ಬೆಂಗಳೂರು: ಮತದಾನೋತ್ತರ ಸಮೀಕ್ಷೆ ತಮ್ಮ ಪರವಾಗಿ ಬಂದರೂ ಅತೀ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರು ಮೈಮರೆಯದೆ ಗುರುವಾರ ಫಲಿತಾಂಶ ಆಧಾರಿತ ರಣತಂತ್ರಕ್ಕೆ ಸಜ್ಜಾಗುತ್ತಿರುವುದು ಕಂಡುಬಂತು. ಮತದಾನದ ಮರುದಿನವೇ ಕೈ ನಾಯಕರು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಅತ್ತ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಗರಕ್ಕೆ ಧಾವಿಸಿ, ಸಿದ್ದರಾಮಯ್ಯ ಅವರನ್ನು ನಗರದ ನಿವಾಸದಲ್ಲಿ ಭೇಟಿಯಾಗಿ ಮುಂದಿನ ರಾಜಕೀಯ ತಂತ್ರಗಾರಿಕೆಗಳ ಕುರಿತು ಚರ್ಚೆ ನಡೆಸಿದರು. ಜತೆಗೆ ಫೋನ್ ಮೂಲಕ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗೂ ಮಾತುಕತೆ ನಡೆಸಿದರು ಎನ್ನಲಾಗಿದೆ. ಅದೇ ರೀತಿ, ವಿವಿಧ ಮಾಧ್ಯಮ ಸಂಸ್ಥೆಗಳ ಮತದಾನೋತ್ತರ ಸಮೀಕ್ಷೆಗಳ ವರದಿಗಳಿಗೆ ಸೀಮಿತವಾಗದೆ ನಾಯಕರೆಲ್ಲರೂ ವಿವಿಧ ವಿಧಾನಸಭಾ ಕ್ಷೇತ್ರಗಳ ತಮ್ಮ ಅಭ್ಯರ್ಥಿಗಳು ಬೂತ್‌ಗಳಿಗೆ ವೈಯಕ್ತಿಕವಾಗಿ ಫೋನಾಯಿಸಿ, ಫಲಿತಾಂಶದ ಸ್ಪಷ್ಟ ಚಿತ್ರಣ ಪಡೆಯುವ ಪ್ರಯತ್ನ ನಡೆಸಿದರು. ಅದನ್ನು ಆಧರಿಸಿ ಮುಂದಿನ ಲೆಕ್ಕಾಚಾರ ಮಾಡಲಾಗುತ್ತಿದೆ.