Advertisement

ರಾಷ್ಟ್ರಕ್ಕೆ ಮಾರ್ಗದರ್ಶಕ

10:47 PM Dec 29, 2019 | Lakshmi GovindaRaj |

ಬೆಂಗಳೂರು: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳಲ್ಲಿ ಪರಂಪರೆಯ ಚಿಂತನೆಗಳು ಬೇರೂರಿದ್ದರೂ, ಅವರು ಪ್ರಗತಿಶೀಲ ವಿಚಾರಗಳಿಗೆ ಸ್ಪಂದಿಸುತ್ತಿದ್ದರು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸ್ಮರಿಸುತ್ತಾರೆ. ಪರಂಪರೆ ಹಾಗೂ ಬದಲಾವಣೆ ನಡುವೆ ಸಮನ್ವಯ ದೃಷ್ಟಿ ಮೂಡಬೇಕೆಂಬ ಆಶಯ ಅವರದಾಗಿತ್ತು. ಅವೈದಿಕ ಪರಂಪರೆಯ ಹಲವು ಸದಾಶಯಗಳಿಗೂ ಶ್ರೀಗಳು ಸ್ಪಂದಿಸಿದ್ದಾರೆ. ಹೀಗಾಗಿ ಅವರ ಬಗ್ಗೆ ಅಪಾರ ಗೌರವವಿದೆ ಎಂದರು.

Advertisement

ಶ್ರೀಗಳು ಬದಲಾವಣೆ, ಸುಧಾರಣೆ ಪರವಾಗಿದ್ದರು. ಮಾಧ್ವ ಪರಂಪರೆಯಲ್ಲಿ ಅವರ ಸ್ಥಾನ ದೊಡ್ಡದು. ರಾಷ್ಟ್ರಕ್ಕೆ, ನಾಡಿಗೆ ಮಾರ್ಗದರ್ಶನ ಮಾಡುವ ಬೆರಳೆಣಿಕೆಯ ಯತಿಗಳಲ್ಲಿ ಅವರೂ ಒಬ್ಬರಾಗಿದ್ದರು. ನೇರ ಸಂವಾದದಲ್ಲಿ ನಾವು ಎರಡು ಬಾರಿ ಭೇಟಿಯಾಗಿದ್ದೆವು. ಮಡೆ ಮಡೆ ಸ್ನಾನದ ವಿಷಯ ಬಂದಾಗ ಅವರು ಮುಕ್ತ ಮನಸ್ಸಿನೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದ್ದಾರೆ.

ತಾತ್ವಿಕ ಭಿನ್ನಾಭಿಪ್ರಾಯಗಳಷ್ಟೇ: ಕೆಲವು ವಿಚಾರಗಳಲ್ಲಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು. ಅದು ತಾತ್ವಿಕ ಭಿನ್ನಾಭಿಪ್ರಾಯಗಳಷ್ಟೇ, ವೈಯಕ್ತಿಕವಾಗಿ ಅವರೊಂದಿಗೆ ಉತ್ತಮ ಸಂಬಂಧವಿತ್ತು. ಶ್ರೀಗಳು ಮಡೆಸ್ನಾನದ ಬದಲಿಗೆ ಎಡೆ ಸ್ನಾನದ ಪರಿಕಲ್ಪನೆಗೆ ಒಲವು ತೋರಿದ್ದರು. “ನಾನು ಮಡೆ ಸ್ನಾನ ಮಾಡದಿರುವಾಗ ಬೇರೆಯವರಿಗೆ ಮಾಡಿ ಎಂದು ಹೇಳಲು ಹೇಗೆ ಸಾಧ್ಯ’ ಎಂದು ಶ್ರೀಗಳು ಪ್ರಶ್ನೆ ಮಾಡಿದ್ದರು. ನಾನು ಒಪ್ಪುವುದಿಲ್ಲ, ಏಕಕಾಲಕ್ಕೆ ಬಿಡುವುದು ಬೇಡ ಎಂದಿದ್ದರು.

ಆದರೆ, ಒಮ್ಮೆಗೆ ಮಡೆ ಮಡೆ ಸ್ನಾನ ಸಂಪ್ರದಾಯವನ್ನು ತೆಗೆದು ಹಾಕಿದರೆ ಸಂಪ್ರದಾಯಸ್ಥರ ಮನಸ್ಸಿಗೆ ನೋವಾಗುತ್ತದೆ. ಇದರ ಬದಲಿಗೆ ಎಡೆ ಸ್ನಾನ ಮುಂದುವರಿಸಿ ಎಂಬ ಸಲಹೆ ನೀಡಿದ್ದರು. ಶ್ರೀಗಳ ಈ ನಿರ್ಧಾರದಿಂದ ಮುಂದೆ ಉಡುಪಿಯಲ್ಲಿನ ಪರ್ಯಾಯ ಪೀಠದ ಶ್ರೀಗಳು ಮಡೆ ಮಡೆ ಸ್ನಾನ ನಿಲ್ಲಿಸಿದರು. ಬದಲಾವಣೆ ಹಂತ ಹಂತವಾಗಿ ಆಗಬೇಕು. ಒಮ್ಮೆಗೆ ಮಾಡುವುದು ಬೇಡ ಎಂಬ ಮನೋಭಾವ ಪೇಜಾವರ ಶ್ರೀಗಳದ್ದಾಗಿತ್ತು.

ಮಿತಿ ಮತ್ತು ವಿಶೇಷ: ಸಂಪ್ರದಾಯಸ್ಥರ ಮನಸ್ಸಿಗೆ ನೋವಾಗಬಾರದು. ಹಾಗೇ ಆಧುನಿಕ ಮನೋಭಾವದ ಜನರಿಗೂ ಸಮಾಧಾನವಾಗಬೇಕು ಮಧ್ಯ ಮಾರ್ಗದಲ್ಲಿ ಸಾಗುವ ನಿಲುವನ್ನು ಶ್ರೀಗಳು ಹೊಂದಿದ್ದರು ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೆನಪಿಸಿಕೊಂಡರು.

Advertisement

ಹಲವು ಬಾರಿ ಶ್ರೀಗಳ ಆಶೀರ್ವಾದ ಪಡೆಯುವ ಅವಕಾಶ ನನಗೆ ಸಿಕ್ಕಿತ್ತು. ಸಾಮಾಜಿಕ ಸುಧಾರಣೆ ಹಾಗೂ ಧಾರ್ಮಿಕ ಸಮಾಜದ ಉದ್ಧಾರ ಕ್ಕಾಗಿ ತಮ್ಮ ಜೀವನವನ್ನು ಶ್ರೀಗಳು ಮೀಸಲಿಟ್ಟಿದ್ದರು.
-ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವೆ

ಪೇಜಾವರ ಶ್ರೀಗಳ ಅಗಲಿಕೆ ಯಿಂದ ನನಗೆ ತೀವ್ರ ನೋವಾಗಿದೆ. ಅವರು ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಮುಡಿಪಿಟ್ಟಿದ್ದರು. ಸಮಾಜದ ಕಲ್ಯಾಣಕ್ಕಾಗಿ ಅವರ ನಿಸ್ವಾರ್ಥ ಸೇವೆ ಎಲ್ಲರಿಗೂ ಪ್ರೇರಕವಾಗಿದೆ.
-ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ

ಭಾರತವು ದೇಶದ ಅತೀ ಹಿರಿಯ ಸಂತರನ್ನು ಕಳೆದುಕೊಂಡಿದೆ. ಅವರ ಉತ್ತಮವಾದ ಕಾರ್ಯಗಳು ಸಮಾಜದ ಮೇಲೆ ಬಹಳಷ್ಟು ಪ್ರಭಾವ ಬೀರಿರುತ್ತದೆ.
-ರಾಜನಾಥ್‌ ಸಿಂಗ್‌, ಕೇಂದ್ರ ಸಚಿವ

ಸದಾ ಜೀವನೋತ್ಸಾಹದ ಚಿಲುಮೆಯಂತಿದ್ದ ಶ್ರೀಗಳು ಸಮಾಜಮುಖೀ ನಿಲುವಿನ ಶ್ರೇಷ್ಠ ಸಂತರಾಗಿದ್ದರು. ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಶ್ರೀಗಳ ನಿಧನದಿಂದ ನಾಡು ಬಡವಾಗಿದೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಹಿಂದೂ ಸಮಾಜವನ್ನು ಒಗ್ಗೂಡಿಸಿ, ರಾಮ ಜನ್ಮಭೂಮಿಯ ನೇತೃತ್ವ ವಹಿಸಿ, ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದ ಋಷಿ ಶ್ರೇಷ್ಠರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ.
-ಶೋಭಾ ಕರಂದ್ಲಾಜೆ, ಸಂಸದೆ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next