ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರೆಯ ಸಂಭ್ರಮ ಕಳೆಕಟ್ಟಿದೆ. ವಿಶ್ವವಿಖ್ಯಾತ ದಸರಾ ಹಬ್ಬದ ಸಂಭ್ರಮಕ್ಕೆ ಕೆಲವು ದಿನಗಳಷ್ಟೇ ಬಾಕಿಯಿರುವ ಹಿನ್ನೆಲೆಯಲ್ಲಿ ದಸರೆಯ ಸೊಬಗನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರದಲ್ಲಿ ಆಯೋಜಿರುವ ಎರಡು ದಿನಗಳ ಗಾಳಿಪಟ ಉತ್ಸವಕ್ಕೆ ಶನಿವಾರ ಸಂಭ್ರಮದ ಚಾಲನೆ ದೊರೆಯಿತು.
ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ವತಿಯಿಂದ ಲಲಿತಮಹಲ್ ಹೆಲಿಪ್ಯಾಡ್ ಅಂಗಳದಲ್ಲಿ ಆಯೋಜಿಸಿರುವ ಗಾಳಿಪಟ ಉತ್ಸವದಲ್ಲಿ ಹಾರಾಡಿದ ಬಣ್ಣಬಣ್ಣದ ಆಕರ್ಷಕ ಗಾಳಿಪಟಗಳು ನೋಡುಗರ ಕಣ್ಮನ ಸೆಳೆದವು. ಟೀಮ್ ಮಂಗಳೂರು ತಂಡದ ಸದಸ್ಯರು ತಯಾರಿಸಿರುವ ಹಲವು ಬಗೆಯ ಗಾಳಿಪಟಗಳು ನೆರೆದಿದ್ದವರನ್ನು ತನ್ನತ್ತ ಆಕರ್ಷಿಸಿತು. ಹಸಿರಿನಿಂದ ಕಂಗೊಳಿಸುತ್ತಿರುವ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಸುಂದರ ವಾತಾವರಣದಲ್ಲಿ ಆರಂಭಗೊಂಡ ಗಾಳಿಪಟ ಉತ್ಸವದಲ್ಲಿ ವಿವಿಧ ವಿನ್ಯಾಸದ ಗಾಳಿಪಟಗಳ ಹಾರಾಟ, ದಸರೆಯ ಸಂಭ್ರಮಕ್ಕೆ ಮುನ್ನುಡಿ ಬರೆಯಿತು.
ಗಾಳಿಪಟಗಳ ವಿನ್ಯಾಸ: ಬದುಕಿನ ಹಲವು ಸಿಹಿ-ಕಹಿ ಅನುಭವಗಳ ಸಂಕೇತವಾಗಿದೆ. ಆದರೆ ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಮಾರುಹೋಗಿರುವ ಚಿಣ್ಣರು, ಯುವಜನರಿಗೆ ಗಾಳಿಪಟಗಳ ಹಾರಾಟ ಹೊಸ ಅನುಭವ ನೀಡಿತು. ಸಾಮಾನ್ಯವಾಗಿ ಗಾಳಿಪಟವೆಂದರೆ ಹೆಚ್ಚಾಗಿ ಚೌಕಾಕಾರದ ಗಾಳಿಪಟಗಳನ್ನಷ್ಟೇ ನೋಡಿರುತ್ತೇವೆ. ಆದರೆ ದಸರೆಯ ಹೊಸ್ತಿಲಿನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ವಿವಿಧ ವಿನ್ಯಾಸಗಳ ಗಾಳಿಪಟಗಳು ಹಾರಾಡಿದವು.
ಟೀಮ್ ಮಂಗಳೂರು ತಂಡದ ಸದಸ್ಯರು ವಿನ್ಯಾಸಗೊಳಿಸಿದ್ದ ಡ್ರ್ಯಾಗನ್, ಆಕ್ಟೋಪಸ್, ರಾಷ್ಟ್ರಧ್ವಜ, ಶಕ್ತಿಮಾನ್, ವಿಮಾನ, ಚಾಮುಂಡಿತಾಯಿ, ಹದ್ದು, ಹದ್ದು. ಅಸ್ತಿಪಂಜರ ಹೀಗೆ ಚಿತ್ತಾಕರ್ಷಕ ವಿನ್ಯಾಸ ಗಾಳಿಪಟಗಳು ಗಾಳಿಯಲ್ಲಿ ತೇಲಿ ನೆರೆದಿದ್ದ ಪ್ರೇಕ್ಷಕರ ಮನತಣಿಸಿತು. ಕೇವಲ ಪ್ರಾಣಿ ಪಕ್ಷಿಗಳ ವಿನ್ಯಾಸದ ಗಾಳಿಪಟಗಳಷ್ಟೇ ಅಲ್ಲದೇ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಥಕ್ಕಳಿ, ಯಕ್ಷಗಾನ, ಭರತನಾಟ್ಯ ಹೀಗೆ ಹಲವಾರು ವಿನ್ಯಾಸಗಳ ಗಾಳಿಪಟಗಳ ಹಾರಾಟದ ಮೂಲಕ ನಮ್ಮ ಸಂಸ್ಕೃತಿಯನ್ನು ಅಭಿವ್ಯಕ್ತಗೊಳಿಸಲಾಯಿತು.
ಇಂದು ಪ್ರದರ್ಶನ: ಎರಡು ದಿನಗಳ ಗಾಳಿಪಟ ಉತ್ಸವದಲ್ಲಿ ಇಂದು ಸಹ ವಿವಿಧ ವಿನ್ಯಾಸದ ಗಾಳಿಪಟಗಳ ಹಾರಾಟ ನಡೆಯಲಿದೆ. ದಸರೆಗೂ ಮೊದಲೇ ನಡೆಯುತ್ತಿರುವ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲು ಮುಂಬೈ, ಅಹಮದಾಬಾದ್, ಹೈದ್ರಬಾದ್, ಸೂರತ್ ಹಾಗೂ ಮಂಗಳೂರಿನಿಂದ 20ಕ್ಕೂ ಹೆಚ್ಚು ಗಾಳಿಪಟ ಹಾರಾಟಗಾರರು ಆಗಮಿಸಿದ್ದಾರೆ.
ಇನ್ನೂ ಗಾಳಿಪಟ ಹಾರಾಟದ ಜತೆಗೆ ಶಾಲಾ-ಕಾಲೇಜು ಮಕ್ಕಳಿಗೆ ಗಾಳಿಪಟದ ತಯಾರಿ ಕುರಿತು ಮಾಹಿತಿ ನೀಡುವ ಕಾರ್ಯಾಗಾರ ಮತ್ತು ಕೆಲವು ಮನರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಎರಡು ದಿನಗಳ ಗಾಳಿಪಟ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು. ಸಚಿವ ಯು.ಟಿ ಖಾದರ್, ಶಾಸಕರಾದ ತನ್ವೀರ್, ಅಶ್ವಿನ್‌ಕುಮಾರ್, ಎಲ್.ನಾಗೇಂದ್ರ, ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಮತ್ತಿತರರು ಹಾಜರಿದ್ದರು.