# ನನ್ನಶಾಲೆ ನನ್ನಹೆಮ್ಮೆ
Advertisement
ನನ್ನ ಪ್ರೀತಿಯ ಮುಖ್ಯಮಂತ್ರಿಗಳೇ, ಹೇಗಿದ್ದೀರಿ? ರಾಜ ಕ್ಷೇಮವಿದ್ದರೆ, ರಾಜ್ಯವೂ ಕ್ಷೇಮ ಎಂಬ ಅಮ್ಮ ಹೇಳಿದ ನೀತಿ ಕತೆಯಂತೆ, ನೀವು ಸದಾ ಚೆನ್ನಾಗಿರಿ ಎಂಬ ಹಾರೈಕೆ ನನ್ನದು. ನಾನು, ತೀರ್ಥಹಳ್ಳಿ ತಾಲೂಕಿನ ದೂರದ ಕುಗ್ರಾಮ ಅಕ್ಲಾಪುರದ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವೆನು. ನನ್ನೂರಿಗೂ ಈ ಶಾಲೆಗೂ ಮೂರು ಕಿ.ಮೀ. ಅಂತರ. ನನ್ನ ಊರು ಹಿತ್ತಲಸರದ ರಸ್ತೆಗೆ ಮಳೆಗಾಲದಲ್ಲಿ ವಾಹನಗಳು ಬರುವುದಿರಲಿ, ನಡೆದಾಡುವುದೇ ಕಷ್ಟದ ಮಾತು. ಜೋರು ಮಳೆ ಬಿದ್ದಾಗ ಆ ರಸ್ತೆಯ ಸ್ಥಿತಿ ಗಂಭೀರವಾಗಿರುತ್ತೆ. ಪುಟ್ಟ ಕಾಡಿನ ನಡುವೆ ಒಂದು ಕಾಲು ಹಾದಿಯಲ್ಲಿ, ಪ್ರಪಾತದಂಥ ಕಣಿವೆ ದಾಟಿ, ಜಾರುವ ಎರಡು ಕಲ್ಲು ಸಾರಗಳನ್ನು ಹಾದು ಬಂದರೆ, ಒಂದೂವರೆ ಕಿ.ಮೀ. ಅಂತರದಲ್ಲಿ ನನ್ನ ಶಾಲೆ ಕಾಣಸಿಗುತ್ತದೆ. ನಾನು ಅದೇ ಕಾಲುಹಾದಿಯಲ್ಲೇ ನಿತ್ಯವೂ ನಡೆದು ಬರುತ್ತೇನೆ.
ಬೆನ್ನು ಭಾರವಾಗುವಂಥ ಪುಸ್ತಕಗಳನ್ನು ಹೊತ್ತುಕೊಂಡು ಹಾಗೆ ಬರುವುದು ನನಗೆ ಕಷ್ಟದ ವಿಚಾರವಾಗಿಲ್ಲ. ಯಾವಾಗ ನನ್ನ ಶಾಲೆಗೆ ಸೇರುತ್ತೇನೋ ಎಂದು ಚುರುಕು ಚುರುಕು ಹೆಜ್ಜೆ ಹಾಕಿ, ಬರುವುದೇ ನನಗೊಂದು ಸಂಭ್ರಮ. ನನ್ನ ಶಾಲೆಯಲ್ಲಿ 32 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ತುಂಬಾ ಚೆನ್ನಾಗಿ ಪಾಠ ಮಾಡುವ ಗಣಪತಿ ಸರ್, ವೀರೇಶ್ ಸರ್, ಉಷಾ ಮೇಡಂ, ನಂದಿನಿ ಮೇಡಂ ಅವರನ್ನು ಪಡೆದಿರುವುದು ನಮ್ಮೆಲ್ಲರ ಪುಣ್ಯ. ಊರಿನ ಜನರೂ ಹಾಗೆಯೇ ಹೇಳುತ್ತಾರೆ.
Related Articles
Advertisement
ಬಾಗಿಲು ಮುಚ್ಚುವ ಭಯದಲ್ಲಿದ್ದ ನನ್ನ ಶಾಲೆಗೆ ಅತ್ಯುತ್ತಮ ಶಿಕ್ಷಕರುಗಳೇ ಬಂದರು. ನಗುನಗುತ್ತಾ ಅವರು ಹೇಳುವ ಸರಳಪಾಠ, ಸರ್ಕಾರ ಕೊಟ್ಟ ಸೌಲಭ್ಯಗಳಲ್ಲೇ ಪ್ರಯೋಗಾತ್ಮಕವಾಗಿ ಅವರು ಪಾಠ ತಿಳಿಸುವ ವಿಧಾನ ಎಲ್ಲರಿಗೂ ಇಷ್ಟವಾಯಿತು. ಹಸಿದ ಹೊಟ್ಟೆಗೆ ಕೂಡುವ ಬಿಸಿಯೂಟವೂ ಗುಣಮಟ್ಟದಲ್ಲೇ ಸಿಕ್ಕಿತು. ಕ್ರೀಡಾಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮುಂದೆ ಬಂದೆವು. ನಮ ಶಿಕ್ಷಕರು ಇಂಗ್ಲಿಷನ್ನೂ ಚೆನ್ನಾಗಿ ಹೇಳಿಕೊಡುತ್ತಾರೆ. ಇಲ್ಲಿಂದ ಪಾಸಾಗಿ ಹೋಗಿ ಸಿಟಿಗೆ ಸೇರಿದ ಮಕ್ಕಳ ಮೇಲೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಇದನ್ನೆಲ್ಲ ನೋಡಿ, ನಮ್ಮೂರಿನ ಬಹುತೇಕ ಜನ ಕಾನ್ವೆಂಟಿಗೆ ಮಕ್ಕಳನ್ನು ಕಳಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ನನ್ನ ಶಾಲೆಗೇ ಅವರನ್ನೆಲ್ಲ ಕಳಿಸುತ್ತಿದ್ದಾರೆ. ಶಾಲೆಯಲ್ಲಿ ಕಂಪ್ಯೂಟರ್ ಇಲ್ಲದೇ ಇದ್ದರೂ, ಇಂದು ನಾವು ಯಾವ ವಿಚಾರದಲ್ಲೂ ಹಿಂದುಳಿದಿಲ್ಲ.
ಬಹುಶಃ ನೀವು ಮುಚ್ಚಲು ಹೊರಟಿರುವ ಶಾಲೆಗಳಲ್ಲೂ ಮುಂದೆ ಇಂಥದ್ದೊಂದು ಪವಾಡ ಆಗಬಹುದೇನೋ ಎನ್ನುವ ನಂಬಿಕೆ ನನ್ನದು. ಸರ್ಕಾರ ಗುಣಮಟ್ಟದ ಸೌಲಭ್ಯವನ್ನೇ ಕೊಡುತ್ತಿದೆ, ನಮ್ಮ ಊರಿನ ಪೋಷಕರಂತೆ ಬೇರೆ ಪೋಷಕರು ಮನಸ್ಸು ಬದಲಾಗಬೇಕಷ್ಟೇ. ಅದಕ್ಕಾಗಿ ಒಳ್ಳೆಯ ಯೋಜನೆ ಕೈಗೊಳ್ಳಿ. ಬೀಗ ಹಾಕುವ ಮುನ್ನ, ಆ ಶಾಲೆಯ ಶಿಕ್ಷಕರಿಗೆ ಒಂದೇ ಒಂದು ಅವಕಾಶ ಕೊಡಿ ಎನ್ನುವುದು ನನ್ನ ವಿನಂತಿ.
ನಿಮ್ಮ ಪ್ರೀತಿಯಅನನ್ಯ ಎಚ್.ಎಸ್.
7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಕ್ಲಾಪುರ, ತೀರ್ಥಹಳ್ಳಿ