ಕಣ್ಣೂರು: ವಿದೇಶದಿಂದ ಬಂದ ಯುವಕನೋರ್ವನಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಪರಿಯಾರಂ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ವಿದೇಶದಿಂದ ಶನಿವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಇಲ್ಲಿಗೆ ಬಂದಿದ್ದ ಯುವಕನಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಕಾಣಿಸಿದ್ದರಿಂದ ಆತ ಸ್ವತಃ ಬಂದು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಆರೋಗ್ಯಾಧಿಕಾರಿ ತಿಳಿಸಿದರು.
ಯುವಕನ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆಯ ಫಲಿತಾಂಶ ಬಂದ ಬಳಿಕವಷ್ಟೇ ಆತನಿಗೆ ಮಂಕಿಪಾಕ್ಸ್ ತಗಲಿದೆಯೇ ಎಂಬುದು ಸ್ಪಷ್ಟವಾಗಲಿದೆ. ಪ್ರಸ್ತುತ ಯುವಕನನ್ನು ಐಸೋಲೇಶನ್‌ನಲ್ಲಿರಿಸಿ ನಿಗಾ ಇರಿಸಲಾಗಿದೆ ಎಂದು ಅವರು ವಿವರಿಸಿದರು. ಕೇರಳದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಜು. 12ರಂದು ದಾಖಲಾಗಿತ್ತು.
ವೆನ್ಲಾಕ್‌ನಲ್ಲಿ ಪ್ರತ್ಯೇಕ ವಾರ್ಡ್
ಮಂಗಳೂರು: ನೆರೆಯ ಕೇರಳದಲ್ಲಿ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ದೃಢಪಡುತ್ತಿದ್ದಂತೆ ದ.ಕ. ಜಿಲ್ಲೆಯಲ್ಲಿಯೂ ವಿಶೇಷ ನಿಗಾ ಇಡಲಾಗಿದೆ.
ಮುನ್ನೆಚ್ಚರಿಕೆ ದೃಷ್ಟಿಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಒಂದು ವಾರ್ಡ್ ಅನ್ನು ಮಂಕಿಪಾಕ್ಸ್ ಸೋಂಕಿತ ರೋಗಿಗಳಿಗೆಂದು ಮೀಸಲಿಡಲಾಗಿದೆ. ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಆಗಮಿಸುವ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅವರಲ್ಲಿ ಜ್ವರದ ಲಕ್ಷಣ ಕಂಡುಬಂದರೆ ವಿಶೇಷ ನಿಗಾ ಇರಿಸಲಾಗುತ್ತಿದೆ. ಶಂಕಿತ ಪ್ರಕರಣಗಳಿಂದ ಮಾದರಿಯನ್ನು ಸಂಗ್ರಹಿಸಿ ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಅಥವಾ ಎನ್‌ಐವಿ ಬೆಂಗಳೂರಿಗೆ ಕಳುಹಿಸಲು ನಿರ್ಧರಿಸಲಾಗಿದೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಗದೀಶ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ದ.ಕ. ಜಿಲ್ಲೆಯಲ್ಲಿ ಮಂಕಿಪಾಕ್ಸ್‌ಗೆ ಸಂಬಂಧಪಟ್ಟಂತೆ ಯಾರಲ್ಲೂ ಯಾವುದೇ ಲಕ್ಷಣ ಕಂಡುಬಂದಿಲ್ಲ. ಮುನ್ನೆಚ್ಚರಿಕೆ ದೃಷ್ಟಿಯಿಂದ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಕೋವಿಡ್ ರೀತಿ ಇದು ವೇಗವಾಗಿ ಹರಡುವ ಸಾಧ್ಯತೆ ಕಡಿಮೆ’ ಎಂದರು.
ಮಂಕಿಪಾಕ್ಸ್ ಸೋಂಕಿತರಿಗೆ ಸಾಮಾನ್ಯವಾಗಿ ಜ್ವರ, ಸ್ನಾಯು ನೋವು, ಗಾಯ, ಮತ್ತು ಶೀತ ಕಂಡುಬರುವ ಸಾಧ್ಯತೆ ಇರುತ್ತದೆ.