ಹೈದರಾಬಾದ್: “ನನ್ನ ಪ್ರಯತ್ನದಲ್ಲಿ ಸೋತರೆ ನಾನೊಬ್ಬನೇ ಸಾಯುತ್ತೇನೆ, ಒಂದು ವೇಳೆ ನನ್ನ ಪ್ರಯತ್ನ ಫಲಿಸಿದರೆ ನನ್ನೊಂದಿಗೆ 9 ಮಂದಿ ಸಾವಿನಿಂದ ಪಾರಾಗುತ್ತಾರೆ. ಏನಾಗುತ್ತದೆಯೋ ನೋಡಿಯೇ ಬಿಡೋಣ’!
ಇದು ತೆಲಂಗಾಣದಲ್ಲಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು 9 ಮಂದಿಯನ್ನು ರಕ್ಷಿಸಿದ ಸಾಮಾನ್ಯ ಜೆಸಿಬಿ ಚಾಲಕರೊಬ್ಬರ ಅಸಾಮಾನ್ಯ ಮಾತು. ರಾಜ್ಯ ಸರಕಾರ, ನೌಕಾ ಪಡೆಯ ಹೆಲಿಕಾಪ್ಟರ್‌ನಿಂದಲೂ ಸಾಧ್ಯವಾಗದ ಸಾಹಸಮಯ ರಕ್ಷಣೆಯನ್ನು ಆ ಜೆಸಿಬಿ ಚಾಲಕ ಮಾಡಿದ್ದು, ಈಗ ಅವರ ಸಾಹಸದ ವೀಡಿಯೋ ವೈರಲ್ ಆಗಿದೆ.
ತೆಲಂಗಾಣದಲ್ಲಿ ಸುರಿದ ಭಾರೀ ಮಳೆ ಯಿಂದಾಗಿ ಖಮ್ಮಾಮ್ ಜಿಲ್ಲೆಯ ಮುನ್ನೇರು ನದಿ ಅಪಾಯದ ಮಟ್ಟ ಮೀರಿ ಹರಿದು ಪ್ರಕಾಶ ನಗರದ ಸೇತುವೆಯನ್ನು ಬಹುತೇಕ ಮುಳುಗಿಸಿತ್ತು. ಸೇತುವೆ ದಾಟುತ್ತಿದ್ದ 9 ಮಂದಿ ಇದ್ದಕ್ಕಿದ್ದಂತೆ ನೀರಿನ ಹರಿವು ಹೆಚ್ಚಾದ ಕಾರಣ ಮಧ್ಯದಲ್ಲೇ ನಿಂತುಬಿಟ್ಟರು. ಉಕ್ಕಿ ಹರಿಯುವ ನದಿ ಯಾವ ಕ್ಷಣದಲ್ಲಾದರೂ ತಮ್ಮನ್ನು ಕೊಚ್ಚಿಕೊಂಡು ಹೋಗಬಹುದೆಂಬ ಭಯದಲ್ಲಿಯೇ ತಮ್ಮನ್ನು ಕಾಪಾಡುವಂತೆ ವೀಡಿಯೋ ಮಾಡಿ ಸರಕಾರವನ್ನು ಅಂಗಲಾಚಿದರು.
ಸರಕಾರ ತತ್‌ಕ್ಷಣವೇ ಎಚ್ಚೆತ್ತು ಕೊಂಡು ಅವರ ರಕ್ಷಣೆಗಾಗಿ ವಿಶಾಖಪಟ್ಟಣಂ ನೌಕಾಪಡೆಯ ಹೆಲಿ ಕಾಪ್ಟರ್ ಕಳುಹಿಸಿತು. ಆದರೆ ಹವಾಮಾನ ವೈಪರೀತ್ಯದಿಂದ ರಕ್ಷಣೆ ಕಾರ್ಯಾ ಚರಣೆ ಸಾಧ್ಯವಾಗಲಿಲ್ಲ. ಈ ವೇಳೆ ಸೇತುವೆ ಮಧ್ಯೆ ಸಿಲುಕಿದವರ ಪಾಲಿಗೆ ಅಕ್ಷರಶಃ ದೇವರಂತಾದವರು ಹರಿಯಾಣದ ಜೆಸಿಬಿ ಚಾಲಕ ಸುಭಾನ್ ಖಾನ್!
ಅಂಜದೆ ಮುನ್ನುಗ್ಗಿದರು!
ಸೇತುವೆ ಬದಿಯ ರಸ್ತೆಯಲ್ಲಿ ಸಾಗುತ್ತಿದ್ದ ಖಾನ್ ಸೇತುವೆ ಮೇಲೆ ಸಿಲುಕಿದ್ದವರ ನೆರವಿಗೆ ಸ್ವಲ್ಪವೂ ಹಿಂದೇಟು ಹಾಕದೆ ಮುನ್ನುಗ್ಗಿದರು. ನೀರಿನ ಹರಿವು ಹೆಚ್ಚಿದ್ದು, ಜೆಸಿಬಿ ಸಂಚಾರ ಅಪಾಯಕಾರಿ ಎಂದು ಎಚ್ಚರಿಸಿದಾಗಲೂ ಹೆದರದೆ ಖಾನ್ ರಕ್ಷಣೆಗೆ ಧಾವಿಸಿ ಕೊನೆಗೂ 9 ಮಂದಿಯನ್ನು ರಕ್ಷಿಸಿ ಕರೆತಂದರು.