ಕಾಲೇಜುಗಳಲ್ಲಿ ಪಾಠದ ಜತೆಗೆ ಮೋಜು, ಮಸ್ತಿ ಎಲ್ಲ ಸರ್ವೆ ಸಾಮಾನ್ಯ. ಕೆಲವೊಂದು ಬಾರಿ ಅಲ್ಲಿ ಅನಿರೀಕ್ಷಿತ ತಿರುವುಗಳು ಉಂಟಾಗುತ್ತದೆ. ನಮ್ಮ ಒತ್ತಾಯದ ಮೇರೆಗೆ ನಾವು ಹತ್ತು ಮಂದಿ ಗೆಳೆಯರು ಭದ್ರಾ ಡ್ಯಾಂಗೆ ಪ್ರವಾಸ ಕೈಗೊಂಡಿದ್ದೆವು.
ಡ್ಯಾಂಮ್‌ನ ಹಿನ್ನೀರಿನ ಪ್ರದೇಶವನ್ನು ನೋಡಲು ಹೋಗಬೇಕೆಂದು ನಿರ್ಧರಿಸಿ ಹೊರೆಟೆವು. ಆದರೆ ಅದಕ್ಕೆ ಎರಡು ದಾರಿಗಳಿದ್ದವು. ಒಂದು ದಾರಿ ಕಿಲೋ ಮೀಟರ್ ಅಷ್ಟು ದೂರ. ಇನ್ನೊಂದು ದಾರಿ ಡ್ಯಾಂನ ಪಕ್ಕದಲ್ಲಿರುವ ಎತ್ತರದ ಗೇಟ್ ಅನ್ನು ಹಾರಿ ಹೋಗಬೇಕಿತ್ತು. ಈ ದಾರಿಯಲ್ಲಿ ಹೋದರೆ ಕೆಲವೇ ನಿಮಿಷಗಳು ಸಾಕಿತ್ತು. ಆದರೆ ಆ ದಾರಿ ಸ್ವಲ್ಪ ವರ್ಷಗಳಿಂದ ಮುಚ್ಚಲ್ಪಟ್ಟಿದೆ.ಆದರೆ ನಮ್ಮ ಜತೆ ಇದ್ದ ಕೆಲ ಸ್ನೇಹಿತರಿಗೆ ಆ ದಾರಿ ಎಲ್ಲಿಗೆ ಹೋಗಿ ತಲುಪುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಗೊತ್ತಿತ್ತು.
ಅವರ ಮಾರ್ಗದರ್ಶನದ ಮೇರೆಗೆ ಹತ್ತು ಜನ ಸ್ನೇಹಿತರಲ್ಲಿ ಆರು ಜನ ಈ ದಾರಿಯಲ್ಲಿ ಹೋಗುವ ತೀರ್ಮಾನಕ್ಕೆ ಒಪ್ಪಿದೆವು. ಕೆಲ ಸ್ನೇಹಿತರು ಈ ತಿರ್ಮಾನವನ್ನು ಒಪ್ಪಲಿಲ್ಲ. ಈ ದಾರಿಯಲ್ಲಿ ಹೋಗುವುದು ಬೇಡ ಎಷ್ಟೇ ಸಮಯವಾದರೂ ಬೇರೆ ದಾರಿಯಿಂದ ಹೋಗೋಣ ಎಂದರು. ಅವರ ಮಾತನ್ನು ದಿಕ್ಕರಿಸಿ. ಎತ್ತರದ ಗೇಟುನ್ನು ನಮ್ಮ ಗುಂಪಿನಲ್ಲಿದ್ದ ಇಬ್ಬರು ಹತ್ತಿ ಆ ಕಡೆ ನೆಗೆದರು.
ಅವರ ಅನಂತರ ಒಬ್ಬೊರಂತೆ ಹತ್ತುತ್ತಿರುವಾಗ ನನ್ನ ಸರದಿ ಬಂತು. ಅಲ್ಲಿಯೇ ನೋಡಿ ಎಡವಟ್ಟಾಗಿದ್ದು. ನಾನು ಕಷ್ಟಪಟ್ಟು ಹತ್ತಲಾರದೇ ಸ್ನೇಹಿತರ ಮಾರ್ಗದರ್ಶನ ದೊಂದಿಗೆ ಹತ್ತಿ ಆ ಕಡೆ ಹಾರುವಷ್ಟರಲ್ಲಿ ಅಲ್ಲಿಗೆ ಅದೇ ಊರಿನ ಒಬ್ಟಾತ ಬಂದು ನೀವು ಯಾವ ಊರಿನವರು, ಯಾರನ್ನು ಕೇಳಿ ಇಷ್ಟು ಎತ್ತರದ ಗೇಟು ಹತ್ತಿ ಆ ಕಡೆ ಹೋಗಿದ್ದಿರಾ? ಈ ದಾರಿಯನ್ನು ಮುಚ್ಚಲಾಗಿದೆ. ಇಲ್ಲಿಂದ ನೀವು ಹಿನ್ನೀರಿನ ಸ್ಥಳಕ್ಕೆ ಹೋಗಲು ಆಗುವುದಿಲ್ಲ. ನಿಮ್ಮಂತಹವರಿಗಾಗಿ ನಾವು ಈ ಗೇಟಿಗೆ ಬೀಗ ಹಾಕದೇ ಅದರ ಚೀಲಕ ಹಾಕಿ ವೆಲ್ಡಿಂಗ್ ಮಾಡಿಸಿದ್ದೇವೆ.
ಇಷ್ಟಾದರೂ ಹತ್ತಿದ್ದೀರಲ್ಲಾ ಬುದ್ಧಿ ಇಲ್ವಾ ಎಂದು ಬೈಯ್ಯಲಾರಂಭಿಸಿದರು. ಆದರೆ ಈ ಬೈಗುಳ ಕೇವಲ ನಮ್ಮ ಗುಂಪಿನಲ್ಲಿದ್ದ ಆರು ಜನಕ್ಕೆ ಮಾತ್ರ ಸೀಮಿತವಾಗಿತ್ತು. ಇನ್ನುಳಿದ ನಾಲ್ಕು ಜನ ಗೆಳೆಯರು ಗೇಟಿನ ಹೊರಗೆ ನಿಂತು ಅವರಿಗೂ ನಮಗೂ ಯಾವುದೇ ರೀತಿಯ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದರು. ನಾವು ನಮ್ಮ ಜತೆ ಜಗಳ ಮಾಡುತ್ತಿರುವವನೊಡನೆ ವಾದ ಮಾಡುತ್ತಿದ್ದರೂ ಆ ನಾಲ್ಕು ಜನ ಮಾತ್ರ ಸುಮ್ಮನಿದ್ದರು. ಕೊನೆಗೆ ಆತ ನಮ್ಮನ್ನು ಗದರಿಸಿ ನಮ್ಮ ನಿರ್ಧಾರವನ್ನು ಬದಲಿಸಿಬಿಟ್ಟ. ಹೇಗೆ ಹರಸಾಹಸ ಪಟ್ಟು ಗೇಟು ಹತ್ತಿದ್ದೆವೋ ಅದೇ ರೀತಿ ಹಾಗೇ ವಾಪಸ್ಸಾದೆವು.
ಅನಂತರ ಸರಿಯಾದ ದಾರಿ ಮೂಲಕ ಹಿನ್ನೀರಿನ ಸ್ಥಳಕ್ಕೆ ಹೋಗಿ ನೀರಿನಲ್ಲಿ ಚೆನ್ನಾಗಿ ಆಟ ಆಡಿ ಹಿಂದಿರುಗಿದೆವು. ಅಲ್ಲಿಗೆ ಪ್ರತೀ ಸಲ ಭೇಟಿ ನೀಡಿದಾಗಲೂ ಆ ಬೈಗುಳ ಕಿವಿಗೆ ಕೇಳಿಸುತ್ತದೆ. ಆ ನೆನಪು ಕೂಡ ಶಾಶ್ವತ.
ಭಾಗ್ಯಶ್ರೀ ಎಸ್., ಕುವೆಂಪು ವಿವಿ, ಶಿವಮೊಗ್ಗ