Advertisement

ಪ್ಲಾಸ್ಟಿಕ್ ವಿರುದ್ಧ ಅಭಿಯಾನ…ಇದು ಕೀನ್ಯಾ ಯುವಕನ ಯಶೋಗಾಥೆ

06:07 PM Dec 17, 2020 | Nagendra Trasi |

“ನೀವು ಅಂದುಕೊಂಡಿರುವಷ್ಟು ನಾನು ಫೇಮಸ್‌ ಏನೂ ಅಲ್ಲ ಸಾರ್‌”, ಅನ್ನುತ್ತಿದ್ದ ಆ ಯುವಕ.  ಆತನ ಸೌಜನ್ಯದ ಮಾತನ್ನು ಕೇಳಿ ನಾನು ಸುಮ್ಮನೆ ಮುಗುಳ್ನಕ್ಕೆ. ನನ್ನ ಮಟ್ಟಿಗಂತೂ ಅದೊಂದು ವಿಶೇಷ ಸಂಜೆಯಾಗಿತ್ತು. ಪ್ರಸ್ತುತ ಅಂಗೋಲಾದಲ್ಲಿರುವ ನಾನು ಕೀನ್ಯಾದ ಈ ಮಹಾತ್ವಾಕಾಂಕ್ಷಿ ಯುವಕನೊಬ್ಬನೊಂದಿಗೆ ಆಸಕ್ತಿಯಿಂದ ಮಾತನಾಡುತ್ತಿದ್ದೆ.ಆಫ್ರಿಕಾದ ಬಹುತೇಕ ಯುವಕರು ಬಡತನ, ನಿರುದ್ಯೋಗಗಳಿಂದಾಗಿ ಅಡ್ಡದಾರಿ ಹಿಡಿಯುತ್ತಿದ್ದಾರೆ ಎನ್ನುವ ಮಾತುಗಳೇ ಈಚಿನ ದಿನಗಳಲ್ಲಿ ಕೇಳಿಬರುತ್ತಿದ್ದಲ್ಲಿ ಇಲ್ಲೊಬ್ಬ ಉತ್ಸಾಹಿ ತರುಣ ಕೀನ್ಯಾದಲ್ಲಿ ಬದಲಾವಣೆಯ ಗಾಳಿಯನ್ನು ಬೀಸಲು ಪ್ರಾಮಾಣಿಕವಾಗಿ ಹಗಲಿರುಳು ದುಡಿಯುತ್ತಿದ್ದ. ಒಂದು ರೀತಿಯಲ್ಲಿ ದೊಡ್ಡ ಮಟ್ಟಿನಲ್ಲಿ ಯಶಸ್ವಿಯೂ ಆದ. ಇತ್ತೀಚೆಗಷ್ಟೇ ಕೀನ್ಯಾದಲ್ಲಿ ಪ್ಲಾಸ್ಟಿಕ್‌ ನಿಷೇಧವೆಂಬುದು ಅಧಿಕೃತವಾಗಿ ಜಾರಿಯಾದಾಗ ಎಲ್ಲಾ ಮಾಧ್ಯಮ ವರದಿಗಳಲ್ಲೂ ಇದ್ದಿದ್ದು ಒಂದೇ ಹೆಸರು. ಅದು: ಜೇಮ್ಸ್ ವಕೀಬಿಯಾ!

Advertisement

ನಾನು ಆ ದಿನ ಮಾತಾಡುತ್ತಿದ್ದಿದ್ದು ಇದೇ ಜೇಮ್ಸ್ ನೊಂದಿಗೆ. ಸಾಮಾಜಿಕ ಕಳಕಳಿ, ಮಾನವೀಯ ಸಂವೇದನೆ, ಇಚ್ಛಾಶಕ್ತಿಗಳನ್ನು ಹೊಂದಿರುವ ಯುವಕನೊಬ್ಬ ಮನಸ್ಸು ಮಾಡಿದರೆ ಹೇಗೆ ಮಹತ್ತರ ಬದಲಾವಣೆಯನ್ನು ಸಮಾಜದಲ್ಲಿ ತರಬಲ್ಲ ಎಂಬ ಯಶಸ್ಸಿನ ಕಥೆಯನ್ನು ಈ ಸಾಧಕನ ಮಾತಿನಲ್ಲೇ ಕೇಳಲು ನಾನು ಕಾತರನಾಗಿದ್ದೆ.

ಜೇಮ್ಸ್  ಮೂಲತಃ ಕೀನ್ಯಾದ ನಕುರು ಪ್ರಾಂತ್ಯದ ನಿವಾಸಿ. ಫೋಟೋಗ್ರಫಿ ಮತ್ತು ಬರವಣಿಗೆ ಆತನ ಗೀಳು. ಸಮಾಜಸೇವೆಯು ತನ್ನೊಳಗೆ ಸದಾ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿದ್ದ ಕಾರಣವೋ ಏನೋ, ವೃತ್ತಿ-ಪ್ರವೃತ್ತಿಗಳೆರಡೂ ಅದೇ ದಿಕ್ಕಿನಲ್ಲಿ ಪ್ರವಹಿಸುತ್ತಿದ್ದವು.

ಇದನ್ನೂ ಓದಿ:ವಾಟ್ಸಾಪ್ ವೆಬ್ ಗಾಗಿ QR Code Scan ಮಾಡಿ ಬೇಸತ್ತಿದ್ದೀರಾ ? ಬರುತ್ತಿದೆ ಹೊಸ ಫೀಚರ್ !

ಅದು 2013ರ ಮಾತು. ಹೀಗೆ ದಿನಗಳು ತಮ್ಮ ಪಾಡಿಗೆ ತಾವು ಉರುಳುತ್ತಲೇ ಇ¨ªಾಗ ತನ್ನದೇ ಊರಾದ ನಕುರು ಪ್ರಾಂತ್ಯದಲ್ಲಿ ಜೇಮ್ಸ್  ವಕೀಬಿಯಾನ ಕಣ್ಣಿಗೊಂದು ದೃಶ್ಯ ಎದುರಾಗುತ್ತದೆ. ಅದು ಗ್ಯೋಟೋ ಕೊಳಚೆ ಪ್ರದೇಶದ್ದು. “ಗ್ಯೋಟೋ’ ಅನ್ನುವುದು ನಕುರು ಕೌಂಟಿ (ಪ್ರಾಂತ್ಯದ)ಯ ಅತೀ ದೊಡ್ಡ ಕೊಳಚೆ ಪ್ರದೇಶ. ಜೇಮ್ಸ್  ಆ ಪ್ರದೇಶವನ್ನು ಈ ಮೊದಲು ನೋಡಿಲ್ಲವೆಂದಲ್ಲ. ಕಾಲಾನುಕ್ರಮದಲ್ಲಿ ಜೇಮ್ಸ…ನೊಂದಿಗೆ ನಕುರು ಪ್ರಾಂತ್ಯವೂ ಕೂಡ ಬೆಳೆದಿತ್ತು. ಜನಸಂಖ್ಯೆಯು ಹೆಚ್ಚಾದಂತೆ ತ್ಯಾಜ್ಯಗಳೂ ಕ್ರಮೇಣ ಹೆಚ್ಚುತ್ತ  ಹೋಗಿದ್ದವು. ಆದರೆ, ಅವುಗಳ ವಿಲೇವಾರಿ ವ್ಯವಸ್ಥೆ ಮಾತ್ರ ದೇವರಿಗೇ ಪ್ರೀತಿ ಎನ್ನುವಂತಾಗಿತ್ತು! ಕಣ್ಣೆದುರಿಗಿದ್ದ ಕೊಳಚೆ ಪ್ರದೇಶವು ಆ ದಿನ ಹಿಂದೆಂದಿಗಿಂತಲೂ ಭಯಾನಕವಾಗಿ ಆತನಿಗೆ ಕಂಡಿತ್ತು. ದಿನಗಳು ಕಳೆದಂತೆ ಮತ್ತಷ್ಟು ಎತ್ತರವಾಗುತ್ತಿದ್ದ ಪ್ಲಾಸ್ಟಿಕ್‌ ಗುಡ್ಡವು ಸಣಕಲ ಜೇಮ್ಸ್ ನನ್ನು ಅಣಕಿಸುವಂತೆ ನೋಡುತ್ತಿತ್ತು. ಆತನ ಮಹಾತ್ವಾಕಾಂಕ್ಷಿ ಹೆಜ್ಜೆಯೊಂದು ಮೊಳಕೆಯೊಡೆದದ್ದೇ ಅಲ್ಲಿ.

Advertisement

ಸ್ಥಳೀಯ ಆಡಳಿತ ಮಂಡಳಿಯ ವಿರುದ್ಧ

ಆರೋಗ್ಯ, ನೈರ್ಮಲ್ಯ ಇತ್ಯಾದಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ನಗರದ ತರಹೇವಾರಿ ತ್ಯಾಜ್ಯಗಳನ್ನೆಲ್ಲ ತಂದು ಗ್ಯೋಟೋ ಕೊಳಚೆ ಪ್ರದೇಶದಲ್ಲಿ ಬೇಕಾಬಿಟ್ಟಿ ರಾಶಿ ಹಾಕುತ್ತಿದ್ದ ಸ್ಥಳೀಯ ಆಡಳಿತ ಮಂಡಳಿಯ ವ್ಯವಸ್ಥೆಗೆ ಚಾಟಿಯೇಟೊಂದು ಆವಶ್ಯಕವಾಗಿ ಬೇಕಾಗಿತ್ತು. ಜೇಮ್ಸ್  ಮಾಡಿದ್ದೂ ಇದನ್ನೇ! ಆಸುಪಾಸಿನ ಪರಿಸರ ಮತ್ತು ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಕೊಳಚೆ ಪ್ರದೇಶವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂಬ ಮನವಿ ಪತ್ರವೊಂದನ್ನು ಸಂಬಂಧಿ ಇಲಾಖೆಗೆ ಸಲ್ಲಿಸಿದ್ದ. ಈ ನಿಟ್ಟಿನಲ್ಲಿ ಜೇಮ್ಸ್  ಐದು ಸಾವಿರಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸಿದರೆ, ಹಲವಾರು ಮಂದಿ ತಮ್ಮ ಮುಖಗಳಿಗೆ ಹಸಿರು ಬಣ್ಣವನ್ನು ಬಳಿದು ಪ್ರತಿಭಟನೆಯ ಹೆಸರಿನಲ್ಲಿ ಇಲಾಖೆಯ ಆಫೀಸುಗಳ ಮುಂದೆ ಪೆರೇಡ್‌ ಮಾಡಿದರು. ಕೊನೆಗೂ ಸ್ಥಳೀಯರ ಒತ್ತಡಕ್ಕೆ ಮಣಿದ ಸ್ಥಳೀಯ ಆಡಳಿತ ಮಂಡಳಿಯು ಈ ಸಮಸ್ಯೆಗೆ ಸಂಬಂಧಪಟ್ಟಂತೆ ತಾತ್ಕಾಲಿಕ ಪರಿಹಾರಗಳನ್ನು ಜನರ ಮುಂದಿರಿಸಿ ತಾತ್ಕಾಲಿಕವಾಗಿ ತನ್ನ ಮರ್ಯಾದೆಯನ್ನು ಉಳಿಸಿಕೊಂಡಿತು.

ಜೇಮ್ಸ್  ವಕೀಬಿಯಾರಿಗೆ ಆ ದಿನಗಳಲ್ಲಿ ಇದೊಂದು ತಕ್ಕಮಟ್ಟಿನ ಮುನ್ನಡೆ ಮಾತ್ರ. ಆದರೆ ಸಮಸ್ಯೆಗಳು ಸಾಕಷ್ಟಿದ್ದವು. ಎಲ್ಲದಕ್ಕಿಂತಲೂ ಮಿಗಿಲಾಗಿ ಪ್ಲಾಸ್ಟಿಕ್‌ ದೈತ್ಯಾಕಾರವಾಗಿ ಬೆಳೆದು ನಿಂತು ಬ್ರಹ್ಮರಾಕ್ಷಸನಂತೆ ಕಾಣತೊಡಗಿತ್ತು. ಗ್ಯೋಟೋ, ಕಂಗೇಮಿ ಸೇರಿದಂತೆ ಕೀನ್ಯಾದ ಬಹುತೇಕ ಎಲ್ಲಾ ಕೊಳಚೆ ಪ್ರದೇಶಗಳು ಪ್ಲಾಸ್ಟಿಕ್‌ ತ್ಯಾಜ್ಯಗಳನ್ನೇ ತಮ್ಮ ಒಡಲಿನಲ್ಲಿ ಇಟ್ಟುಕೊಂಡು ಏದುಸಿರುಬಿಡುತ್ತಿದ್ದವು. ಇದು ಯಾವ ಮಟ್ಟಿಗೆ ತಲುಪಿತ್ತೆಂದರೆ ಗಾಳಿಯ ಬೀಸುವಿಕೆಯೊಂದಿಗೆ ಹಾರಿಕೊಂಡು ಬರುವ ಪ್ಲಾಸ್ಟಿಕ್‌ ಚೀಲಗಳು ಎಲ್ಲೆಲ್ಲಿಯೋ ಬಾವಲಿಗಳಂತೆ ನೇತಾಡುವುದು ಸಾಮಾನ್ಯವಾಯಿತು. ಮರಗಳಲ್ಲೂ, ಕಟ್ಟಡಗಳಲ್ಲೂ, ಎಲ್ಲೆಂದರಲ್ಲಿ ಹಾಯಾಗಿ ಹಾರಾಡುತ್ತಿರುವ, ಜೋತುಬಿದ್ದಿರುವ ಬಣ್ಣಬಣ್ಣದ ಪ್ಲಾಸ್ಟಿಕ್‌ ಚೀಲಗಳು. ಇನ್ನು ಒಳಚರಂಡಿಗಳಲ್ಲಿ ಪ್ಲಾಸ್ಟಿಕ್‌ ಜಮೆಯಾಗಿ ನಿಂತೇಬಿಟ್ಟ ಕಲುಷಿತ ನೀರು, ಕೊಳವೆಗಳಲ್ಲಿ ನೀರಿನ ಹರಿವಿಗೆ ಆಗುತ್ತಿದ್ದ ನಿರಂತರ ಅಡಚಣೆಗಳು, ಹಸಿರು-ನೀಲಿ-ಬಿಳಿ ಬಣ್ಣದ ಪ್ಲಾಸ್ಟಿಕ್‌ ಚೀಲಗಳು ಮಿತಿಮೀರಿ ನೆಲದಲ್ಲಿ ಕಾಪೆìಟ್ಟಿನಂತೆ ಮೈಚಾಚಿಕೊಂಡ ಪರಿ… ಹೀಗೆ ಇವೆಲ್ಲವೂ ಸಾಮಾನ್ಯವಾಗಿಬಿಟ್ಟ ಕಾಲವು ಕೀನ್ಯಾದಲ್ಲಿ ಅದಾಗಲೇ ಬಂದಾಗಿತ್ತು.

ಇದನ್ನೂ ಓದಿ:ವಾಟ್ಸಾಪ್ ವೆಬ್ ನಲ್ಲಿ ಬಂತು ಮೆಸೆಂಜರ್ ರೂಮ್ಸ್: ಏನಿದರ ವಿಶೇಷತೆ ?

ಪ್ಲಾಸ್ಟಿಕ್‌ ಅನ್ನುವಂಥದ್ದು ಕೀನ್ಯಾದಲ್ಲಿ ಇಂದು-ನಿನ್ನೆಯ ಸಮಸ್ಯೆಯಲ್ಲ. ಕಳೆದ ಹತ್ತು ವರ್ಷಗಳಲ್ಲಿ ಪ್ಲಾಸ್ಟಿಕ್‌ ನಿಷೇಧಕ್ಕೆ ಸಂಬಂಧಪಟ್ಟಂತೆ ಕೀನ್ಯಾ ಹಲವು ಏರಿಳಿತಗಳ ದಾರಿಗಳನ್ನು ಕಂಡಿದೆ. 2005 ಮತ್ತು 2007ರಲ್ಲಿ ಮೂವತ್ತು ಮೈಕ್ರಾನ್‌ ದಪ್ಪದ ಪ್ಲಾಸ್ಟಿಕ್‌ ಅನ್ನು ಕೀನ್ಯಾ ಸರ್ಕಾರವು ನಿಷೇಧಿಸಿತ್ತು. ಮುಂದೆ 2011ರಲ್ಲಿ ಅರವತ್ತು ಮೈಕ್ರಾನ್‌ ಪ್ಲಾಸ್ಟಿಕ್‌ಗಳನ್ನೂ ಕೂಡ ನಿಷೇಧಿಸಲಾಯಿತು. ಆದರೆ, ಕಾರಣಾಂತರಗಳಿಂದಾಗಿ ಫ‌ಲಿತಾಂಶಗಳು ನಿರೀಕ್ಷೆಯ ಮಟ್ಟವನ್ನು ತಲುಪಲಿಲ್ಲ. ಹಾಗೆ ನೋಡಿದರೆ ಇಥಿಯೋಪಿಯಾ, ತಾನಾlನಿಯಾ, ಕ್ಯಾಮೆರೂನ್‌ ಗಳಂತಹ ಆಫ್ರಿಕಾದ ಹಲವು ದೇಶಗಳು ಈಗಾಗಲೇ ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದರೂ ತಕ್ಕಮಟ್ಟಿನ ಯಶಸ್ಸು ಸಿಕ್ಕಿರುವುದು ರವಾಂಡಾಗೆ ಮಾತ್ರ. ಇಷ್ಟಿದ್ದರೂ ರವಾಂಡಾದ ಕೆಲ ಭೂಪರು ನೆರೆರಾಷ್ಟ್ರವಾದ ಕಾಂಗೋದಿಂದ ಅಕ್ರಮವಾಗಿ ಪ್ಲಾಸ್ಟಿಕ್‌ ತರಿಸಿಕೊಳ್ಳುವ ಪ್ರಕರಣಗಳೂ ಅಲ್ಲಲ್ಲಿ ನಡೆಯುತ್ತಿರುತ್ತದಂತೆ.

ಕೀನ್ಯಾದಲ್ಲಿ ಸಾಮಾನ್ಯವಾಗಿ ಗಾತ್ರಕ್ಕನುಗುಣವಾಗಿ ಐದು, ಹತ್ತು ಮತ್ತು ಇಪ್ಪತ್ತು ಶಿಲ್ಲಿಂಗ್‌ (ಕೀನ್ಯಾದ ಕರೆನ್ಸಿ) ಗಳಲ್ಲಿ ಪ್ಲಾಸ್ಟಿಕ್‌ ಚೀಲಗಳು ಎಲ್ಲೆಂದರಲ್ಲಿ ಬಿಕರಿಯಾಗುತ್ತಿದ್ದವು. ಪ್ಲಾಸ್ಟಿಕ್‌ ವಿರುದ್ಧದ ದನಿಗಳು 2005ರಿಂದಲೇ ಕೇಳಿಬಂದಿದ್ದರೂ ಕೀನ್ಯಾದ ನಗರಗಳು ಉಸಿರುಗಟ್ಟುವುದು ಮಾತ್ರ ತಪ್ಪಲಿಲ್ಲ. 2013 ರ ಸುಮಾರಿಗೆ ಜೇಮ್ಸ್ ಕೂಡ ಈ ಪ್ಲಾಸ್ಟಿಕ್‌ ದೈತ್ಯರ ವಿರುದ್ಧ ನೇರ ಯುದ್ಧಕ್ಕಿಳಿದಿದ್ದರು. ಜೇಮ್ಸ್  ಸಕ್ರಿಯರಾಗಿದ್ದ “ಸ್ಟ್ರೀಟ್‌ ನಕುರು’ ಎಂಬ ಉತ್ಸಾಹಿ ತಂಡವು ಆಗಲೇ ಪ್ಲಾಸ್ಟಿಕ್‌ ವಿರುದ್ಧ ತನ್ನ ದನಿಯನ್ನು ಮೊಳಗಿಸಲಾರಂಭಿಸಿತ್ತು. ಇತ್ತ ಜೇಮ್ಸ್  ಕೂಡ ಪ್ಲಾಸ್ಟಿಕ್‌ ಬಗ್ಗೆ ಅಂತರ್ಜಾಲ ತಾಣಗಳಲ್ಲಿ, ಬ್ಲಾಗುಗಳಲ್ಲಿ ದಂಡಿಯಾಗಿ ಲೇಖನಗಳನ್ನು, ಆನ್‌ಲೈನ್‌ ಪೋಸ್ಟ್‌ಗಳನ್ನು ಬರೆದರು. ಅಂತೆಯೇ ಸ್ಥಳೀಯ ಮುದ್ರಣ ಮಾಧ್ಯಮಗಳ ಸಂಪಾದಕರಿಗೆ ನಿರಂತರವಾಗಿ ಪತ್ರಗಳನ್ನು ಬರೆಯುತ್ತ ಈ ಬಗ್ಗೆ ತಮ್ಮ ಪತ್ರಿಕೆಗಳಲ್ಲಿ ಜಾಗೃತಿಯನ್ನು ಮೂಡಿಸುವಂತೆ ಕೋರುವ ಕೆಲಸಗಳೂ ಆರಂಭವಾದವು.

ಸೋಶಿಯಲ್‌ ಮೀಡಿಯಾಗಳಲ್ಲಿ ಜಾಗೃತಿ
ಲೇಖನಗಳನ್ನು ಬರೆಯುವುದರ ಜೊತೆಗೇ ಫೇಸ್ ಬುಕ್ ‌, ಟ್ವಿಟ್ಟರ್‌ಗಳಂತಹ ಸೋಷಿಯಲ್‌ ಮೀಡಿಯಾ ವೇದಿಕೆಗಳನ್ನು ಯಶಸ್ವಿಯಾಗಿ ಬಳಸಿಕೊಂಡರು ಜೇಮ್ಸ್ . ಇನ್ನು ಜೇಮ್ಸ್  ನಕುರು ಪ್ರಾಂತ್ಯದ ಬೀದಿಗಿಳಿದು ಸೆರೆಹಿಡಿದ ಛಾಯಾಚಿತ್ರಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಬರುತ್ತಿದ್ದಂತೆಯೇ ಆನ್‌ಲೈನ್‌ ಚಳುವಳಿಯು ಮತ್ತಷ್ಟು ಗತಿಯನ್ನು ಪಡೆದುಕೊಂಡಿತು. ಕೊಳಚೆ ಪ್ರದೇಶಗಳಿಗೆ ತನ್ನ ಕೆಮರಾದೊಂದಿಗೆ ತೆರಳುತ್ತಿದ್ದ ಜೇಮ್ಸ್  ಆಸುಪಾಸಿನವರೊಂದಿಗೆ ಮಾತಾಡಿ ಪ್ಲಾಸ್ಟಿಕ್‌ ನಿಷೇಧದ ಆವಶ್ಯಕತೆಯನ್ನು ಅವರಿಗೆ ಮನದಟ್ಟಾಗುವಂತೆ ಹೇಳುತ್ತಿದ್ದರಂತೆ. ನಂತರ ಈ ನಾಗರಿಕರು ಒಪ್ಪಿದರೆ ಐ ಸಪೋರ್ಟ್‌ ಬ್ಯಾನ್‌ ಪ್ಲಾಸ್ಟಿಕ್ಸ್‌ ಕೆ.ಇ. ಎಂಬ ಹ್ಯಾಷ್‌-ಟ್ಯಾಗ್‌ ಅನ್ನು ಮುದ್ರಿಸಿದ ಭಿತ್ತಿಪತ್ರದೊಂದಿಗೆ ಚಿತ್ರವೊಂದನ್ನು ಸೆರೆಹಿಡಿಯಲಾಗುತ್ತಿತ್ತು. ಜೇಮ್ಸ್  ರ ಈ ಛಾಯಾಚಿತ್ರಗಳು ಕೀನ್ಯಾದ ನಾಗರಿಕರನ್ನು ಎಚ್ಚರಿಸಿದ ಪರಿಯು ಅನನ್ಯ.

ಪ್ಲಾಸ್ಟಿಕ್‌ ನಿಷೇಧದ ಚರ್ಚೆಗಳು ಆಗಾಗ ತಣ್ಣಗಾದಂತೆಲ್ಲ ಜೇಮ್ಸ್ ರ ಆನ್‌ಲೈನ್‌ ಪೋಸ್ಟ್‌ ಗಳು, ಸಾಮಾನ್ಯ ಜನತೆಯನ್ನೇ ರೂಪದರ್ಶಿಗಳಂತೆ ಹೊಂದಿದ್ದ ಹ್ಯಾಷ್‌-ಟ್ಯಾಗ್‌ ಘೋಷಣೆಯ ಚಿತ್ರಗಳು ಮತ್ತೆ ಕಾವೇರಿಸುವುದರಲ್ಲಿ ಯಶಸ್ವಿಯಾದವು. ಅಂದ ಹಾಗೆ ಇಂಥಾ ಹ್ಯಾಷ್‌-ಟ್ಯಾಗ್‌ ಘೋಷಣೆಯ ಫ‌ಲಕಗಳೊಂದಿಗೆ ಜೇಮ್ಸ್  ಸೆರೆಹಿಡಿದ ಜನಸಾಮಾನ್ಯರ ಛಾಯಾಚಿತ್ರಗಳು ಸಾವಿರಕ್ಕೂ ಹೆಚ್ಚು.

ಬ್ಯಾನ್‌ ಪ್ಲಾಸ್ಟಿಕ್ಸ್‌ ಕೆ.ಇ. (ಆನ್‌ಲೈನ್‌ ಕ್ಯಾಂಪೇನ್‌) ಮತ್ತು ಐ ಸಪೋರ್ಟ್‌ ಬ್ಯಾನ್‌ ಪ್ಲಾಸ್ಟಿಕ್ಸ್  ಕೆ.ಇ. (ಫೋಟೋ ಕ್ಯಾಂಪೇನ್‌) ಹೆಸರಿನ ಹ್ಯಾಷ್‌-ಟ್ಯಾಗ್‌ ಆನ್‌ಲೈನ್‌ ಪ್ರಚಾರ ವೇದಿಕೆಗಳು ಜೇಮ್ಸ್ ರ ಕಳಕಳಿಯನ್ನು ಲಕ್ಷಾಂತರ ಜನರಿಗೆ ತಲುಪಿಸಿದ್ದಂತೂ ಸತ್ಯ. ಇದಕ್ಕೆ ಪೂರಕವಾಗಿ ಸೆಪ್ಟಂಬರ್‌ 2015ರಲ್ಲಿ ಕೀನ್ಯಾ ಸರಕಾರದ ಪರಿಸರ ಮತ್ತು ಪ್ರಾಕೃತಿಕ ಸಂಪನ್ಮೂಲ ಇಲಾಖೆಯ ಕ್ಯಾಬಿನೆಟ್‌ ಕಾರ್ಯದರ್ಶಿಯಾಗಿದ್ದ ಜ್ಯೂಡಿ ವಖೂಂಗುರವರು ಜೇಮ್ಸ್  ರ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿ ತಮ್ಮ ಬೆಂಬಲವನ್ನೂ ಸೂಚಿಸಿದರು. ಇನ್ನು “ದ ಫ್ಲಿಪ್‌ ಫ್ಲಾಪ್‌ ಫೌಂಡೇಷನ್‌’ಗಳಂತಹ ಸಂಸ್ಥೆಗಳೂ ಕೂಡ ಈ ನಿಟ್ಟಿನಲ್ಲಿ ತಮ್ಮ ಕೈಜೋಡಿಸಿದ್ದವು. ಇವೆಲ್ಲದರ ಫ‌ಲವೇ ಇತ್ತೀಚೆಗೆ ಕೀನ್ಯಾದಲ್ಲಿ ಅಧಿಕೃತವಾಗಿ ಜಾರಿಯಾದ ಗೆಝೆಟ್‌ ನೋಟೀಸ್‌.

ಗೃಹೋಪಯೋಗಿ/ಕೈಗಾರಿಕಾ ಬಳಕೆಗಾಗಿ ಪ್ಲಾಸ್ಟಿಕ್‌ ಚೀಲಗಳ ತಯಾರಿಕೆ, ಬಳಕೆ ಮತ್ತು ಆಮದನ್ನು ಈ ಆದೇಶವು ಸಂಪೂರ್ಣವಾಗಿ ನಿಷೇಧವನ್ನು ಹೇರಿತು. ನಿಯಮದ ಉಲ್ಲಂಘನೆಯನ್ನು ಮಾಡಿದಲ್ಲಿ ಎರಡರಿಂದ ನಾಲ್ಕು ವರ್ಷ ಜೈಲುಗಳ ಶಿಕ್ಷೆ ಮತ್ತು ಸುಮಾರು ನಲವತ್ತು ಸಾವಿರ ಡಾಲರುಗಳ ಮೊತ್ತದ ದಂಡವನ್ನೂ ನಿಗದಿಪಡಿಸಲಾಯಿತು. ಕೊನೆಗೂ ಜೇಮ್ಸ್  ವಕೀಬಿಯಾ ಮತ್ತು ಅವರಂತಹ ನೂರಾರು ಯುವಹೋರಾಟಗಾರರ ಸುದೀರ್ಘ‌ ಪ್ರಯತ್ನಕ್ಕೆ ಯಶಸ್ಸು ಲಭಿಸಿತ್ತು. ಸದ್ಯಕ್ಕೆ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿರುವ ಪ್ರಾಥಮಿಕ ಪ್ಯಾಕೇಜಿಂಗ್‌ ಪ್ಲಾಸ್ಟಿಕ್‌, ಪ್ಲಾಸ್ಟಿಕ್‌ ತಟ್ಟೆಗಳು, ಸ್ಟ್ರಾ ಇತ್ಯಾದಿ ವಸ್ತುಗಳು ಈ ಕಾಯಿದೆಯಿಂದ ಹೊರಗುಳಿದದ್ದನ್ನು ಬಿಟ್ಟರೆ ಕೀನ್ಯಾ ಸರಕಾರವು ನೆನೆಗುದಿಗೆ ಬಿದ್ದಿದ್ದ ಪ್ಲಾಸ್ಟಿಕ್‌ ನಿಷೇಧದ ವಿಚಾರದಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ.

ಇದನ್ನೂ ಓದಿ:ವಾಟ್ಸಾಪ್ ವೆಬ್ ಹಾಗೂ ಗೂಗಲ್ ಆ್ಯಪ್ ನಲ್ಲಿ ಡಾರ್ಕ್ ಮೋಡ್ ಸಕ್ರಿಯಗೊಳಿಸುವುದು ಹೇಗೆ ?

ಅಂದ ಹಾಗೆ ಜೇಮ್ಸ್  ವಕೀಬಿಯಾ ಪ್ಲಾಸ್ಟಿಕ್‌ ನಿಷೇಧದ ಚಳುವಳಿಯಲ್ಲಷ್ಟೇ ಸಕ್ರಿಯರಾಗಿದ್ದವರಲ್ಲ. ನಕುರು ಕೌಂಟಿಯ ಎಂಬುರು-ಗಿಚುವ ರಸ್ತೆಯಲ್ಲಿ ಜೀಬ್ರಾ ಕ್ರಾಸಿಂಗ್‌ ಮತ್ತು ವ್ಯವಸ್ಥಿತ ಒಳಚರಂಡಿಗಳು ಬಂದಿದ್ದೇ ಇವರಿಂದಾಗಿ. ನಕುರು ರಾಷ್ಟ್ರೀಯ ಗ್ರಂಥಾಲಯದ ಕೋಣೆಗಳಲ್ಲಿ ಇವರಿಂದಾಗಿ ಮತ್ತಷ್ಟು ಕುರ್ಚಿಗಳು ಬಂದಿವೆಯೆಂದು “ಕೀನ್ಯಾ ಮಾನಿರ್ಟ’ ಅಭಿಮಾನದಿಂದ ಬರೆದಿದೆ. ನಕುರು ವಾರ್‌ ಮೆಮೋರಿಯಲ್‌ ಆಸ್ಪತ್ರೆಯಲ್ಲಿ ನಡೆದ ವಿಚಿತ್ರ ಪ್ರಕರಣವೊಂದರಲ್ಲಿ ಜೇಮ್ಸ್  ರವರ ಆನ್ ಲೈನ್ ‌ ಕ್ಯಾಂಪೇನುಗಳಿಂದಾಗಿಯೇ ಜೆರೆಮಿಯೆಂಬ ಮಗುವೊಂದು ಸುರಕ್ಷಿತವಾಗಿ ಹೆತ್ತವರ ಮಡಿಲನ್ನು ಸೇರಿತ್ತು. ಜೇಮ್ಸ್  ರವರ ಸೋಷಿಯಲ್‌ ಮೀಡಿಯಾ ಕ್ಯಾಂಪೇನುಗಳಿಂದಾಗಿ ಕೀನ್ಯಾದ ಹಲವು ಆಸ್ಪತ್ರೆಗಳ ಬಣ್ಣ ಬಯಲಾಗಿದ್ದಂತೂ ಸತ್ಯ.

ನೈರೋಬಿಯ ಖ್ಯಾತ ಛಾಯಾಗ್ರಾಹಕರಾದ ಬೋನಿಫೇಸ್‌ ಮವಾಂಗಿ ಮತ್ತು ಕೀನ್ಯಾದ ನೊಬೆಲ್‌ ಪುರಸ್ಕೃತೆ, ಪರಿಸರ ಕಾರ್ಯಕರ್ತೆ ವಾಂಗರಿ ಮಥಾಯಿಯವರ ದಟ್ಟ ಪ್ರಭಾವವು ತನ್ನ ಮೇಲಿದೆ ಅನ್ನುತ್ತಾರೆ ಜೇಮ್ಸ್   ವಕೀಬಿಯಾ. ಜೇಮ್ಸ್   ಸ್ವತಃ ಮವಾಂಗಿಯವರೊಂದಿಗೆ ಕ್ಯಾಮೆರಾ ಹಿಡಿದು ಹಲವು ಫೋಟೋಶೂಟ್‌ಗಳನ್ನು ನಡೆಸಿದವರೂ ಹೌದು. ಸದ್ಯ ಜೇಮ್ಸ್   ವಕೀಬಿಯಾ ಮತ್ತು ಇಸಾ ವಂಗಾರಿ ದಂಪತಿಗಳ ಮಡಿಲಿನಲ್ಲಿ  ಆರೋಗ್ಯವಂತ ಗಂಡುಮಗುವೊಂದು ಬಂದು ಕೂತಿದೆ. ಮುಂದಿನ ಯೋಜನೆಗಳೇನು ಎಂಬ ನನ್ನ ಪ್ರಶ್ನೆಗೆ, “ಸದ್ಯಕ್ಕಂತೂ ಕುಟುಂಬದೊಂದಿಗೆ ಒಂದು ಚಿಕ್ಕ ವಿರಾಮ” ಎಂದರು ಜೇಮ್ಸ್  . ಆದರೂ ಪ್ಲಾಸ್ಟಿಕ್‌ ನಿಷೇಧ ಕುರಿತಾದ ಜನಜಾಗೃತಿಗಳನ್ನು ಮುಂದುವರಿಸುವ ಮತ್ತು ಕೀನ್ಯಾದ ಇತರ ಪರಿಸರ ಸಂಬಂಧಿ ಯೋಜನೆಗಳಿಗೆ ದನಿಯಾಗುವ ಕನಸು ಇವರಿಗಿದೆ.

“ಪಾಪ, ಒಬ್ಬ ಮನುಷ್ಯ ಏನು ತಾನೇ ಮಾಡಬಲ್ಲ”, ಎಂದು ಇತ್ತೀಚೆಗೆ ಯಾರೋ ನನ್ನಲ್ಲಿ ಗೊಣಗುತ್ತಿದ್ದರು. ಮಾನವೀಯ ಸಂವೇದನೆಯ ಒಂದು ಲೇಖನ, ಒಂದು ಛಾಯಾಚಿತ್ರ, ಒಂದು ಹಾಡು, ಒಂದು ಕಲಾಕೃತಿ, ಒಂದು ಸಿನೆಮಾ, ಒಂದು ಸಾಕ್ಷ್ಯಚಿತ್ರ, ಒಂದು ಬೀದಿನಾಟಕ, ಒಂದು ಜವಾಬ್ದಾರಿಯುತ ಹೆಜ್ಜೆ… ಎಂತೆಂಥ ಹೊಸ ಧನಾತ್ಮಕ ತರಂಗಗಳನ್ನು ಸಮಾಜದಲ್ಲಿ ಸೃಷ್ಟಿಸಬಹುದು ಗೊತ್ತಾ ಎಂದು ಅವರಲ್ಲಿ ಈ ತರುಣನ ಬಗ್ಗೆ ಹೇಳಬೇಕೆನಿಸಿತು. ಇಲ್ಲಿಂದಲೇ ನೇರವಾಗಿ ವಿಮಾನ ಹತ್ತಿ ನೈರೋಬಿಯಾದಲ್ಲಿ ಇಳಿದು ಈ ತರುಣನನ್ನು ತಬ್ಬಿ ಅಭಿನಂದನೆಗಳನ್ನು ಸಲ್ಲಿಸಬೇಕು ಎಂದೆನಿಸಿತು.

– ಪ್ರಸಾದ್‌ ನಾಯಕ್‌

(2018ರಲ್ಲಿ ಸಾಪ್ತಾಹಿಕದಲ್ಲಿ ಪ್ರಕಟಗೊಂಡಿದ್ದ ಲೇಖನ)

Advertisement

Udayavani is now on Telegram. Click here to join our channel and stay updated with the latest news.

Next