Advertisement
ಸುಮಾರು ಮೂರು ವಾರಗಳ ಮೊದಲೇ ಎಲ್ಲ ಟಿಕೆಟ್‌ಗಳು ಮಾರಾಟವಾಗಿದ್ದು ಎಲ್ಲ ಸದಸ್ಯರ ಕನ್ನಡ ಪ್ರೇಮವನ್ನು, ಕನ್ನಡ ಕೂಟದ ಶಕ್ತಿಯನ್ನು ಎತ್ತಿ ತೋರಿತ್ತು. ಕಾರ್ಯಕ್ರಮದ ಹಿಂದಿನ ದಿನವೇ ಎಲ್ಲ ಸ್ವಯಂ ಸೇವಕರ ಪರಿಶ್ರಮದಿಂದ ಕಾಲೇಜಿನ ಆವರಣವೆಲ್ಲ ಸಂಭ್ರಮಕ್ಕೆ ಅಣಿಯಾಗಿತ್ತು. ಗಂಡಭೇರುಂಡ, ಗರುಡರಾದಿಯಾಗಿ ವಿಶೇಷ ಕರಕುಶಲ ಕೆತ್ತನೆಯಿಂದ ಪರಿಶೋಭಿಸುತ್ತಿದ್ದ ಬೃಹತ್ ಹೆಬ್ಟಾಗಿಲು ಎಲ್ಲರನ್ನು ಸ್ವಾಗತಿಸಲು ಎತ್ತರದಲ್ಲಿ ನಿಂತಿತು. ಆ ದ್ವಾರದಿಂದ ಒಳಗೆ ಬರಲು, ಹೊರಾಂಗಣ ವೇದಿಕೆಯಲ್ಲಿ ಹಂಪಿಯ ಆನೆ ಲಾಯ ಹಿನ್ನೆಲೆಯಾಗಿ ವಿಜೃಂಭಿಸುತ್ತಿತ್ತು. ಅÇÉೇ ಪಕ್ಕದÇÉೇ ಚಕ್ಕಡಿಯೊಂದು ಕರ್ನಾಟಕದ ಗ್ರಾಮೀಣ ಸೌಂದರ್ಯವನ್ನು ನೆನಪಿಸುತ್ತಿತ್ತು. ಇನ್ನು ಮುಂದೆ ಬಂದರೆ, ಮೈಸೂರಿನ ಅರಮನೆಯ ಭಿತ್ತಿ ಚಿತ್ರ ನಾವು ಮೈಸೂರಿನಲ್ಲೇ ಇದ್ದೇವೆ ಎನ್ನುವಷ್ಟು ನೈಜವಾಗಿತ್ತು. ಇನ್ನು ಸಭಾಂಗಣದ ದ್ವಾರದ ಪಕ್ಕದಲ್ಲೇ ಹಂಪಿಯ ರಥದ ಪ್ರತಿಕೃತಿಯೊಂದು ನಿಜವಾದ ಹಂಪಿಯ ರಥಕ್ಕೆ ಸರಿಸಮವೆನ್ನುವಷ್ಟು ಜೀವಂತವಾಗಿತ್ತು. ಜತೆಯಲ್ಲೇ ಹೊಯ್ಸಳರ ಲಾಂಛನ ನಮ್ಮ ಕರುನಾಡ ಶಿಲ್ಪಕಲಾ ವೈಭವದ ಪ್ರತೀಕವಾಗಿ ನಿಂತಿತ್ತು. ಇಷ್ಟೆಲ್ಲ ವೈಭವಕ್ಕೆ ಕಾರಣರಾದ ಎಲ್ಲ ಕನ್ನಡಕೂಟದ ಕಲಾವಿದರಿಗೆ ಸಲಾಂ!
Related Articles
Advertisement
ಕನ್ನಡ ಕೂಟ ತಾಯಿ ಮರವಾಗಿ ಅನೇಕ ಉಪಸಂಸ್ಥೆಗಳನ್ನು ತನ್ನ ನೆರಳಲ್ಲಿ ಪೋಷಿಸಿದೆ. ಎಲ್ಲ ಉಪಸಂಸ್ಥೆಗಳ ಸದಸ್ಯರು, ಪ್ರತಿನಿಧಿಗಳು ತಂಡೋಪತಂಡವಾಗಿ ಬಂದು, ದೇವರಕುಣಿತ, ಪಟ ಕುಣಿತ, ಕಂಸಾಳೆ, ಹೀಗೆ ಒಂದೊಂದು ಜಾನಪದ ನೃತ್ಯ ಪ್ರಕಾರದ ಪ್ರದರ್ಶನದೊಂದಿಗೆ ಮೆರವಣಿಗೆಯನ್ನು ನಡೆಸಿಕೊಟ್ಟರು. ಮಹಾರಾಜರ ಉಪಸ್ಥಿತಿ, ಈ ಕಲಾಪ್ರಕಾರಗಳ ಪ್ರಸ್ತುತಿ, ಮೈಸೂರಿನ ದಸರಾವನ್ನೇ ನೆನಪಿಸುತ್ತಿತ್ತು! ಕಡೆಯಲ್ಲಿ ಕನ್ನಡ ಕೂಟದ ಈ ಸಾಲಿನ ಕಾರ್ಯಕಾರಿ ಸಮಿತಿಯವರು, ಕನ್ನಡ ಭುವನೇಶ್ವರಿ ಕುಳಿತಿದ್ದ ತೇರನ್ನು ಎಳೆಯುತ್ತಾ ಬಂದು, ಮಹಾರಾಜರ ಅಪ್ಪಣೆಯನ್ನು ಪಡೆದು, ಅವರನ್ನು ಸಹ ಪೂರ್ಣಕುಂಭದೊಂದಿಗೆ ಸಭಾಂಗಣದತ್ತ ನಡೆಸಿಕೊಂಡು ಬಂದರು. ವೇದ ಘೋಷದ ಹಿನ್ನಲೆ, ಅತಿಥಿಗಳ ಸಮ್ಮುಖದಲ್ಲಿ ಕನ್ನಡದ ತೇರು ಸಭಾಂಗಣದ ದ್ವಾರವನ್ನು ಸೇರಿತು. ಅನಂತರ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರುವಂತೆ ಕೋರುತ್ತಾ ಮಹಾಗಣಪತಿಯ ಪೂಜೆಯನ್ನು ಪುರೋಹಿತರ ಸಾರಥ್ಯದಲ್ಲಿ ನೆರವೇರಿಸಲಾಯಿತು.
ಉಡುಪಿಯಿಂದ ಬಂದಿದ್ದ ಭಾಗವತರಾದ ಕೆ. ಜೆ. ಗಣೇಶ್ ಅವರ ನಿರ್ದೇಶನದಲ್ಲಿ, ಅವರ ಭಾಗವತಿಕೆಯಲ್ಲಿ “ಚಕ್ರವ್ಯೂಹ’ ಯಕ್ಷಗಾನ ಪ್ರಸಂಗವನ್ನು ಕನ್ನಡ ಕೂಟದ ಸದಸ್ಯರೇ ಯಕ್ಷಗಾನದ ವೇಷ ಕಟ್ಟಿ ಪ್ರದರ್ಶಿಸಿದರು. ದಶಕಗಳಿಂದ ಅಮೆರಿಕದಲ್ಲಿ ಹುಟ್ಟಿ ಬೆಳೆಯುವ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುವ ಸಲುವಾಗಿ ಕಟ್ಟಿರುವ ಕನ್ನಡ ಕಲಿ ಶಾಲೆಯ ಶಿಕ್ಷಕರೆಲ್ಲ ಸೇರಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಾಟಕ, ಕಾವ್ಯ ರೂಪಕ
ಅಮೆರಿಕದ ಪೂರ್ವ ತೀರದಿಂದ ಬಂದಿದ್ದ ಕಲಾವಿದರಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ, ಪದ್ಮಶ್ರೀ ಬಿ. ಜಯಶ್ರೀ ಅವರು ರಚಿಸಿರುವ “ಕರಿಮಾಯಿ’ ನಾಟಕವನ್ನು ಪ್ರದರ್ಶಿಸಲಾಯಿತು. ಮರಳಿನಿಂದ ಪ್ರೇಕ್ಷಕರನ್ನು ಕಲಾತ್ಮಕವಾಗಿ ಮರಳು ಮಾಡಬಲ್ಲ ಕನ್ನಡದ ಉದಯೋನ್ಮುಖ ಕಲಾವಿದರಾದ ರಾಘವೇಂದ್ರ ಹೆಗ್ಡೆಯವರು ವೈವಿಧ್ಯಮಯವಾದ ಕನ್ನಡ ಹಾಡುಗಳಿಗೆ ಸೂಕ್ತವಾಗಿ ಮರಳಿನಿಂದ ಕಲಾಕೃತಿಗಳನ್ನು ರಚಿಸಿ ನೆರೆದ ಪ್ರೇಕ್ಷಕರನ್ನು ವಿಸ್ಮಿತಗೊಳಿಸಿದರು. ಕನ್ನಡ ಸಾಹಿತ್ಯಲೋಕದ ನಕ್ಷತ್ರವಾದ ಪು.ತಿ.ನರಸಿಂಹಾಚಾರ್ಯ ಅವರು ರಚಿಸಿದ “ದೀಪಲಕ್ಷ್ಮೀ’ ಕಾವ್ಯ ರೂಪಕವನ್ನು ಅವರ ಮಗಳೇ ಆದ ಅಲಮೇಲು ಅಯ್ಯಂಗಾರ್ ಅವರ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು.
ಕನ್ನಡ ಕೂಟದ ವೇದಿಕೆಯ ಮೇಲೆ ಪ್ರಪ್ರಥಮ ಬಾರಿಗೆ, ಚಂದನವನದ ಚಂದದ ನಟ ಧನಂಜಯ ಅವರೊಡನೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ಆ ದಿನದ ಮುಖ್ಯ ಆಕರ್ಷಣೆ, ಕರ್ನಾಟಕದ ಹೆಮ್ಮೆಯ ಗಾಯಕ ರಘು ದೀಕ್ಷಿತ್ ಹಾಗೂ ಅವರ ತಂಡ ಸಂಗೀತ ಸಂಜೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು. ಅವರ ಅಮೋಘ ಸಂಗೀತಕ್ಕೆ ನೆರೆದ ಎಲ್ಲ ಪ್ರೇಕ್ಷಕರು ಕಿಕ್ಕಿರಿದು ಕುಣಿದು ನಲಿದರು! ನೃತ್ಯ ರೂಪಕ, ವಿಚಾರ ಗೋಷ್ಠಿ
ಸಂಭ್ರಮದ ಎರಡನೇ ದಿನ ಕೂಟದ ಸದಸ್ಯರೆಲ್ಲ ಸೇರಿ ಭಗವದ್ಗೀತೆಯ ಪಠಣದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಂತರ ಅಕ್ಕಮಹಾದೇವಿ ಹಾಗೂ ಅಲ್ಲಮ ಪ್ರಭುಗಳ ಸಂವಾದವನ್ನೊಳಗೊಂಡ “ಶೂನ್ಯ ಸಂಪಾದನೆ’ ಶೀರ್ಷಿಕೆಯ ಪ್ರಸಂಗವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡದ ವಿವಿಧ ಕಾವ್ಯ ಪ್ರಕಾರದ, ವಿವಿಧ ಶೈಲಿಯ ಪ್ರಖ್ಯಾತ ಗೀತೆಗಳ “ಸುವರ್ಣ ರಾಗ ಧಾರೆ’ಯನ್ನು ಸ್ಥಳೀಯ ಕಲಾವಿದರ ತಂಡ ಪ್ರದರ್ಶಿಸಿತು. “ಕ್ಷೀರಾಮೃತ’ ಎನ್ನುವ ನೃತ್ಯರೂಪಕವಂತೂ ತಾಂತ್ರಿಕವಾಗಿ, ಕಲಾತ್ಮಕವಾಗಿ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿತ್ತು. ಜ್ಞಾನ ನಿಧಿ ಎನ್ನಬಹುದಾದ ಡಾ| ಗುರುರಾಜ ಕರ್ಜಗಿ ಅವರು ಸುಮಾರು ಒಂದು ಘಂಟೆಯ ಕಾಲ “ಸಕಾರಾತ್ಮಕ ಚಿಂತನೆಯನ್ನು ಹೊಂದುವ ಪರಿ’ ಎನ್ನುವ ವಿಷಯದ ಬಗ್ಗೆ ನೀಡಿದ ಉಪನ್ಯಾಸವು ಪ್ರೇಕ್ಷಕರಲ್ಲಿ ಅಪೂರ್ವ ಪರಿಣಾಮವನ್ನುಂಟು ಮಾಡಿತ್ತು. ಈ ನಡುವೆ ಕರ್ನಾಟಕದಿಂದ ಆಗಮಿಸಿದ್ದ ಉದಯೋನ್ಮುಖ ಹಾಸ್ಯ ಕಲಾವಿದರಾದ ರಾಘವೇಂದ್ರ ಆಚಾರ್ಯ, ನಿರೂಪ್ ಮೋಹನ್, ಕಾರ್ತಿಕ್ ಪತ್ತಾರ್ ಅವರುಗಳ ಹಾಸ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತ್ತು. ಕಾರ್ಯಕ್ರಮ ನಡೆಸಿಕೊಟ್ಟ ವಿನಾಯಕ್ ಜೋಶಿ, ನೆರೆದವರಿಗೆ ಮಾತಿನಲ್ಲೇ ಇನ್ನಷ್ಟು ಖುಷಿ ಹಂಚಿದ್ದರು. ಮೂರು ವೇದಿಕೆ, ವಿವಿಧ ಕಾರ್ಯಕ್ರಮ ಎರಡೂ ದಿನಗಳ ಕಾಲ ಮೂರು ವೇದಿಕೆಗಳ ಮೇಲೆ ವಿಭಿನ್ನ ರೀತಿಯ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.
ಅನಂತರ ಕಾರ್ಯಕ್ರಮದ ಮುಖ್ಯ ಅತಿಥಿ, ಚಂದನವನದ ಅನನ್ಯ ನಿರ್ದೇಶಕ, ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ವೇದಿಕೆಗೆ ಆಗಮಿಸಿದಾಗ ಎಲ್ಲರೂ ಅಭಿಮಾನದ ಹರ್ಷೋದ್ಗಾರದಿಂದ ಅವರನ್ನು ಸ್ವಾಗತಿಸಿದರು. ರವಿಚಂದ್ರನ್ ಹಾಗೂ ಹಂಸಲೇಖ ಜೋಡಿಯ ಯಶಸ್ವಿ ಹಾಡುಗಳನ್ನು ಗಾಯಕರು ಹಾಡಿ ಮನರಂಜಿಸಿದರು. ಕಾರ್ಯಕ್ರಮದ ಕಡೆಯಲ್ಲಿ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯವರು ರವಿಚಂದ್ರನ್ ಅವರಿಗೆ “ಸುವರ್ಣ ಕಲಾಶ್ರೀ ಬಿರುದಿ’ನಿಂದ ಗೌರವಿಸಿದರು.