Advertisement

ಸ್ವಸ್ಥ ಸಮಾಜಕ್ಕೆ ಮಹತ್ವದ ನಡೆ

03:45 AM Mar 29, 2017 | Team Udayavani |

ಮನೋರೋಗಿಗಳ ಕಾಳಜಿ ವಹಿಸುವ ಮಸೂದೆ 

Advertisement

ಮನೋರೋಗಿಗಳ ಆರೋಗ್ಯ ಕಾಳಜಿ ವಹಿಸುವ ಮೆಂಟಲ್‌ ಹೆಲ್ತ್‌ ಕೇರ್‌ ಬಿಲ್‌ ಅಂಗೀಕಾರ ಸ್ವಾಗತಾರ್ಹ. ಮಾನಸಿಕ ರೋಗಗಳಿಂದ ಬಳಲುವವರಿಗೆ ಅತ್ಯುತ್ತಮ ಚಿಕಿತ್ಸೆ ಪಡೆಯುವ ಹಕ್ಕನ್ನು ಕೊಡುವ ಈ ಮಸೂದೆಯಲ್ಲಿ ಆತ್ಮಹತ್ಯೆ ಪ್ರಯತ್ನ ಅಪರಾಧ ಅಲ್ಲ ಎಂದು ಸಾರುವ ಇನ್ನೊಂದು ಪ್ರಮುಖ ಅಂಶವೂ ಇದೆ.

ಆರೋಗ್ಯವಂತ ಜನರು ಆರೋಗ್ಯಕರ ಸಮಾಜ ನಿರ್ಮಾಣದ ಅಡಿಪಾಯ ಎನ್ನುವುದನ್ನು ಕೇಂದ್ರ ಸರಕಾರ ಚೆನ್ನಾಗಿ ಅರ್ಥ ಮಾಡಿಕೊಂಡಿರುವಂತೆ ಕಾಣಿಸುತ್ತಿದೆ. ಜನರ ಆರೋಗ್ಯವನ್ನು ಕಾಪಾಡಲು ಜೆನೆರಿಕ್‌ ಔಷಧ ಮಳಿಗೆ, ಸ್ಟೆಂಟ್‌ ದರ ಇಳಿಕೆಯಂತಹ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡ ಬಳಿಕ ಇದೀಗ ಮನೋರೋಗಿಗಳ ಆರೋಗ್ಯದ ಕಾಳಜಿ ವಹಿಸುವ ಮಸೂದೆಯನ್ನು ಅಂಗೀಕರಿಸಿಕೊಂಡಿದೆ. 2013ರಲ್ಲೇ ತಯಾರಾಗಿದ್ದ ಮೆಂಟಲ್‌ ಹೆಲ್ತ್‌ಕೇರ್‌ ಬಿಲ್‌ ಕಳೆದ ವರ್ಷ ರಾಜ್ಯಸಭೆಯಲ್ಲಿ ಮಂಜೂರಾಗಿತ್ತು. ಸೋಮವಾರ ಲೋಕಸಭೆಯಲ್ಲೂ ಮಂಜೂರಾಗಿರುವುದರಿಂದ ಶಾಸನ ರೂಪದಲ್ಲಿ ಜಾರಿಗೆ ಬರಲಿದೆ. ಮಾನಸಿಕ ರೋಗಗಳಿಂದ ಬಳಲುವವರಿಗೆ ಅತ್ಯುತ್ತಮ ಚಿಕಿತ್ಸೆ ಪಡೆಯುವ ಹಕ್ಕನ್ನು ಕೊಡುವ ಈ ಮಸೂದೆಯಲ್ಲಿ ಆತ್ಮಹತ್ಯೆ ಪ್ರಯತ್ನ ಅಪರಾಧ ಅಲ್ಲ ಎಂದು ಸಾರುವ ಇನ್ನೊಂದು ಪ್ರಮುಖ ಅಂಶವೂ ಇದೆ. 

ಸಾವಿನ ಹತ್ತು ಪ್ರಮುಖ ಕಾರಣಧಿಗಳಲ್ಲಿ ಆತ್ಮಹತ್ಯೆ ಒಂದು. ಅಪರಾಧ ದಾಖಲೆ ವಿಭಾಗದ ಅಂಕಿಅಂಶ ತಿಳಿಸುವ ಪ್ರಕಾರ ಪ್ರತಿ ವರ್ಷ ಸರಾಸರಿ 1.35 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2004ರಿಂದೀಚೆಗೆ ಆತ್ಮಹತ್ಯೆಗಳ ಪ್ರಮಾಣ ಶೇ. 15ರಂತೆ ಹೆಚ್ಚಳವಾಗಿದೆ. ಅದರಲ್ಲೂ 15ರಿಂದ 29 ವರ್ಷದವರ ಆತ್ಮಹತ್ಯೆ ಪ್ರಕರಣಗಳು ಅಧಿಕವಿದೆ. ಆತ್ಮಹತ್ಯೆಗೆ ತೀವ್ರವಾದ ಮಾನಸಿಕ ಒತ್ತಡ ಅಥವಾ ಖನ್ನತೆಯೇ ಕಾರಣವಾಗಿರುತ್ತದೆ. ಐಪಿಸಿ ಕಲಂ 309ರ ಪ್ರಕಾರ ಆತ್ಮಹತ್ಯೆ ಶಿಕ್ಷಾರ್ಹ ಅಪರಾಧ. ತೀವ್ರ ಮಾನಸಿಕ ಒತ್ತಡದಿಂದ ಸಾಯಲು ಬಯಸಿದ ವ್ಯಕ್ತಿ ಅಕಸ್ಮಾತ್‌ ಬದುಕುಳಿದರೆ ವಿಚಾರಣೆಗೊಳಪಡಿಸಿ ಶಿಕ್ಷೆ ವಿಧಿಸುವುದು ಅಮಾನವೀಯ ಕ್ರಮ. ಸಾವು ಅಪೇಕ್ಷಿಸಿದ ವ್ಯಕ್ತಿ ಬದುಕುಳಿದರೆ 
ಅವಧಿನನ್ನು ಮಾನವೀಯ ಅನುಕಂಪದಿಂದ ನೋಡಬೇಕೇ ಹೊರತು ಕಾನೂಧಿನಿನ ಕುಣಿಕೆ ಬಿಗಿದು ಇನ್ನಷ್ಟು ಒತ್ತಡಕ್ಕೆ ನೂಕುವುದರಲ್ಲಿ ಅರ್ಥವಿಲ್ಲ. 

ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಯತ್ನ ಅಪರಾಧ ಅಲ್ಲ ಎಂದು ಪರಿಗಣಿಸುವುದು ಮಾನವೀಯ ನಿರ್ಧಾರ. ಮಾನಸಿಕ ರೋಗಕ್ಕೆ ವಿದ್ಯುತ್‌ ಶಾಕ್‌ ನೀಡುವುದು ದೇಶದಲ್ಲಿರುವ ಜನಪ್ರಿಯ ಚಿಕಿತ್ಸಾ ಪದ್ಧತಿ. ಹೊಸ ಮಸೂದೆ ಇದಕ್ಕೆ ನಿರ್ಬಂಧ ಹೇರಿದೆ. ಮಕ್ಕಳನ್ನು ವಿದ್ಯುತ್‌ ಶಾಕ್‌ ಚಿಕಿತ್ಸೆಗೆ ಗುರಿಪಡಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

Advertisement

ಪ್ರಾಯಪ್ರಬುದ್ಧರಿಗೂ ಈ ಚಿಕಿತ್ಸೆ ನೀಡಲು ಕಠಿಣ ನಿಯಮಗಳನ್ನು ರಚಿಸಲಾಗಿದೆ. ಅಂತೆಯೇ ಮನೋರೋಗಿಗಳಿಗೆ ಯಾವ ರೀತಿಯ ಚಿಕಿತ್ಸೆ ಪಡೆಯಬೇಕೆಂದು ತೀರ್ಮಾನಿಸುವ ಹಕ್ಕನ್ನು ನೀಡಲಾಗಿದೆ. ಈ ವಿಚಾರದಲ್ಲಿ 1987ರಲ್ಲಿ ಜಾರಿಗೆ ತರಲಾಗಿದ್ದ ಮಾನಸಿಕ ಆರೋಗ್ಯ ಕಾಯಿದೆಯಲ್ಲಿದ್ದ ದೊಡ್ಡದೊಂದು ಲೋಪವನ್ನು ಸರಿಪಡಿಸಲಾಗಿದೆ. ಹಳೆ ಕಾಯಿದೆಯಲ್ಲಿ ಮನೋರೋಗಿಗಳ ಚಿಕಿತ್ಸೆಯನ್ನು ಸಾಂಸ್ಥಿàಕರಿಸಲಾಗಿತ್ತು. ಅಂದರೆ ಅವರನ್ನು ಮನೆಯವರಿಂದ ಬೇರ್ಪಡಿಸಿ, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದು ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತಿತ್ತು. 

ಮಾನಸಿಕ ರೋಗಿಗಳ ಗೌಪ್ಯತೆ ಕಾಪಾಡುವ ಮಹತ್ವದ ಅಂಶವೂ ಮಸೂದೆಯಲ್ಲಿದೆ. ಮಾನಸಿಕ ರೋಗಿಗಳ ಚಿಕಿತ್ಸೆಗಾಗಿ ಕೇಂದ್ರ ಸರಕಾರ ಮಾನಸಿಕ ಆರೋಗ್ಯ ಪ್ರಾಧಿಕಾರ ರಚಿಸಲಿದೆ. ಪ್ರತಿ ರಾಜ್ಯವೂ ಮಾನಸಿಕ ಆರೋಗ್ಯ ಪ್ರಾಧಿಕಾರವನ್ನು ಸ್ಥಾಪಿಸಿಕೊಳ್ಳಬೇಕು. ಎಲ್ಲ ಮಾನಸಿಕ ಆರೋಗ್ಯ ಚಿಕಿತ್ಸಾಲಯಗಳು, ಮನೋವೈದ್ಯರು, ನರ್ಸ್‌ಗಳು ಮತ್ತು ಕಾರ್ಯಕರ್ತರು ಈ ಪ್ರಾಧಿಕಾರಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಮನೋರೋಗಿಗಳ ಹಕ್ಕುಗಳ ರಕ್ಷಣೆಗಾಗಿ ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ದೇಶದ ಶೇ. 7ರಷ್ಟು ಜನರು ಒಂದಿಲ್ಲೊಂದು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆತ್ಮಹತ್ಯೆ ಪ್ರಮಾಣ ಕಳವಳಕಾರಿಯಾಗಿ ಹೆಚ್ಚಾಗಲು ಮಾನಸಿಕ ರೋಗಗಳೇ ಮೂಲಕಾರಣ. ಜನರ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಮಗ್ರ ಶಾಸನದ ಅಗತ್ಯವಿದೆ ಎನ್ನುವುದು ಸತ್ಯ. ಇದೇ ವೇಳೆ ಮನೋರೋಗಿಗಳನ್ನು ನೋಡುವ ಜನರ ದೃಷ್ಟಿಯೂ ಬದಲಾಗುವ ಅಗತ್ಯವಿದೆ. ಮನೋವೈದ್ಯರಲ್ಲಿ ಹೋಗುವುದೇ ಅವಮಾನ ಎಂಬ ಭಾವನೆ ದೂರವಾಗಬೇಕು. ಮನೋರೋಗಿಗಳನ್ನು ಕೂಡಿ ಹಾಕಿ ಹಿಂಸಿಸುವ ಕ್ರೂರ ಮನೋಧರ್ಮವನ್ನು ಬಿಡಬೇಕು. ಮನೋರೋಗವೂ ಇತರ ರೋಗಗಳಂತೆ ಗುಣವಾಗುತ್ತದೆ. ಎಲ್ಲ ಮನೋರೋಗಗಳು ಹುಚ್ಚು ಅಲ್ಲ ಎನ್ನುವ ಅರಿವು ಮೂಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next