Advertisement

Desi Swara: ಅದ್ದೂರಿಯಾಗಿ ನಡೆದ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ

12:15 PM Dec 30, 2023 | Team Udayavani |

ಅಬುಧಾಬಿ: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘವು ಮೆರ್ವಿಲ್ಲೆ ಇನ್ವೆಸ್ಟಮೆಂಟ್ಸ್‌ ದುಬೈ ಪ್ರಾಯೋಜಿಸಿದ ನಾಡ ಹಬ್ಬ ಅರಬ್‌ ನಾಡಲ್ಲಿ ಎಂಬ ಶೀರ್ಷಿಕೆಯ ಅಡಿಯಲ್ಲಿ 6ನೇ ವರ್ಷದ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವವನ್ನು ಸಂಯುಕ್ತ ಅರಬ್‌ ಸಂಸ್ಥಾನದಲ್ಲಿರುವ ಕನ್ನಡಿಗರಿಗಾಗಿ ಡಿ.10ರಂದು ದುಬೈಯ ಮೋಹಃಸಿನಾದಲ್ಲಿರುವ ಇತಿಸಲಾತ್‌ ನ್ಪೋರ್ಟ್ಸ್ ಅಕಾಡೆಮಿಯಲ್ಲಿ ಬೆಳಗ್ಗೆ 8ರಿಂದ ರಾತ್ರಿ 10ರ ತನಕ ಆಯೋಜಿಸಲಾಗಿತ್ತು.

Advertisement

ಯುಎಇ ರಾಷ್ಟ್ರ ಗೀತೆ, ಭಾರತದ ರಾಷ್ಟ್ರ ಗೀತೆ ಮತ್ತು ಕರ್ನಾಟಕ ನಾಡಗೀತೆ ಹಾಡುವ ಮೂಲಕ ಮೈದಾನದ ಪ್ರವೇಶದಲ್ಲಿ ಪ್ರವೇಶ ದ್ವಾರದ ರಿಬ್ಬನ್‌ನನ್ನು ಡಾ| ಮಾಲತಿ ಹೊಳ್ಳ ಅವರು ಕತ್ತರಿಸುವುದರೊಂದಿಗೆ ಅಧಿಕೃತ ಚಾಲನೆ ನೀಡಿದರು. ದುಬೈ ದಸರಾ ಉದ್ಘಾಟಿಸಿ ಒಲಂಪಿಕ್‌ ಜ್ಯೋತಿ ಕ್ರೀಡಾಂಗಣದ ಸುತ್ತ ಭಾರತ, ಯುಎಇ, ಕರ್ನಾಟಕ ಬಾವುಟಗಳನ್ನು ಹಿಡಿದು ಜೈಕಾರ ಹಾಕುತ್ತ ಪಥಸಂಚಲನ ನಡೆಸಿದರು, ಮಾಜಿ ಭಾರತೀಯ ಕ್ರಿಕೆಟ್‌ ತಾರೆ ಕನ್ನಡಿಗ ದೊಡ್ಡ ಗಣೇಶ್‌ ಅವರು ಕ್ರೀಡಾ ಜ್ಯೋತಿಯನ್ನು ಹಿಡಿದು ಕ್ರೀಡಾಪಟುಗಳ ಪಥ ಸಂಚಲನವನ್ನು ಮುನ್ನೆಡಿಸಿದರು.

ಉದ್ಘಾಟನ ಸಮಾರಂಭ ಮತ್ತು ಕ್ರೀಡಾ ರತ್ನ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಮಧು ದಾವಣಗೆರೆ ಅವರ ಅನುಪಸ್ಥಿತಿಯಲ್ಲಿ ಸಂಘದ ಉಪಾಧ್ಯಕ್ಷರಾದ ಹಾದಿಯ ಮಂಡ್ಯ ಅವರು ಅಲಂಕರಿಸಿದ್ದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ದುಬೈ ಆಡಳಿತ ರಾಜಮನೆತನದ ಹಿಸ್‌ ಹೈನೆಸ್‌ ಶೇಖ್‌ ಮೊಹಮ್ಮದ್‌ ಬಿನ್‌ ಜುಮಾ ಅಲ್‌ ಮಕ್ತುಮ್ , ಮೆರ್ವಿಲ್ಲೆ ಇನ್ವೆಸ್ಟ್‌ಮೆಂಟ್‌ ಇದರ ಮುಖ್ಯಸ್ಥರಾದ ಡಾ| ಅಹ್ಮದ್‌ ಮೊಹಮ್ಮದ್‌ ರಾಶಿದ್‌ ಅಲ್ತಕ್ಫ್‌ ಅಹ್‌ ಅಲ್‌ ಯಮ್ಮಾಹಿ, ಡಾ| ಸಯ್ಯದ್‌ ತೌಸೀಫ್ ಅಹಮದ್‌, ಕರ್ನಾಟಕ ಎನ್‌ಆರ್‌ಐ ಫೋರಂ ಉಪಾಧ್ಯಕ್ಷರಾದ ಸಂಪುಟ ದರ್ಜೆಯ ಸಚಿವೆ ಡಾ| ಆರತಿ ಕೃಷ್ಣ, ಭಾರತೀಯ ಪ್ಯಾರಾಒಲಿಂಪಿಕ್‌ ಆ್ಯತ್ಲೆಟ್‌ ಪದಕ ವಿಜೇತೆ ಪದ್ಮಶ್ರೀ ಡಾ| ಮಾಲತಿ ಕೃಷ್ಣಮೂರ್ತಿ ಹೊಳ್ಳ ಮತ್ತು ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ದೊಡ್ಡ ಗಣೇಶ್‌, ಎಮ್‌ಬಿಎಮ್‌ ಹೆಲ್ತ್‌ಕೇರ್‌ ಮುಖ್ಯಸ್ಥರಾದ ಮಹಮೂದ್‌ ಅಲ್‌ ಮಝುಕಿ, ನುಸ್ರಾ ಎಜುಕೇಶನ್‌ ಆ್ಯಂಡ್‌ ಚಾರಿಟಿ ಟ್ರಸ್ಟ್‌ ಮಂಡ್ಯ ಇದರ ಸಂಸ್ಥಾಪಕರಾದ ಡಾ| ನೂರ್‌ ಅಹಮದ್‌ ಮಂಡ್ಯ ಮುಂತಾದವರು ಉಪಸ್ಥಿತರಿದ್ದರು.

ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಫ‌ನ್‌ ಗೇಮ್ಸ್‌ , ಖೋಖೋ, ಕಬಡ್ಡಿ, ಬ್ಯಾಡ್ಮಿಂಟನ್‌, ತ್ರೋಬಾಲ್‌ , ವಾಲಿಬಾಲ್‌ , ಚೆಸ್‌, ಆ್ಯತ್ಲೆಟಿಕ್ಸ್‌, ಫುಟ್‌ಬಾಲ್‌ , ಹಗ್ಗ ಜಗ್ಗಾಟ, ಕ್ರಿಕೆಟ್‌ ಮತ್ತು ಕವಿಗೋಷ್ಠಿ, ಕ್ವಿಜ್‌, ಕವನ, ಲೇಖನ ಸ್ಪರ್ಧೆ, ರಂಗೋಲಿ, ಅಂತ್ಯಾಕ್ಷರಿ, ದಸರಾ ಗೊಂಬೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಕ್ರೀಡಾಪಟುಗಳು 384 ಚಿನ್ನ, ಬೆಳ್ಳಿ, ಕಂಚಿನ ಪದಕ ತಮ್ಮ ಕೊರಳಿಗೇರಿಸಿಕೊಂಡು, ಟ್ರೋಫಿಗಳನ್ನು ಪಡೆದು ಸಂತಸಪಟ್ಟರು. ವಿಷ್ಣುಮೂರ್ತಿ ಮೈಸೂರು, ಶ್ವೇತಾ ನಾಡಿಗ್‌, ಮಮತಾ ಮೈಸೂರು, ಅಶ್ರಫ್ ಪೆರುವಾಯಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಿಸಿದರು.

Advertisement

ವಿಜೇತರಿಗೆ ಹೆಮ್ಮೆಯ ದುಬೈ ಕನ್ನಡ ಸಂಘದ ಉಪಾಧ್ಯಕ್ಷೆ ಹಾದಿಯ ಮಂಡ್ಯ, ಮುಖ್ಯ ಕಾರ್ಯದರ್ಶಿ ರಫೀಕ್‌ ಅಲಿ ಕೊಡಗು, ಮಮತಾ ಮೈಸೂರು, ಸುದೀಪ್‌ ದಾವಣಗೆರೆ, ಶಂಕರ್‌ ಬೆಳಗಾವಿ, ಪಲ್ಲವಿ ದಾವಣಗೆರೆ, ವಿಷ್ಣುಮೂರ್ತಿ ಮೈಸೂರು, ಅನಿತಾ ಬೆಂಗಳೂರು, ಡಾ| ಸವಿತಾ ಮೈಸೂರು, ಮೊಹಿದ್ದೀನ್‌ ಹುಬ್ಬಳ್ಳಿ, ವರದರಾಜ್‌ ಕೋಲಾರ, ಅಕ್ರಮ್‌ ಕೊಡಗು ಎಲ್ಲ ಕ್ರೀಡಾ ವಿಭಾಗದ ಲೀಡಿಂಗ್‌ ಟೀಮ್‌ ಮತ್ತು ಸ್ವಯಂಸೇವಕರು ತಂಡ ಜತೆ ಸೇರಿ ಬಹುಮಾನ ವಿತರಿಸಿದರು.

ದುಬೈ ಕ್ರೀಡಾರತ್ನ ಪ್ರಶಸ್ತಿ
ಭಾರತ ದೇಶವನ್ನು ಕ್ರೀಡೆಯಲ್ಲಿ ಪ್ರತಿನಿಧಿಸಿ ರಾಜ್ಯದ ಕೀರ್ತಿಯನ್ನು ವಿಶ್ವದಲ್ಲಿ ಪಸರಿಸಿದ ಸಾಧಕ ಕನ್ನಡಿಗ ಕ್ರೀಡಾಪಟುಗಳನ್ನು ಗುರುತಿಸಿ ಹೆಮ್ಮೆಯ ದುಬೈ ಕನ್ನಡ ಸಂಘದ ವಾರ್ಷಿಕ ಪ್ರಶಸ್ತಿ ಯುಎಇಯ ರಾಷ್ಟ್ರೀಯ ಪಕ್ಷಿ ಫಾಲ್ಕನ್‌ ಒಳಗೊಂಡ ವಿಶೇಷ ವಿನ್ಯಾಸದ ಪ್ರತಿಷ್ಠಿತ ದುಬೈ ಕ್ರೀಡಾರತ್ನ ಪ್ರಶಸ್ತಿಯನ್ನು 2020 ಸಾಲಿಗೆ ಭಾರತೀಯ ಪ್ಯಾರಾಲಿಂಪಿಕ್‌ ಆ್ಯತ್ಲೀಟ್‌ ಪದಕ ವಿಜೇತೆ, ಅರ್ಜುನ ಪ್ರಶಸ್ತಿ ಪುರಸ್ಕೃತೆ ಡಾ| ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರಿಗೂ, 2023ಸಾಲಿಗೆ ದುಬೈ ಕ್ರೀಡಾರತ್ನ ಪ್ರಶಸ್ತಿಯನ್ನು ಭಾರತದ ವೇಗದ ಬೌಲರ್‌ ದೊಡ್ಡ ಗಣೇಶ್‌ ಅವರಿಗೂ ನೀಡಿ ಗೌರವಿಸಲಾಯಿತು. ಜತೆಗೆ ಮಾಜಿ ಭಾರತೀಯ ಕ್ರಿಕೆಟ್‌ ಕ್ರೀಡಾಪಟು ಕನ್ನಡತಿ ಸ್ಮಿತಾ ಅವರಿಗೆ ಎನ್‌ಆರ್‌ಐ ಸ್ಫೋರ್ಟ್ಸ್ ಪರ್ಸನ್‌ ಅವಾರ್ಡ್‌ ನೀಡಿ ಗೌರವಿಸಲಾಯಿತು.

ಸಂಗೀತ ರಸಸಂಜೆಯಲ್ಲಿ ಸ್ಯಾಂಡಲ್‌ವುಡ್‌ನ‌ ಖ್ಯಾತ ಗಾಯಕ ಹೇಮಂತ್‌, ಖ್ಯಾತ ಸಂಗೀತ ಸಂಯೋಜಕ ಹರ್ಷವರ್ಧನ್‌ ರಾಜ್‌, ಸ್ಥಳೀಯ ಗಾಯಕ ಡಾ| ಅಭಿಷೇಕ್‌, ಖ್ಯಾತ ಹಿನ್ನಲೆ ಗಾಯಕಿ ದಿವ್ಯಾ ರಾಮಚಂದ್ರ, ಖ್ಯಾತ ಕನ್ನಡ ರ್ಯಾಪರ್‌ ರಾಹುಲ್‌ ಡಿಟ್ಟೋ ಮತ್ತು ತಂಡ ದೇಶ ವಿದೇಶಗಳ ಅನಿವಾಸಿ ಪ್ರೇಕ್ಷಕರನ್ನು ಹಾಡು ಮತ್ತು ನೃತ್ಯಗಳಿಂದ ರಂಜಿಸಿದರು. ಅತಿಥಿಗಳಾಗಿ ರಾಜನವಿ ಕನ್‌ಸ್ಟ್ರಕ್ಷನ್‌ ಮಾಲಕರಾದ ನವೀನ, ಖುಷಿ ಬಿಲ್ಡರ್ಸ್‌ ಮಾಲಕ ರವಿ, ಡ್ರೀಮ್‌ ಸಿಟಿ ಹೊಟೇಲ್‌ ಮಾಲಕ ಕಿರಣ್‌ ಗೌಡ, ರಿವಾ ಲೇಸರ್‌ ಕ್ಲಿನಿಕ್‌ ಮಾಲಕಿ ಡಾ| ರಶ್ಮಿ ನಂದಕಿಶೋರ್‌, 24 ಸೆವೆನ್‌ ಹೋಮ್‌ ಕೇರ್‌ ಎಂಡಿ ಡಾ| ರಫೀಕ್‌ ಮುಂತಾದವರು ಉಪಸ್ಥಿತರಿದ್ದರು. ಅನುಷಾ ನಿರೂಪಿಸಿದರು.

ಹಲವು ಕ್ರೀಡೇಗಳನ್ನು ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಂಡ ದೊಡ್ಡ ಮಟ್ಟದ ಈ ಒಂದು ದುಬೈ ದಸರಾ ಕಾರ್ಯಕ್ರಮ ನಡೆಸಲು ಹೆಮ್ಮೆಯ ದುಬೈ ಕನ್ನಡ ಸಂಘದ ಮುಖ್ಯ ಸಮಿತಿಯೊಂದಿಗೆ ಪ್ರತಾಪ್‌ ಮಡಿಕೇರಿ, ನಜೀರ ಮಂಡ್ಯ, ಚೇತನ್‌ ಬೆಂಗಳೂರು, ಹಾದಿ ಕುಂದಾಪುರ, ಸ್ವಾತಿ ಚಿತ್ರದುರ್ಗ, ರಜನಿ ಬೆಂಗಳೂರು, ಶ್ರೀನಿವಾಸ್‌ ಅರಸ್‌, ಅಶ್ರಫ್ ಮಂಗಳೂರು ಮುಂತಾದ ಉಪಸಮಿತಿ ಸದಸ್ಯರಲ್ಲದೆ ಬ್ಯಾಡ್ಮಿಂಟನ್‌ ವಿಭಾಗವನ್ನು ಡಾ| ಮೋಹನ್‌, ವಾಲಿಬಾಲ್‌ ವಿಭಾಗವನ್ನು ಆನಂದ್‌ ಮಂಗಳೂರು, ಸರ್ಫಾಜ್‌ ಕುಂದಾಪುರ, ಇಕ್ಬಾಲ್‌ ಮಂಗಳೂರು, ಖೋ ಖೋ ವಿಭಾಗವನ್ನು ಅಮಿತಾ ಚಿಕ್ಕ ಮಗಳೂರು, ತ್ರೋಬಾಲ್‌ ವಿಭಾಗವನ್ನು ಡೋರೀನ್‌, ಅಲನ್‌, ಲ್ಯಾನಲ್‌ , ಫ‌ುಟ್‌ಬಾಲ್‌ ವಿಭಾಗವನ್ನು ರಶೀದ್‌ ಮಂಗಳೂರು, ಕಬಡ್ಡಿ ವಿಭಾಗವನ್ನು ನೋಯೆಲ್‌ ಅಲ್ಮೇಡ, ಆ್ಯತ್ಲೆಟಿಕ್ಸ್‌ ವಿಭಾಗವನ್ನು ಮುಜೀಬ್‌ ಮಾಸ್ಟರ್‌, ಸಾಂಸ್ಕೃತಿಕ ವಿಭಾಗವನ್ನು ಚೇತನ ಶೇಖರ್‌ ಬೆಂಗಳೂರು, ಚೆಸ್‌ ವಿಭಾಗವನ್ನು ಆಶಯ್‌ ಜೈನ್‌, ಹಗ್ಗ ಜಗ್ಗಾಟದಲ್ಲಿ ಕ್ಲೀವನ್‌ ಮಂಗಳೂರು, ಕ್ರಿಕೆಟ್‌ನಲ್ಲಿ ರಂಗ ಬೆಂಗಳೂರು, ಜೈಶಂಕರ್‌ ಬೆಂಗಳೂರು, ಅಯ್ಯಪ್ಪ ಆಂಧ್ರಪ್ರದೇಶ, ಭಾಷಾ ಆಂಧ್ರಪ್ರದೇಶ, ಮತ್ತು ಫೈಝಲ್‌ ಮಂಗಳೂರು, ರಾಜು ಮಂಗಳೂರು ಮುಂತಾದ ಹಲವು ಸ್ವಯಂ ಸೇವಕರು ಜತೆ ಸೇರಿ ಉತ್ತಮ ರೀತಿಯಲ್ಲಿ ಮುನ್ನೆಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next