Advertisement

ಶಿರ್ತಾಡಿಯಲ್ಲಿ ಕಣ್ಣರಳಿಸಿದ ಸ್ವರ್ಣ ನಕ್ಷತ್ರ

09:45 AM Dec 24, 2019 | Team Udayavani |

ಮೂಡುಬಿದಿರೆ: ಶಿರ್ತಾಡಿಯ ಲೈಫ್‌ ಸರ್ವಿಸ್‌ ಸ್ಟೇಶನ್‌ ಎದುರಿನ ಬೃಹತ್‌ ಮರಕ್ಕೆ ತೂಗುಹಾಕಲಾದ ಸುಮಾರು ನೂರು ಕೆ.ಜಿ. ತೂಕದ ಬಂಗಾರದ ಬಣ್ಣದ “ಸ್ವರ್ಣ ನಕ್ಷತ್ರ’ ವೀಕ್ಷಕರ ಗಮನ ಸೆಳೆಯುತ್ತಿದೆ. ಕ್ರಿಸ್ಮಸ್‌ ಪ್ರಯುಕ್ತ ಶಿರ್ತಾಡಿ ಲೈಫ್‌ ಸೇವಾ ಸಂಸ್ಥೆಯು 6ನೇ ವರ್ಷದಲ್ಲಿ ಪ್ರಸ್ತುತಪಡಿಸಿರುವ ಈ ನಕ್ಷತ್ರವನ್ನು ನಿರ್ಮಿಸಿದವರು ನವೀನ್‌ ಶೆಟ್ಟಿ. ಅವರು ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ತನ್ನ ಒಂದು ಕೈ ಕಳೆದುಕೊಂಡಿದ್ದರು.

Advertisement

ಪ್ಲಾಸ್ಟಿಕ್‌ ರಹಿತ ನಕ್ಷತ್ರ
ಈ ಪ್ಲಾಸ್ಟಿಕ್‌ ರಹಿತ ನಕ್ಷತ್ರವು 12 ಅಡಿ ಅಗಲ, 13 ಅಡಿ ಎತ್ತರವಿದೆ. 6 ವರ್ಷಗಳಿಂದ ಪ್ಲಾಸ್ಟಿಕ್‌ ರಹಿತವಾಗಿ ನಕ್ಷತ್ರ ರಚಿಲಾಗುತ್ತಿದೆ. 5 ವರ್ಷಗಳಲ್ಲಿ ಮಂಡಕ್ಕಿ, ಬೈಹುಲ್ಲು, ರಾಗಿ, ಜೋಳಾಪುರಿ, ಅಡಿಕೆ ಸಿಪ್ಪೆ ಮೊದಲಾದ ನೈಸರ್ಗಿಕ ವಸ್ತುಗಳನ್ನೇ ಬಳಸಿ ಬೃಹತ್‌ ನಕ್ಷತ್ರ ನಿರ್ಮಿಸಲಾಗಿದ್ದರೆ ಈ ಬಾರಿ 25 ಕೆ.ಜಿ. ಮರದ ಪುಡಿ ಬಳಸಿ ಈ ಸ್ವರ್ಣ ನಕ್ಷತ್ರ ರಚಿಸಲಾಗಿದೆ.

ಒಂದು ಕೈಯಲ್ಲೇ ಕೃಷಿ ಬದುಕು
ಒಂದೇ ಕೈ ಇದ್ದರೂ ನವೀನ್‌ ಕೃಷಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅಪಘಾತದಿಂದ ಅಂಗಾಂಗ ಕಳೆದುಕೊಂಡವರ ಬಾಳಿಗೆ ಸ್ಫೂರ್ತಿ ತುಂಬುವ ಉದ್ದೇಶದಿಂದ ಒಂದೇ ಕೈಯಲ್ಲಿ ಬೃಹತ್‌ ಗಾತ್ರದ ನಕ್ಷತ್ರ ತಯಾರಿಸಿದ್ದಾರೆ. ಲೈಫ್ ಸಂಸ್ಥೆಯ ಪ್ರಸನ್ನ ಜೋಯೆಲ್‌ ಸಿಕ್ವೇರಾ, ಯತೀಶ್‌ ಕುಲಾಲ್‌ ಕೈಜೋಡಿಸಿದ್ದಾರೆ.

ಸಾಧನೆಯ ಹಾದಿ ತೆರೆದೇ ಇದೆ
ನನ್ನಂತೆ ಅಪಘಾತದಲ್ಲಿ ಗಾಯಗೊಂಡು ಅಂಗಾಂಗ ಕಳೆದುಕೊಂಡ ಅನೇಕರಿದ್ದಾರೆ. ಬದುಕೇ ಮುಗಿದು ಹೋಯಿತು ಎಂದು ಭಾವಿಸಬೇಕಾಗಿಲ್ಲ. ದೃಢವಾದ ಮನಸ್ಸು ಇರುವವರಿಗೆ ಪ್ರಕೃತಿಯು ಅನಂತ ಅವಕಾಶಗಳನ್ನು ಒದಗಿಸಲಿದೆ.
-ನವೀನ್‌ ಶೆಟ್ಟಿ , ಶಿರ್ತಾಡಿ

ಕನಸಿಗೆ ಬಣ್ಣ ತುಂಬಿದೆ
ಸಾಧನೆಯ ಹಂಬಲಕ್ಕೆ ಬೆಂಬಲವಿದೆ ಸಾಧನೆಯ ಕನಸು ಕಾಣುವ ಮೂಲಕ ಬದುಕನ್ನು ಹಸನಾಗಿಸಬೇಕು. ನವೀನ್‌ ಶೆಟ್ಟಿ ಅವರಂಥವರ ಸಾಧನೆಯ ಹಂಬಲಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂಬುದೇ ನಮ್ಮ ಉದ್ದೇಶ.
-ಪ್ರಸನ್ನ ಜೋಯೆಲ್‌ ಸಿಕ್ವೇರಾ

Advertisement

– ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next