Advertisement

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಮನೆ-ಮನೆ ಸಮೀಕ್ಷೆ

10:28 PM Nov 13, 2019 | Lakshmi GovindaRaju |

ಬೆಂಗಳೂರು: ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಬಗ್ಗೆ ನಿಖರ ಮಾಹಿತಿ ಕಲೆ ಹಾಕಲು ಡಿಸೆಂಬರ್‌ ತಿಂಗಳಲ್ಲಿ ರಾಜ್ಯಾದ್ಯಂತ ಮನೆ-ಮನೆ ಸಮೀಕ್ಷೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

Advertisement

ರಾಜ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಾಲೆ ಯಿಂದ ಹೊರಗುಳಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ 2013ರಲ್ಲಿ ಸ್ವಯಂಪ್ರೇರಿತವಾಗಿ ದಾಖಲಿ ಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಹಾಗೂ ನ್ಯಾ.ಪ್ರದೀಪ್‌ ಸಿಂಗ್‌ ಯೆರೂರ್‌ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಬುಧವಾರ ಸರ್ಕಾರ ಈ ಮಾಹಿತಿ ನೀಡಿದೆ.

ಸರ್ಕಾರಿ ವಕೀಲರ ವಾದ: ವಿಚಾರಣೆ ವೇಳೆ ವಾದ ಮಂಡಿಸಿದ ಸರ್ಕಾರದ ಪರ ವಕೀಲ ಪಿ.ಬಿ.ಅಚ್ಚಪ್ಪ, ಶಿಕ್ಷಣ ಹಕ್ಕು ಕಾಯ್ದೆಗೆ ಒಳಪಟ್ಟು ಇಲ್ಲಿವರೆಗೆ ಶಾಲೆಗಳಿಗೆ ಪ್ರವೇಶಾತಿ ಪಡೆಯದ, ಪ್ರವೇಶ ಪಡೆದು ಶಾಲೆಗೆ ಹೋಗದ, ಅರ್ಧದಲ್ಲಿ ಶಾಲೆ ಬಿಟ್ಟ ಮತ್ತು ಶಾಲೆಯಿಂದ ಸಂಪೂರ್ಣವಾಗಿ ಹೊರಗುಳಿದ ಮಕ್ಕಳ ಬಗ್ಗೆ ನಿಖರ ಮಾಹಿತಿ ಕಲೆ ಹಾಕಲು ಡಿಸೆಂಬರ್‌ ತಿಂಗಳಲ್ಲಿ ರಾಜ್ಯಾದ್ಯಂತ ಮನೆ-ಮನೆ ಸಮೀಕ್ಷೆ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.

ಅಲ್ಲದೇ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 ಹಾಗೂ “ಕರ್ನಾಟಕ ಮಕ್ಕಳ ಕಡ್ಡಾಯ ಹಾಗೂ ಉಚಿತ ಶಿಕ್ಷಣ ಹಕ್ಕು ನಿಯಮಗಳು-2012’ರ ಪ್ರಕಾರ ರಾಜ್ಯದಲ್ಲಿ ವಲಸೆ ಮಕ್ಕಳ ಶಿಕ್ಷಣ ಹಕ್ಕಿಗೆ ಸಂಬಂಧಿಸಿದಂತೆ ಜಾರಿಗೆ ತರಲಾಗುತ್ತಿರುವ ನೀತಿಯನ್ನು ಮುಂದಿನ ಎರಡು ವಾರಗಳಲ್ಲಿ ಅಂತಿಮಗೊಳಿಸಲಾಗುವುದು.

ಅದೇ ರೀತಿ, ಶಾಲೆ ಬಿಟ್ಟ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಟ್ಟದಲ್ಲಿ ಕೆಲಸ ಮಾಡುವ “ಶಿಕ್ಷಣ ಸಂಯೋಜಕರ’ (ಹಾಜರಾತಿ ಅಧಿಕಾರಿ) ಖಾಲಿ ಹುದ್ದೆಗಳನ್ನು 2020ರ ಫೆಬ್ರವರಿಯೊಳಗೆ ಹಂತ-ಹಂತವಾಗಿ ಭರ್ತಿ ಮಾಡಲಾಗು ವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

Advertisement

ರಾಜ್ಯದಲ್ಲಿ 967 ಶಿಕ್ಷಣ ಸಂಯೋಜಕರ ಹುದ್ದೆಗಳ ಪೈಕಿ 357 ಹುದ್ದೆ ಭರ್ತಿ ಆಗಿದ್ದು, 2018ರ ಅ.6ರಿಂದ 610 ಹುದ್ದೆ ಖಾಲಿ ಇವೆ ಎಂದು ಈ ಹಿಂದೆ ಸರ್ಕಾರ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿತ್ತು. ಸರ್ಕಾರದ ಪರ ವಕೀಲರ ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಈ ಹಿಂದೆ ನ್ಯಾಯಾಲಯ ನೀಡಿರುವ ನಿರ್ದೇಶನಗಳನ್ನು ಪಾಲಿಸಿದ ಹಾಗೂ ಈಗ ಸರ್ಕಾರ ಕೊಟ್ಟಿರುವ ಭರವಸೆಗೆ ಸಂಬಂಧಿಸಿದಂತೆ ಅನುಪಾಲನಾ ವರದಿ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿತು.

ಅರ್ಜಿದಾರರ ವಾದ: ಈ ವೇಳೆ, ಅರ್ಜಿದಾರರಲ್ಲಿ ಒಬ್ಬರಾದ ಕ್ಯಾತ್ಯಾಯಿನಿ ಚಾಮರಾಜ್‌ ಅವರು ಖುದ್ದು ವಾದ ಮಂಡಿಸಿ, ಆರ್‌ಟಿಇ ಕಾಯ್ದೆ ಪ್ರಕಾರ ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರತಿ ವರ್ಷ ಆಯಾ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲು ಶಾಲೆ ಬಿಟ್ಟ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿ ಅಂಕಿ-ಸಂಖ್ಯೆಗಳನ್ನು ಸಂಗ್ರಹಿಸಿಡಬೇಕು. ಆದರೆ, ಈ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ದೂರಿದರು.

ವಸ್ತುಸ್ಥಿತಿ ವರದಿ ಸಲ್ಲಿಸಿ: ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಾಯ್ದೆಯಲ್ಲಿ ಹೇಳಿರುವಂತೆ ನಗರ ಸ್ಥಳೀಯ ಸಂಸ್ಥೆಗಳು ನಿಯಮಿತವಾಗಿ ಪ್ರತಿ ವರ್ಷ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಡೆಸುತ್ತಿವೆಯೇ? ಎಲ್ಲ ಕಡೆ ಸಮೀಕ್ಷೆ ನಡೆಸಿದ್ದರೆ, ಅಂಕಿ-ಸಂಖ್ಯೆಗಳ ದಾಖಲೆಗಳನ್ನು ನಿರ್ವಹಿಸಲಾಗುತ್ತಿದೆಯೇ? ಇಂತಹ ವ್ಯವಸ್ಥೆ ಇಲ್ಲ ಎಂದಾದರೆ, ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ತಕ್ಷಣ ನಿರ್ದೇಶನಗಳನ್ನು ನೀಡಬೇಕು.

ಜೊತೆಗೆ, ಮುಂದಿನ ವಿಚಾರಣೆ ವೇಳೆ ಈ ಕುರಿತ ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಗೈರು ಹಾಜರು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ವಾಸ್ತವ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸರ್ಕಾರದ ಪರ ವಕೀಲರಿಗೆ ನಿರ್ದೇಶನ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next