Advertisement
ಜಂಗ್ ಜಸ್ವಾಲ್ ಎಂಬ “”ಗಟ್ಟಿ ಮನುಷ್ಯನ” ನಂಬಲಾಗ ದಂಥ ಕಥೆಯಿದು. ಈತನಿಗೆ ಒಂದಲ್ಲ ಎರಡಲ್ಲ, 8 ಬಾರಿ ಹೃದಯಾಘಾತವಾಗಿದೆ. ಮೂರು ಬಾರಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಯಾಗಿದೆ. ಪ್ರತಿ ಬಾರಿ ಹೃದಯದ ಶಸ್ತ್ರಚಿಕಿತ್ಸೆಯಾದಾಗಲೂ ಸ್ಟೆಂಟ್‌ಗಳನ್ನು ಅಳವಡಿಸಲಾಗಿದೆ. ಹೃದಯದ ಸಮಸ್ಯೆಯ ಜತೆಗೆ ಮೂತ್ರಪಿಂಡಗಳ ವೈಫಲ್ಯ ಕಾಣಿಸಿ ಕೊಂಡಿದೆ. ಎರಡು ಬಾರಿ ಸ್ಟ್ರೋಕ್ ಆಗಿದೆ. ಇಷ್ಟು ಸಾಲದು ಅನ್ನುವಂತೆ ಹೃದಯ ಮತ್ತು ಕಿಡ್ನಿ ಕಸಿಯ ಶಸ್ತ್ರಚಿಕಿತ್ಸೆಯೂ ಆಗಿದೆ. ಇಷ್ಟೆಲ್ಲ ಆದಮೇಲೂ ಈ ಮಹಾರಾಯ, “ನನಗೇನ್ರೀ ಆಗಿದೆ? ನಾನು ಗುಂಡ್ ಕಲ್ ಇದ್ದಂಗೆ ಇದ್ದೀನಿ’ ಎಂದು ತಮಾಷೆ ಮಾಡಿಕೊಂಡು ಬದುಕುತ್ತಿದ್ದಾನೆ! ಹೆಸರಾಂತ ಲೇಖಕಿ ನೀಲಂ ಕುಮಾರ್ ಅವರೊಂದಿಗೆ ಜಂಗ್ ಜಸ್ವಾಲ್ ಹೇಳಿಕೊಂಡಿರುವ ಬಾಳಕಥೆಯ ಭಾವಾನುವಾದ ಇಲ್ಲಿದೆ…***
ಈಗ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಜಂಗ್ ಜಸ್ವಾಲ್‌ನ ಹುಟ್ಟೂರು, ಪಂಜಾಬ್‌ನ ಜಲಂಧರ್. 1956ರಲ್ಲಿ ಜನಿಸಿದ ಜಸ್ವಾಲ…, ಲುಧಿಯಾನಾದಲ್ಲಿರುವ ಪಂಜಾಬ್ ಕೃಷಿ ವಿವಿಯ ಪದವೀಧರ. ಜಸ್ವಾಲ್ ಹೇಳುತ್ತಾನೆ: 1985ರಲ್ಲಿ ನನ್ನ ಡಿಗ್ರಿ ಮುಗಿಯಿತು. ಅನಂತರ ನಾನು ಫಿಜಿ ದ್ವೀಪದಲ್ಲಿರುವ ನಾರಾಯಣ ಇಂಡಿಯನ್ ಕಾಲೇಜ್‌ನಲ್ಲಿ ವಿಜ್ಞಾನ ವಿಭಾಗದ ಮುಖ್ಯಸ್ಥನಾಗಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಕೆಲಸ ಮಾಡುತ್ತಿದ್ದಾಗಲೇ, ಅಮೆರಿಕದಲ್ಲಿರುವ ಫಾರ್ಮಾಸುಟಿಕಲ್ಸ್ ಕಂಪನಿ ಯೊಂದರಲ್ಲಿ ನೌಕರಿಗೆ ಕರೆ ಮಾಡಿರುವುದು ತಿಳಿಯಿತು. ತತ್‌ಕ್ಷಣವೇ ಅರ್ಜಿ ಸಲ್ಲಿಸಿದೆ. ಅಲ್ಲಿ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಕಾಲೇಜು ಅಧ್ಯಾಪಕನ ಕೆಲಸ ಬಿಟ್ಟು ಅಮೆರಿಕದ ವಿಮಾನ ಹತ್ತಿದೆ. ಆದರೆ ನಾನು ಹೋದ ತತ್‌ಕ್ಷಣವೇ ಆ ಕೆಲಸ ಸಿಗಲಿಲ್ಲ. ಹೊಟ್ಟೆಪಾಡಿಗೆ ಮತ್ತು ಅಮೆರಿಕದಲ್ಲಿ ಉಳಿಯ ಬೇಕೆಂದರೆ ಯಾವುದಾದರೂ ಒಂದು ಕೆಲಸ ಮಾಡಲೇಬೇಕಿತ್ತು. ನಾನು ಟ್ರಕ್ ಚಾಲಕನ ಕೆಲಸವನ್ನು ಆಯ್ಕೆ ಮಾಡಿಕೊಂಡೆ.
Related Articles
Advertisement
2013ರ ವೇಳೆಗೆ ನನ್ನ ಆರೋಗ್ಯ ಇನ್ನಷ್ಟು ಕ್ಷೀಣಿಸಿತು. ಎದ್ದು ನಿಲ್ಲುವುದಕ್ಕೂ ಕಷ್ಟವಾಗತೊಡಗಿತು. ಇಷ್ಟಾದ ಮೇಲೆ ಬದುಕಿ ಉಳಿಯುತ್ತೇನೆ ಎಂಬ ನಂಬಿಕೆ ನನಗೂ ಬರಲಿಲ್ಲ. ವೈದ್ಯರಿಗೂ ಇರಲಿಲ್ಲ. ಇರುವಷ್ಟು ದಿನವನ್ನು ಖುಷಿಯಿಂದ ಕಳೆಯೋಣ ಎಂದು ನಿರ್ಧರಿಸಿ, ಹೆಂಡತಿ ಮಕ್ಕಳಿಗೂ ಧೈರ್ಯ ಹೇಳಿ- “ಡಾಕ್ಟರ್, ನಾನು ಇನ್ನೆಷ್ಟು ದಿನ ಬದುಕಬಲ್ಲೇ?’ ಎಂಬ ಪ್ರಶ್ನೆ ಹಾಕಿದೆ.
“ಹೆಚ್ಚೆಂದರೆ 6 ಅಥವಾ 8 ವಾರ ಅಷ್ಟೇ… ಡಾಕ್ಟರ್ ಕೂಡ ಖಚಿತವಾಗಿ ಹೇಳಿದರು. ಹೀಗಿದ್ದಾಗಲೇ ಕ್ಯಾಲಿಫೋರ್ನಿಯಾದ ಆಸ್ಪತ್ರೆಯ ಹೃದಯ ಕಸಿ ವಿಭಾಗದ ಮುಖ್ಯಸ್ಥರಿಂದ ಕರೆ ಬಂತು. ಹಲೋ, ಅನ್ನುತ್ತಿದ್ದಂತೆಯೇ ಅವರೆಂದರು:’ ಜಂಗ್, ನಾಳೆ ನಿಮ್ಮ ಕುಟುಂಬದ ಸದಸ್ಯರನ್ನು ಕರೆದು ಕೊಂಡು ಆಸ್ಪತ್ರೆಗೆ ಬನ್ನಿ. ನಿಮ್ಮ ಚಿಕಿತ್ಸೆ ವಿಷಯವಾಗಿ ಮಾತಾಡಲಿಕ್ಕಿದೆ…’ ಮರುದಿನ ಮುಖ್ಯಸ್ಥರು ಹೇಳಿದರು: ಒಬ್ಬರು ದಾನಿಗಳು ಸಿಕ್ಕಿದ್ದಾರೆ. ಅವರ ಹೃದಯವನ್ನು ಕಸಿ ಮಾಡಿ ನಿಮಗೆ ಅಳವಡಿಸಲಾಗುತ್ತದೆ. “ಈ ಬಾರಿ LEFT VENTRICLE DEVICE(LVD) ಹೆಸರಿನ ಬ್ಯಾಟರಿ ಚಾಲಿತ ಪಂಪ್ ಬಳಸುತ್ತಾ ಇದ್ದೇವೆ. ಎಡ ಹೃತುಕ್ಷಿಯು ಹೃದಯಕ್ಕೆ ರಕ್ತವನ್ನು ಪೂರೈಸಲು ವಿಫಲವಾದಾಗ ಈ ಉಪಕರಣವನ್ನು ತುರ್ತು ಸ್ಥಿತಿಗಾಗಿ ಬಳಸಲಾಗುತ್ತಿದೆ. ಇದೇ ಮೊದಲ ಪ್ರಯೋಗ. ನೀವು ಒಪ್ಪಿದರೆ, ನಿಮ್ಮ ಮೇಲೆ ಪ್ರಯೋಗ ಮಾಡುತ್ತೇವೆ. ಆಪರೇಷನ್ ಯಶಸ್ವಿಯಾದರೆ ನಿಮಗೂ ಮರುಜನ್ಮ…’ ಹೇಗಿದ್ದರೂ ಆರೆಂಟು ವಾರದಲ್ಲಿ ಸಾಯುವುದು ಖಚಿತವಾಗಿದೆ. ಅದಕ್ಕೂ ಮೊದಲೇ ಹೋಗಿಬಿಟ್ಟರೂ ಏನೂ ಲಾಸ್ ಇಲ್ಲ ಅನ್ನಿಸಿದ್ದೇ ಆಗ. ಆಪರೇಷನ್ ಯಶಸ್ವಿಯಾದರೆ ಮತ್ತಷ್ಟು ದಿನ ಜತೆಗಿರಬಹುದು ಎಂಬ ಆಸೆಯೂ ಜತೆಯಾದದ್ದು ಸುಳ್ಳಲ್ಲ. ಅದನ್ನೇ ಹೆಂಡತಿ, ಮಕ್ಕಳಿಗೂ ಹೇಳಿ ಅವರನ್ನು ಸಂತೈಸಿ, “”ಬಲೀ ಕಾ ಬಕ್ರಾ ಆಗಲು ಸಮ್ಮತಿ ಸೂಚಿಸಿದೆ.
ಆಶ್ಚರ್ಯ: ನನ್ನ ಬದುಕಿನಲ್ಲಿ ಮತ್ತೂಂದು ಪವಾಡ ನಡೆದು ಹೋಯಿತು LEFT VENTRICLE DEVICE(LVD) ಉಪಕರಣ ಬಳಸಿ ಮೊಟ್ಟಮೊದಲ ಬಾರಿಗೆ ನಡೆಸಿದ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ ಯಾಗಿತ್ತು. ಅಷ್ಟೇ ಅಲ್ಲ, ಅದರ ಹಿಂದೆಯೇ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯೂ ಯಶಸ್ವಿಯಾಗಿ ನಡೆಯಿತು! ಅದೇನು ಕಾರಣವೋ ಕಾಣೆ; ಯಮರಾಯ ಎಂಟಲ್ಲ, ಒಂಬತ್ತನೇ ಬಾರಿಯೂ ನನ್ನನ್ನು ಹಿಡಿಯುವಲ್ಲಿ ವಿಫಲನಾಗಿದ್ದ…*****
ಹೀಗೆ ಮುಗಿಯುತ್ತದೆ ಜಂಗ್ ಜಸ್ವಾಲ್‌ನ ಯಶೋಗಾಥೆ. ನನಗೀಗ 66ರ ಹರೆಯ ಅನ್ನುವ ಜಸ್ವಾಲ್, ಹಲೋ ಅನ್ನಲೂ ಬಿಡುವಿಲ್ಲದಷ್ಟು ಬ್ಯುಸಿ ಆಗಿದ್ದಾರೆ. ಅವರೀಗ ಅಮೆರಿಕದ ಹಾರ್ಟ್ ಅಸೋಸಿಯೇಷನ್ ನ ರಾಯಭಾರಿ. ಅಂಗಾಂಗ ದಾನ ಕುರಿತು ಜಾಗೃತಿ ಮೂಡಿಸುವ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಈಗ ಸಣ್ಣಗೆ ಜ್ವರ ಬಂದರೆ ಸಾಕು; ನಮಗೆ ಕೋವಿಡ್ ಬಂದುಬಿಡ್ತಾ ಅಂದುಕೊಂಡು ಕಂಗಾಲಾಗುವ ನಮಗೆಲ್ಲ, 8 ಬಾರಿ ಹಾರ್ಟ್ ಅಟ್ಯಾಕ್ ಆದಾಗಲೂ ಹೆದರದೆ ಹೀರೋ ಥರಾ ಬದುಕಿರುವ ಜಂಗ್‌ನ ಬಾಳ ಕಥೆ ಮಾದರಿಯಾಗಲಿ… – ಎ.ಆರ್.ಮಣಿಕಾಂತ್