Advertisement

10 ರೂ.ಗೆ ಊಟ ನೀಡುವ ಸರ್ಕಾರಿ ವೈದ್ಯ

12:40 PM Apr 29, 2022 | Team Udayavani |

ಶಿವಮೊಗ್ಗ: ಅದು ಇಂದಿರಾ ಕ್ಯಾಂಟೀನ್‌ ಅಲ್ಲ. ಅಪ್ಪ-ಅಮ್ಮ ಕ್ಯಾಂಟೀನೂ ಅಲ್ಲ. ಆದರೂ ಅಲ್ಲಿ 10 ರೂ.ಗೆ ಹೊಟ್ಟೆ ತುಂಬಾ ಊಟ ಸಿಗುತ್ತದೆ. ಹಾಗಂತ ಇದು ಯಾವುದೋ ಸಂಘ-ಸಂಸ್ಥೆಯವರು ನಡೆಸುವ ಛತ್ರವೂ ಅಲ್ಲ. ಸರ್ಕಾರಿ ವೈದ್ಯರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ನಡೆಸುವ ಅನ್ನದಾಸೋಹದ ಸೇವೆ!

Advertisement

ಆಸ್ಪತ್ರೆಗೆ ಬರುವ ಗ್ರಾಮೀಣ ಭಾಗದ ಜನರ ಕಷ್ಟ ಅರಿತ ಶಿವಮೊಗ್ಗ ತಾಲೂಕಿನ ಹೊಳಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವೇಣುಗೋಪಾಲ್‌.ಕೆ.ಎಲ್‌. ತಮ್ಮ ಸ್ವಂತ ಖರ್ಚಿನಲ್ಲಿ ಕಡಿಮೆ ದರಕ್ಕೆ ಆಹಾರ ಒದಗಿಸುತ್ತಿದ್ದಾರೆ. ಅದಕ್ಕಾಗಿ ಅವರು ಪಡೆಯುವುದು 10 ರೂ. ಮಾತ್ರ.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಜನ ಬಡ, ಮಧ್ಯಮ ವರ್ಗದವರಾಗಿದ್ದು ಊಟ, ತಿಂಡಿಗೂ ಯೋಚನೆ ಮಾಡುತ್ತಾರೆ. ಒಬ್ಬ ರೋಗಿ ಜತೆ ಇಬ್ಬರು, ಮೂವರು ಬರುತ್ತಾರೆ. ಮಧ್ಯಾಹ್ನ ಊಟಕ್ಕೆ 150, 200 ರೂ. ಖರ್ಚು ಮಾಡುತ್ತಾರೆ. ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ 20 ಕಿಮೀ ದೂರದಲ್ಲಿರುವ ಈ ಆಸ್ಪತ್ರೆಗೆ ಹೆರಿಗೆ, ಇತರೆ ಚಿಕಿತ್ಸೆಗಳಿಗೆ ಪಕ್ಕದ ದಾವಣಗೆರೆ ಜಿಲ್ಲೆಯ ತಾಲೂಕುಗಳಾದ ಚನ್ನಗಿರಿ, ಹೊನ್ನಾಳಿ, ನ್ಯಾಮತಿಯಿಂದಲೂ ಜನ ಬರುತ್ತಾರೆ.

ರೋಗಿಗಳ ಜತೆ ಒಬ್ಬರು, ಇಬ್ಬರು ಇರುತ್ತಾರೆ. ಹೆರಿಗೆ ಆದಾಗ ನೋಡಲು 10ಕ್ಕೂ ಹೆಚ್ಚು ಜನ ಬಂದೇ ಬರುತ್ತಾರೆ. ಚಿಕಿತ್ಸೆಗೆ ಪರದಾಡುವ ಕುಟುಂಬಗಳು ಬಂದವರಿಗೆಲ್ಲ ಊಟೋಪಚಾರ ನೋಡಿಕೊಳ್ಳಬೇಕು. ಇದನ್ನೆಲ್ಲ ಗಮನಿಸಿದ ಡಾ| ವೆಣುಗೋಪಾಲ್‌ 10 ರೂ.ಗೆ ಊಟ ಕೊಡುವ ನಿರ್ಧಾರ ಮಾಡಿದರು. ಅದು ಈಗ ರೋಗಿಗಳು ಹಾಗೂ ಅವರ ಸಂಬಂಧಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ವೈದ್ಯರ ಆಸಕ್ತಿಗೆ ಆಸ್ಪತ್ರೆ ಸಿಬ್ಬಂದಿ ಕೂಡ ಸಾಥ್‌ ನೀಡಿದ್ದಾರೆ. ಸಣ್ಣಪುಟ್ಟ ದಿನಸಿಗಳನ್ನು ಸ್ವಂತ ಖರ್ಚಿನಲ್ಲಿ ಕೊಂಡು ತಂದು ಉಣ ಬಡಿಸುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದ ಊರಿನ ಮುಖಂಡರು ವೈದ್ಯರ ಸೇವೆಗೆ ಸಾಥ್‌ ನೀಡಲು ಮುಂದಾಗಿದ್ದಾರೆ.

Advertisement

ತಿಂಗಳಿಗೆ 10ರಿಂದ 15 ಸಾವಿರ

10 ರೂ.ಗೆ ಅನ್ನ, ಸಾಂಬಾರ್‌, ಉಪ್ಪಿನಕಾಯಿ ನೀಡಲಾಗುತ್ತಿದೆ. ಪ್ರತಿದಿನ ಆಸ್ಪತ್ರೆ ಸಿಬ್ಬಂದಿ ಅಲ್ಲದೇ 30ಕ್ಕೂ ಹೆಚ್ಚು ಜನ ಹೊರ ರೋಗಿಗಳ ಹಾಗೂ ಅವರ ಕಡೆಯವರು ಇರುತ್ತಾರೆ. ಹೆರಿಗೆ ಸಂದರ್ಭದಲ್ಲಿ 60 ಮಂದಿವರೆಗೂ ಬರುತ್ತಾರೆ. ಅವರೆಲ್ಲರಿಗೂ 10 ರೂ.ಗೆ ಅನ್ನ ಸಾಂಬಾರ್‌ ವ್ಯವಸ್ಥೆ ಮಾಡಲಾಗುತ್ತದೆ. ಮಧ್ಯಾಹ್ನ ಆಸ್ಪತ್ರೆ ಸಿಬ್ಬಂದಿ ಊಟ ತಯಾರಿಸಿಕೊಳ್ಳುತ್ತಿದ್ದರು. ಈಗ ಅಲ್ಲೇ ಉಳಿದವರಿಗೂ ಅಡುಗೆ ಮಾಡಿಕೊಳ್ಳಲಾಗುತ್ತಿದೆ. 10 ರೂ. ಊಟ ಎಂದು ಕಳಪೆ ದಿನಸಿ ಬಳಸಿ ಊಟ ತಯಾರಿಸುತ್ತಿಲ್ಲ. ಉತ್ತಮ ಗುಣಮಟ್ಟದ ಅಕ್ಕಿ, ತರಕಾರಿ, ಬೇಳೆ ದಿನಸಿ ಒದಗಿಸಲಾಗುತ್ತಿದೆ. ಅದೇ ಊಟವನ್ನು ಎಲ್ಲರೂ ಸೇವಿಸುವುದು ಇಲ್ಲಿನ ವಿಶೇಷ.

ತಂದೆಯೇ ಸ್ಫೂರ್ತಿ: ಸಮಾಜವಾದಿ ಚಳವಳಿಯಲ್ಲಿ ಕಾಣಸಿಗುವ ಹೆಸರೇ ಕೋಣಂದೂರು ಲಿಂಗಪ್ಪ. ಅವರು ಒಮ್ಮೆ ವಿಧಾನಸಭೆ ಪ್ರವೇಶ ಮಾಡಿದ್ದರು. ನಂತರ ಎಂಎಲ್‌ಸಿಯಾಗಿ ಕೂಡ ಸೇವೆ ಸಲ್ಲಿಸಿದ್ದರು. ಸಮಾಜವಾದಿ ಚಳವಳಿ, ವಿದ್ಯಾರ್ಥಿ ಚಳವಳಿ, ಕನ್ನಡ ಚಳವಳಿಯಲ್ಲಿ ಸಕ್ರಿಯವಾಗಿದ್ದರು. ಡಾ|ವೇಣುಗೋಪಾಲ್‌ ಅವರ ಪುತ್ರ. 4 ವರ್ಷದಿಂದ ಹೊಳಲೂರು ಪಿಎಚ್‌ಸಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ವೃತ್ತಿಯಿಂದ ಜನ ಮನ್ನಣೆ ಗಳಿಸಿದ್ದಾರೆ.

ಗ್ರಾಮೀಣ ಮಕ್ಕಳ, ಮಹಿಳೆಯರ ಕಷ್ಟ ಅರಿತು “ಕರುಣೆಯ ಬಾಗಿಲು’ ಎಂಬ ಯೋಜನೆ ಜಾರಿ ಮಾಡಿ ಇದರ ಮೂಲಕ ಹಳೇ ಪುಸ್ತಕ, ಬಟ್ಟೆ, ಆಟಿಕೆಗಳನ್ನು ಪೂರೈಸುತ್ತಿದ್ದಾರೆ. ಸರ್ಕಾರಿ ವೈದ್ಯರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜತೆಗೆ ಅತ್ಯಲ್ಪ ಮೊತ್ತಕ್ಕೆ ಹಸಿದವರಿಗೆ ಅನ್ನ ನೀಡುವ ಮೂಲಕ ಮಾದರಿ ಕಾರ್ಯ ಮಾಡುತ್ತಿದ್ದಾರೆ.

ತಿಂಗಳಿಗೆ 10 ರಿಂದ 15 ಸಾವಿರ ರೂ. ಖರ್ಚು ಬರುತ್ತಿದೆ. ದುಡಿಮೆಯಲ್ಲಿ ಶೇ.10ರಷ್ಟನ್ನು ಸಮಾಜ ಸೇವೆಗೆ ವಿನಿಯೋಗಿಸಬೇಕೆಂದು ನಿರ್ಧರಿಸಿದ್ದೇನೆ. ನನ್ನ ತಂದೆ ನನಗೆ ಬಡವರ ಸೇವೆ ಮಾಡುವಂತೆ ಪ್ರೇರಣೆ ನೀಡಿದರು. ಆರಂಭದಿಂದಲೂ ಗ್ರಾಮೀಣ ಭಾಗದಲ್ಲೇ ಕೆಲಸ ಮಾಡಿದ್ದೇನೆ. ಬಡವರಿಗೆ ಸೇವೆ ಮಾಡಿದ ತೃಪ್ತಿ ನನಗಿದೆ. ಎಲ್ಲ ಕೆಲಸಗಳಿಗೂ ಆಸ್ಪತ್ರೆ ಸಿಬ್ಬಂದಿ ಸಹಕಾರ ನೀಡಿದ್ದಾರೆ. -ಡಾ|ವೇಣುಗೋಪಾಲ್‌.ಕೆ.ಎಲ್‌., ವೈದ್ಯಾಧಿಕಾರಿ, ಹೊಳಲೂರು

ಪಿಎಚ್‌ಸಿ ಗ್ರಾಮೀಣ ಭಾಗದಲ್ಲಿ ಉತ್ತಮ ವೈದ್ಯಕೀಯ ಸೇವೆ ಜತೆ ಸಮಾಜ ಸೇವೆ ಕೂಡ ಮಾಡುತ್ತಿದ್ದಾರೆ. ದೂರದಿಂದ ಬಂದವರು, ರೋಗಿಗಳು, ಸಂಬಂಧಿಕರಿಗೆ ತುಂಬಾ ಅನುಕೂಲವಾಗಿದೆ. ನಾನು ಸಹ ಅಲ್ಲಿ ಹೋಗಿ ಊಟ ಮಾಡಿದ್ದೇನೆ. ಅತ್ಯಂತ ಉತ್ತಮ ಕಾರ್ಯ. -ಶಿವಾನಾಯ್ಕ, ಗ್ರೇಡ್‌1 ಕಾರ್ಯದರ್ಶಿ, ಹೊಳಲೂರು ಗ್ರಾಪಂ

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next