Advertisement

ಬಾಡಿದ ಹೂವುಗಳಿಗೆ ಜೀವ ತುಂಬುವ ರೂಪಾ

05:51 PM Feb 01, 2022 | Team Udayavani |

ವಿಶೇಷ ವರದಿ- ಪಡುಬಿದ್ರಿ: ಬಾಡಿದ ಹೂಗಳು, ಮೊಗ್ಗುಗಳು, ಒಣಗಿದ ಎಲೆಗಳನ್ನು ಎಸೆಯುವುದು ಸಾಮಾನ್ಯ. ಆದರೆ ಪಡುಬಿದ್ರಿಯ ಕಲಾವಿದೆ ರೂಪಾ ವಸುಂಧರ ಆಚಾರ್ಯ ಅವುಗಳಿಗೆ ಜೀವ ತುಂಬುವ ಕೆಲಸವನ್ನು ಸುಮಾರು ಐದು ವರ್ಷಗಳಿಂದ ವೈಶಿಷ್ಟéಪೂರ್ಣವಾಗಿ ಮಾಡುತ್ತಿದ್ದಾರೆ.

Advertisement

ಈ ವಿಶಿಷ್ಟ ಕಲೆಯಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆದಿರುವ ರೂಪಾ ಅವರು ಹೂ ಮಾಲೆಗಳನ್ನು ಕಲಾ ಪ್ರಕಾರದಲ್ಲಿ ಕಾಪಿಡುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ತಮ್ಮ ಮನೆಯಂಗಳದ ಒಣಗಿದ ಹೂ, ಅವುಗಳ ಮೊಗ್ಗು, ಒಣಗಿದ ಎಲೆಗಳಿಂದ ಪ್ರಕೃತಿ, ಪ್ರಾಣಿ, ಪಕ್ಷಿಗಳ ಕಲಾಕೃತಿಗಳನ್ನೂ ರೂಪಾ ವಸುಂಧರ ರಚಿಸುತ್ತಾರೆ. 2ಡಿ, 3ಡಿ ಪರಿಣಾಮಗಳುಳ್ಳ ಈ ಕಲಾಕೃತಿಗಳಿಂದ ವಿವಿಧ ಕಲಾ ಪ್ರದರ್ಶನಗಳಲ್ಲಿ ಅವರು ಸಾರ್ವಜನಿಕರ ಗಮನಸೆಳೆದಿದ್ದಾರೆ. ಇದಕ್ಕಾಗಿ ಸಂಘ ಸಂಸ್ಥೆಗಳಿಂದಲೂ ಅವರು ಸಮ್ಮಾನಿಸಲ್ಪಟ್ಟಿದ್ದಾರೆ.

ಅವರ ಎಲ್ಲ ಕಲಾಕೃತಿ ಗಳೂ ಕೌಶಲಭರಿತವಾದ ವುಗಳಾಗಿವೆ. ಇವರು ಬಿಎಸ್‌ಸಿ ಸಸ್ಯಶಾಸ್ತ್ರ, ಪಿಜಿಡಿಸಿಎ ಪದವಿ ಪೂರೈಸಿದ ಬಳಿಕ ಚಿತ್ರಕಲೆಯ ತರಬೇತಿಯನ್ನು ಮಂಗಳೂರಿನ ಬಂಟ್ವಾಳ ಗುಲಾಂ ಮಹಮ್ಮದ್‌(ಬಿಜಿಎಂ) ಕಲಾ ಶಾಲೆಯಲ್ಲಿ ಪಡೆದುಕೊಂಡರು. ಅನಂತರ ಚಿತ್ರಕಲೆ ಇವರ ಹವ್ಯಾಸವಾಯಿತು.

ತಾರಸಿ ಗಾರ್ಡನ್‌
ಚಿತ್ರ ಕಲಾವಿದೆಯಾಗಿ 23 ವರ್ಷಗಳ ಅನುಭವವನ್ನು ರೂಪಾ ಹೊಂದಿದ್ದಾರೆ. ಇದನ್ನು ಬಳಸಿಕೊಂಡೇ ಇವರು ತಮ್ಮ ಮನೆಯ ತಾರಸಿಯಲ್ಲಿ ಉಪಯೋಗಕ್ಕೆ ಬಾರದ ಶೂ, ಬಾತ್‌ ಟವೆಲ್‌, ಟೀ ಕಪ್ಸ್‌ ಮುಂತಾದ ಗೃಹೋಪಯೋಗಿ ವಸ್ತುಗಳ ಸಹಿತ ವಿವಿಧ ಸಾಮಗ್ರಿಗಳ ಸಹಾಯದಿಂದ ಹೈಫರ್‌ ಟೂಫಾ ಆರ್ಟ್‌ ಹೊಂದಿರುವ ತಾರಸಿ ಗಾರ್ಡನ್‌(ಹೂದೋಟ) ನಿರ್ಮಿಸಿಕೊಂಡಿದ್ದಾರೆ. ಹೆಚ್ಚು ಖರ್ಚು ಇಲ್ಲದ ಸುಲಭ ಸಾವಯವ ಕೃಷಿ ವಿಧಾನವನ್ನು ಬಳಸಿಕೊಂಡು ತಾವೇ ಗೊಬ್ಬರವನ್ನು ತಯಾರಿಸಿಕೊಳ್ಳುತ್ತಾರೆ. ಬೊನ್ಸಾಯಿ ಕಲೆಯೊಂದಿಗೆ ಗಾರ್ಡನ್‌ ಇನ್‌ ಮಿನಿಯೇಚರ್‌ನ ಆವಿಷ್ಕಾರವನ್ನೂ ನಡೆಸುತ್ತಿದ್ದಾರೆ.

ಕಲೆಯಲ್ಲೇ ಉನ್ನತ ಶಿಕ್ಷಣ, ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆಯ ಅನುಭವ ವಿವಾಹವಾದ ಬಳಿಕ ಯುಎಇ ಶಾರ್ಜಾದಲ್ಲಿ ಸಾಫ್ಟ್‌ ವೇರ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಇದೇ ವೇಳೆ ತನ್ನ ಆಸಕ್ತಿಯಾದ ಕಲಾಕೃತಿಗಳ ಬಗ್ಗೆ ಅಲ್ಲಿನ ಸರಕಾರಿ ಆರ್ಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಮೂರು ವರ್ಷದ ಶಿಲ್ಪ, ಪೇಂಟಿಂಗ್‌, ಸಿರಾಮಿಕ್ಸ್‌ ಗ್ರಾಫಿಕ್ಸ್‌ ಕಲೆಗಳ ಶಿಕ್ಷಣವನ್ನು ಇವರು ಪಡೆದುಕೊಂಡಿದ್ದಾರೆ. ಬಳಿಕ ಶಾರ್ಜಾದ ಜೇಮ್ಸ್‌ ಮಿಲಿನಿಯಂ ಸ್ಕೂಲ್‌, ಹರಿಯಾಣದ ಗುರ್‌ ಗ್ರಾಮ ಸನ್‌ಸಿಟಿ ವರ್ಲ್ಡ್ ಸ್ಕೂಲ್‌ನಲ್ಲಿ ಕಲಾ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿದ‌ರು. ಇವರು ತಾಯಿಯ ಪ್ರೇರಣೆಯಿಂದ ಹೂಗಳ ಮಾಲೆ ಕಟ್ಟುವುದನ್ನು ರೂಢಿಸಿಕೊಂಡರು. ಸ್ನೇಹಿತೆಯರ ಸಲಹೆಯಂತೆ ಇದನ್ನು ಸಾಮಾ ಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ತೀರಾ ಸರಳ ವಿಧಾನದಲ್ಲಿ ಹೂ ಮಾಲೆ ಕಟ್ಟುವ ತರಬೇತಿ ನೀಡುತಿದ್ದಾರೆ. 2020ರ ಕೊರೊನಾ ಹಾವಳಿಯಲ್ಲೂ ಕೂಡಾ ಇವರ ಏಕವ್ಯಕ್ತಿ ಕಲಾಪ್ರದರ್ಶನಗಳು ವಿವಿಧ ಸಂಘ, ಸಂಸ್ಥೆಗಳು ಆಯೋಜಿಸಿದ್ದವು. ಮಂಗಳೂರಿನಲ್ಲಿ 3 ಬಾರಿ, ಉಡುಪಿಯಲ್ಲಿ 2 ಬಾರಿ, ಕಾರ್ಕಳ ಮತ್ತು ಪಡುಬಿದ್ರಿಯಲ್ಲಿ ಕಲಾಪ್ರದರ್ಶನಗಳು ಸಂಪನ್ನಗೊಂಡಿದೆ. ಹಲವಾರು ಕಲಾವಿದರ ಸಮೂಹ ಪ್ರದರ್ಶನಗಳಲ್ಲೂ ಕೂಡ ಇವರ ಕಲಾಕೃತಿಗಳು ಎಲ್ಲರ ಗಮನಸೆಳೆದಿದೆ.

Advertisement

ಕುಂಚ ಕಲೆಯೂ ನಿರಂತರ
ಬಿಡುವಿನ ವೇಳೆಯಲ್ಲಿ ಜಲವರ್ಣ, ಆಕ್ರಲಿಕ್‌ ವರ್ಣ, ಪೋಸ್ಟರ್‌ ವರ್ಣಗಳನ್ನು ಬಳಸಿ, ಮಧುಬನಿ, ಬಾಟಿಕ್‌ ಸಹಿತ ಎಲ್ಲ ರೀತಿಯ ಕಲಾಪ್ರಕಾರಗಳ ಹಲವಾರು ಕಲಾಕೃತಿಗಳನ್ನು ರಚಿಸಿದ್ದಾರೆ. ಮನೆ ಎದುರಿನ ಹೂದೋಟದಲ್ಲಿ ನಂದಿ ಬಟ್ಟಲು, ಮಂದಾರ, ಎಕ್ಕ, ಮಲ್ಲಿಗೆ, ಸೇವಂತಿಗೆ, ರತ್ನಗಂಧಿ, ಶಂಖಪುಷ್ಪ, ಈಗಂತೂ ಅಪರೂಪವಾಗಿರುವ ಗೊರಟೆ ಮುಂತಾದ ಹಲವು ಪ್ರಭೇದದ ಹೂಗಿಡಗಳನ್ನು ನೆಟ್ಟಿದ್ದಾರೆ. ಅವನ್ನು ತಮ್ಮ ಕಲೆಗೆ ಬಳಸಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next