ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯ, ಮೂರು ಆಯುರ್ವೇದ ಕಾಲೇಜುಗಳು ದೇಶದ ಟಾಪ್ 10 ಆಯುರ್ವೇದ ಕಾಲೇಜುಗಳ ಪಟ್ಟಿಯಲ್ಲಿ ಎ ಗ್ರೇಡ್‌ನೊಂದಿಗೆ ಸ್ಥಾನ ಪಡೆದಿವೆ.
ಉಡುಪಿ, ಹಾಸನ ಮತ್ತು ಬೆಂಗಳೂರಿನ ಸಂಸ್ಥೆಗಳು 2024- 2025ನೇ ಸಾಲಿಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (QCI), ನ್ಯಾಷನಲ್ ಅಕ್ರಿಡಿಟೇಶನ್ ಬೋರ್ಡ್ ಫಾರ್ ಎಜುಕೇಶನ್ ಆ್ಯಂಡ್ ಟ್ರೈನಿಂಗ್ (NABET) ಹಾಗೂ ಮೆಡಿಕಲ್ ಆಸೆಸ್ಮೆಂಟ್ ಆ್ಯಂಡ್ ರೇಟಿಂಗ್ ಬೋರ್ಡ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ (MARBISM) ಸಂಸ್ಥೆಗಳಿಂದ “ಎ’ ಗ್ರೇಡ್ ಸಹಿತ ರಾಷ್ಟ್ರಮಟ್ಟದಲ್ಲಿ ಕ್ರಮವಾಗಿ 2, 4 ಮತ್ತು 9ನೇ ರ್‍ಯಾಂಕ್ ಪಡೆದುಕೊಂಡಿವೆ.
ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ (SDM College of Ayurveda, Hospital & Research Centre, Kuthpady, Udupi) ದ್ವಿತೀಯ ರ್‍ಯಾಂಕ್, ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ (SDM College of Ayurveda & Hospital, Hassan) ನಾಲ್ಕನೇ ರ್‍ಯಾಂಕ್ ಹಾಗೂ ಬೆಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಸಂಸ್ಥೆ ಮತ್ತು ಆಸ್ಪತ್ರೆ (SDM Institute of Ayurveda & Hospital, Bengaluru) 9ನೇ ರ್‍ಯಾಂಕ್ ಪಡೆದುಕೊಂಡಿದೆ.
ದೇಶದ 10 ಕಾಲೇಜುಗಳ ಪಟ್ಟಿ ಯಲ್ಲಿ 4 ಸ್ಥಾನಗಳು ಕರ್ನಾಟಕಕ್ಕೆ ಲಭಿಸಿದ್ದು, ಆ ಪೈಕಿ 3 ಸಂಸ್ಥೆಗಳು ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯದ್ದಾಗಿವೆ.