Advertisement

ದೊರೆಯದ ಗುರುವಿಗೊಂದು ಪತ್ರ

12:30 AM Sep 04, 2018 | |

ನಮಸ್ಕಾರ ಸರ್‌,
ನನ್ನ ಬದುಕಿನ ಪ್ರತಿ ಕದಲುವಿಕೆಯಲ್ಲೂ ನಿಮ್ಮ ಶಕ್ತಿ, ನಿಮ್ಮ ನೆನಪುಗಳು ಮತ್ತು ನೀವೇ ಒದಗಿಸಿದ ಪ್ರಾರಂಭಿಕ ನೆಗೆತ ಇರುವುದರಿಂದ ನೀವು ನನ್ನ ವ್ಯಕ್ತಿತ್ವದ ಭಾಗವೇ ಆಗಿದ್ದೀರಿ. ನನ್ನೊಳಗೆ ನೀವು ಇರುವುದರಿಂದಲೋ ಅಥವಾ ನೀವು ನನ್ನಿಂದ ಹೊರತಾದ ಸಂಗತಿ ಎಂದು ಅನ್ನಿಸಿದ ಕಾರಣದಿಂದಲೋ ಗೊತ್ತಿಲ್ಲ ನಿಮ್ಮ ನೆನಪು ನನಗೆ ಆಗುವುದೇ ಇಲ್ಲ. ಆದರೆ, ನನ್ನ ನಡೆಯಲ್ಲಿ, ನುಡಿಯಲ್ಲಿ, ಬರೆವ ಬೆರಳುಗಳ ತುದಿಯಲ್ಲಿ ನಿಮ್ಮ ನೆರಳಿದೆ. ನನ್ನ ಆಲೋಚನೆಗಳಲ್ಲಿ ನೀವಿದ್ದೀರಿ. ನಿಮ್ಮ ನೆನಪುಗಳು ಬಾರದಷ್ಟು ನನ್ನೊಳಗೆ ಸೇರಿಕೊಂಡಿದ್ದೀರಿ. ಶಿಕ್ಷಕರ ದಿನ  ಬಂದಾಗ ಎಲ್ಲರೂ ಶಿಕ್ಷಕರನ್ನು ನೆನೆವಾಗ ಇದೆಲ್ಲ ಹೇಗಾಯಿತು ಎಂದು ಅಚ್ಚರಿಪಡುತ್ತಿದ್ದೇನೆ.

Advertisement

ನೀವಂದುಕೊಂಡಂತೆ ನಾ ನಡೆಯಬೇಕೆಂದು ನೀವೆಂದೂ ಒತ್ತಡ ಹೇರಿದವರಲ್ಲ. ನಿಮ್ಮ ಆಲೋಚನೆಗಳೆಂದೂ ನನ್ನ ಭುಜದ ಮೇಲೆ ಕುಳಿತು ನನ್ನನ್ನು ಉಸಿರುಗಟ್ಟಿಸಲಿಲ್ಲ. ನಿಮ್ಮ ಅಭಿಪ್ರಾಯಗಳನ್ನು ನನ್ನ ಮೇಲೆ ಹೇರುವುದಿರಲಿ, ನೀವೇ ನನ್ನ ಅಭಿಪ್ರಾಯಗಳನ್ನು ಮನ್ನಿಸಿದ್ದೀರಿ. ಹೀಗೆ ನಡೆಯುತ್ತಲೇ ನೀವು ಹಿಂಬಾಲಿಸಿದಂತೆ ಅನ್ನಿಸಿದರೂ ನಾನೇ ನಿಮ್ಮನ್ನು ಅನುಸರಿಸುತ್ತಿದ್ದೆ ಎಂಬುದು ಈಗ ಹೊಳೆಯುತ್ತಿದೆ. ನನಗೆ ಕಲಿಸುವ ನೆಪದಲ್ಲಿ ನೀವೇ ನನ್ನಿಂದ ಕಲಿಯುತ್ತಿದ್ದೀರಿ ಎಂದು ಆಗ ನಾನು ಎಣಿಸಿಕೊಂಡಿದ್ದೆ. ನೀವು ಕಲಿಸುತ್ತಿದ್ದೀರೋ ನಾನೇ ನಿಮಗೆ ಕಲಿಸುತ್ತಿದ್ದೇನೋ ಅಥವಾ ನಾವು ಪರಸ್ಪರ ಒಡ ನಾಡುತ್ತಾ ಒಬ್ಬರಿಗೆ ಇನ್ನೊಬ್ಬರು ನೆರವಾಗು ತ್ತಿದ್ದೇವೋ ಎಂದು ನಾನು ಅಂದುಕೊಳ್ಳುವ ಹಾಗೆ ನೀವು ಗುರುವಾಗಿ ದೂರ ನಿಲ್ಲದೆ ನನ್ನ ಒಡನಾಡಿಯಾಗಿ ಹತ್ತಿರವಾದಿರಿ. ಹಾಗೆ ನೋಡಿದರೆ, ನೀವು ನನಗೆ ಕಲಿಸಲೇ ಇಲ್ಲ; ನಾನೇ ಕಲಿಯುವಂತೆ ಮಾಡಿದ್ದೀರಿ. ಗುರುಗಳನ್ನು ದಾರಿದೀಪವೆನ್ನುತ್ತಾರೆ. ನೀವು ದಾರಿ ದೀಪವಾಗಲಿಲ್ಲ. ನನ್ನನ್ನೇ ದೀಪವಾಗಿಸಿ,  ನೀವು ದಾರಿಯಾದಿರಿ.  

ನನಗಿಂದೂ ನೆನಪಿದೆ. ಸ್ಮಶಾನದಂತಹ ಮೌನವನ್ನು ನಾವೆಲ್ಲರೂ ಶಿಸ್ತು ಎಂದು ಭಾವಿಸಿದ್ದೆವು. ನೀವದನ್ನು ಸ್ಮಶಾನ ಎಂದಿರಿ. ಜೀವ ಇದೆ ಎಂದರೆ ಮಾತನಾಡುತ್ತೀರಿ, ನಗುತ್ತೀರಿ, ಜಗಳವಾಡುತ್ತೀರಿ ಎನ್ನುತ್ತಾ ನಮ್ಮೊಡನೆ ಹೌದೋ ಇಲ್ಲವೋ ಎಂದು ಕೇಳಿದಿರಿ. ಅದು ನೀವು ನಮ್ಮ ಶಾಲೆಗೆ ಬಂದ ಮೊದಲ ದಿನ. ನಾವೆಲ್ಲ “ಹೌದು ಎಂದು ಗಟ್ಟಿಯಾಗಿ ಕೂಗಿದೆವು. ಆ ಕೂಗಿನಲ್ಲಿ ಶಿಸ್ತಿನ ನಿಯಮಗಳು ಕರಗಿಹೋಗಿದ್ದವು. ಹೇಳಬೇಕಾದ ಮಾತನ್ನು ಹೇಳದಿರುವುದು ಅಶಿಸ್ತು ಎಂದು ನೀವು ಹೇಳಿದ್ದು ಚೆನ್ನಾಗಿ ನೆನಪಿದೆ. ತರಗತಿ ಕೋಣೆಯಲ್ಲಿ ಅದುವರೆಗೂ ಶಿಕ್ಷಕರ ಮಾತು ಮಾತ್ರ ಕೇಳುತಿತ್ತು. ಆದರೆ, ನೀವು ನಮ್ಮ ಮಾತನ್ನು ಆಲಿಸುತ್ತಿದ್ದಿರಿ.

ನನಗೆ ಆಟವಾಡುವುದನ್ನು ಕಲಿಸುವ ಬದಲು ನನ್ನೊಡನೆ ಆಟವಾಡಿದ್ದೀರಿ. ನಾನು ಸೋತಾಗ ಹೆಗೆಲ ಮೇಲೆ ಕೈಯಿಟ್ಟು ಧೈರ್ಯ ತುಂಬಿದ್ದೀರಿ. ಕವಿತೆಯನ್ನೂ ಗಣಿತವನ್ನೂ ನೀವದೆಷ್ಟು ಸುಂದರವಾಗಿ ಬೆಸೆಯುತ್ತೀರೆಂದರೆ, ಕುಮಾರವ್ಯಾಸನ ಪ್ರತಿ ಸಾಲಿನಲ್ಲೂ ನಾನು ಗಣಿತವನ್ನೂ ಸಂಖ್ಯೆಗಳ ಬಂಧಗಳ ನಡುವೆ ಕವಿತೆಯನ್ನೂ ಕಾಣುವಂತೆ ಮಾಡಿದ್ದೀರಿ. ವಿಜ್ಞಾನವನ್ನು ಬದುಕಿ ತೋರಿಸಿದ್ದೀರಿ, ಸಾಹಿತ್ಯವನ್ನು ನಮ್ಮೊಡನೆ ಉಸಿರಾಡಿದ್ದೀರಿ.

ನೀವು ತಿಳಿಹೇಳಲಿಲ್ಲ; ನನಗೇ ಹೆಚ್ಚು ತಿಳಿದಿದೆಯೆಂದು ಮನವರಿಕೆ ಮಾಡಿ  ಅಥವಾ ನಾನು ಹಾಗೆಂದುಕೊಳ್ಳುವಂತೆ ಆತ್ಮವಿಶ್ವಾಸ ತುಂಬಿದಿರಿ. ನೀವು ನನಗೆ ಕಲಿಸುವ ಗುರುವೆಂದು ಆಗ ಅನ್ನಿಸಿರಲಿಲ್ಲ. ನೀವೂ ಹಾಗೆ ನಡೆದುಕೊಳ್ಳಲಿಲ್ಲ. ನಿಮಗೂ ಗೊತ್ತಿರದ ಸಂಗತಿಗಳು ಬಹಳಷ್ಟಿವೆ ಎಂಬುದು ನನಗೆ ಗೊತ್ತಾಗುವ ಹಾಗೆ “ಓ ಹೌದಾ? “ನಿನಗೆ ಗೊತ್ತಾ? “ಓಹ್‌, ನೀನು ಹೇಳಿದ ಮೇಲೆಯೇ ನನಗೆ ಹೊಳೆಯಿತು ನೋಡು! ಎಂದು ಎಂದು ಚಕಿತರಾಗಿದ್ದಿರಿ. ನೀವು ನನ್ನಲ್ಲಿ ಕೇಳುವ ಅನೇಕ ಪ್ರಶ್ನೆಗಳು ಪರೀಕ್ಷಾರ್ಥವೆನಿಸುತ್ತಿರಲಿಲ್ಲ: ನಿಮಗೆ ನನ್ನಿಂದ ಕಲಿಯುವ ಅನೇಕ ವಿಷಯಗಳಿವೆ ಎಂದು ಅನ್ನಿಸುತಿತ್ತು. ಅನ್ನಿಸಿ ಖುಷಿಯಾಗುತಿತ್ತು ಕೂಡಾ.

Advertisement

ನನ್ನ ತಪ್ಪುಗಳನ್ನು ನೀವು ಕಂಡಿದ್ದೀರಿ, ಕೆಲವನ್ನು ಕಂಡೂ ಕಾಣದಂತೆ ಅವಗಣಿಸಿದ್ದೀರಿ. ಇನ್ನು ಕೆಲವನ್ನು ಸರಿಪಡಿಸಿದ್ದೀರಿ. ಆದರೆ, ಅವುಗಳನ್ನೆಂದೂ ನೀವು ಗುಡ್ಡಮಾಡಿ ಅವಮಾನಿಸಲಿಲ್ಲ ಅಥವಾ ಆ ಗುಡ್ಡದೆದುರು ನಿಲ್ಲಿಸಿ ನನ್ನನ್ನು ಕುಬjನನ್ನಾಗಿಸಿರಲಿಲ್ಲ. ನನ್ನ ಒಳ್ಳೆಯ ಗುಣಗಳನ್ನು ಎತ್ತಿ ಹೇಳಿ, ನನ್ನ ತಾಯಿ-ತಂದೆ, ಬಂಧುಗಳು ನನ್ನ ಕುರಿತು ಹೆಮ್ಮೆಪಟ್ಟುಕೊಳ್ಳುವಂತೆ ಮಾಡಿದ್ದೀರಿ. ಹಾಗೆ ಮಾಡುತ್ತಲೆ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಹುರಿದುಂಬಿಸಿದ್ದೀರಿ.  ನಿಮ್ಮ ಬಳಿ ನಾನಾಡದೆ ಉಳಿದಿರುವ ಮಾತುಗಳೇ ಇಲ್ಲ ಎಂದು ನನಗನ್ನಿಸುವ ಹಾಗೆ ನನ್ನೊಡನೆ ಮಾತನಾಡಿದ್ದೀರಿ. ನನ್ನ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿರದಿದ್ದರೂ ಕೇಳುವ ಕಿವಿಗಳು ಯಾವಾಗಲೂ ಇದ್ದವು. ನನ್ನ ಪ್ರಶ್ನೆಗಳಿಗೆ ಕೆಲವೊಮ್ಮೆ ಉತ್ತರ ನೀಡುವ ಮತ್ತಿಷ್ಟು ಪ್ರಶ್ನೆಗಳನ್ನು ಎಸೆದು ಯೋಚಿಸುವಂತೆ ಪ್ರೇರೇಪಿಸುತ್ತಿದ್ದಿರಿ. ನೀವೆಷ್ಟು ಶಾಂತವಾಗಿ ನನ್ನನ್ನು ಆಲಿಸುತ್ತಿದ್ದಿರೆಂದರೆ ಇನ್ನೊಂದಿಷ್ಟು ಪ್ರಶ್ನೆಗಳನ್ನು ಕೇಳಲು ಉತ್ಸಾಹವುಂಟಾಗುತಿತ್ತು. ನಾನೇ ಕೇಳಿದ ಹಿಂದಿನ ಪ್ರಶ್ನೆಗಳ ಉತ್ತರವು ನನ್ನದೇ ಮುಂದಿನ ಪ್ರಶ್ನೆಗಳಲ್ಲಿ ಅವಿತಿರುವುದು ಅರಿವಾಗಿ ಕುಣಿದು ಕುಪ್ಪಳಿಸುತ್ತಿದ್ದೆ. ಕತೆಗಳನ್ನು ನಿಮ್ಮ ದೇಹದ ಮೂಲಕವೂ ಕವಿತೆಗಳನ್ನು ನಿಮ್ಮ ಕಣ್ಣುಗಳ ಮೂಲಕವೂ ಹೇಳುತ್ತಾ ನಿಮ್ಮ ಇಡೀ ದೇಹ ನನಗಾಗಿ ಇದೆಯೆಂದು ಅನ್ನಿಸುವಂತೆ ಮಾಡಿದ್ದೀರಿ. 

ಗುರುವು ಮಗುವಿಗೆ ಎಷ್ಟು ಹತ್ತಿರವಾಗಬಹುದು? ಎಣಿಸಿದರೆ, ನಾನು ಚಕಿತನಾಗುತ್ತೇನೆ. ನೀವು ಎಷ್ಟು ಹತ್ತಿರವಾಗಿದ್ದೀರಿ  ಎಂದರೆ, ನನ್ನಿಂದ ಪ್ರತ್ಯೇಕಿಸಲು ಆಗದಷ್ಟು ನನ್ನ ವ್ಯಕ್ತಿತ್ವದಲ್ಲಿ ಬೆಸೆದುಹೋಗಿದ್ದೀರಿ, ನನಗೆ ಗೊತ್ತಿಲ್ಲದಂತೆ. 
ವಿಳಾಸವಿಲ್ಲದ ಈ ಪತ್ರ ನಿಮಗೆ ತಲುಪುವುದೆಂಬ ನಿರೀಕ್ಷೆಯಲ್ಲಿ…

ಉದಯ ಗಾಂವಕಾರ 

Advertisement

Udayavani is now on Telegram. Click here to join our channel and stay updated with the latest news.

Next