ಪ್ರಕೃತಿಗೂ ಸಾವಿಗೂ ಇರುವ ಸಂಬಂಧ, ಪುನರ್ಜನ್ಮ ಮೊದಲಾದವುಗಳ ಬಗ್ಗೆ ಕೇಳಿರುತ್ತೀರಿ. ಈಗ ಇಂಥದ್ದೇ ವಿಷಯವನ್ನು ಇಟ್ಟುಕೊಂಡು ಸಿನಿಮಾವೊಂದು ತೆರೆಗೆ ಬರುತ್ತಿದೆ. ಅದರ ಹೆಸರು “ಅಘೋರ’ ಮನುಷ್ಯನ ಸಾವಿನ ನಂತರ ಮತ್ತೊಂದು ಜನ್ಮ ಪಡೆಯುವ ಅಂತರದಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಪಂಚಭೂತಗಳ ಮೂಲಕ ಹೇಳುವ ಪ್ರಯತ್ನವನ್ನು “ಅಘೋರ’ ಚಿತ್ರದಲ್ಲಿ ಮಾಡಲಾಗಿದೆಯಂತೆ.
ಎನ್. ಎಸ್ ಪ್ರಮೋದ್ ರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ “ಅಘೋರ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಿಂದೆ “ಕವಿ’ ಎಂಬ ಚಿತ್ರ ನಿರ್ಮಿಸಿದ್ದ ಪುನೀತ್ ಎಂ. ಎನ್ “ಅಘೋರ’ ಚಿತ್ರವನ್ನು ನಿರ್ಮಿಸಿ, ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರಚನಾ ದಶರಥ್ ಹಾಗೂ ದ್ರವ್ಯಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಭೂಮಿಯಲ್ಲಿ ಹುಟ್ಟಿದ ಪ್ರತಿ ಜೀವರಾಶಿಯೂ ಸಾಯಲೇಬೇಕು. ಹುಟ್ಟು ಎನ್ನುವುದು ಪ್ರಕೃತಿ ನಿಯಮ, ಅಂತೆಯೇ ಸಾವು ಕೂಡ ಯಾರಿಂದ, ಯಾವಾಗ, ಹೇಗೆ ಆಗಬೇಕು ಎಂಬುದು ಕಾಲದ ನಿರ್ಣಯವಾಗಿರುತ್ತದೆ. ಕಾಸ್ಮಿಕ್ ಎನರ್ಜಿ ಮೇಲೆ ಮಾಡಿದ ಈ ಸಿನಿಮಾದಲ್ಲಿ ಪ್ರಕೃತಿಗೂ ಸಾವಿಗೂ ಇರುವ ಸಂಬಂಧವೇನು ಅಂತ ಹೇಳಿದ್ದೇವೆ. ಅ-ಘೋರ ಇದು ಅಘೋರಿಗಳ ಕಥೆಯಲ್ಲ, ಸಾವು ಹೇಗೆ ಬರುತ್ತೆ, ಏನು ಮುನ್ಸೂಚನೆ ಕೊಡುತ್ತೆ, ಹುಟ್ಟು-ಸಾವುಗಳ ಗ್ಯಾಪ್ ನಲ್ಲಿ ಏನು ನಡೆಯುತ್ತೆ ಅನ್ನೋದೇ ಈ ಸಿನಿಮಾ.
ಈ ಕರ್ಮ ಹೇಗೆ ವರ್ಕ್ ಆಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದೇವೆ. ಹಾರರ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ’ ಎನ್ನುವುದು ಚಿತ್ರತಂಡದ ಮಾತು. ಚಿತ್ರದಲ್ಲಿರುವ ಏಕೈಕ ಪಾರ್ಟಿ ಸಾಂಗ್‌ಗೆ ಮುರಳೀಧರನ್ ಸಂಗೀತ ಸಂಯೋಜನೆಯಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಸದ್ಯ ಟ್ರೇಲರ್ ಮೂಲಕ “ಅಘೋರ’ ದರ್ಶನ ಮಾಡಿಸಿರುವ ಚಿತ್ರತಂಡ, ಶೀಘ್ರದಲ್ಲಿಯೇ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.