ದೇವನಹಳ್ಳಿ: ದಳ್ಳಾಳಿಗಳ ಹಾವಳಿ ಇಲ್ಲದೆ ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಪುರಸಭೆ ಸಹಯೋಗ ದೊಂದಿಗೆ 48 ಲಕ್ಷ ವೆಚ್ಚದಲ್ಲಿ ಎಪಿಎಂಸಿ ಮಾರುಕಟ್ಟೆ ಉದ್ಘಾಟನೆ ಮಾಡಿ ದೇವನಹಳ್ಳಿ ಪುರಸಭೆಗೆ ಹಸ್ತಾಂತರಿಸಿ ಒಂದು ವರ್ಷ ಕಳೆದರು ಇದು ವರೆಗೂ ಬಳಕೆಯಾಗದೆ ಕುಡುಕರು, ಅನಾಥರು, ಜೂಜುಕೋರರ ತಾಣವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಿ ರೈತರು ಬೆಳೆದ ಬೆಳೆಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಅಧಿಕಾರಿಗಳಿಗಿಲ್ಲ ಇಚ್ಚಾಶಕ್ತಿ: ಕೃಷಿ ಉತ್ಪನ್ನ ಮಾರು ಕಟ್ಟೆ ದೇವನಹಳ್ಳಿ ಪುರಸಭೆಗೆ ಹಸ್ತಾಂತರ ವಾಗಿ ಒಂದು ವರ್ಷ ಕಳೆದಿದ್ದು ಹರಾಜು ಮೂಲಕ ರೈತರು ಅಥವಾ ಬೀದಿ ಬದಿ ವ್ಯಾಪಾರಿ, ಹೂ ಹಾಗೂ ತರಕಾರಿ ಹಣ್ಣು ವ್ಯಾಪಾರಸ್ಥರನ್ನು ಮಾರು ಕಟ್ಟೆಗೆ ಸ್ಥಳಾಂತರಿಸಬಹುದಿತ್ತು ಆದರೆ ಅಧಿಕಾರಿ ಗಳು ತಲೆಕೆಡಿಸಿಕೊಳ್ಳುತ್ತಿಲ್ಲವೆಂದು ಕೆಲ ವ್ಯಾಪಾರಸ್ಥರು ದೂರುತ್ತಿದ್ದಾರೆ.
ಅನೈತಿಕ ಚಟುವಟಿಕೆಗಳ ತಾಣ: ಸಂಜೆ ಯಾಗುತ್ತಿದ್ದಂತೆ ಮಾರುಕಟ್ಟೆ ಅಕ್ಕಪಕ್ಕದಲ್ಲೆ ವೈನ್ ಶಾಪ್‌ಗ್ಳಿದ್ದು ಕುಡುಕರು ಮಾರುಕಟ್ಟೆಯಲ್ಲಿ ಕುಳಿತು ಕುಡಿದು ಅಲ್ಲೇ ಮಲಮೂತ್ರ ವಿಸರ್ಜನೆ, ಮಾಡಿ ಗಬ್ಬುನಾರುತ್ತಿದೆ, ಜೂಜುಕೋರರು ಜೂಜಾಡಲು ಬಳಸಿಕೊಳ್ಳುತ್ತಿದ್ದಾರೆ. ಕೆಲ ಅನಾಥರು ಮಾರುಕಟ್ಟೆಯನ್ನೇ ಮನೆಯನ್ನಾಗಿಸಿ ಕೊಂಡು ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ಈಗಾಗಲೇ ಅನಾಥರೊಬ್ಬರು ಮಾರುಕಟ್ಟೆಯಲ್ಲಿ ಸತ್ತಿ ರುವ ಘಟನೆ ಸಹ ನಡೆದಿದೆ. ಪಟ್ಟಣದ ಹಳೇ ಬಸ್ ನಿಲ್ದಾಣದ ಇಂದಿರಾ ಕ್ಯಾಂಟಿನ್ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ 42 ಮುಚ್ಚು ಹರಾಜು ಮಾರುಕಟ್ಟೆಗಳಿದ್ದು, ರೈತರು ಬೆಳೆದ ತರಕಾರಿಗಳನ್ನು ಮಾರಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ, ರೈತರ ಮುಕ್ತ ಮಾರುಕಟ್ಟೆಗೆ ಅನುಕೂಲಕ್ಕಾಗಿ ಮಾರುಕಟ್ಟೆ ನಿರ್ಮಾಣ ಮಾಡಿದೆ ಯಾದರು ಅದು ಉಪಯೋಗಕ್ಕೆ ಬಾರದಂತಾಗಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಬೀದಿಬದಿ ವ್ಯಾಪಾರಿಗಳಿಗೆ ಹರಾಜು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ಅನೇಕ ಬಾರಿ ತಿಳಿಸಿದ್ದೇವೆ, ಯಾರು ಅಲ್ಲಿ ಬಂದು ವ್ಯಾಪಾರ ಮಾಡಲು ಸಿದ್ಧರಿಲ್ಲ, ಮಾರುಕಟ್ಟೆ ಎದುರಿನಲ್ಲೇ ಸಂತೆ ನಡೆಯುತ್ತದೆ, ಬೀದಿ ಬದಿ ವ್ಯಾಪಾರಿಗಳು ಮಾರುಕಟ್ಟೆಗೆ ಬಂದರೆ ಅಲ್ಲಿ ವ್ಯಾಪಾರ ಆಗುವುದಿಲ್ಲ, ಬೀದಿಬದಿಯಲ್ಲಿದ್ದರೆ ವ್ಯಾಪಾರವಾಗುತ್ತದೆ ಎನ್ನುತ್ತಾರೆ.
● ದೊಡ್ಡಮಲವಯ್ಯ, ಮುಖ್ಯಾಧಿಕಾರಿ ಪುರಸಭೆ ದೇವನಹಳ್ಳಿ