Advertisement
ಸಮುದ್ರದ ಕಿನಾರೆಯ ಆ ಅಮಾವಾಸ್ಯೆಯ ನಸು ಮಬ್ಬಿನ ಹೊತ್ತಲ್ಲಿ ಸರೋಜಾ ಒಬ್ಬಳೇ ಕೂತು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಆದರೆ, ಸಮುದ್ರ ಸರೋಜಾಳ ಅಳುವಿಗೆ ಸ್ಪಂದಿಸದೆ ಭೋರ್ಗರೆಯುವ ತನ್ನ ಕಾಯಕವನ್ನು ಮುಂದುವರಿಸಿತ್ತು. ಅದಾಗಲೇ “ಅಮ್ಮಾ’ ಎಂಬ ಸದ್ದು ಸರೋಜಾಳನ್ನು ಆ ಹಳೆಯ ನೆನಪುಗಳಿಂದ ಮುಕ್ತಗೊಳಿಸಿತು. ಹಿಂತಿರುಗಿ ನೋಡಿದಾಗ ಸರೋಜಾಳ ಮಗ ಮಹೇಶ ನಿಂತಿದ್ದ. ಮಹೇಶ ಅಮ್ಮನ ಕಣ್ಣಿಂದ ಜಾರಿದ ಆ ಕಣ್ಣ ಹನಿಯನ್ನು ತನ್ನ ಅಂಗೈಯಲ್ಲಿ ಹಿಡಿದು, “ಅಮ್ಮಾ, ಯಾಕೀ ಕಣ್ಣೀರು? ನಾನಿರುವಾಗ ನಿನ್ನ ಕಣ್ಣಲ್ಲಿ ಒಂದು ಹನಿಯೂ ಕಣ್ಣೀರು ಬರಬಾರದು’ ಎಂದು ಕಣ್ಣೀರೊರೆಸಿ ಅಮ್ಮನನ್ನು ಬಿಗಿದಪ್ಪಿಕೊಳ್ಳುವನು. ನಂತರ ತಾಯಿಯನ್ನು ಮನೆಗೆ ಕರೆ ತರುವನು.
Related Articles
Advertisement
ಒಂದು ಅಮಾವಾಸ್ಯೆಯ ಮುಂಜಾನೆಯ ಸರಿಸುಮಾರು 5 ಗಂಟೆಯ ಹೊತ್ತಿಗೆ ಸರೋಜಾ ತನ್ನ ಜೀವವನ್ನು ಕೈಯಲ್ಲಿಟ್ಟುಕೊಂಡು ಸಮುದ್ರದ ಕಿನಾರೆಯಲ್ಲಿ ಕುಳಿತಿದ್ದಳು. ಇತ್ತ ಮನೆಯಲ್ಲಿ ಮಹೇಶ ಎಚ್ಚೆತ್ತು ನೋಡಿದರೆ ಅಮ್ಮ ಇಲ್ಲ, ಅಮ್ಮನಿಗಾಗಿ ಹುಡುಕಾಟ ಶುರು ಮಾಡಿದ. ಅಕ್ಕಪಕ್ಕದವರಲ್ಲಿ ಅಮ್ಮನ ಬಗ್ಗೆ ವಿಚಾರಿಸಿದ. ಆದರೆ, ಅಮ್ಮ ಮಾತ್ರ ಎಲ್ಲಿಯೂ ಕಾಣಲಿಲ್ಲ. ಕೊನೆಗೆ ಸಮುದ್ರದ ಕಿನಾರೆಗೆ ಓಡೋಡಿ ಬಂದನು. ಸರೋಜಾ ಒಂದು ಮುಷ್ಟಿಯಲ್ಲಿ ಬಿಳಿಹಾಳೆ ಹಿಡಿದು ಮೌನಕ್ಕೆ ಶರಣಾಗಿದ್ದಳು. ಹೌದು, ಸರೋಜಾ ಇಹಲೋಕ ತ್ಯಜಿಸಿದ್ದಳು. ಆ ಹಾಳೆಯಲ್ಲಿ ಏನೋ ಬರೆದಿತ್ತು. ಮಹೇಶ ಗಾಬರಿಯಿಂದಲೇ ಆ ಹಾಳೆಯನ್ನು ಬಿಡಿಸಿ ಓದಿದ.
ಅದರಲ್ಲಿ ಹೀಗೆ ಬರೆದಿತ್ತು: ನನ್ನ ಪ್ರೀತಿಯ ಮಗ ಮಹೇಶ, ನೀನು ನನ್ನ ಕರುಳಬಳ್ಳಿ ಅಲ್ಲ, ನಾನಿನ್ನ ಹೆತ್ತತಾಯಿಯೂ ಅಲ್ಲ, ಅಂದು ಅಮಾವಾಸ್ಯೆಯ ನಸು ಮಬ್ಬಿನ ಹೊತ್ತಲ್ಲಿ ನಾನು, ನನ್ನ ಗಂಡ ಸಮುದ್ರದ ಕಿನಾರೆಯಲ್ಲಿ ಮಕ್ಕಳಿಲ್ಲ ಎಂಬ ದುಃಖದಲ್ಲಿ ಕುಳಿತಿದ್ದೆವು. ಅದಾಗಲೇ ಎಲ್ಲಿಂದಲೋ ಮಗು ಅಳುವ ಧ್ವನಿ ಕೇಳಿಸಿತು. ನನ್ನ ಗಂಡ ಆ ಧ್ವನಿ ಬಂದೆಡೆ ಓಡಿದರು. ಆ ರಾಕ್ಷಸ ಸಮುದ್ರವು ನಿನ್ನನ್ನು ಅದರೊಡಲೊಳಗೆ ಹಾಕಲು ಹವಣಿಸುತ್ತಿತ್ತು. ಆಗ ನನ್ನವರು ತನ್ನ ಜೀವದ ಹಂಗನ್ನು ತೊರೆದು ನಿನ್ನ ರಕ್ಷಣೆ ಮಾಡಿ ಅವರು ಬಾರದ ಲೋಕದ ಕಡೆ ಪಯಣ ಬೆಳೆಸಿದರು. ನಿನ್ನನ್ನು ಬೆಳೆಸಲು ನಾನು ಪಟ್ಟ ಶ್ರಮಕ್ಕೆ ನೀ ಕೊಟ್ಟ ಫಲ ಇದೇನಾ? ಇನ್ನಾದರೂ ನೀನು ಚೆನ್ನಾಗಿ ಓದಿ ಈ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ಜನಸೇವೆ ಮಾಡು. ನಿನಗೆ ನನ್ನ ಆಶೀರ್ವಾದಗಳು. ಇಂತೀ ನಿನ್ನ ತಾಯಿ ಸರೋಜಾ.
ಮಹೇಶ ಬಿದ್ದಿದ್ದ ಅಮ್ಮನ ದೇಹವನ್ನು ಬಿಗಿದಪ್ಪಿ ಒಂದೇ ಸಮನೆ ಅಳಲಾರಂಭಿಸಿದ. ಆದರೆ, ಇದರಿಂದ ಏನು ಪ್ರಯೋಜನ? ಇನ್ನಾದರೂ ತನ್ನ ತಾಯಿಯ ಕೊನೆಯ ಆಸೆಯನ್ನು ಈಡೇರಿಸಬೇಕೆಂದು ಪಣ ತೊಟ್ಟ. ಕಷ್ಟಪಟ್ಟು ಓದಿ ಡಿಗ್ರಿ ಮುಗಿಸಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡನು. ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯಾದನು. ವಾರದಲ್ಲಿ ಒಂದು ಬಾರಿಯಾದರೂ ಸಮುದ್ರದ ಕಿನಾರೆಗೆ ಹೋಗಿ ತನ್ನ ತಾಯಿಯನ್ನು ನೆನೆದು ಕಣ್ಣೀರಿಡುತ್ತಿದ್ದನು.
ಪ್ರಿಯ ಗೆಳೆಯರೇ, ನಮ್ಮ ಸುತ್ತಮುತ್ತ ಇಂಥ ಎಷ್ಟು ಕತೆಗಳಿರಬಹುದು ! ನಮ್ಮೊಳಗೆಯೇ ಇಂಥ ಕತೆ ಇರಬಹುದು. ಆದರೆ, ಕತೆ ಬರೆಯಬಹುದು, ಅದನ್ನು ಓದಬೇಕಾದ ಅಮ್ಮನೇ ಇರುವುದಿಲ್ಲ ! ಹಾಗಾಗಿ ಅಮ್ಮದೇವರಿಗೆ ಎಂದಿಗೂ ನೋವು ಕೊಡಬೇಡಿ !
-ದೀಕ್ಷಿತ್ಸ್ನೇಹ ಟ್ಯುಟೋರಿಯಲ್ ಕಾಲೇಜಿನ ಹಳೆವಿದ್ಯಾರ್ಥಿ
ಉಡುಪಿ.