ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ನೂರು ದಿನದ ಸಾಧನೆ ಐದು ವರ್ಷಗಳ ಸಾಧನೆಗೆ ಬುನಾದಿಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನೂರು ದಿನದಲ್ಲಿ ಉತ್ತಮ ಕೆಲಸ ಮಾಡಿದ್ದು, ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ.
ಎರಡೂ ಪಕ್ಷಗಳು ಒಟ್ಟಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿವೆ. ರೈತರ ಸಾಲ ಮನ್ನಾ ಮಾಡಲಾಗಿದ್ದು, ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ. ಕೊಡಗಿನಲ್ಲಿ ಉಂಟಾದ ಅತಿವೃಷ್ಠಿಗೆ ರಾಜ್ಯ ಸರ್ಕಾರ ಉತ್ತಮವಾಗಿ ಸ್ಪಂದಿಸಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದು ಆರೋಪಿಸುವ ಬಿಜೆಪಿಯವರು ಕೇಂದ್ರದಲ್ಲಿ ನಾಲ್ಕೂವರೆ ವರ್ಷ ಸರ್ಕಾರ ನಡೆಸಿದ್ದು, ಅವರ ಸರ್ಕಾರವೇ ಟೇಕ್ ಆಫ್ ಆಗಿಲ್ಲ. ರಾಜ್ಯದ ಬಿಜೆಪಿ ಸಂಸದರು ಇನ್ನೂ ಟೇಕ್ ಆಫ್ ಆಗಿಲ್ಲ. ಬಿಜೆಪಿ ಸಂಸದರು ರಾಜಕೀಯ ಬಿಟ್ಟು ರಾಜ್ಯದ ಅಭಿವೃದ್ದಿ ಪರ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಇದೇ ವೇಳೆ, ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಯಾಕೆ ಮುಖ್ಯಮಂತ್ರಿ ಆಗಬಾರದು ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿ ಆಗುವುದರಲ್ಲಿ ತಪ್ಪೇನಿದೆ. ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಕೂಡ ಮುಖ್ಯಮಂತ್ರಿ ಆಗಬಹುದು. ಆದರೆ, ಇದೆಲ್ಲ ಸದ್ಯಕ್ಕೆ ಗಾಳಿ ಸುದ್ದಿ, ಸಿದ್ದರಾಮಯ್ಯ ಹಾಗೂ ದೇಶಪಾಂಡೆ ಮೇಲೆ ಕಟ್ಟು ಕಥೆಗಳು ಹುಟ್ಟಿಕೊಳ್ಳುತ್ತಿವೆ.
ಮೈತ್ರಿ ಸರ್ಕಾರಕ್ಕೆ ನಾವು ಬೇಷರತ್ ಬೆಂಬಲ ಕೊಟ್ಟ ಮೇಲೆ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಿದ್ದರಾಮಯ್ಯ ಕೂಡ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ನಡೆದ ನಂತರ ಮುಖ್ಯಮಂತ್ರಿ ಯಾರಾಗಬೇಕೆಂಬ ಪ್ರಶ್ನೆ ಉದ್ಭವಿಸುತ್ತದೆ. ಆಗ ಯಾರಾದರೂ ಮುಖ್ಯಮಂತ್ರಿ ಆಗಬಹುದು ಎಂದು ಹೇಳಿದರು.