ಸವಣೂರು: ಆರೋಗ್ಯವಂತ ವ್ಯಕ್ತಿ ದೇಶದ ಸದೃಢ ಸಂಪತ್ತು. ಆದ್ದರಿಂದ, ಒಂದೇ ಸೂರಿನಡಿ ಜನರಿಗೆ ಆರೋಗ್ಯ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಾಲೂಕು ಮಟ್ಟದ ಆರೋಗ್ಯ ಮೇಳ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದ ಮೇರೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ, ತಾಲೂಕು ಆಡಳಿತ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ತಾಲೂಕು ಆಸ್ಪತ್ರೆ ಸವಣೂರ ಹಾಗೂ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಧಾರವಾಡ, ಜೆಸಿಐ ನಮ್ಮ ಸವಣೂರು ಸಹಯೋಗದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ರೂಪಾಂತರಿ 4ನೇ ಅಲೆಯೊಂದಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯಕವಾಗಿದೆ. ತಾಲೂಕಿಗೆ 100 ಹಾಸಿಗೆ ಹೆಚ್ಚುವರಿ ಆಸ್ಪತ್ರೆ ಮಂಜೂರಾಗಿದ್ದು, ಸ್ಥಳ ಗುರುತಿಸಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು. ಎಲ್ಲರಿಗೂ ಆರೋಗ್ಯ ನೀಡುವ ದೃಷ್ಟಿಯಿಂದ, ಆರೋಗ್ಯ ಮೇಳದಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಿದಲ್ಲಿ ಮತ್ತೂಂದು ಬಾರಿ ಆರೋಗ್ಯ ಮೇಳ ಕೈಗೊಳ್ಳಲಾಗುವುದು ಎಂದು ಹೇಳಿದರು.
ಡಿಎಚ್‌ಒ ಡಾ| ರಾಘವೇಂದ್ರಸ್ವಾಮಿ ಎಚ್.ಎಸ್. ಮಾತನಾಡಿದರು. ಟಿಎಚ್‌ಒ ಡಾ|ಚಂದ್ರಕಲಾ ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅಧ್ಯಕ್ಷತೆ ವಹಿಸಿದ್ದರು.
ವೀರಯ್ಯ ಸಂಕೀನಮಠ ಹಾಗೂ ಸಂಗಡಿಗರಿಂದ ಹಮ್ಮಿಕೊಳ್ಳುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೇಟಿ ಬಚಾವೋ, ಬೇಟಿ ಪಡಾವೋ ಜನ ಜಾಗೃತಿ ಬೀದಿ ನಾಟಕಕ್ಕೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಚಾಲನೆ ನೀಡಿದರು.
ಆರೋಗ್ಯ ಮೇಳದಲ್ಲಿ ವಿವಿಧ ರೋಗಗಳಿಗಾಗಿ 1528 ಮಂದಿ ಚಿಕಿತ್ಸೆ ಪಡೆದರು. ಜೆಸಿಐ ನಮ್ಮ ಸವಣೂರು ಘಟಕ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಪೊಲೀಸ್ ಸಿಬ್ಬಂದಿ ವಿನಾಯಕ ಚಿನ್ನೂರ 25ನೇ ಬಾರಿ, ಶ್ರೀನಿವಾಸ ವೆಂಕಣ್ಣನವರ 9ನೇ ಬಾರಿ, ಬಿಜೆಪಿ ತಾಲೂಕು ಅಧ್ಯಕ್ಷ ಗಂಗಾಧರ ಬಾಣದ, ಇಬ್ಬರು ಆಶಾ ಕಾರ್ಯಕರ್ತೆಯರು ಸೇರಿ 19 ಜನರು ರಕ್ತದಾನ ಮಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಗಂಗಾಧರ ಬಾಣದ, ತಹಶೀಲ್ದಾರ್ ಅನಿಲಕುಮಾರ ಜಿ., ಐಎಂಎ ತಾಲೂಕು ಘಟಕದ ಅಧ್ಯಕ್ಷ ಡಾ|ಪ್ರವೀಣ ಸಿಂಧೂರ, ಜಿಲ್ಲಾ ಮಾನಸಿಕ ತಜ್ಞ ಡಾ|ವಿಜಯಕುಮಾರ ಬಳಿಗಾರ, ತಾಪಂ ಇಒ ಮುನಿಯಪ್ಪ ಪಿ., ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ಶಂಕರಗೌಡ ಹಿರೇಗೌಡ್ರ, ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷ ಪರಶುರಾಮ ಹೊಳಲ, ಪದಾಧಿಕಾರಿಗಳು ಇತರರು ಪಾಲ್ಗೊಂಡಿದ್ದರು.