Advertisement

ಉಳಿಯಿತು 8ನೇ ಶತಮಾನದ ಬಾವಿ!ಬಾವಿಗೆ ಕಸ ಎಸೆಯುವುದರ ವಿರುದ್ಧ ಪ್ರತಿಭಟಿಸಿದ್ದ ನಾಗರಿಕರು

07:43 PM Jul 17, 2022 | Team Udayavani |

ಮಲಪ್ಪುರಂ: ಕೇರಳದ ಹಳೆಯ ರಾಜಮನೆತನಗಳಲ್ಲಿ ಒಂದಾದ ಕೊಚ್ಚಿಯ ಪೆರುಂಬದಪ್ಪು ಸ್ವರೂಪಮ್‌ಗೆ ಸೇರಿದ 8ನೇ ಶತಮಾನದ ಬಾವಿಯೊಂದನ್ನು ಭಾರತೀಯ ಪುರಾತತ್ವ ಇಲಾಖೆ ರಕ್ಷಿಸಿದೆ.

Advertisement

ಪೆರಂಬುದಪ್ಪು ಸ್ವರೂಪಮ್‌ ರಾಜಮನೆತನಕ್ಕೆ ಸಂಬಂಧಿಸಿದಂತೆ ಉಳಿದ ಒಂದೇ ಒಂದು ಸ್ಮಾರಕವೆಂದರೆ ಈ ಬಾವಿ ಮಾತ್ರ. ಇದನ್ನು “ಪೆರುಂಬದಪ್ಪು ವೆಲಿಯೆಕಿನಾರ್‌’ ಎಂದೂ ಕರೆಯುತ್ತಾರೆ. ಇದಕ್ಕೆ ಕಸ ತುಂಬಲು ಹೊರಟ ಕೆಲವರ ವಿರುದ್ಧ ಸ್ಥಳೀಯರು ಹೋರಾಟ ನಡೆಸಿದ್ದರು. ಇದರ ಫ‌ಲವೆಂಬಂತೆ, ಮಲಪ್ಪುರಂ ಜಿಲ್ಲೆಯ ವನ್ನೇರಿ ಸನಿಹದ ಈ ಬಾವಿ ಉಳಿದುಕೊಂಡಿದೆ. ಇದನ್ನು ಮೂಲಸ್ವರೂಪದಲ್ಲೇ ಉಳಿಸಲು ಭಾರತೀಯ ಪುರಾತತ್ವ ಇಲಾಖೆ 4 ವರ್ಷ, 4 ತಿಂಗಳುಗಳ ಕಾಲ ಶ್ರಮಿಸಿದೆ.

ಈ ಬಾವಿಯನ್ನು ಮೂಲಸ್ವರೂಪಕ್ಕೆ ತರಲು ತಮಿಳುನಾಡಿನ ನಿಪುಣ ಕೆಲಸಗಾರರನ್ನು ಕರೆಸಿ, ಉತ್ಖನನ ಮಾಡಿಸಲಾಗಿದೆ. ಬಾವಿಯ ಪ್ರಾಚೀನತೆಗೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಜೆಸಿಬಿ, ಕ್ರೇನ್‌ಗಳನ್ನು ಬಳಸಿಲ್ಲ. ಉತ್ಖನನದ ವೇಳೆ ರಾಜಮನೆತನಕ್ಕೆ ಸೇರಿದ ಮಹತ್ವದ ವಸ್ತುಗಳೇನೂ ದೊರಕಿಲ್ಲ.

ವಸ್ತುಸ್ಥಿತಿಯಲ್ಲಿ ಈ ಬಾವಿಯಿಂದ ಜನರು ನೀರು ತೆಗೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಬಾವಿಗೆ ಸನಿಹದಲ್ಲಿ ಜಮೀನಿನ ಮಾಲಿಕರೊಬ್ಬರು ಇದಕ್ಕೆ ಕಸ ತುಂಬಲು ಯತ್ನಿಸಿದ್ದರು. ತಕ್ಷಣ ಜನ ಪ್ರತಿಭಟಿಸಿದರು. ಇದರ ಫ‌ಲವಾಗಿ 2015ರಲ್ಲಿ ಬಾವಿಯನ್ನು ಪ್ರಾಚೀನ ಸ್ಮಾರಕವೆಂದು ಪುರಾತತ್ವ ಇಲಾಖೆ ಘೋಷಿಸಿತು. 2018ರಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು.

Advertisement

Udayavani is now on Telegram. Click here to join our channel and stay updated with the latest news.

Next