ನೀನೆಂಬ ಅದ್ಭುತಕ್ಕೆ ದಾಸಿಯಾಗಿ ನಿನ್ನೊಡನೆ ಜೀವನ ಕಳೆಯುವ ಆ ದಿನಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತ ನಿನ್ನೀ ಚಕೋರಿಯ ಮನದ ಇಂಗಿತವನ್ನು ನಿನಗೆ ಹೇಗೆ ಅರ್ಥೈಸಲಿ ನಾನು…?
ಅರೆ… ! ಇದೆಂಥಾ ಪ್ರಶ್ನೆ ನನ್ನದು? ಪೆದ್ದಿ ನಾನು, ಬಾಯಿಮಾತಲ್ಲಿ ಹೇಳಿದರೂ ಹೇಳದಿದ್ದರೂ ಅದಕ್ಕೆ ವ್ಯತ್ಯಾಸವಿದೆಯೇ ಹೇಳು ನಮ್ಮ ನಡುವೆ.? ನಾನೆಲ್ಲೇ ಇದ್ದರೂ ನನ್ನ ಮನದ ಭಾವನೆಗಳನ್ನು ಅದೆಷ್ಟು ಬೇಗ ಅರಿತುಬಿಡುವೆ ನೀನು.. ಹೇಗೆ ಸಾಧ್ಯ ಇದೆಲ್ಲಾ..? ನಾನು ಮಾತಿನ ಮಧ್ಯೆ ನೂರುಸಲ ನಿನ್ನ ಪ್ರೀತಿಸುವೆ, ನೀ ನನಗೆ ಬೇಕು ಎಂದೆಲ್ಲ ಹೇಳಿದರೂ ನೀನು ನನಗೇ ನೀಡುವ ಪ್ರೇಮದ ಮುಂದೆ ಎಲ್ಲವೂ ಗೌಣವೆ. ನಿನ್ನ ಮೀರಿಸಲಾಗದಿದ್ದರೂ, ಪ್ರಪಂಚದಲ್ಲಿ ನನ್ನ ಕೈಗೆಟಕುವ ಎಲ್ಲಾ ಖುಷಿಗಳನ್ನು ನಿನಗೆ ಧಾರೆಯೆರೆದು, ನನ್ನೊಡಲಿನ ಎಲ್ಲಾ ಪ್ರೀತಿ ವಾತ್ಸಲ್ಯವನ್ನೂ ಮೊಗೆ – ಮೊಗೆದು ಕೊಡುವಾಸೆ ನನಗೆ.
ಏನನ್ನೂ ಮುಚ್ಚಿಡದೆ ನಿನ್ನ ಬಳಿ ಒದರುವ ಬಾಯಿಬಡುಕಿ ನಾನು, ಮಾತಲ್ಲಿ ಏನೊಂದೂ ಹೇಳದೆ ನಿನ್ನ ಪ್ರೇಮದ ಪರಿಯಲಿ ಎಲ್ಲವನ್ನೂ ಅರುಹುವ ಪ್ರೇಮಮೂರ್ತಿ ನೀನು. ನನ್ನ ಮಾತುಗಳಿಗೆ ಕಿವಿಯಾಗಿ ನೀ ಮೌನರಾಗ ನುಡಿಸಿದರೆ, ನಿನ್ನ ಮೌನದ ಹಾಡಿಗೆ ಧ್ವನಿ ನಾನಾಗುವ ಹಂಬಲ ನನಗೆ. ನನ್ನ ಹೆಸರ ಕೊನೆಯಲ್ಲಿ ನಿನ್ನ ಹೆಸರನ್ನು ಸೇರಿಸಿ ಬರೆದು ಜಗಕೆ ತೋರಿಸುವ ಖುಷಿಗಾಗಿ ಕಾದಿದ್ದೇನೆ. ಅದೆಷ್ಟೋ ಸಲ ನಮ್ಮಿಬ್ಬರ ಹೆಸರು ಕೂಡಿಸಿ ಬರೆದು ಸಂಭ್ರಮಿಸಿದ್ದೇನೆ ಗೊತ್ತಾ..? ಪ್ರತಿಸಲ ಬರೆದಾಗಲೂ ಅದೆಷ್ಟೋ ಸಲ ಅದನ್ನು ಸ್ಪರ್ಶಿಸಿ ಪುಳಕಗೊಂಡಿದ್ದೇನೆ. ನಿನ್ನ ಪ್ರೇಮದ ನೆರಳಲ್ಲಿ ನಾನು ಅತ್ಯಂತ ಸುಖಿ.
ಅಂದೊಮ್ಮೆ ಜೀವನ ಗೋಜಲಾಗಿ ಎಲ್ಲಾ ಖುಷಿಗಳು ನನ್ನ ಪಾಲಿಗಿನ್ನು ಸಿಗೋದಿಲ್ವೇನೋ ಅಂತ ಜಡದಿಂದ ಬದುಕುತಿದ್ದೆ. ಅದೆಲ್ಲಿಂದ ಬಂದೆ ನೀನು ಸಂಜೀವಿನಿಯಾಗಿ..? ಅದೆಷ್ಟು ಜೀವನೋತ್ಸಾಹ ತುಂಬಿದೆ ಆಗ ನೀನು. ಬೋಳುಗುಡ್ಡದಲ್ಲೊಮ್ಮೆ ಮಳೆಸುರಿದಾಗ ಬಗೆ ಬಗೆಯ ಹೂ ಗಿಡಗಳು ತಲೆಯೆತ್ತಿ ನಕ್ಕು ನಲಿದಂತೆ, ನನ್ನಲ್ಲೂ ಹುದುಗಿರುವ ನನ್ನತನವನ್ನು ತೆರೆದು ಅದರೊಳಗಿರುವ ಅದೆಷ್ಟೋ ಕಾಣದ ಖುಷಿಗಳಿಗೆ ಜೀವ ತುಂಬಿದೆ. ನೇಕಾರನೊಬ್ಬ ತುಂಬಾ ಆಸ್ಥೆಯಿಂದ ವಸ್ತ್ರಗಳನ್ನು ನೇಯುವಂತೆ ನನ್ನಲ್ಲೂ ಕನಸುಗಳನ್ನು ನೇಯ್ದ ನೇಕಾರನಲ್ಲವೇ ನೀನು. ಒಮ್ಮೊಮ್ಮೆ ಅತೀ ಎನಿಸುವ ನಿನ್ನ ಮೌನದ ಮಧ್ಯೆಯೂ ಅದೆಷ್ಟು ಜೋಪಾನ ಮಾಡಿದೆ ನನ್ನ. ಮಾತಿಗೂ ಮೀರಿದ ನಿನ್ನ ಪ್ರೀತಿ ನನ್ನನ್ನೆಷ್ಟು ಆವರಿಸಿಕೊಂಡಿದೆ ಗೊತ್ತಾ..?
ಆದರೂ ನಿನ್ನ ಮೌನದ, ಕನಸುಗಳೇ ಇಲ್ಲವೆಂಬಂತೆ ಬದುಕುವ ನಿನ್ನ ಅಸಲಿಯತ್ತು ಇತ್ತೀಚೆಗೆ ಗೊತ್ತಾಯಿತು ನೋಡು. ಇನ್ನು ನಿನ್ನ ಭಾವನೆಗಳನ್ನು ಅರಿಯುವಲ್ಲಿ ಸೋಲುವ ಮಾತು ಇಲ್ಲವೇ ಇಲ್ಲ. ನಿನ್ನಲ್ಲೂ ಮುಗಿಯದ ಕನಸುಗಳಿವೆ ಎಂಬ ಪರಮ ಸತ್ಯವೊಂದು ನನ್ನ ಮುಂದೆ ಅನಾವರಣಗೊಂಡಿತಲ್ಲ. ಆ ಘಳಿಗೆ ಅದೆಷ್ಟು ಖುಷಿಪಟ್ಟಿದ್ದೇನೆ ಎಂಬುದು ಇಲ್ಲಿವರೆಗೂ ನನಗೆ ಮಾತ್ರ ತಿಳಿದಿದ್ದ ಗುಟ್ಟು. ನಿನ್ನ ಬಾಳಲ್ಲಿ ನನ್ನ ಬರುವಿಕೆಗಾಗಿ ಅಷ್ಟೊಂದು ಕಾಯುತ್ತಿರುವೆ , ನಮ್ಮಿಬ್ಬರ ಸವಿ ಜೀವನಕ್ಕಾಗಿ, ನಾವಿಬ್ಬರೂ ಒಂದಾಗಿ ನಡೆಯುವ ಮುಂದಿನ ಬಾಳ ಪಯಣಕ್ಕಾಗಿ ಈಗಿನಿಂದಲೇ ಭದ್ರ ಬುನಾದಿಯೊಂದರ ತಯಾರಿಯಲ್ಲಿರುವೆ ಎಂದು ನನಗೆ ತಿಳಿದ ಆ ಕ್ಷಣದಿಂದ ನನಗೆ ಸಂಭ್ರಮವೋ ಸಂಭ್ರಮ.
ನೀನಿರುವೆ ನನ್ನ ಪುಟ್ಟ ಜಗದೊಳಗೆ ಅನ್ನುವ ಖುಷಿ, ಭರವಸೆಯೊಂದೇ ಸಾಕು ನಾನು ನಿತ್ಯ ನಲಿಯಲು. ನಿನ್ನೊಲವಿನ ಸೋನೆಮಳೆಯಲ್ಲಿ ಮಿಂದು ಕುಣಿಯುವುದೊಂದೇ ನನ್ನ ದಿನಚರಿ ಈಗ. ನಾವಿಬ್ಬರೂ ಹಲವು ಸಹಸ್ರ ದಿನಗಳು ಸಕಲವನ್ನೂ ಹಂಚಿಕೊಂಡು ಸಂತೋಷದಿಂದ ಬಾಳುವ ಆ ಕ್ಷಣಗಳಿಗಾಗಿ , ನನ್ನೊಲವಿನ ಭಾವಗೀತೆಯನು ನಿನಗಾಗಿ ಹಾಡುವ ದಿನಗಳಿಗಾಗಿ, ನಿನ್ನೊಳಗೆ ಗುಪ್ತಗಾಮಿನಿಯಾಗಿ ಹರಿಯುವ ನನ್ನಡೆಗಿನ ಒಲವಿಗಾಗಿ ಸದಾ ಕಾಯುವೆ ಪ್ರತೀ ಜನುಮದಲ್ಲೂ.
ಇಂತೀ ನಿನ್ನ ಪ್ರೀತಿಯ
– ಶ್ರುತಿ ಶೆಟ್ಟಿ ಪುತ್ತೂರು