Advertisement

ಅಮ್ಮನೆಂಬ ಅಮರಶಿಲ್ಪಿ

01:01 PM Sep 27, 2017 | Team Udayavani |

ಮಗಳಿಗೆ ತಾಯಿಯೇ ಗುರು. ತನಗೆ ಹುಟ್ಟುವ ಮಗಳು ತನ್ನ ತಾಯಿಯಂತಾಗಲಿ ಎಂದು ಬಯಸುತ್ತಾಳೆ ಆಕೆ. ಇತ್ತೀಚೆಗೆ ತಾಯಿಯಾದ ಟೆನ್ನಿಸ್‌ ತಾರೆ ಸೆರೆನಾ ವಿಲಿಯಮ್ಸ್‌ ತನ್ನ ಪ್ರೀತಿಯ ಅಮ್ಮನಿಗೆ ಬರೆದ ಪತ್ರದಲ್ಲೂ ಅದೇ ಆಶಯ ವ್ಯಕ್ತವಾಗಿದೆ. ಸುತ್ತಲಿನ ಸಮಾಜದಿಂದ ಎದುರಾಗುವ ಕಷ್ಟಗಳನ್ನು ಎದುರಿಸುವುದನ್ನು ಕಲಿಸಿದ ಅಮ್ಮನಿಗೆ ಥ್ಯಾಂಕ್ಸ್‌ ಹೇಳಿದ್ದಾರೆ ಸೆರೆನಾ… 

Advertisement

ಪ್ರೀತಿಯ ಅಮ್ಮಾ,
ನಾನು ನೋಡಿರುವ ತುಂಬಾ ಗಟ್ಟಿಗಿತ್ತಿ ಮಹಿಳೆಯರಲ್ಲಿ ನೀನೂ ಒಬ್ಬಳು. ನಾನು ನನ್ನ ಮಗಳನ್ನು ನೋಡುತ್ತಿದ್ದೆ (ಓಹ್‌ ಮೈ ಗಾಡ್‌, ನನಗೀಗ ಮಗಳು ಹುಟ್ಟಿದ್ದಾಳೆ) ಅವಳು ಕೂಡ ನನ್ನಂತೆಯೇ ಗಟ್ಟಿಮುಟ್ಟಾದ, ಬಲಶಾಲಿ ಸ್ನಾಯುಗಳುಳ್ಳ ದೇಹವನ್ನು ಪಡೆದಿದ್ದಾಳೆ. ನಾನು 15 ವರ್ಷದವಳಾಗಿದ್ದಾಗಿನಿಂದ, ಇವತ್ತಿನವರೆಗೆ ಅನುಭವಿಸುತ್ತಾ ಬಂದಿರುವುದನ್ನೇ ಮುಂದೆ ನನ್ನ ಮಗಳೂ ಅನುಭವಿಸಬೇಕಾಗಬಹುದು. ಆಗ ನಾನೇನು ಮಾಡುತ್ತೇನೋ ನನಗೆ ಗೊತ್ತಿಲ್ಲ.

ನನ್ನ ದೇಹ ಗಟ್ಟಿಮುಟ್ಟಾಗಿ ಇದ್ದುದರಿಂದ ಜನ ನನ್ನನ್ನು “ಗಂಡಸು’ ಅಂತ ಕರೆದರು. ನಾನು ಡ್ರಗ್ಸ್‌ ತೆಗೆದುಕೊಳ್ಳುತ್ತೇನೆ ಅಂತ ಸುದ್ದಿ ಹಬ್ಬಿಸಿದರು. (ಇಲ್ಲ, ಪ್ರಶಸ್ತಿ ಆಸೆಗಾಗಿ, ಅಪ್ರಾಮಾಣಿಕಳಾಗುವ ಜಾಯಮಾನ ನನ್ನದಲ್ಲವೇ ಅಲ್ಲ) ನಾನು ಮಹಿಳೆಯರ ಕ್ರೀಡೆಯಲ್ಲಿ ಭಾಗವಹಿಸಬಾರದೆಂದೂ, ಪುರುಷರ ಕ್ರೀಡೆಗೆ ಅರ್ಹಳೆಂದೂ ಹೇಳಿದರು. ಯಾಕೆಂದರೆ, ನಾನು ಇತರ ಮಹಿಳೆಯರಿಗಿಂತ ಜಾಸ್ತಿ ಶಕ್ತಿಶಾಲಿಯಾಗಿ ಕಾಣಿಸುತ್ತೇನೆ ಎಂಬ ಕಾರಣಕ್ಕೆ. (ಇಲ್ಲ, ನಾನು ಜಾಸ್ತಿ ಶ್ರಮ ವಹಿಸುತ್ತೇನೆ ಮತ್ತು ಹುಟ್ಟಿನಿಂದಲೇ ನನ್ನ ದೇಹ ಶಕ್ತಿಯುತವಾಗಿದೆ. ಆ ಬಗ್ಗೆ ನನಗೆ ಹೆಮ್ಮೆ ಇದೆ ಕೂಡ)

ಆದರೆ ಅಮ್ಮಾ, ಅದು ಹೇಗೆ ನೀನು ಜನರನ್ನು, ಮೀಡಿಯಾ ರಿಪೋರ್ಟರ್‌ಗಳನ್ನು, ಕಪ್ಪು ಮಹಿಳೆಯ ಶಕ್ತಿಯನ್ನು ಅರಿತುಕೊಳ್ಳದೆ ಸುಮ್ಮನೆ ದ್ವೇಷಿಸುತ್ತಿದ್ದವರನ್ನು ಸಹಿಸಿಕೊಂಡೆ?

ಕೆಲವು ಮಹಿಳೆಯರು ಇತರರಿಗಿಂತ ಭಿನ್ನವಾಗಿ ಕಾಣಿಸುತ್ತಾರೆಂದು ಸಾಬೀತು ಪಡಿಸಿದ ನಮ್ಮ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆಯಿದೆ. ನಾವೆಲ್ಲರೂ ಒಂದೇ ರೀತಿ ಕಾಣುವುದಿಲ್ಲ. ನಮ್ಮನ್ನು ಬೇರೆ ಬೇರೆ ಹೆಸರಿನಿಂದ ಕರೆಯುವುದಾದರೆ ಬಳುಕುವ ದೇಹದವರು, ಶಕ್ತಿಶಾಲಿ, ಸದೃಢ ಸ್ನಾಯುಗಳ, ಎತ್ತರ ಮೈಕಟ್ಟು, ಕುಬj ದೇಹ… ಎನ್ನಬಹುದು. ಆದರೆ, ವಾಸ್ತವದಲ್ಲಿ ನಾವೆಲ್ಲರೂ ಮಹಿಳೆಯರೇ, ಮತ್ತೆ ನಮಗದರ ಬಗ್ಗೆ ಹೆಮ್ಮೆಯಿದೆ. 

Advertisement

ಅಮ್ಮಾ, ನೀನು ತುಂಬಾ ಶ್ರೇಷ್ಠಳು. ನಾನೂ ನಿನ್ನಂತೆ ಆಗಬೇಕೆಂದು ಆಶಿಸುತ್ತೇನೆ. ಆ ಪ್ರಯತ್ನದಲ್ಲಿ ಇದ್ದೇನೆ ಕೂಡ. ದೇವರಿನ್ನೂ ಅದನ್ನು ಪೂರ್ತಿಗೊಳಿಸಿಲ್ಲ. ಆ ಹಾದಿಯಲ್ಲಿ ಇನ್ನೂ ತುಂಬಾ ದೂರ ನಡೆಯಬೇಕಿದೆ. 
ನನಗೆ ಎದುರಾದ ಎಲ್ಲ ಕಷ್ಟಗಳನ್ನು ದಿಟ್ಟತನದಿಂದ ಎದುರಿಸಲು ರೋಲ್‌ ಮಾಡೆಲ್‌ ಆಗಿ ನೆರವಾದ ನಿನಗೆ ಥ್ಯಾಂಕ್ಸ್‌. ಆ ಎಲ್ಲ ಕಷ್ಟಗಳನ್ನು ನಾನೀಗ ಚಾಲೆಂಜ್‌ ಆಗಿ ಪರಿಗಣಿಸುತ್ತೇನೆ, ಮತ್ತದನ್ನು ಎಂಜಾಯ್‌ ಮಾಡಲು ಕಲಿತಿದ್ದೇನೆ. ಈಗ ನನ್ನ ಮಗಳು, “ಅಲೆಕ್ಸಿಸ್‌ ಒಲಿಂಪಿಯಾ’ಗೂ ನಾನು ಅದನ್ನೇ ಹೇಳಿಕೊಡುತ್ತೇನೆ. ಆಕೆಯೂ ನಿನ್ನಷ್ಟೇ ಧೈರ್ಯಶಾಲಿಯಾಗಲಿ ಎಂದು ಬಯಸುತ್ತೇನೆ. ಆಕೆಗೂ ನೀನೇ ರೋಲ್‌ ಮಾಡೆಲ್‌ ಆಗಲಿ.

ಅಮ್ಮಾ, ನನಗೊಂದು ಮಾತು ಕೊಡು. ಮುಂದೆಯೂ ನೀನು ನನಗೆ ನೆರವಾಗುತ್ತೀಯ ಅಂತ. ನನಗೆ ಗೊತ್ತಿಲ್ಲ, ನಾನು ನಿನ್ನಷ್ಟು ಸೌಮ್ಯ ಮತ್ತು ಧೈರ್ಯಶಾಲಿ ಇದ್ದೀನೋ ಇಲ್ಲವೋ’ ಎಂದು. ಆದರೆ, ಮುಂದೊಂದು ದಿನ ಖಂಡಿತವಾಗಿಯೂ ನಿನ್ನಂತಾಗುತ್ತೇನೆ. ಐ ಲವ್‌ ಯು ಕಣಮ್ಮಾ…
ನಿನ್ನ ಐವರಲ್ಲಿ ಅತಿ ಚಿಕ್ಕವಳು

ಸೆರೆನಾ

Advertisement

Udayavani is now on Telegram. Click here to join our channel and stay updated with the latest news.

Next