ಹಾಂಕಾಂಗ್: ಒಮ್ಮೆ ಸೋಂಕು ತಗುಲಿದವರಿಗೆ ಮತ್ತೂಮ್ಮೆ ಸೋಂಕು ಕಾಣಿಸಿಕೊಳ್ಳುತ್ತದೆಯೇ ಎಂಬ ವಿಷಯದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ವಿಶ್ವದ ಹಲವು ರಾಷ್ಟ್ರಗಳಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಂಶೋಧನೆಯೂ ನಡೆಯುತ್ತಿದೆ.
ಈ ಮಧ್ಯೆಯೇ ಹಾಂಗ್‌ಕಾಂಗ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಕುರಿತು ಆಘಾತಕಾರಿ ಮಾಹಿತಿ ಹಂಚಿಕೊಂಡಿದ್ದು, ಒಮ್ಮೆ ಕೊರೊನಾ ಸೋಂಕು ಬಾಧಿತರಾದವರಿಗೆ ಮತ್ತೂಮ್ಮೆ ಹೊಸ ಲಕ್ಷಣಗಳೊಂದಿಗೆ ಸೋಂಕು ತಗುಲಬಹುದು ಎಂಬುದಕ್ಕೆ ಪುರಾವೆಗಳಿವಿ ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸ್ಪೇನ್‌ನಿಂದ ಹಾಂಗ್‌ಕಾಂಗ್‌ಗೆ ಹಿಂದಿರುಗಿದ್ದ 33 ವರ್ಷದ ವ್ಯಕ್ತಿಯೊಬ್ಬನಿಗೆ ಮತ್ತೆ ಸೋಂಕು ದೃಢಪಟ್ಟಿದೆ. ಈತನಿಗೆ ಕಳೆದ ಮಾರ್ಚ್‌ನಲ್ಲಿ ಸೋಂಕು ತಗುಲಿ ಅದರಿಂದ ಚೇತರಿಸಿಕೊಂಡಿದ್ದ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಮೊದಲ ಬಾರಿಗಿಂತಲೂ ಎರಡನೇ ಬಾರಿ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನ ಗುಣಲಕ್ಷಣಗಳು ವಿಭಿನ್ನವಾಗಿದೆ ಎಂದು ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಅಂದರೆ ಲಕ್ಷಣಗಳನ್ನಾಧರಿಸಿ, O, A2, A2a, A3, B, B1ಎಂದು ಹೀಗೆ ಒಟ್ಟು 11 ರೀತಿಯಲ್ಲಿ ಕೋವಿಡ್ ಸೋಂಕನ್ನು ಅನ್ನು ವಿಂಗಡಣೆ ಮಾಡಲಾಗಿದ್ದು, ಈ ವ್ಯಕ್ತಿಯಲ್ಲಿ ಎರಡನೇ ಬಾರಿ ಕಾಣಿಸಿಕೊಂಡಿರುವ ಸೋಂಕಿನ ಲಕ್ಷಣಗಳಿಗಿಂತ ವಿಭಿನ್ನವಾಗಿದೆ. ಜತೆಗೆ ಈ ವ್ಯಕ್ತಿಯಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಾಗ ಸೌಮ್ಯ ರೂಪದ ರೋಗ ಲಕ್ಷಣಗಳು ಕಂಡು ಬಂದಿದ್ದು, ಎರಡನೇ ಬಾರಿಗೆ ಸೋಂಕು ಪರೀಕ್ಷೆಗೊಳಪಡಿಸುವಾಗ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ ಎಂದು ಹೇಳಲಾಗಿದೆ.
ಹೀಗಾಗಿ ಒಮ್ಮೆ ಕೋವಿಡ್ ಬಂದು ಹೋಗಿ ದೆಯೆಂದು ಯಾರೊಬ್ಬರೂ ಕೂಡ ನಿರ್ಲಕ್ಷ್ಯ ವಹಿಸಬಾರದು. ಮಾಸ್ಕ್ ಧರಿಸುವುದು, ಸಾಮಾ ಜಿಕ ಅಂತರ ಕಾಪಾಡಿಕೊಳ್ಳವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕೆಂದು ಆರೋಗ್ಯಾಧಿಕಾರಿಗಳು ಹೇಳುತ್ತಾರೆ. ಈ ಪ್ರಕರಣದಿಂದ ಒಮ್ಮೆ ಈ ವೈರಸ್ ಸೋಂಕಿಗೆ ಒಳಗಾಗಿ ಗುಣಮುಖರಾಗಿರುವ ಕೆಲವು ವ್ಯಕ್ತಿ ಗಳು ಜೀವನ ಪೂರ್ತಿ ರೋಗ ನಿರೋಧಕ ಶಕ್ತಿ ಹೊಂದಿರುವುದಿಲ್ಲ ಎಂದು ಗೊತ್ತಾಗಿದೆ.