ ಸೀಟ್‌ನಲ್ಲಿ ಅಥವಾ ಬೂಟ್‌ ಸ್ಪೇಸ್‌ನಲ್ಲಿ ಬಾಂಬ್‌ ಇಡಲಾಗುತ್ತದೆ. ಚಾಲಕರ ಬದಿ ಬಾಗಿಲು ತೆಗೆದಾಗ ಅಥವಾ ಇಂಜಿನ್‌ ಆಫ್ ಮಾಡಿದಾಗ ಅಥವಾ ಅಕ್ಸಲರೇಟರ್‌ ಸಂಪೂರ್ಣ ಒತ್ತಿದಾಗ ಸ್ಫೋಟಗೊಳ್ಳುವಂತೆ ಹೊಂದಿಸಬಹುದಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next