Advertisement

ಗತ ಪರಂಪರೆಗೆ ದೀವಿಗೆಯಾದ ದೊಂದಿ ಬೆಳಕಿನ ಆಟ

06:59 PM Jan 10, 2020 | Team Udayavani |

ಕಮಲಶಿಲೆ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಕಮಲಶಿಲೆ ಮೇಳದ ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ದಶಕಗಳಷ್ಟು ಹಿಂದಕ್ಕೊಯ್ಯಿತು. ಅಡಿಕೆ ಮರ, ಮಾವಿನ ಎಲೆ, ಹೂವುಗಳಿಂದ ಪ್ರಾಕೃತಿಕ ಸೊಬಗಿನಿಂದ ಸಿಂಗರಿಸಿದ ರಂಗಸ್ಥಳ, ಹಿಮ್ಮೇಳದವರಿಗೆ ಹೊಡಿಮಂಚ, ಎಲೆಕ್ಟ್ರಾನಿಕ್‌ ಶ್ರುತಿ ಬದಲಿಗೆ ಹಳೆ ಹಾರ್ಮೋನಿಯಂ ಪೆಟ್ಟಿಗೆ, ರಂಗಸ್ಥಳದ ಮೂರು ಕಡೆಗಳಲ್ಲಿ ಬಾಳೆ ದಿಂಡಿನ ಪಕಳೆಗಳನ್ನು (ಪಟ್ಟೆ )ಗಳ ಹೊರ ಹೊದಿಕೆ ಮಾಡಿ ಕಟ್ಟಿದ ಬಟ್ಟೆಯ ದೊಂದಿಗಳು, ಗ್ಯಾಸ್‌ಲೈಟ್‌ ವ್ಯವಸ್ಥೆ ಹೀಗೆ ಗತಕಾಲದ ಹಲವು ನೆನಪುಗಳನ್ನು ಸಾಧ್ಯವಾಗಿಸಿ ಕಲಾಸಕ್ತರ ಮನ ಗೆದ್ದರು.

Advertisement

ಕಮಲಶಿಲೆ ದಶಾವತಾರ ಮೇಳದ ಎ ತಂಡದ ಕಲಾವಿದರು, “ಕರ್ಣಾವಸಾನ’ ಆಖ್ಯಾನವನ್ನು ಅದ್ಭುತವಾಗಿ ನಿರೂಪಿಸಿ ಕಲಾರಸಿಕರ ಮನ ತಣಿಸಿದರು. ಪರಂಪರೆಯ ಯಕ್ಷಗಾನದಂತೆಯೇ ಪೂರ್ವರಂಗದ ಪ್ರದರ್ಶನದ ಭಾಗವಾಗಿ ಕೋಡಂಗಿ, ಬಾಲಗೋಪಾಲ, ಪೀಠಿಕೆ ಸ್ತ್ರೀ ವೇಷ, ತೆರೆಯ ಒಡ್ಡೋಲಗ ಹೀಗೆ ಕೆಲವೆಡೆ ಲುಪ್ತವಾದ ಎಲ್ಲಾ ಸ್ತರಗಳನ್ನು ಹಂತಹಂತವಾಗಿ ನಿರೂಪಿಸಿ ನಂತರ ಪ್ರಸಂಗದ ಆರಂಭವಾಯ್ತು.

ದೊಂದಿ ಬೆಳಕಿನಲ್ಲಿ ರಂಗವನ್ನು ಆಸ್ವಾದಿಸುವುದು ನಿಜಕ್ಕೂ ರಮಣೀಯ. ಜತೆಗೆ ರಂಗಸ್ಥಳದ ಅಟ್ಟಣಿಗೆ ಇರದೆ ಬಯಲಿನಲ್ಲಿಯೇ ರಂಗಮಂಟಪ ನಿರ್ಮಾಣವಾದ ಕಾರಣ, ಕಲಾವಿದರ ಹೆಜ್ಜೆಯ ಸಪ್ಪಳದ ಧ್ವನಿ ಸಹಜವಾಗಿ ಹೆಜ್ಜೆಗೆಜ್ಜೆಯ ನಾದವಾಗಿ ಶ್ರವಣಸುಖ ನೀಡುತ್ತಿತ್ತು. ರಾತ್ರಿ ಇಡೀ ದೊಂದಿಗೆ ಎಳ್ಳೆಣ್ಣೆ ಸುರಿಯುತ್ತಾ, ಅದರ ಕರಿ ತೆಗೆಯುತ್ತಾ, ಸೀಮೆಣ್ಣೆಯನ್ನು ಹದವಾಗಿ ಸುರಿಯುತ್ತಾ ನಿರ್ವಹಣೆ ಮಾಡುವುದು ಒಂದು ಸವಾಲು. ರಂಗದಲ್ಲಿ ಕೇವಲ ದೊಂದಿ ಬೆಳಕಾದರೆ ಕಲಾವಿದರ ಮುಖ ಸರಿಯಾಗಿ ಕಾಣದು. ಆ ಕಾರಣಕ್ಕೆ ಗ್ಯಾಸ್‌ಲೈಟ್‌ನ ವ್ಯವಸ್ಥೆ. ಈ ಕಾಲದಲ್ಲಿ ಊರು ಕೇರಿಯಲ್ಲಿ ಕೆಲವರ ಮನೆಯಲ್ಲಷ್ಟೇ ಉಳಿಸಿಕೊಂಡ ಗ್ಯಾಸ್‌ಲೈಟ್‌ ಅರಸಿ ತಂದು, ಅದಕ್ಕೆ ಬೇಕಾದ ಮೆಂಟಲ್‌ಗ‌ಳನ್ನು ಮಾರುಕಟ್ಟೆಯಲ್ಲಿ ಹುಡುಕಿ ತಂದು ,ರಂಗದಲ್ಲಿ ಬೆಳಕಿನ ವ್ಯವಸ್ಥೆ ಮಾಡಿ, ಗಂಟೆ ಗಂಟೆಗೆ ಅವುಗಳಿಗೆ ಗ್ಯಾಸ್‌ ತುಂಬುವ ಕೆಲಸ ಮಾಡಿದರು. ಇವೆಲ್ಲಾ ಪ್ರೇಕ್ಷಕರಿಗೆ ,ಆ ಕಾಲದಲ್ಲಿ ಯಕ್ಷಗಾನ ಮಾಡಲು ಇದ್ದ ಸವಾಲುಗಳನ್ನು, ಸಮಸ್ಯೆಗಳನ್ನು ನೆನಪಿಸಿತು.ದೊಂದಿಯಾಟ ಚಳಿಯ ದಿನಗಳಲ್ಲಿ ಕಲಾವಿದರ ಚಳಿ ಓಡಿಸುವುದರ ಜೊತೆಗೆ ಪ್ರೇಕ್ಷಕರನ್ನು ಬೆಚ್ಚಗೆ ಇಡಲು ಅನುಕೂಲಕರವಾಗಿತ್ತು.

ಕರ್ಣನಾಗಿ ವಿಶ್ವನಾಥ ಹೆನ್ನಾಬೈಲು ಹಾಗೂ ಕುಂತಿಯಾಗಿ ಜಯರಾಮ ಕೊಠಾರಿ ಮಠದಮಕ್ಕಿ ಅದ್ಭುತವಾಗಿ ಅಭಿನಯಿಸಿದರು. ಕರ್ಣನ ತುಡಿತಗಳನ್ನು, ಭಾವನೆಗಳನ್ನು ಅಭಿನಯದಲ್ಲಿ ವ್ಯಕ್ತಪಡಿಸಿ ಅರ್ಥದಲ್ಲಿ ವಿವರಿಸಿ ಹೆಜ್ಜೆಯಲ್ಲಿ ಗೆಜ್ಜೆಯ ನಾದ ಮೂಡಿಸಿ ಚಾತುರ್ಯ ಪ್ರದರ್ಶಿಸಿ ಸರ್ವಾಂಗ ಸುಂದರ ಕಲೆಯನ್ನು ಸಾಕಾರಗೊಳಿಸಿದರು. ಅವಸಾನದ ಕರ್ಣನಾಗಿ ಭಾವಪೂರ್ಣವಾಗಿ ನಟಿಸಿದರು. ಕೌರವನಾಗಿ ತಾರೆಕೊಡ್ಲು ಉದಯ್‌ ಕುಮಾರ್‌, ಭೀಮನಾಗಿ ನಾಗರಾಜ ನಾಯ್ಕ, ಅದಿರಥನಾಗಿ ಕುಶ ಪೂಜಾರಿ ಅವರದ್ದು ಮೆಚ್ಚತಕ್ಕ ಅಭಿನಯವಾಗಿತ್ತು. ಹಿಮ್ಮೇಳ ಮುಮ್ಮೇಳದ ಸಾಂಗತ್ಯ ಒಟ್ಟು ಕಥಾಹಂದರವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಕಮಲಶಿಲೆಯ ದೊಂದಿ ಬೆಳಕಿನ ಪ್ರದರ್ಶನ ಇನ್ನಷ್ಟು ಕಾಲ ಜನರಿಗೆ ನೆನಪಿನಲ್ಲಿ ಉಳಿಯುಂತೆ ಮಾಡಿತು.

ಪೂರ್ಣಿಮಾ ಎನ್‌. ಭಟ್ಟ ಕಮಲಶಿಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next