ಮುಂಬಯಿ:ಬಾಲಿವುಡ್ ಬಿಗ್ ಬಿ, ಮೇರು ನಟ ಅಮಿತಾಭ್ ಬಚ್ಚನ್ ಇಂದು (ಅ11) ತಮ್ಮ 80ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಲಕ್ಷಾಂತರ ಮಂದಿ ಅಭಿಮಾನಿಗಳು, ಗಣ್ಯರು ಅವರು ಹುಟ್ಟುಹಬ್ಬಕ್ಕೆ ಶುಭಕೋರಿ,ಒಳಿತು ಬಯಸುತ್ತಿದ್ದಾರೆ.
ಸಿನಿಮಾಗಳಲ್ಲಿ ಹೇಗೆ ತಮ್ಮ ನಟನೆಯಿಂದ ಮನ ಗೆದ್ದಿದ್ದಾರೋ, ಹಾಗೇ ಅಮಿತಾಭ್ ನಿಜ ಜೀವನದಲ್ಲೂ ಅವರದು ಅದ್ಭುತ ಮತ್ತು ಸಹೃದಯಿ ವ್ಯಕ್ತಿತ್ವ. ಅಮಿತಾಭ್ ಬಗ್ಗೆ ನಿಮಗೆ ತಿಳಿಯದ ಒಂದಟ್ಟು ಸಂಗತಿಗಳು ಇಲ್ಲಿವೆ.
ನೀವು ಕಳುಹಿಸಿದ ಸಂದೇಶ ತಪ್ಪಾಗಿದ್ದರೆ.. : ಒಂದು ವೇಳೆ ನಿಮಗೆ ಒಂದು ದಿನ ಅಮಿತಾಭ್ ಅವರಿಗೆ ವೈಯಕ್ತಿಕವಾಗಿ ಮೆಸೇಜ್ ಮಾಡುವ ಅವಕಾಶ ಸಿಕ್ಕರೆ. ಖುಷಿಯಲ್ಲಿ ನಿಮ್ಮ ಮನಸ್ಸಿನ ಮಾತನ್ನು ಟೈಪ್ ಮಾಡಿ ಕಳುಹಿಸುತ್ತೀರಿ. ಈ ಖುಷಿಯ ಭರದಲ್ಲಿ ನಿಮ್ಮ ಮೆಸೇಜ್ ನಲ್ಲಿ ಅಕ್ಷರ ದೋಷವಿದ್ದರೆ. ನಿಮಗೆ ಅಚ್ಚರಿ ಆಗುವಂತೆ ಅಮಿತಾಭ್ ಅವರು ನಿಮ್ಮ ಮೆಸೇಜ್ ನ್ನು ನಿಮಗೆಯೇ ಕಳುಹಿಸುತ್ತಾರೆ. ಆದರೆ ಅಲ್ಲಿ ಮೊದಲಿದ್ದ ತಪ್ಪುಗಳಿರುವುದಿಲ್ಲ. ವ್ಯಾಕರಣವೂ ಸರಿಯಾಗಿಯೇ ಇರುತ್ತದೆ. ಈ ರೀತಿ ಎಸ್ ಎಂ ಎಸ್ ಗೆ ರಿಪ್ಲೈ ಮಾಡುವಾಗ ಅಮಿತಾಭ್ ತಾವಾಗಿಯೇ ವ್ಯಾಕರಣ ತಿದ್ದಿ, ರಿಪ್ಲೈ ಮಾಡುತ್ತಾರೆ.
ನೀವು ತಡವಾಗಬಹುದು ಬಿಗ್ ಬಿ ಅಲ್ಲ..: ಸಾಮಾನ್ಯವಾಗಿ ಒಂದು ಸ್ಟಾರ್ ಅಥವಾ ಸೆಲೆಬ್ರೆಟಿಗಳನ್ನು ನಾವು ಇಂಟರ್ ವ್ಯೂ ಮಾಡಬೇಕಂದರೆ ಅವರಿಗಾಗಿ ತುಂಬಾ ಕಾಯುತ್ತೇವೆ. ಅವರಿಗಾಗಿ ಗಂಟೆಗಟ್ಟಲೇ ಕಾದ ಮೇಲೆ ಅವರು ಬಂದು ಇಂಟರ್ ವ್ಯೂ ನೀಡುತ್ತಾರೆ. ಆದರೆ ಅಮಿತಾಭ್ ಕಾಯಿಸುವಂತಹ ವ್ಯಕ್ತಿಯಲ್ಲ. ಅವರು ನೀವು ಕೊಟ್ಟ ಸಮಯಕ್ಕೆ ಮೊದಲೇ ಬಂದು ಕೂರುವವರು. ಸಿನಿಮಾ ಪ್ರಚಾರ, ಸಂವಾದ, ಟಿವಿ ಕಾರ್ಯಕ್ರಮ ಯಾವುದೇ ಇರಲಿ ಅಮಿತಾಭ್ ಆನ್ ದಿ ಟೈಮ್ ಇರುವ ವ್ಯಕ್ತಿ.
ರಾಶಿಗಟ್ಟಲೇ ಪೆನ್ ಸಂಗ್ರಹಕಾರ: ನಾವು ಸೆಲೆಬ್ರಿಟಿಗಳ ಒಂದು ಆಟೋಗ್ರಾಫ್ ಪಡೆಯಲು ಮುಗಿಬೀಳುತ್ತೇವೆ. ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ ಸೇರಿದಂತೆ ಹಲವರಿಗೆ ಅಮಿತಾಭ್ ಕೈಬರಹದಿಂದ ಪತ್ರ, ಹೂಗಳನ್ನು ಕೊಟ್ಟಿದ್ದಾರೆ. ಈ ಕೈಬರಹಗಳು ಬಂದಿರುವುದು ಅವರ ಸ್ವಂತ ಪೆನ್ ಗಳಿಂದ. ಪೆನ್ ಅಂದರೆ ಒಂದರೆಡರು ಪೆನ್ ಅಲ್ಲ. ಆ ಪೆನ್ ಗಾಗಿ ಒಂದು ಶೆಲ್ಫ್ ಪ್ರತ್ಯೇಕವಾಗಿಯೇ ಇದೆ. ಅಮಿತಾಭ್ ಯಾವಗೆಲ್ಲಾ ದೇಶ- ವಿದೇಶಕ್ಕೆ ತಿರುಗಾಟಕ್ಕೆ ಹೋಗುತ್ತಾರೋ, ಆ ವೇಳೆ ಅವರು ಅಲ್ಲಿಂದ ತಮಗಿಷ್ಟವಾದ ಪೆನ್ ತರುತ್ತಾರೆ. ಆ ಪೆನ್ ಗಳನ್ನು ಅವರು ಬಿಟ್ಟು ಬೇರೆ ಯಾರೂ ಉಪಯೋಗ ಮಾಡುವಂತಿಲ್ಲ. ವರದಿವೊಂದರ ಪ್ರಕಾರ ಅಮಿತಾಭ್ ಒಂದೊಂದು ಸಮಾರಂಭಕ್ಕೆ ಹೋಗುವಾಗ ಒಂದೊಂದು ಪೆನ್ ತೆಗೆದುಕೊಂಡು ಹೋಗುತ್ತಾರಂತೆ.
ಮೊದಲು ಬ್ಲಾಗ್ ಶುರು ಮಾಡಿದ ಬಾಲಿವುಡ್ ಸೂಪರ್ ಸ್ಟಾರ್:ವ್ಯಾಟ್ಸಪ್, ಟ್ವಿಟರ್, ಇನ್ಸ್ಟಾಗ್ರಾಮ್ ಬರುವ ಮುನ್ನ ಅತೀ ಹೆಚ್ಚು ಬಳಕೆಯಲ್ಲಿದದ್ದು ಬ್ಲಾಗ್ ಗಳು ಹಾಗೂ ಮೇಲ್. ಬ್ಲಾಗ್ ನಲ್ಲಿ ನಮ್ಮ ಮನಸ್ಸಿನಲ್ಲಿದ್ದ ಭಾವನೆಗಳು ಬರೆಯಬಹುದಿತ್ತು. ಬಿಗ್ ಬಿ 2008 ಏಪ್ರಿಲ್ 18 ರಂದು ತನ್ನ ಮೊದಲ ಬ್ಲಾಗ್ ಬರೆದಿದ್ದರು. ಆ ಕಾಲದಲ್ಲಿ ಬ್ಲಾಗ್ ಹಾಗೂ ಸೋಶಿಯಲ್ ಮೀಡಿಯಾಕ್ಕೆ ಎಂಟ್ರಿಯಾದ ಮೊದಲ ಸೂಪರ್ ಸ್ಟಾರ್ ಅಮಿತಾಭ್ ಆಗಿದ್ದರು. ತಾವಾಗಿಯೇ ಎಲ್ಲಾ ಬ್ಲಾಗ್ ಗಳನ್ನು ಬರೆದು ಪೋಸ್ಟ್ ಮಾಡುತ್ತಿದ್ದರು. ಬ್ಲಾಗ್ ನಮಗೆಲ್ಲರಿಗೂ ಸಾಧ್ಯವಾದಷ್ಟು ಮುಕ್ತವಾಗಿ ಸಂವಹನ ನಡೆಸಲು ಅವಕಾಶವನ್ನು ನೀಡುತ್ತದೆ ಮತ್ತು ಈ ಬ್ಲಾಗ್‌ನಂತೆ ಸುಲಭವಾಗಿ ತಲುಪಲು ಸಾಧ್ಯವಾಗದ ಇನ್ನೊಂದು ಮಾಧ್ಯಮಕ್ಕಾಗಿ ನಾವು ಕಾಯಬೇಕಾಗಿಲ್ಲ ಅಥವಾ ಮಾರ್ಗದರ್ಶನ ಮಾಡಬೇಕಾಗಿಲ್ಲ ಎಂದು ಬ್ಲಾಗ್ ನಲ್ಲಿ ಬರೆದಿದ್ದರು.
ಸಾಧನೆಯನ್ನು ಜೋಡಿಸಿಟ್ಟ ಬಿಗ್ ಬಿ:ಅಮಿತಾಭ್ ಬಚ್ಚನ್ ಕಷ್ಟಪಟ್ಟು ಬೆಳೆದು ಬಂದ ಸೂಪರ್ ಸ್ಟಾರ್. ಸಾಧನೆ ಒಂದೆರೆಡು ಸಿನಿಮಾಗಳಿಂದ ಬಂದದಲ್ಲ.ಕಲೆಯನ್ನು ಆರಾಧಿಸಿ, ಅದನ್ನು ಗೌರವಿಸಿ ಬಿಗ್ ಬಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದು. ನಿಮಗೆ ಗೊತ್ತಾ ಅಮಿತಾಭ್ ಇಂದಿಗೂ ಅವರ ಸಾಧನೆ, ಸಂದರ್ಶನ, ವೃತ್ತಿ ಬದುಕಿನ ಅದ್ಭುತ ಕ್ಷಣಗಳ ಸುದ್ದಿ, ಮ್ಯಾಗಜಿನ್ ಫೋಟೋ, ಎಲ್ಲವನ್ನೂ ಕತ್ತರಿಸಿ ದಾಖಲಾಗಿಸಿ, ಒಂದು ಫೈಲ್ ನಲ್ಲಿಡುತ್ತಾರೆ. ಈ ಪೇಪರ್ ಕಟಿಂಗ್, ಕ್ಲಿಪಿಂಗ್ ಗಳನ್ನು ಕ್ಯಾಲೆಂಡರ್ ವರ್ಷದ ಅನುಸರ ಡಾಕ್ಯುಮೆಂಟ್ ಆಗಿ ಬಚ್ಚನ್ ಆಫೀಸ್ ನಲ್ಲಿಟ್ಟಿದ್ದಾರೆ.