Advertisement

Dollar ಬಳಕೆ ಕೈ ಬಿಟ್ಟರೆ ಜಾಗತಿಕ ವಿಪ್ಲವ?

01:04 PM Dec 05, 2024 | Team Udayavani |

ಜಾಗತಿಕ ವ್ಯಾಪಾರದಲ್ಲಿ ಅಮೆರಿಕದ ಡಾಲರ್‌ ಬದಲಿಗೆ ಸ್ಥಳೀಯ ಕರೆನ್ಸಿ ಅಥವಾ ಪರ್ಯಾಯ ಕರೆನ್ಸಿ ರೂಪಿಸುವ ಮಾತುಕತೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಅಲ್ಲದೆ ‘ಬ್ರಿಕ್ಸ್‌ ಕರೆನ್ಸಿ’ ರೂಪಿಸುವ ಬಗ್ಗೆ ಕಳೆದ ಅಕ್ಟೋಬರ್‌ನಲ್ಲಿ ಮಾತುಕತೆಗಳು ನಡೆದಿದ್ದವು. ಇದೆಲ್ಲದರ ನಡುವೆ ಡಾಲರ್‌ಗೆ ಪರ್ಯಾಯ ಕರೆನ್ಸಿ ರೂಪಿಸಿದರೆ ಶೇ.100ರಷ್ಟು ತೆರಿಗೆ ವಿಧಿಸುವುದಾಗಿ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಟ್ರಂಪ್‌ ಎಚ್ಚರಿಕೆ ಜಾಗತಿಕ ವ್ಯಾಪಾರದ ಮೇಲೆ ಏನು ಪರಿಣಾಮ ಬೀರಬಹುದು? ಪರ್ಯಾಯ ಕರೆನ್ಸಿ ಜಾರಿ ಸಾಧ್ಯವೇ? ಎಂಬುದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

Advertisement

ಜಗತ್ತಿನಲ್ಲಿ ನಡೆಯುತ್ತಿರುವ ಶೇ.90ರಷ್ಟು ವ್ಯಾಪಾರಗಳಿಗೆ ಪಾವತಿ ಡಾಲರ್‌ ಮೂಲಕವೇ ನಡೆಯುತ್ತಿದೆ. ಕಚ್ಚಾ ತೈಲ ವ್ಯಾಪಾರವಂತೂ ಸಂಪೂರ್ಣವಾಗಿ ಡಾಲರನ್ನೇ ಅವಲಂಬಿಸಿದೆ. ಹೀಗಾಗಿ ಅಮೆರಿಕ ಡಾಲರನ್ನು ಅಸ್ತ್ರ ವಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಮೂಲಕ ಇತರ ರಾಷ್ಟ್ರಗಳನ್ನು ಶೋಷಿಸುತ್ತಿದೆ ಎಂಬ ಆರೋಪಗಳು ಪದೇ ಪದೆ ಕೇಳಿಬರುತ್ತಿದ್ದವು. ಹೀಗಾಗಿ ಡಾಲರ್‌ ಬಿಟ್ಟು ವ್ಯವಹಾರ ನಡೆಸಲು ಹಲವು ದೇಶಗಳು ಚಿಂತಿಸಿದ್ದವು. ಈ ವರ್ಷ ಅಕ್ಟೋಬರ್‌ನಲ್ಲಿ ಬ್ರಿಕ್ಸ್‌ ರಾಷ್ಟ್ರಗಳು ಪರ್ಯಾಯ ಕರೆನ್ಸಿ ಮಾತುಕತೆ ನಡೆಸಿದ್ದು, ಅಮೆರಿಕವನ್ನು ಚಿಂತೆಗೆ ದೂಡಿತು. ಹೀಗಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಬೆದರಿಸುವ ತಂತ್ರವನ್ನು ಮತ್ತೆ ಮುನ್ನೆಲೆಗೆ ತಂದಿದ್ದು, ಶೇ.100ರಷ್ಟು ತೆರಿಗೆ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.

ಜಾಗತಿಕ ವ್ಯಾಪಾರದ ಮೇಲೆ ದುಷ್ಪರಿಣಾಮ
ಒಂದು ವೇಳೆ ಡಾಲರ್‌ಗೆ ಪರ್ಯಾಯ ಕರೆನ್ಸಿ ಜಾರಿಯಾದರೆ, ಟ್ರಂಪ್‌ ಶೇ.100ರಷ್ಟು ತೆರಿಗೆ ವಿಧಿಸಬಹುದು. ಇದು ಜಾಗತಿಕ ವ್ಯಾಪಾರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಮೆರಿಕದಲ್ಲಿ ಡಾಲರ್‌ ಮೌಲ್ಯ ಹೆಚ್ಚಾಗಿರುವ ಕಾರಣ ತಮ್ಮ ವಸ್ತುಗಳನ್ನು ರಫ್ತು ಮಾಡುವ ರಾಷ್ಟ್ರಗಳು ದರ ನಿಗದಿ ಮೂಲಕ ಸ್ವಲ್ಪ ಲಾಭ ಗಳಿಸುತ್ತಲಿವೆ. ಟ್ರಂಪ್‌ ಶೇ.100ರಷ್ಟು ತೆರಿಗೆ ವಿಧಿಸಿದರೆ, ಅಮೆರಿಕಕ್ಕೆ ರಫ್ತು ಮಾಡಲು ಈ ರಾಷ್ಟ್ರಗಳು ಹೆಚ್ಚು ಹಣ ಖರ್ಚು ಮಾಡಬೇಕಾದ ಕಷ್ಟಕ್ಕೆ ಸಿಲುಕಿಕೊಳ್ಳಲಿವೆ. ಹೀಗಾಗಿ ಅಮೆರಿಕ ಬಿಟ್ಟು ಮತ್ತೂಂದು ರಾಷ್ಟ್ರವನ್ನು ಇವು ಹುಡುಕಿಕೊಳ್ಳ ಬೇಕಾಗುತ್ತದೆ. ಇಲ್ಲವೆ ಹೆಚ್ಚಿನ ಲಾಭವನ್ನು ಕೈಬಿಟ್ಟು ಅಮೆರಿಕದಲ್ಲೇ ಮಾರಾಟ ಮಾಡಬೇಕಾಗುತ್ತದೆ. ಇದು ಪ್ರಸ್ತುತ ಇರುವ ಜಾಗತಿಕ ವ್ಯಾಪಾರವನ್ನು ದಿಕ್ಕುತಪ್ಪಿಸಿ, ಆರ್ಥಿಕವಾಗಿ ಸಶಕ್ತವಲ್ಲದ ರಾಷ್ಟ್ರ ಗಳನ್ನು ಮತ್ತಷ್ಟು ತೊಂದರೆಗೆ ಸಿಲುಕಿಸುವ ಸಾಧ್ಯತೆ ಇದೆ.

ಹಣಕಾಸು, ಸೇನಾಶಕ್ತಿ ಬಳಸಿಯೂ ತೊಂದರೆ
ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಎಂದು ಗುರುತಿಸಿಕೊಂಡಿರುವ ಅಮೆರಿಕ, ಎಲ್ಲ ಜಾಗತಿಕ ಸಂಸ್ಥೆಗಳಲ್ಲೂ ಸಹ ಆಯಕಟ್ಟಿನ ಸ್ಥಳದಲ್ಲಿ ಕೂತಿದೆ. ಉದಾಹರಣೆಗೆ, ವಿಶ್ವಸಂಸ್ಥೆಯ ಭದ್ರತಾ ಸಮಿತಿ, ವಿಶ್ವ ಹಣಕಾಸು ಸಂಸ್ಥೆ, ನ್ಯಾಟೋಗಳಲ್ಲಿ ಅಮೆರಿಕ ಹೆಚ್ಚಿನ ಪ್ರಭಾವ ಹೊಂದಿದೆ. ಹೀಗಾಗಿ ಡಾಲರ್‌ ಬದಲಿಗೆ ಪರ್ಯಾಯ ಕರೆನ್ಸಿ ಬಳಸುವ ರಾಷ್ಟ್ರಗಳ ಮೇಲೆ ಅಮೆರಿಕ ವ್ಯಾಪಾರವಷ್ಟೇ ಅಲ್ಲದೆ, ಸೇನಾ ಶಕ್ತಿ ಪ್ರಯೋಗ ಸೇರಿ ಆರ್ಥಿಕ ತೊಂದರೆಗಳನ್ನು ಒಡ್ಡಬಹುದು. ಬಹುತೇಕ ರಾಷ್ಟ್ರಗಳು ರಕ್ಷಣ ಉತ್ಪನ್ನಕ್ಕಾಗಿ ಅಮೆರಿಕವನ್ನೇ ಅವಲಂಬಿ ಸಿದ್ದು, ಇವುಗಳ ರಫ್ತನ್ನು ಕಡಿಮೆಗೊಳಿಸಿ ಅಥವಾ ಶತ್ರು ರಾಷ್ಟ್ರಗಳಿಗೆ ರಫ್ತು ಹೆಚ್ಚಿಸಿ, ಈ ರಾಷ್ಟ್ರಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಹೀಗಾಗಿ ಡಾಲರ್‌ ಹೊರತುಪಡಿಸಿ ಪರ್ಯಾಯ ಕರೆನ್ಸಿಗೆ ಹೆಚ್ಚಿನ ದೇಶಗಳು ಒಗ್ಗಿಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ ಎಂದೇ ಹೇಳಬಹುದು.

ಅಮೆರಿಕಕ್ಕೂ ಸಂಕಷ್ಟ ಸಾಧ್ಯತೆ
ಒಂದು ವೇಳೆ ಡಾಲರ್‌ಗೆ ಪರ್ಯಾಯ ಕರೆನ್ಸಿ ಬಳಕೆ ಯಾದರೆ ಅಥವಾ ಟ್ರಂಪ್‌ ನಿರ್ಧಾರದಂತೆ ಶೇ.100ರಷ್ಟು ತೆರಿಗೆ ವಿಧಿಸಿದರೆ ಅದು ಅಮೆರಿಕಕ್ಕೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. 2ನೇ ಮಹಾಯುದ್ಧದ ಬಳಿಕ ಅಮೆರಿಕದ ಡಾಲರ್‌ ಬಳಕೆ ನಿರಂತ ರವಾಗಿ ಕುಸಿತ ಕಾಣುತ್ತಲೇ ಇದೆ. ಡಾಲರ್‌ಗೆ ಪರ್ಯಾಯ ಕರೆನ್ಸಿ ಇಲ್ಲದಿದ್ದರೂ ಹಲವು ದೇಶಗಳು ಸ್ಥಳೀಯ ಕರೆನ್ಸಿಯಲ್ಲಿ ವಹಿವಾಟು ನಡೆಸುತ್ತಿರುವುದು ಡಾಲರ್‌ ಬಳಕೆ ಕುಸಿಯಲು ಕಾರಣ ವಾಗಿದೆ. ಪರ್ಯಾಯ ಕರೆನ್ಸಿ ಬಳಕೆಯಾದರೆ ಡಾಲರ್‌ ವಹಿವಾಟು ಮತ್ತಷ್ಟು ಕುಸಿಯಬಹದು. ಶೇ.100ರಷ್ಟು ತೆರಿಗೆ ವಿಧಿಸಿದರೆ ಅಮೆರಿಕದಲ್ಲಿ ಆ ವಸ್ತುಗಳು ದುಬಾರಿಯಾಗಲಿವೆ. ಹೀಗಾಗಿ ಔಷಧ, ಸೆಮಿಕಂಡಕ್ಟರ್‌ನಂತಹ ವಸ್ತುಗಳು ಅಮೆರಿಕನ್ನರಿಗೆ ಸಿಗದಂತಾಗುವ ಸಾಧ್ಯತೆ ಇದೆ.

Advertisement

ಡಾಲರ್‌ಗೆ ಪರ್ಯಾಯ ಕರೆನ್ಸಿ ಬಂದರೆ ಏನೆಲ್ಲ ಆಗಬಹುದು?
-ಡಾಲರ್‌ಗೆ ಬೇಡಿಕೆ ಕುಸಿಯುವ ಸಾಧ್ಯತೆ ಇರುವು­ದರಿಂದ ಮೌಲ್ಯವೂ ಕುಸಿಯಬಹುದು.
-ಡಾಲರ್‌ ಮೌಲ್ಯ ಕುಸಿತದಿಂದ ಅಮೆರಿಕಕ್ಕೆ ರಫ್ತಿನಿಂದ ಸಿಗುವ ಲಾಭ ಕುಂಠಿತ ಸಾಧ್ಯತೆ.
-ಹೊಸ ಕರೆನ್ಸಿಯ ವಿನಿಮಯ ದರ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಬಹುದು.
-ಡಾಲರ್‌ನಲ್ಲಷ್ಟೇ ವ್ಯವಹರಿಸುವ ಜಾಗತಿಕ ಸಂಸ್ಥೆಗಳು ಕುಸಿತ ಕಾಣುವ ಸಾಧ್ಯತೆಯಿದೆ.
-ಜಾಗತಿಕ ವ್ಯಾಪಾರ ಅಮೆರಿಕವನ್ನು ಬಿಟ್ಟು ಮತ್ತೂಂದು ದೇಶದೆಡೆಗೆ ಸಾಗಬಹುದು.
-ಜಾಗತಿಕವಾಗಿ ಅಮೆರಿಕ ಸಾಧಿಸಿರುವ ಪ್ರಭಾವ ದಿನಕಳೆದಂತೆ ತಗ್ಗಬಹುದು.
-ಆರ್ಥಿಕ, ರಾಜಕೀಯವಾಗಿ ಹಲವು ದೇಶಗಳ ನಡುವೆ ಸ್ಪರ್ಧೆ ಏರ್ಪಡಬಹುದು.

ಪರ್ಯಾಯ ಕರೆನ್ಸಿಯಿಂದ ಬ್ರಿಕ್ಸ್‌ಗೆ ಹೇಗೆ ಲಾಭ?
ಬ್ರಿಕ್ಸ್‌ ಸಂಘಟನೆಯಲ್ಲಿರುವ ರಾಷ್ಟ್ರಗಳು ಜಾಗತಿಕವಾಗಿ ವಿದೇಶಿ ವಿನಿಮಯ ಮೀಸಲಿನಲ್ಲಿ ಶೇ.42ರಷ್ಟು ಪಾಲನ್ನು ಹೊಂದಿವೆ. ಹೀಗಾಗಿ ಪರ್ಯಾಯ ಕರೆನ್ಸಿ ಬಳಕೆ ಮಾಡಿದರೆ ಈ ರಾಷ್ಟ್ರಗಳಿಗೆ ದೀರ್ಘಾವಧಿಯಲ್ಲಿ ಲಾಭ ದೊರೆಯುವ ಸಾಧ್ಯತೆ ಇದೆ. ಆದರೆ ಪರ್ಯಾಯ ಕರೆನ್ಸಿಯನ್ನು ಒಪ್ಪಿಕೊಂಡರೆ ಅಮೆರಿಕ ಇವುಗಳ ಮೇಲೆ ನಿರ್ಬಂಧ ವಿಧಿಸುವ ಭೀತಿ ಇದ್ದು, ಇದನ್ನು ಎದರಿಸಲು ಬ್ರಿಕ್ಸ್‌ನಲ್ಲಿರುವ ಸಣ್ಣರಾಷ್ಟ್ರಗಳಿಗೆ ದೊಡ್ಡ ರಾಷ್ಟ್ರಗಳು ಸಹಾಯ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ದೀರ್ಘಾವಧಿಯಲ್ಲಿ ಡಾಲರ್‌ ಕುಸಿತ ಕಾಣಬಹುದು. ಜತೆಗೆ ದೊಡ್ಡಣ್ಣನ ಸ್ಥಾನ ಕೈತಪ್ಪಿ ಹೋಗಬಹುದು ಎಂಬ ಭಯವೇ ಈಗ ಅಮೆರಿಕವನ್ನು ಕಾಡುತ್ತಿದೆ.

ಡಾಲರ್‌ ಮೇಲಷ್ಟೇ ಏಕೆ ಜಾಗತಿಕ ಅವಲಂಬನೆ
1944ರಲ್ಲಿ 44 ರಾಷ್ಟ್ರಗಳು ಸೇರಿ ಅಮೆರಿಕದ ಡಾಲರನ್ನು ಜಾಗತಿಕ ಕರೆನ್ಸಿ ಎಂದು ಘೋಷಿಸಿದವು. ಈ ಸಮಯದಲ್ಲೇ ನಡೆದ ಬ್ರೆಟನ್‌ವುಡ್ಸ್‌ ಒಪ್ಪಂದದ ಪ್ರಕಾರ ಜಾಗತಿಕ ಬ್ಯಾಂಕ್‌ ಸ್ಥಾಪನೆ ಮಾಡಿ, ಅದು ಡಾಲರ್‌ ಮೂಲಕವೇ ವ್ಯವಹಾರ ನಡೆಸುವಂತೆ ಮಾಡಲಾಯಿತು. ಹೀಗಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳು ಡಾಲರನ್ನೇ ಅವಲಂಬಿಸಿದವು. ವಿಶ್ವಬ್ಯಾಂಕ್‌ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ಡಾಲರ್‌ ಬಳಕೆ ಮಾಡುವುದರಿಂದ ಇದರ ಮೌಲ್ಯ ಸದಾ ಸ್ಥಿರವಾಗಿರುತ್ತದೆ. ಹೀಗಾಗಿ ಒಂದೇ ರೀತಿಯ ಲಾಭ ಸಿಗುವುದರಿಂದ ಡಾಲರ್‌ ವಿದೇಶಿ ವಿನಿಮಯಕ್ಕೆ ಪ್ರಾಥಮಿಕ ಕರೆನ್ಸಿಯಾಯಿತು.

ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಕುಸಿದ ರೂಪಾಯಿ ಮೌಲ್ಯ
ಡಾಲರ್‌ಗೆ ಪರ್ಯಾಯ ಕರೆನ್ಸಿ ರೂಪಿಸಿದರೆ ಶೇ.100ರಷ್ಟು ತೆರಿಗೆ ವಿಧಿಸುವುದಾಗಿ ಟ್ರಂಪ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠಕ್ಕೆ ಕುಸಿತ ಕಂಡಿದೆ. 1 ಡಾಲರ್‌ಗೆ ರೂಪಾಯಿ ಮೌಲ್ಯ 84.7 ರೂ.ಗೆ ಕುಸಿದಿದ್ದು, ಜಿಡಿಪಿ ಪ್ರಗತಿ ದರವೂ ಸಹ ಶೇ.5.4ಕ್ಕೆ ಇಳಿಕೆಯಾಗಿದೆ. ಅಲ್ಲದೇ ಕಚ್ಚಾತೈಲ ಬೆಲೆಯಲ್ಲಿ ಶೇ.1ರಷ್ಟು ಏರಿಕೆಯಾಗಿದೆ. ಇದೆಲ್ಲವನ್ನೂ ಗಮನಿಸಿದರೆ ಜಾಗತಿಕವಾಗಿ ಅಮೆರಿಕ ಹೊಂದಿರುವ ಪ್ರಭಾವವನ್ನು ಅರ್ಥ ಮಾಡಿಕೊಳ್ಳಬಹುದು. ಹೀಗಾಗಿ ಪರ್ಯಾಯ ಕರೆನ್ಸಿ ಜಾರಿ ಮಾಡುವುದಾದರೆ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಬ್ರಿಕ್ಸ್‌ ರಾಷ್ಟ್ರಗಳು ಮುಂದಡಿ ಇಡಬೇಕಾಗುತ್ತದೆ.

ಭಾರತದಿಂದ ಇಲ್ಲೂ ಅಲಿಪ್ತ ನೀತಿ
ಡಾಲರ್‌ಗೆ ಪರ್ಯಾಯವಾಗಿ ಮತ್ತೂಂದು ಕರೆನ್ಸಿ ರೂಪಿಸಲು ಬ್ರಿಕ್ಸ್‌ ರಾಷ್ಟ್ರಗಳು ಮಾತುಕತೆ ನಡೆಸಿದ್ದರೂ ಭಾರತ ಹೊಸ ಕರೆನ್ಸಿಯ ಪರವಾಗಿ ಮಾತನಾಡಿಲ್ಲ. ನಾವು ಡಾಲರ್‌ಗೆ ವಿರುದ್ಧವಾಗಿ ಏನನ್ನೂ ಮಾಡುತ್ತಿಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಸಹ ಇತ್ತೀಚೆಗೆ ಹೇಳಿದ್ದರು. ಟ್ರಂಪ್‌ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಅರಿವಿರುವ ಭಾರತ ನೇರವಾಗಿ ಡಾಲರ್‌ ವಿರುದ್ಧ ಹೋಗದೆ ಜಾಗತಿಕವಾಗಿ ಸಂಕಷ್ಟದಿಂದ ಪಾರಾಗಲು ನಿರ್ಧರಿಸಿದೆ ಎನ್ನಲಾಗಿದೆ. ಒಂದು ವೇಳೆ ಅಮೆರಿಕ ಭಾರತದ ಮೇಲೆ 100% ತೆರಿಗೆ ವಿಧಿಸಿದರೆ ಇಲ್ಲಿನ ಔಷಧ, ಜವುಳಿ, ಐಟಿ ವಸ್ತುಗಳ ರಫ್ತು ಸಂಸ್ಥೆಗಳು ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ. ರಷ್ಯಾದಿಂದ ಕಚ್ಚಾತೈಲ ಖರೀದಿಸಲು ಭಾರತ ಸ್ಥಳೀಯ ಕರೆನ್ಸಿಯನ್ನೇ ಬಳಕೆ ಮಾಡುತ್ತಿದೆ.

-ಗಣೇಶ್‌ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next