Advertisement

40 ದಿನಗಳ ರಜೆಯಲ್ಲಿ ತೆರಳಿದ ಮಲಯಾಳಿ ಅಧ್ಯಾಪಕಿ

10:08 AM Jan 24, 2020 | Team Udayavani |

ಕಾಸರಗೋಡು: ಕನ್ನಡ ಭಾಷೆ ಅರಿಯದ ಮಲಯಾಳ ಅಧ್ಯಾಪಿಕೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಆಗ್ರಹಿಸಿ ಬೇಕಲ ಸರಕಾರಿ ಫಿಶರೀಸ್‌ ಹೈಯರ್‌ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು, ಕನ್ನಡಾಭಿಮಾನಿ ಗಳು, ಜನಪ್ರತಿನಿಧಿಗಳು ನಡೆಸಿದ ತೀವ್ರ ಹೋರಾಟದ ಫಲವಾಗಿ ಕೊನೆಗೂ ಮಲಯಾಳಿ ಅಧ್ಯಾಪಕಿ 40 ದಿನಗಳ ರಜೆಯಲ್ಲಿ ತೆರಳಿದ್ದಾರೆ.

Advertisement

ಈ ಅಧ್ಯಾಪಕಿಯನ್ನು ಹಿಂದಕ್ಕೆ ಕರೆಸಿ ಕೊಂಡು, ಕನ್ನಡ ಅರಿಯುವ ಅಧ್ಯಾಪಕರನ್ನು ನೇಮಿಸಬೇಕೆಂದು ವಿದ್ಯಾರ್ಥಿಗಳು ಹಾಗು ಹೆತ್ತವರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ|ಡಿ. ಸಜಿತ್‌ಬಾಬು ಅವರ ನಿರ್ದೇಶ ಪ್ರಕಾರ ಡಿಡಿಇ ಕೆ.ವಿ. ಪುಷ್ಪಾ ಅವರು ಕನ್ನಡ ಅರಿಯದ ಮಲಯಾಳ ಅಧ್ಯಾಪಕಿಯನ್ನು ಕರೆಸಿ ರಜೆಯಲ್ಲಿ ತೆರಳುವಂತೆಯೂ, ರಜಾ ದಿನಗಳಲ್ಲಿ ಶಿಕ್ಷಣ ಇಲಾಖೆ ನೀಡುವ ಕನ್ನಡ ಡಿಪ್ಲೋಮಾ ಕೋರ್ಸ್‌ ಪೂರ್ತಿಗೊಳಿಸಲು ನಿರ್ದೇಶಿಸಿದ್ದರು.

ಆದರೆ ಈ ಅಧ್ಯಾಪಕಿ ಮಂಗಳವಾರವೂ ಶಾಲೆಗೆ ಹಾಜರಾಗಿ ರಜೆಯಲ್ಲಿ ತೆರಳಲು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು, ಕನ್ನಡಾಭಿಮಾನಿಗಳು, ಜಿಲ್ಲಾ ಪಂಚಾಯತ್‌ ಸ್ಥಾಯೀ ಸಮಿತಿ ಅಧ್ಯಕ್ಷ ಪಾದೂರು ಮೊಹಮ್ಮದ್‌, ಜಿಲ್ಲಾ ಪಂಚಾಯತ್‌ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್‌, ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಮೊದಲಾದವರ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು. ಇದರಿಂದ ಅಧ್ಯಾಪಕಿಗೆ ಬೇರೆ ದಾರಿಯಿಲ್ಲದೆ 40 ದಿನಗಳ ರಜೆಯಲ್ಲಿ ತೆರಳಿದ್ದಾರೆ.

ವಿದ್ಯಾರ್ಥಿಗಳ ಹೋರಾಟಕ್ಕೆ ಇದೀಗ ತಾತ್ಕಾಲಿಕ ಪರಿಹಾರವಾಗಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ಈ ಅಧ್ಯಾಪಕಿ ಮತ್ತೆ ಶಾಲೆಗೆ ಹಾಜರಾಗುವುದ ರಿಂದ ವಿದ್ಯಾರ್ಥಿಗಳು ಮತ್ತೆ ಸಮಸ್ಯೆಗೆ ತುತ್ತಾಗಲಿದ್ದಾರೆ.

ಅಧ್ಯಾಪಕಿ ರಜೆಯಲ್ಲಿ ತೆರಳದಿದ್ದರೆ ವಿದ್ಯಾರ್ಥಿಗಳನ್ನು, ಹೆತ್ತವರನ್ನು, ಪೋಷಕ ರನ್ನು, ಕನ್ನಡಾಭಿಮಾನಿಗಳನ್ನು ಒಗ್ಗೂಡಿಸಿ ಅನಿರ್ದಿಷ್ಟಾವಧಿ ಚಳವಳಿ ಹೂಡುವುದಾಗಿ ಪಾದೂರು ಮೊಹಮ್ಮದ್‌, ಕೆ. ಶ್ರೀಕಾಂತ್‌, ಭಾಸ್ಕರ ಕಾಸರಗೋಡು ಮತ್ತು ಹೆತ್ತವರು ಮುನ್ನೆಚ್ಚರಿಕೆಯನ್ನು ನೀಡಿದ್ದರು.

Advertisement

ಅಕ್ಟೋಬರ್‌ ತಿಂಗಳಲ್ಲಿ ನೇಮಕಗೊಂಡಿದ್ದ ಅಧ್ಯಾಪಕಿ ಬೇಕಲದ ಸರಕಾರಿ ಫಿಶರೀಸ್‌ ಹೈಯರ್‌ ಸೆಕೆಂಡರಿ ಶಾಲೆಗೆ ಹಾಜರಾಗಿದ್ದರು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸೋಶ್ಯಲ್‌ ಸಯನ್ಸ್‌ (ಸಮಾಜ ವಿಜ್ಞಾನ) ಪಾಠ ಮಾಡಲು ಕನ್ನಡ ಭಾಷೆ ಅರಿಯದ ತಿರುವನಂತಪುರದ ಈ ಮಲಯಾಳ ಅಧ್ಯಾಪಕಿ ಹಾಜರಾದ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರಜೆಯಲ್ಲಿ ತೆರಳಿದ್ದ ಅಧ್ಯಾಪಕಿ ಮತ್ತೆ ಕ್ರಿಸ್ಮಸ್‌ ರಜೆ ಕಳೆದು ಜ.14 ರಂದು ಹಾಜರಾಗಿದ್ದರು. ಅಧ್ಯಾಪಕಿಯ ವಾಪಸಾತಿಯನ್ನು ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು.

ಅಧ್ಯಾಪಕಿ ಮೊಬೈಲ್‌ ನಲ್ಲೇ
ಪ್ರತಿಭಟನೆಗೆ ನೇತೃತ್ವ ನೀಡಿದ ಪ್ರಮುಖರು ಶಾಲಾ ಮುಖ್ಯೋಪಾಧ್ಯಾಯ ಅವರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಈ ಅಧ್ಯಾಪಕಿ ಮೊಬೈಲ್‌ ಫೋನ್‌ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದರು. ಚರ್ಚೆ ನಡೆಯುತ್ತಿರುವಾಗಲೂ ಗಮನ ನೀಡದೆ ಅಧ್ಯಾಪಕಿ ದುರಹಂಕಾರ ಪ್ರದರ್ಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next