ಬೆಂಗಳೂರು: ವಿಧವೆಯರು, ಗೃಹಿಣಿಯರು ಹಾಗೂ ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೆಲಸ ಹಾಗೂ ಸರ್ಕಾರದ ವಿವಿಧ ಸೌಲಭ್ಯ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 60 ಮಂದಿಯಿಂದ ಲಕ್ಷಾಂತರ ರೂ. ದೋಚಿದ ಇಬ್ಬರು ವಂಚಕರು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶ್ರೀನಗರ ನಿವಾಸಿ ದೀಪಕ್ (22) ಮತ್ತು ವಿದ್ಯಾರಣ್ಯಪುರ ನಿವಾಸಿ ಹರೀಶ್ (21) ಬಂಧಿತರು. ಆರೋಪಿಗಳು ಇತ್ತೀಚೆಗೆ ಮಹಿಳೆಯೊಬ್ಬರಿಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಕೊಡಿಸುವುದಾಗಿ ನಂಬಿಸಿ 8 ಸಾವಿರ ರೂ. ಪಡೆದು ವಂಚಿಸಿದ್ದರು.
ಮತ್ತೂಂದೆಡೆ ಆರೋಪಿಗಳ ವಿಚಾರಣೆಯಲ್ಲಿ ಬರೋಬ್ಬರಿ 60 ಮಂದಿಗೆ 15 ಲಕ್ಷ ರೂ. ವಂಚಿಸಿರುವುದು ಪತ್ತೆಯಾಗಿದೆ. ಆದರೆ, ಈ ರೀತಿ ವಂಚನೆಗೊಳಪಟ್ಟವರು ಇದುವರೆಗೂ ಯಾವುದೇ ದೂರು ದಾಖಲಿಸಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರೋಪಿಗಳಿಬ್ಬರು ಎಸ್‌ಎಸ್‌ಎಲ್‌ಸಿ ಓದಿದ್ದು, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಈ ಮಧ್ಯೆ ಕೆಲವರು ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿರುವುದನ್ನು ಕೇಳಿ, ಈ ಅಪರಾಧ ಕೃತ್ಯವೆಸಗುತ್ತಿದ್ದರು. ಪರಿಚಯಸ್ಥರಿಗೆ ಬಿಬಿಎಂಪಿ ಕಚೇರಿಯಲ್ಲಿ ಕೆಲಸ, ಸರ್ಕಾರದ ಸೌಲಭ್ಯ ಕೊಡಿಸುತ್ತೇವೆ ಎಂದು ಹೇಳಿ, ತಾವೇ ಪ್ರಚಾರ ಮಾಡುತ್ತಿದ್ದರು. ಬಳಿಕ ಚೈಲ್‌ಲಿಂಕ್ ಮಾದರಿಯಲ್ಲಿ ನಂಬರ್ ಪಡೆದು ವಿಧವೆಯರಿಗೆ ವಿಧವಾ ವೇತನ, ಕೆಲ ಹಿರಿಯರಿಗೆ ನಿಮ್ಮ ಮಕ್ಕಳಿಗೆ ಉದ್ಯೋಗ ಕೊಡಿಸುತ್ತೇವೆ, ಯುವಕರಿಗೆ ಸಬ್ಸಿಡಿಯಲ್ಲಿ ಕಾರು ಕೊಡಿಸುತ್ತೇವೆ ಅಥವಾ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೆಲಸ ಕೊಡಿಸುತ್ತೇವೆ ಎಂದು ನಂಬಿಸುತ್ತಿದ್ದರು. ಎಂದು ಆಯುಕ್ತರು ಹೇಳಿದರು.
ಪ್ರಕರಣ ದೂರುದಾರ ಮಹಿಳೆಯಿಂದ ಆರೋಪಿಗಳು ಹೋಟೆಲ್‌ವೊಂದರ ಸಪ್ಲೆಯರ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ. ಹೀಗೆ 2023ರ ಆಗಸ್ಟ್‌ನಿಂದ ಇದುವರೆಗೂ 60 ಮಂದಿಗೆ 15 ಲಕ್ಷ ರೂ. ವಂಚಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಉತ್ತರ ವಿಭಾಗದ ಸಿಇಎನ್ ಠಾಣೆಯ ಇನ್‌ಸ್ಪೆಕ್ಟರ್ ಎಸ್.ಶಿವರತ್ನ ನೇತೃತ್ವದಲ್ಲಿ ಪಿಎಸ್‌ಐ ರೋಹಿಣಿ ಹಾಗೂ ಇತರೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ರಮಣ್ ಗುಪ್ತಾ, ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತ, ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಹಾಗೂ ಇತರೆ ಅಧಿಕಾರಿಗಳು ಇದ್ದರು.