Advertisement
ನಗರದ ಹಲವೆಡೆ ಇರುವ ಆಂಜನೇಯ ಮೂರ್ತಿಗೆ ವಿಶೇಷ ರುದ್ರಾಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ ನಡೆದರೆ, ಇನ್ನೂ ಕೆಲವೆಡೆ ಬೆಳಗ್ಗೆಯಿಂದಲೇ ಹೋಮ, ಅಭಿಷೇಕ ನಡೆದವು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
Related Articles
Advertisement
ಅಭಿಷೇಕ, ಭಜನೆ: ಹೆಬ್ಬಾಳದ ವಿದ್ಯಾಗಣಪತಿ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಆಂಜನೇಯ ಸ್ವಾಮಿಗೆ ಸಂಕಲ್ಪ ಪೂಜೆ, 108ಲೀ ಹಾಲು, ಎಳನೀರು, ಮೊಸರು ಪಂಚಾಮೃತ, ತುಪ್ಪ, ಜೇನುತುಪ್ಪ, ಸಕ್ಕರೆ, ಅರಿಶಿನ-ಕುಂಕುಮ, ಭಸ್ಮ, ಶ್ರೀಗಂಧ, ಸಿಂಧೂರ ಮುಂತಾದ ದ್ರವ್ಯಗಳಿಂದ ಅಭಿಷೇಕ ನಡೆಸಲಾಯಿತು. ನಂತರ ವಸ್ತ್ರಾಲಂಕಾರ, ಹೂವಿನ ಅಲಂಕಾರಗಳು ನಡೆದವು. ಇದೇ ವೇಳೆ ಮಹಿಳಾ ಮಂಡಳಿಯಿಂದ ಶ್ರೀರಾಮ ಭಜನಾ ಕಾರ್ಯಕ್ರಮ ನಡೆಯಿತು.
ಬೃಹತ್ ಮೆರವಣಿಗೆ: ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಹನುಮ ಜಯಂತಿ ಅಂಗವಾಗಿ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಮಾರುತಿ ಮೂರ್ತಿಯ ಬೃಹತ್ ಮೆರವಣಿಗೆಗೆ ಶಾಸಕ ಎಸ್.ಎ. ರಾಮದಾಸ್ ಹಾಗೂ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಚಾಲನೆ ನೀಡಿದರು.
ಅಲಂಕೃತ ರಥದಲ್ಲಿ ಮಾರುತಿಯ ಉತ್ಸವ ಮೂರ್ತಿಯನ್ನಿರಿಸಿ ಕಲಾ ತಂಡಗಳೊಂದಿಗೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಮೆರವಣಿಗೆ ನಡೆಸಲಾಯಿತು. ಇದಕ್ಕೂ ಮುಂಚೆ ಶಾಸಕ ಎಸ್.ಎ. ರಾಮದಾಸ್, ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಹಾಗೂ ಎಚ್.ಎಚ್. ನಂದೀಶ್ ಪ್ರೀತಮ್ ಅವರು ನಂದಿ ಕಂಬಕ್ಕೆ ಹಾಗೂ ಆಂಜನೇಯ ಮೂರ್ತಿಗೆ ಪೂಜೆ ಸಲ್ಲಿಸಿದರು.
ಆಕರ್ಷಕ ಕಲಾತಂಡಗಳ ಮೆರವಣಿಗೆ: ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ನಡೆದ ಮೆರವಣಿಗೆಯಲ್ಲಿ ನಂದಿ ಕಂಬ, ಬೀಸು ಕಂಸಾಳೆ, ವೀರಗಾಸೆ, ಡೊಳ್ಳುಕುಣಿತ, ಕೀಲು ಕುದುರೆ ತಂಡ, ಮರಗಾಲು ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆಯ ಮೇಳ, ಸುತ್ತೂರು ಕಹಳೆ ತಂಡ, ತಮಟೆ, ನಗಾರಿ, ಜಡೆ ಕೋಲಾಟ, ಕರಗದ ನೃತ್ಯ, ಕರಗದ ಕೋಲಾಟ ಸೇರಿದಂತೆ 20ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು.
ಮೆರವಣಿಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ಅಶೋಕ ರಸ್ತೆ, ಇರ್ವೀನ್ ರಸ್ತೆ, ನ್ಯೂ ಸಯ್ನಾಜಿರಾವ್ ರಸ್ತೆ, ಡಿ. ದೇವರಾಜು ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಜಿಲ್ಲಾ ಪಂಚಾಯಿತಿ ಕಚೇರಿ ಎದುರಿನಿಂದ ಕೆ.ಜಿ.ಕೊಪ್ಪಲು ಮಾರ್ಗವಾಗಿ ಸರಸ್ವತಿಪುರಂ ದೇವಾಲಯಕ್ಕೆ ತೆರಳಿತು.