ಜೀವನದಲ್ಲಿ ಒತ್ತಡ ಇರಬೇಕು, ಆದರೇ ಜೀವನವೇ ಒತ್ತಡ ಆಗಬಾರದು ಎನ್ನುವ ಮಾತು ಇದೆ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಒತ್ತಡಕ್ಕೆ ಒಳಗಾಗುತ್ತಲೆ ಇರುತ್ತಾರೆ. ಒತ್ತಡಕ್ಕೆ ನಿಗದಿತವಾದ ಕಾರಣವಿಲ್ಲವಾದರೂ ಮನುಷ್ಯ ಅದರಿಂದ ತೊಂದರೆಗೆ ಸಿಲುಕುವುದು ಕಟ್ಟಿಟ್ಟ ಬುತ್ತಿ. ಆದ್ದರಿಂದ ಒತ್ತಡದ ಸಂಕೋಲೆಯಿಂದ ಪಾರಾಗಲು ಸದಾ ಹವಣಿಸುತ್ತಿರುತ್ತಾನೆ.
ಅದರಲ್ಲೂ ಮಾನಸಿಕ ಒತ್ತಡ ಮನುಷ್ಯನನ್ನು ಸಂಕಷ್ಟದ ಸುಳಿಗೆ ಸಿಲುಕಿಸುತ್ತದೆ. ನಾನಾ ಬಗೆಯ ತೊಂದರೆಗಳನ್ನು ತಂದೊಡ್ಡುತ್ತದೆ. ಹೀಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಯೋಗ, ಸಂಗೀತದ ಮೊರೆ ಹೋಗಲಾಗುತ್ತದೆ. ಆದರೆ, ಇತ್ತೀಚಿನ ವರದಿಯೊಂದು ಒತ್ತಡವೂ ಕೂಡ ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದಿದೆ.
ಹೌದು, ಸಂಶೋಧನ ವರದಿಯೊಂದರ ಪ್ರಕಾರ ಮಾನಸಿಕ ಆರೋಗ್ಯಕ್ಕೆ ಕಡಿಮೆ ಒತ್ತಡ ಲಾಭದಾಯಕವಂತೆ. ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನಗಳ ಪ್ರೊ. ಡೆವಿಡ್ ಎಂ ಅಲ್ಮೇಡಿಯಾ ಅವರ ಪ್ರಕಾರ ಅಧ್ಯಯನಗಳ ವರದಿ ಸೂಚಿಸುವಂತೆ ನಿತ್ಯ ಅಲ್ಪ ಒತ್ತಡ ಮೆದುಳಿಗೆ ಸ್ವಲ್ಪ ಲಾಭ ತಂದು ಕೊಡುತ್ತದೆ. ಒತ್ತಡಕ್ಕೆ ಒಳಗಾಗುವವರು ಅತೀ ಸೃಜನಶೀಲರಾಗುವ ಸಾಧ್ಯತೆ ಇದೆ. ಅವರು ಯಾವುದೇ ಸಮಸ್ಯೆಯನ್ನು ಕ್ಷಣಾರ್ಧದಲ್ಲೇ ಬಗೆ ಹರಿಸುತ್ತಾರೆ. ಒತ್ತಡಗಳನ್ನು ಅನುಭವಿಸುವುದು ಆಹ್ಲಾದಕರವಲ್ಲದಿರಬಹುದು ಆದರೆ ಸಮಸ್ಯೆಯನ್ನು ಪರಿಹರಿಸಲು ಅವು ನಿಮ್ಮನ್ನು ಸಬಲರನ್ನಾಗಿಸುತ್ತದೆ. ಹಾಗೂ ಕ್ರಿಯಾತ್ಮಕ ಕಾರ್ಯಚಟುವಟಿಕೆ ಬೆಳೆಸಲು ಒತ್ತಡ ಸಹಕಾರಿಯಾಗುತ್ತದೆ ಎನ್ನತ್ತಾರೆ ಅಲ್ಮೇಡಿಯಾ.
ಒತ್ತಡದಿಂದ ದೀರ್ಘಕಾಲಿಕ ಅನಾರೋಗ್ಯದಂತಹ ಕೆಲವೊಂದು ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಈ ಹಿಂದಿನ ಹೇಳಿಕೆಗಳು ಹೇಳುತ್ತವೆ. ಆದರೆ, ಅಲ್ಮೇಡಾ ಅವರು ಹೇಳುವಂತೆ ಒತ್ತಡಕ್ಕೆ ಒಳಗಾಗುವ ವ್ಯಕ್ತಿ ಆರೋಗ್ಯಯುತವಾಗಿರುತ್ತಾರೆ ಎಂದು ಇಂದಿನ ಸಂಶೋಧನೆಗಳು ಹೇಳಿವೆ ಎಂದಿದ್ದಾರೆ.
ಒತ್ತಡ ಒಳ್ಳೆಯದಲ್ಲ ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ, ಒತ್ತಡಕ್ಕೆ ಒಳಗಾಗದೇ ಇರುವವರು ಯಾರಾದರೂ ಇದ್ದಾರಾ ? ಎಂದು ಅಲ್ಮೇಡಿಯಾ ಪ್ರಶ್ನಿಸುತ್ತಾರೆ. ನನ್ನ ಈ ಹಿಂದಿನ ಅಧ್ಯಯನ ‘ಹೆಚ್ಚು ಒತ್ತಡ ವರ್ಸಸ್ ಕಡಿಮೆ ಒತ್ತಡ’ ಎದುರಿಸುವ ಜನರ ಕುರಿತಾಗಿತ್ತು. ಆದರೆ ಯಾವುದೇ ಒತ್ತಡಕ್ಕೆ ಒಳಗಾಗದವರು ಎಲ್ಲರಿಗಿಂತ ಆರೋಗ್ಯವಂತರಾಗುತ್ತಾರೆಯೇ ? ಎಂದು ನಾನು ಎಂದಿಗೂ ನೋಡಿಲ್ಲ ಎಂದಿದ್ದಾರೆ.