Advertisement

ಮಹಾ ಸಾಧಕಿ ಮಾನಸಿ ಜೋಶಿ; ಕಾಲು ಕಳೆದುಕೊಂಡರೂ ಆತ್ಮವಿಶ್ವಾಸ ಅಡ್ಡಿಯಾಗಲಿಲ್ಲ

08:16 PM Feb 28, 2021 | Team Udayavani |

ಚಾಂಪಿಯನ್‌ಗಳ ಬಗ್ಗೆ ಬರೆಯುವಾಗ, ಓದುವಾಗ ಯಾವಾಗಲೂ ರೋಮಾಂಚನಗೊಳ್ಳುತ್ತೇವೆ. ಎಲ್ಲರಿಗೂ ಕಾಲಿಡಲಾಗದ, ಏರುವ ಕನಸನ್ನೂ ಕಾಣಲಾಗದ ಸಾಧನೆಯ ಗೌರಿಶಂಕರವನ್ನು ಏರಿ ಗೆಲುವಿನ ಬಾವುಟ ಹಾರಿಸುವ ಧೀಮಂತಿಕೆ ಇರುವ ಅಪರೂಪದ ವ್ಯಕ್ತಿಗಳವರು.

Advertisement

ಈ ಸಾಧಕರಲ್ಲೂ ತಮ್ಮದೇ ಆದ ವಿಶೇಷತೆಯುಳ್ಳವರು ಇದ್ದಾರೆ. ಎಲ್ಲ ಬಾಗಿಲುಗಳೂ ಮುಚ್ಚಿಹೋದರೂ ಧೈರ್ಯಗೆಡದೇ ಮುಚ್ಚಿದ ಕಿಟಕಿಯ ಪುಟ್ಟ ಸಂದಿಯೊಂದರಿಂದ ತೂರಿಬರುವ ಬೆಳಕಿನಕೋಲನ್ನೇ ಏಣಿಯಾಗಿಸಿಕೊಂಡು ಆಗಸ ಮುಟ್ಟಿದ ಅಸಮಾನ್ಯರವರು. ಸೋಲಿನ, ಸಂಕಟದ, ಅಪಮಾನದ ಸುಳಿ ತಮ್ಮನ್ನು ಆಪೋಶನ ತೆಗೆದುಕೊಳ್ಳುವ ಕೊನೆಯ ಗಳಿಗೆಯಲ್ಲೂ ಸೋಲಿಗೆ ಸಾವಿಗೆ ಸೆಡ್ಡು ಹೊಡೆದು ಜಗತ್ತನೇ ಬೆರಗಾಗುವಂತೆ ಈಜಿ ದಡ ಸೇರಿದವರಿದ್ದಾರೆ.

ಇಂಥ ಸಾಧಕರ ಕುರಿತು ಯೋಚಿಸುವಾಗಲೆಲ್ಲ ಭಾರತದ ಮಾನಸಿ ಜೋಶಿ ನೆನಪಾಗುತ್ತಾಳೆ. ಸಾಧನೆಗೆ ಯಾವುದೇ ತೊಂದರೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ಹುಡುಗಿಯೇ ಉದಾಹರಣೆ. ಮನಸ್ಸಿದ್ದರೆ ಮಾರ್ಗವಿದೆ ಎಂಬ ನಾಣ್ನುಡಿಯಂತೆ ಬ್ಯಾಡ್ಮಿಂಟನ್‌ನಲ್ಲಿ ಮಹತ್ವದ ಸಾಧನೆ ಮಾಡಬೇಕೆಂಬ ಅಪಾರ ತುಡಿತ ಹೊಂದಿದ್ದ ಅವಳ ಕನಸುಗಳಿಗೆ ಅಡ್ಡಿಯಾಗಿದ್ದು ಆ ಅಪಘಾತ. ಕಾಲು ಕಳೆದುಕೊಂಡರೂ ಆತ್ಮ ವಿಶ್ವಾಸವನ್ನು ಹಾಗೆಯೇ ಉಳಿಸಿಕೊಂಡರು. ತನ್ನ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿಸಿದ ಆಕೆ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭವಿಷ್ಯದ ಬೆಳಕು ಕಂಡರು. ಇದು ಮಾನಸಿ ಜೋಷಿಯ ಸಾಧನೆಯ ಕತೆ.

2019ರಲ್ಲಿ ಬಿಡಬ್ಲ್ಯುಎಫ್ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದ ಮಾನಸಿ ಅವರ ಸಾಧನೆಗೆ ಮತ್ತೂಂದು ಗರಿ ಮೂಡಿದೆ. ಭವಿಷ್ಯದ ಪೀಳಿಗೆಯ ನಾಯಕಿ (Next Generation Leaders) ಎಂದು ಅವರನ್ನು ಪ್ರತಿಷ್ಠಿತ ಟೈಮ್‌ ನಿಯತಕಾಲಿಕೆ ಗುರುತಿಸಿದೆ.

Advertisement

ಈ ವಿಷಯವನ್ನು ಮಾನಸಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ನಾನೊಂದು ದಿನ ಟೈಮ್‌ ನಿಯತಕಾಲಿಕೆಯ ಮುಖಪುಟದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಕನಸಲ್ಲಿಯೂ ಅಂದುಕೊಂಡಿರಲಿಲ್ಲ. ಇದೊಂದು ದೊಡ್ಡ ಗೌರವ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

31 ವರ್ಷದ ಮಾನಸಿ, 2019ರಲ್ಲಿ ಸ್ವಿಡ್ಜರ್‌ಲ್ಯಾಂಡ್‌ನ‌ಲ್ಲಿ ನಡೆದ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ ಎಸ್‌ಎಲ್‌-3 ಫೈನಲ್‌ ವಿಭಾಗದಲ್ಲಿ ವಿಶ್ವದ ಅಗ್ರಕ್ರಮಾಂಕದ ಆಟಗಾರ್ತಿ, ಭಾರತದವರೇ ಆದ ಪಾರುಲ್‌ ಪಾರ್ಮಾರ್‌ ಅವರನ್ನು ಮಣಿಸಿದ್ದರು. ಆದರೆ ಅದೇ ವರ್ಷ ಪಿ.ವಿ. ಸಿಂಧು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಸುದ್ದಿಯಾಗಿದ್ದರು. ಇದರಿಂದಾಗಿ ಮಾನಸಿ ಅವರ ಸಾಧನೆಗೆ ಎಲ್ಲೂ ಪ್ರಚಾರ ಸಿಕ್ಕಿರಲಿಲ್ಲ.

 ಬಿಡಬ್ಯುಎಫ್ ಪ್ಯಾರಾ ಬ್ಯಾಡ್ಮಿಂಟನ್‌ ವಲ್ಡ್‌ ಚಾಂಪಿಯನ್‌ಶಿಪ್‌ 
2019ರಲ್ಲಿ ಚಿನ್ನ
2017ರಲ್ಲಿ ಕಂಚು
2015ರಲ್ಲಿ ಬೆಳ್ಳಿ

02
ವಿಶ್ವ ರ್‍ಯಾಂಕಿಂಗ್‌

ಏಶ್ಯನ್‌ ಚಾಂಪಿಯನ್‌ಶಿಪ್‌ 2016ರಲ್ಲಿ ಕಂಚು

ಇಂಟರ್‌ನ್ಯಾಶನಲ್‌ ಚಾಂಪಿಯನ್‌ಶಿಪ್‌ 2018ರಲ್ಲಿ ಕಂಚು

ಏಶ್ಯನ್‌ ಪ್ಯಾರ ಗೇಮ್ಸ್‌ 2018ರಲ್ಲಿ ಕಂಚು

ಆರು ವರ್ಷದವರಿದ್ದಾಗಲೇ ಬ್ಯಾಡ್ಮಿಂಟನ್‌ ರ್ಯಾಕೆಟ್‌ ಹಿಡಿದ ಮಾನಸಿ. 2010ರಲ್ಲಿ ಪದವಿ ಮುಗಿಸಿ ಸಾಫ್ಟ್ವೇರ್‌ ಎಂಜಿನಿಯರಿಂಗ್‌ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಅಂತರ್‌ ಸಂಸ್ಥೆಗಳ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಮಿಂಚತೊಡಗಿದರು. ಆದರೆ 2011ರ ಡಿಸೆಂಬರ್‌ನಲ್ಲಿ ನಡೆದ ಅಪಘಾತವೊಂದರಲ್ಲಿ ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಅಫ‌ಘಾತಕ್ಕೆ ತುತ್ತಾಗಿ ಅವರ ಎಡಗಾಲು ಊನವಾಯಿತು.

45 ದಿನಗಳ ಕಾಲ ಆಸ್ಪತ್ರೆ ವಾಸದ ಬಳಿಕ ಕೃತಕ ಕಾಲು ಅಳವಡಿಸಿಕೊಂಡ ಮಾನಸಿ, ಗುಣಮುಖರಾಗಲು ಮೂರು ತಿಂಗಳು ಹಿಡಿಯಿತು. ಇಷ್ಟೆಲ್ಲ ಸಂಭವಿಸಿದರು ಎದೆಗುಂದದ ಮಾನಸಿ ಬ್ಯಾಡ್ಮಿಂಟನ್‌ನಲ್ಲಿ ನಾನೇನಾದರು ಸಾಧನೆ ಮಾಡಲೇಬೇಕೆಂಬ ಛಲದೊಂದಿಗೆ ಮುನ್ನುಗ್ಗಿ ಅಂತರ್‌ ಸಂಸ್ಥೆಗಳ ಪ್ಯಾರಾ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಕಣಕ್ಕಿಳಿಯತೊಡಗಿದರು.

ಬಳಿಕ ಗೋಪಿಚಂದ್‌ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿ ಹಂತಹಂತವಾಗಿ ಯಶಸ್ಸಿನ ಶಿಖರ ಏರತೊಡಗಿ ಬಿಡಬ್ಲ್ಯುಎಫ್ ವಿಶ್ವ ಚಾಂಪಿನ್‌ಶಿಪ್‌ ಟೂರ್ನಿಯಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕಕ್ಕೆ ಮುತ್ತಿಕ್ಕಿ ಇದೀಗ 2021ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸುವತ್ತ ಚಿತ್ತ ನೆಟ್ಟಿದ್ದಾರೆ.

ಅಭಿಜಿತ್‌ ಬಿ.ಸಿ., ಕೆವಿಜಿ ಎಂಜಿನಿಯರಿಂಗ್‌ ಕಾಲೇಜು, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next