Advertisement

UV Fusion: ಎರಡು ಜಡೆಗಳ ನೆನಪು

01:20 PM Nov 20, 2023 | Team Udayavani |

ಅಂದು ಸಂಜೆ ಸುಮಾರು ಐದು ಗಂಟೆಯಾಗಿತ್ತು. ಆಗ ತಾನೇ ಗಾಢ ನಿದ್ರೆಯಿಂದ ಎದ್ದು ಅಮ್ಮ ಮಾಡಿ ಕೊಟ್ಟ ಚಹಾವನ್ನು ಕುಡಿಯುತ್ತಾ ಅಲ್ಲೇ ಇದ್ದ ಇಯರ್‌ ಪೋನ್‌ ಕಿವಿಗೆ ಹಾಕಿ ಮೊಬೈಲ್‌ ನಲ್ಲಿ ಹಾಡನ್ನು ಕೇಳುತ್ತಾ ಕುಳಿತುಕೊಂಡಿದ್ದೆ.

Advertisement

“ತಂಗಿ ಮಂಡೆ ಬಾಚ್‌ ಕೊಡ್ತೆ ಬಾರೇ’ ಎಂದು ಅಮ್ಮ ಕರೆದಳು. ಲೇಟಾಗಿ ಹೋದರೆ ಬೈತಾಳೆ ಎನ್ನುತ್ತಾ ಅವಸರದಲ್ಲಿ ಅಮ್ಮನ ಬಳಿ ಓಡಿ ಹೋದೆ.  ಎಷ್ಟೋ ದಿನಗಳ ನಂತರ ಎರಡು ಜಡೆ ಮಾಡಿಕೊಳ್ಳುವ ಆಸೆಯಾಯಿತು. ಅಮ್ಮನ ಹತ್ತಿರ ಎರಡು ಜಡೆ ಮಾಡಿಸಿಕೊಂಡು ನೇರವಾಗಿ ಕನ್ನಡಿ ಎದುರು ನಿಂತು ಕೊಂಡೆ.

ಕನ್ನಡಿಯಲ್ಲಿ ಮುಖವನ್ನು ನೋಡುತ್ತಲೇ ತುಂಬಾ ಸಂತೋಷವಾಗಿ ಮುಖಕ್ಕೆ ಸ್ವಲ್ಪ ಕ್ರೀಮ್‌, ಪೌಡರ್‌ ನ್ನು ಹಚ್ಚಿ ಕೊಂಡು ಅಲ್ಲೇ ಇದ್ದ ಮೊಬೈಲ್‌ ನಲ್ಲಿ ಸೆಲ್ಫಿ ತೆಗೆದುಕೊಂಡು ಫೋಟೋಗಳನ್ನು ನೋಡುತ್ತಲೇ ಇದ್ದೆ.

ಆಗ ನನ್ನ ಬಾಲ್ಯದ ಹಲವು ಕ್ಷಣಗಳು ನೆನಪಾದವು. ಅಂದು ಆಡುತ್ತಿದ್ದ ಕುಂಟೆ ಬಿಲ್ಲೆ, ಮರಕೋತಿ,ಅಡುಗೆ ಆಟ, ಕವಡೆ, ಟೀಚರ್‌ ಆಟ ಇದೆಲ್ಲವೂ ನೆನಪಾಯಿತು. ಶಾಲೆಯಿಂದ ಮನೆಗೆ ಬರುವಾಗ ಮುಳ್ಳೆ ಹಣ್ಣು, ನೇರಳೆ, ಬಿಕ್ಕೆ ಹಣ್ಣು, ನೆಲ್ಲಿಕಾಯಿ, ಹುಣಸೆ, ಹೀಗೆ ಬೆಟ್ಟದಲ್ಲಿ ಸಿಗುವ ಎಲ್ಲಾ ರೀತಿಯ ಹಣ್ಣುಗಳನ್ನು ಹುಡುಕಿ ತಿನ್ನುವ ಕಾಲ ಅದಾಗಿತ್ತು.

ಮಳೆಗಾಲ ಬಂತೆಂದರೆ ಸಾಕು ಪಟ್ಟಿ ಹಾಳೆಯನ್ನು ಹರಿದು ದೋಣಿಗಳನ್ನು ಮಾಡಿ ಬಿಡುತ್ತಿದ್ದ ನೆನಪುಗಳು.ಜೋರಾಗಿ ಮಳೆ ಬರುತ್ತಿದ್ದರೆ ಮರುದಿನ ಶಾಲೆಗೆ ರಜೆ ಕೊಡುತ್ತಾರೆ ಎಂದು  ಭಾವಿಸಿ ಮನಸಿನಲ್ಲಿಯೇ ಕುಣಿ ದಾಟುತ್ತಿದ್ದವು.

Advertisement

ಒಂದು ಸಲ ಶಾಲೆಗೆ ರಜೆ ಹಾಕುವ ಸಲುವಾಗಿ ಯಾರಿಗೂ ತಿಳಿಯದ ಹಾಗೆ ಮನೆಯ ಹತ್ತಿರವಿದ್ದ ನೀರಿನ ಟ್ಯಾಂಕ್‌ ಹಿಂದೆ ಅವಿತು ಕುಳಿತುಕೊಂಡು ಬಿಡುತ್ತಿದೆ. ಈ ವಿಷಯ ತಿಳಿದು ಅಪ್ಪನು  ಹೊಡೆದ ಪೆಟ್ಟು ಇಂದಿಗೂ ಮರೆಯಲಾಗದು. ಈ ವಿಷಯವನ್ನು ಇಂದಿಗೂ ಮನೆಯಲ್ಲಿ ಹೇಳಿಕೊಂಡು ನಗುತ್ತಾರೆ.

ಶಾಲೆಯಲ್ಲಿ ಪ್ರತಿಭಾ ಕಾರಂಜಿ, ಕ್ರೀಡಾಕೂಟ ಬಂದರೆ ಅದೆಷ್ಟೋ ಉತ್ಸಾಹದಿಂದ ಭಾಗವಹಿಸುತ್ತಿದ್ದ ಕಾಲವದು.

ಶನಿವಾರ ಬಂತೆಂದರೆ ಸಾಕು ಶಾಲೆಯ ಅಡುಗೆ ಮನೆಯಿಂದ ಬರುವ ಘಮದಿಂದ ಕ್ಲಾಸಿನಲ್ಲಿ ಕುಳಿತುಕೊಂಡಿದ್ದ ನಮಗೆ “ಇಂದು ಚಿತ್ರಾನ್ನ ಮಾಡಿದ್ದಾರೆ” ಎಂದು ಹೇಳಿ ಬಿಡುತ್ತೀದೆವು. ಅಷ್ಟು ರುಚಿಯಾದ ಚಿತ್ರಾನ್ನ ಯಾವ ಸ್ಟಾರ್‌ ಹೋಟೆಲ್‌ ನಲ್ಲಿಯೂ ಸಿಗಲಿಕ್ಕೆ ಸಾಧ್ಯವೇ ಇಲ್ಲ.  ಹೀಗೆ ನನ್ನ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳತ್ತಾ, ಅಮ್ಮನ ಜೊತೆ ವಾಕಿಂಗ್‌ ಗೆ ತೆರಳಿದೆ.

-ಕಾವ್ಯಾ ರಮೇಶ್‌ ಹೆಗಡೆ

ಎಂ.ಎಂ., ಮಹಾವಿದ್ಯಾಲಯ ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next