Advertisement

ಮಧ್ಯಮ ವರ್ಗದ ಹುಡುಗನ ಕಲರ್‌ಫ‌ುಲ್‌ ಕನಸು

04:56 PM Apr 21, 2019 | Lakshmi GovindaRaju |

“ನಿನಗೆ ನೀನು ಪ್ರೀತಿಸುವ ಆ ಸಂಗೀತಾ ಬೇಕಾ ಅಥವಾ ನಿನ್ನನ್ನು ಪ್ರೀತಿಸುವ ಈ ಸಂಗೀತಾ ಬೇಕಾ’  ಕಣ್ತುಂಬ ಕನಸು ಕಟ್ಟಿಕೊಂಡಿರುವ ನಾಯಕನಿಗೆ ನಾಯಕಿ ಹೀಗೆ ಖಡಕ್‌ ಆಗಿ ಹೇಳುತ್ತಾಳೆ. ಇತ್ತ ಕಡೆ ಮನೆ ಬಂದರೆ ನಾಯಕನ ತಂದೆ ಕೂಡಾ, “ಕನಸಿನ ಜೊತೆಗೆ ಎಜುಕೇಶನ್‌ ಕೂಡಾ ಮುಖ್ಯ.

Advertisement

ಬೆನ್ನ ಹಿಂದೆ ಶಿಕ್ಷಣದ ಜೊತೆಗೆ, ಆ ನಂತರ ಕನಸು ಸಾಕಾರಗೊಳಿಸು’ ಎನ್ನುತ್ತಾರೆ. ಹಾಗಾದರೆ ನಾಯಕ ಏನು ಮಾಡಬೇಕು, ತನ್ನ ಗುರಿಸಾಧಿಸಬೇಕಾ, ಪ್ರೀತಿಸಿದ ಹುಡುಗಿನಾ ಮದುವೆಯಾಗಬೇಕಾ ಅಥವಾ ಎಲ್ಲವನ್ನು ಬದಿಗೊತ್ತಿ ಶಿಕ್ಷಣ ಮುಂದುವರೆಸಬೇಕಾ? ಈ ಗೊಂದಲದಲ್ಲಿರುವ ನಾಯಕ ಅಂತಿಮವಾಗಿ ಏನು ಮಾಡುತ್ತಾನೆಂಬ ಕುತೂಹಲವಿದ್ದರೆ ನೀವು “ಪಡ್ಡೆಹುಲಿ’ ಚಿತ್ರ ನೋಡಬಹುದು.

ಒಬ್ಬ ಹೊಸ ಹೀರೋನನ್ನು ಲಾಂಚ್‌ ಮಾಡುವಾಗ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅದರಲ್ಲೂ ಕಮರ್ಷಿಯಲ್‌ ಹೀರೋ ಆಗಿ ಎಂಟ್ರಿಕೊಡುವಾಗ ಚಿತ್ರತಂಡ ಸ್ವಲ್ಪ ಹೆಚ್ಚೇ ಎಚ್ಚರವಹಿಸಬೇಕಾಗುತ್ತದೆ. ಆ ಎಲ್ಲಾ ಎಚ್ಚರದೊಂದಿಗೆ ಮಾಡಿದ ಸಿನಿಮಾ “ಪಡ್ಡೆಹುಲಿ’ ಎಂದರೆ ತಪ್ಪಲ್ಲ. ಹಾಗಾದರೆ ಸಿನಿಮಾದಲ್ಲಿ ಅಂಥದ್ದೇನಿದೆ ಎಂದು ನೀವು ಕೇಳಬಹುದು.

ವಿಭಿನ್ನ ಶೈಲಿಯ ಹಾಡುಗಳು, ಜೋಶ್‌ ತುಂಬಿರುವ ಡ್ಯಾನ್ಸ್‌, ಮಾಸ್‌ ಪ್ರಿಯರಿಗೆ ಇಷ್ಟವಾಗುವ ಫೈಟ್‌, ಯಂಗ್‌ಸ್ಟಾರ್ಗೆ ಬೇಕಾದ ಲವ್‌ಸ್ಟೋರಿ, ಫ್ಯಾಮಿಲಿ ಆಡಿಯನ್ಸ್‌ಗೆ ಬೇಕಾದ ಒಂದು ಸಂದೇಶ … ಈ ಎಲ್ಲಾ ಅಂಶಗಳನ್ನು ಒಂದೇ ತಟ್ಟೆಯಲ್ಲಿಟ್ಟು “ಪಡ್ಡೆಹುಲಿ’ಯಲ್ಲಿ ಕೊಡಲಾಗಿದೆ. ಹಾಗಾಗಿ, ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಎನ್ನಲು ಅಡ್ಡಿಯಿಲ್ಲ.

ಹಾಗಾದರೆ ಇದು ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾನಾ ಎಂದು ನೀವು ಕೇಳಬಹುದು. ಹೊಸ ಹುಡುಗನನ್ನು ಲಾಂಚ್‌ ಮಾಡುವಾಗ ಚಿತ್ರತಂಡ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಗೋಜಿಗೆ ಹೋಗಬಾರದೆಂಬ ಕಾರಣಕ್ಕೆ ಅದ್ಧೂರಿಯಾಗಿ ಒಂದು ಕಮರ್ಷಿಯಲ್‌ ಸಿನಿಮಾವನ್ನು ಕಟ್ಟಿಕೊಟ್ಟಿದೆ.

Advertisement

ಚಿತ್ರದುರ್ಗದಿಂದ ಆರಂಭವಾಗುವ ಸಿನಿಮಾ, ದಾವಣಗೆರೆ ಸುತ್ತಿಕೊಂಡು ಮುಂದೆ ಬೆಂಗಳೂರಿಗೆ ಬರುತ್ತದೆ. ಇದಕ್ಕೆಲ್ಲಾ ಕಾರಣ ನಾಯಕನ ಕನಸು. ತಾನು ಸಂಗೀತ ಕ್ಷೇತ್ರದಲ್ಲಿ ಸಾಧಿಸಬೇಕು, ರಾಕ್‌ಸ್ಟಾರ್‌ ಆಗಬೇಕೆಂಬ ನಾಯಕನ ಕನಸಿನೊಂದಿಗೆ ಸಾಗುವ ಸಿನಿಮಾದಲ್ಲಿ ಆಗಾಗ ವಿಷ್ಣುವರ್ಧನ್‌ ಅಭಿಮಾನಿಗಳನ್ನು ಖುಷಿಪಡಿಸುವ ಕೆಲಸವನ್ನು ಮಾಡಲಾಗಿದೆ.

ಅದಕ್ಕೆ ಕಾರಣ ನಾಯಕನ ಹೆಸರು ಸಂಪತ್‌ ಹಾಗೂ ಕೋಟೆ ಹಿನ್ನೆಲೆಯ ಹುಡುಗ. ಜೊತೆಗೆ ವಿಷ್ಣುವರ್ಧನ್‌ ಅಭಿಮಾನಿ….. ಚಿತ್ರದ ಕಥೆ ಆರಂಭವಾಗಿ ಸಾಗುವ ರೀತಿ ನೋಡಿದಾಗ ನಿಮಗೆ ತಮಿಳು ಚಿತ್ರವೊಂದರ ನೆನಪಾಗಬಹುದು. ತಮಿಳಿನ “ಮಿಸೈ ಮುರುಕ್ಕು’ ಸಿನಿಮಾದ ಛಾಯೆ ಚಿತ್ರದಲ್ಲಿ ಕಂಡರೂ, ಚಿತ್ರತಂಡ ಅದರಿಂದ ಹೆಚ್ಚೇನು ಪ್ರಭಾವಿತವಾಗಿಲ್ಲ.

ಕನ್ನಡ ನೇಟಿವಿಟಿ, ಕನ್ನಡ ಕವಿಗಳ ಹಾಡು, ದಾಸರ ಪದ, ವಚನಗಳನ್ನು ಬಳಸಿಕೊಳ್ಳುವ ಮೂಲಕ ಸಿನಿಮಾವನ್ನು ಕನ್ನಡಮಯ ಮಾಡಿದೆ. ಜೊತೆಗೆ ಇಡೀ ಸಿನಿಮಾವನ್ನು ಅದ್ಧೂರಿಯಾಗಿ ಕಟ್ಟಿಕೊಡಲಾಗಿದೆ. ಚಿತ್ರತಂಡದ ಈ ಪ್ರಯತ್ನವನ್ನು ಮೆಚ್ಚಬೇಕು. ಇನ್ನು, ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ಹಾಗೂ ಪುನೀತ್‌ ರಾಜಕುಮಾರ್‌ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ.

ಹಾಗಂತ ಚಿತ್ರತಂಡ ಆ ಪಾತ್ರಗಳನ್ನು ಹೆಚ್ಚು ಬೆಳೆಸದೇ, ಅಗತ್ಯಕ್ಕೆ ತಕ್ಕಷ್ಟು ಬಳಸಿಕೊಂಡಿದೆ. ಸಿನಿಮಾ ನೋಡಿ ಹೊರಬಂದಾಗ, ಸಿನಿಮಾದ ಅವಧಿ ಕೊಂಚ ಜಾಸ್ತಿಯಾಯಿತೆಂಬ ಭಾವನೆ ಬರದೇ ಇರದು. ಚಿತ್ರದ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿ ಟ್ರಿಮ್‌ ಮಾಡುವ ಅವಕಾಶವಿತ್ತು.

ನಾಯಕ ಶ್ರೇಯಸ್‌ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ.  ಕಮರ್ಷಿಯಲ್‌ ಹೀರೋ ಆಗಿ ನೆಲೆಕಾಣುವ ಎಲ್ಲಾ ಲಕ್ಷಣಗಳನ್ನು ತೋರಿದ್ದಾರೆ. ಡ್ಯಾನ್ಸ್‌, ಫೈಟ್‌ನಲ್ಲಿ ಶ್ರೇಯಸ್‌ ಎನರ್ಜಿ ಮೆಚ್ಚುವಂಥದ್ದೇ. ನಟನೆಯಲ್ಲೂ ಶ್ರೇಯಸ್‌ ಹಿಂದೆ ಬಿದ್ದಿಲ್ಲ. ನಾಯಕಿ ನಿಶ್ವಿ‌ಕಾ ನಾಯ್ಡು ಕೂಡಾ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.

ಮಗನಿಗೆ ಪ್ರೋತ್ಸಾಹ ತುಂಬುವ ತಂದೆಯಾಗಿ ರವಿಚಂದ್ರನ್‌ ಇಷ್ಟವಾಗುತ್ತಾರೆ. ಉಳಿದಂತೆ ಚಿಕ್ಕಣ್ಣ, ಅಮಿತ್‌, ಸುಧಾರಾಣಿ ಸೇರಿದಂತೆ ಇತರರು ತಮ್ಮ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತದ ಹಾಡುಗಳು ಇಷ್ಟವಾಗುತ್ತವೆ. ಮಧ್ಯಮ ವರ್ಗದ ಹುಡುಗನ ಕನಸನ್ನು ಕಣ್ತುಂಬಿಕೊಳ್ಳಲು ಅಡ್ಡಿಯಿಲ್ಲ.

ಚಿತ್ರ: ಪಡ್ಡೆಹುಲಿ
ನಿರ್ಮಾಣ: ರಮೇಶ್‌ ರೆಡ್ಡಿ
ನಿರ್ದೇಶನ: ಗುರುದೇಶಪಾಂಡೆ
ತಾರಾಗಣ: ಶ್ರೇಯಸ್‌, ನಿಶ್ವಿ‌ಕಾ ನಾಯ್ಡು, ರವಿಚಂದ್ರನ್‌, ಸುಧಾರಾಣಿ, ಚಿಕ್ಕಣ್ಣ, ಅಮಿತ್‌ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next