ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಶ್ರೀ ಕಾಂತೇಶ ದೇವಸ್ಥಾನದಲ್ಲಿ ಮೇ 24ರಂದು ಜಿಲ್ಲಾಡಳಿತದ ವತಿಯಿಂದ ಸಪ್ತಪದಿ ಸಾಮೂಹಿಕ ವಿವಾಹ ಜರುಗಿಸಲು ನಿರ್ಧರಿಸಲಾಗಿದೆ. ಮದುವೆಯಾಗಲು ಇಚ್ಛಿಸುವ ಜೋಡಿಗಳು ಏ. 24ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಮದುವೆಯಾಗುವ ತಲಾ ಒಂದು ಜೋಡಿಗೆ 55ಸಾವಿರ ರೂ. ವೆಚ್ಚ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ಸಚಿವರು, ಶಾಸಕರು ಹಾಗೂ ತಹಶೀಲ್ದಾರರನ್ನು ಸಂಪರ್ಕಿಸಿ ಸಪ್ತಪದಿ ಸಾಮೂಹಿಕ ಸರಳ ವಿವಾಹವನ್ನು ಜರುಗಿಸಲು ಸುಸಜ್ಜಿತವಾದ ದೇವಾಲಯಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಒಂದು ವಿವಾಹ ಜೋಡಿಗೆ ಸರ್ಕಾರದಿಂದ 55,000 ರೂ. ಖರ್ಚು ಮಾಡಲಾಗುತ್ತದೆ. ವಿವಾಹವಾಗುವ ವಧುವಿಗೆ 40,000 ರೂ. ವೆಚ್ಚದಲ್ಲಿ 8ಗ್ರಾಂ ತೂಕದ ಚಿನ್ನದ ತಾಳಿ, ಎರಡು ಚಿನ್ನದ ಗುಂಡು, ವರನಿಗೆ ಐದು ಸಾವಿರ ವೆಚ್ಚದಲ್ಲಿ ಶರ್ಟ್, ಶಲ್ಯ, ಪಂಚೆ ಹಾಗೂ ಹೂವಿನ ಹಾರ ಖರೀದಿಸಲು ನೀಡಲಾಗುವುದು. ವಧುವಿಗೆ 10 ಸಾವಿರ ರೂ. ವೆಚ್ಚದಲ್ಲಿ ರೇಷ್ಮೆ ಧಾರೆ ಸೀರೆ, ರವಿಕೆ ಕಣ ಹಾಗೂ ಹೂವಿನ ಹಾರ ಖರೀದಿಸಲು ನೀಡಲಾಗುವುದು. ವಿವಾಹಕ್ಕೆ ಆಗಮಿಸುವ ವಧು-ವರರ ಬಂಧುಗಳಿಗೆ ಉಟೋಪಚಾರ ಹಾಗೂ ಇತರೇ ಅವಶ್ಯಕ ವ್ಯವಸ್ಥೆಗಳನ್ನು ದೇವಳ ಸಮಿತಿಯಿಂದ ಅಥವಾ ಸರಕಾರದ ನಿಧಿಯಿಂದ ಭರಿಸಲಾಗುವುದು ಎಂದು ವಿವರಿಸಿದರು.
ಹೊಸದಾಗಿ ಜಿಲ್ಲೆಯ ಆರು ತಾಲೂಕಿನ ಬಿ ಮತ್ತು ಸಿ ವರ್ಗದ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಣಿಬೆನ್ನೂರು ತಾಲೂಕಿನ ಗುಡಿಹೊನ್ನತ್ತಿಯ ಸಿ ವರ್ಗದ ಶ್ರೀ ಹೊನ್ನತ್ತೇಮ್ಮ ದೇವಿ ದೇವಸ್ಥಾನ, ಹಿರೇಕೆರೂರು ತಾಲೂಕಿನ ಬಿ ವರ್ಗದ ಶ್ರೀ ದುರ್ಗಾದೇವಿ ದೇವಸ್ಥಾನ, ರಟ್ಟಿಹಳ್ಳಿ ತಾಲೂಕಿನ ಹಳ್ಳೂರಿನ ಬಿ ವರ್ಗದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಸವಣೂರು ತಾಲೂಕಿನ ಕಾರಡಗಿಯ ಸಿ ವರ್ಗದ ಶ್ರೀವೀರಭದ್ರೇಶ್ವರ ದೇವಸ್ಥಾನ, ಶಿಗ್ಗಾವಿ ತಾಲೂಕಿನ ಸಿ ವರ್ಗದ ಶ್ರೀ ಯಲ್ಲಮ್ಮಾದೇವಿ ದೇವಸ್ಥಾನ, ಹಾನಗಲ್ಲ ತಾಲೂಕಿನ ಸಿ ವರ್ಗದ ಶ್ರೀ ಗ್ರಾಮದೇವಿ ದೇವಸ್ಥಾನಗಳಲ್ಲಿ ಮೇ 24ರಂದು ಸಪ್ತಪದಿಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆಯಾ ತಾಲೂಕಿನ ತಾಲೂಕು ಕಚೇರಿ, ಆಡಳಿತ ಶಿರಸ್ತೆದಾರರಿಗೆ ಅರ್ಜಿಗಳನ್ನು ನೀಡಿ, ಅರ್ಜಿದಾರರಿಂದ ಅಗತ್ಯ ದಾಖಲಾತಿ ಪಡೆದುಕೊಳ್ಳಲು ಮತ್ತು ಮಾಹಿತಿಯನ್ನು ನೀಡಲು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ. ಅರ್ಜಿ ಸಲ್ಲಿಸಲು ಏ. 24 ಕೊನೆಯ ದಿನಾಂಕವಾಗಿದೆ ಎಂದು ಹೇಳಿದರು.
ಸಪ್ತಪದಿ ಸರಳ ಸಾಮೂಹಿಕ ವಿವಾಹಕ್ಕೆ ವಿತರಿಸಿದ ಮತ್ತು ಸ್ವೀಕರಿಸಿದ ಅರ್ಜಿಗಳ ಅಂಕಿ-ಅಂಶಗಳ ದೇವಾಲಯವಾರು, ಜಿಲ್ಲಾವಾರು ಮಾಹಿತಿಯನ್ನು ಸಂಗ್ರಹಿಸಲು ಜಿಲ್ಲಾಧಿಕಾರಿಗಳ ಕಚೇರಿಯ ಮುಜರಾಯಿ ಸಂಕಲದ ಸಿಬ್ಬಂದಿ ನೇಮಿಸಲಾಗಿದೆ. ಆಯಾ ತಾಲೂಕಿಗೆ ಸಂಬಂಧಿಸಿದ ವಿವಾಹ ನೆರವೇರಿಸಲು ಆಯ್ಕೆಯಾಗಿರುವ ದೇವಾಲಯಗಳಲ್ಲಿಕರಪತ್ರಗಳು, ಪ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸಿ ಅಗತ್ಯ ಪ್ರಚಾರಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದರು. ವಿವಾಹಕ್ಕೆ ಅವಶ್ಯಕವಿರುವ ಚಿನ್ನದ ತಾಳಿ, ಗುಂಡು, ವರನಿಗೆ ಪಂಚೆ, ಶಲ್ಯ ಹಾಗೂ ವಧುವಿಗೆ ಧಾರೆ ಸೀರೆಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಗುರುತಿಸಿರುವ ದೇವಸ್ಥಾನಗಳಲ್ಲಿ ಸಭಾಂಗಣವಿದೆ. ಇನ್ನುಳಿದ ಕಡೆಗಳಲ್ಲಿ ಶಾಮಿಯಾನ ಪೆಂಡಾಲ್ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸಾಮೂಹಿಕ ವಿವಾಹದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂ. 08375-249062 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಎಸ್.ಯೊಗೇಶ್ವರ, ಸಾಮೂಹಿಕ ವಿವಾಹದ ಶಿರಸ್ತೇದಾರ ಅಮೃತ ಪಾಟೀಲ ಮಾಧ್ಯಮಗೋಷ್ಠಿಯಲ್ಲಿದ್ದರು.