ಗಂಗಾವತಿ: ಸಾಲಗಾರರ ನಿತ್ಯ ಕಿರುಕುಳ ಹಾಗೂ ದೌರ್ಜನ್ಯಕ್ಕೆ ಬೇಸತ್ತು ಪತ್ರಕರ್ತರೊಬ್ಬರು ದಾಸನಾಳ ಹತ್ತಿರದ ತುಂಗಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಯತ್ನಿಸಿದ ಘಟನೆ ಶನಿವಾರದಂದು ನಡೆದಿದೆ.
ಸ್ಥಳೀಯ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವ ಬಂಡೆರಾವ್ ಮುಕ್ತೆದಾರ್ ಎಂಬುವರು
ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ರಘು ದೇಶಪಾಂಡೆ ಹಾಗೂ ಕೊಪ್ಪಳ ಶಿವು ಹಾಗೂ ಇತರರಿಂದ ಸಾಲ ಪಡೆದಿದ್ದು ಕರೋನಾ ಸಂಕಷ್ಟ ದಿಂದಾಗಿ ಸಕಾಲಕ್ಕೆ ಸಾಲ ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಆದರೆ, ಸಕಾಲಕ್ಕೆ ಬಡ್ಡಿ ಪಾವತಿಸುತ್ತಿದ್ದರು ಎನ್ನಲಾಗುತ್ತಿದೆ. ಆದರೆ, ಸಾಲ ನೀಡಿದ ರಘು ದೇಶಪಾಂಡೆ ಹಾಗೂ ಶಿವು ಎಂಬುವವರು ಮಿತಿಮೀರಿದ ಬಡ್ಡಿಗಾಗಿ ನಿತ್ಯ ಪೀಡಿಸುತ್ತಿದ್ದುದ್ದಲ್ಲದೇ ಅಸಲು ಮೊತ್ತ ಒಟ್ಟು25 ಲಕ್ಷ ರೂ ನೀಡಬೇಕು. ಇಲ್ಲದಿದ್ದರೆ, ಕೈಕಾಲು ಮುರಿದು ಕೊಲೆ ಮಾಡುವುದಾಗಿ ಕುಟುಂಬಸ್ಥರ ಮುಂದೆಯೇ ಬೆದರಿಕೆ ಒಡ್ಡಿದ್ದಾರೆ.
ಒಂದೆಡೆ ಅವಮಾನ, ಇನ್ನೊಂದೆಡೆ ಮಿತಿಮೀರಿದ ಬಡ್ಡಿಯಿಂದಾಗಿ ನೊಂದ ಬಂಡೆರಾವ್, ತನ್ನ ಪತ್ರಕರ್ತ ಮಿತ್ರರಿಗೆ ಆತ್ಮಹತ್ಯೆ ಪತ್ರವನ್ನು ವಾಟ್ಸಪ್ ಮೂಲಕ ರವಾನಿಸಿ ದಾಸನಾಳ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಕೂಡಲೇ ಜಾಗೃತರಾದ ಪತ್ರಕರ್ತರು 112 ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಜಾಗೃತರಾದ ಪೊಲೀಸ್ ಪಡೆ ಕಾಲುವೆ ಬಳಿ ತೆರಳಿದ್ದಾರೆ. ಬಸಾಪಟ್ಟಣದ ಪ್ರಭು ಇಟ್ಟಂಗಿ ಬಟ್ಟಿ ಹತ್ತಿರದ ಎಡದಂಡೆ ಕಾಲುವೆಗೆ ಹಾರಿದ್ದ ಬಂಡೆರಾವ್ ಅವರನ್ನು ಪೊಲೀಸ್ ವಾಹನ ಚಾಲಕ ಮುಖ್ಯಪೇದೆ ನಿಂಗಪ್ಪ ಕೂಡಲೇ ವಾಹನ ನಿಲ್ಲಿಸಿ ಜೀವದ ಹಂಗು ತೊರೆದು ಕಾಲುವೆಗೆ ಧುಮುಕಿ ರಕ್ಷಿಸಿದ್ದಾರೆ.
ಸ್ಥಳದಲ್ಲಿದ್ದ ನಗರಠಾಣಾ ಪಿಐ ಟಿ. ವೆಂಕಟಸ್ವಾಮಿ, ಪೊಲೀಸ್ ಸಿಬಂದಿ ಮರಿಶಾಂತಗೌಡ, ಚಿರಂಜೀವಿ ಅವರು ಬಂಡೆರಾವ್ ಅವರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿ ಠಾಣೆಗೆ ಕರೆತಂದಿದ್ದಾರೆ.
ಬಂಡೆರಾವ್ ಆತ್ಮಹತ್ಯೆ ಯತ್ನದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಕಟ್ಟುನಿಟ್ಟಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ನಗರಠಾಣಾ ಪಿಐ ವೆಂಕಟಸ್ವಾಮಿ ಅವರು ತಿಳಿಸಿದ್ದಾರೆ.ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಪೇದೆ ನಿಂಗಪ್ಪನಿಗೆ ಎಸ್ಪಿ ಬಹುಮಾನ ಘೋಷಿಸಿದ್ದು ಸಾಲದ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾರು ಆತ್ಮಹತ್ಯೆಗೆ ಮುಂದಾಗಬಾರದು ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡುವಂತೆ ಎಸ್ಪಿ ಅರುಣಾಂಶ್ಯುಗಿರಿ ಸಾರ್ವಜನಿಕರಿಗೆ ತಿಳಿಸಿದ್ದಾರೆ.