Advertisement

ಬ್ಲಡ್‌ ಕ್ಯಾನ್ಸರನ್ನೇ ಗೆದ್ದು ಮನೆಗೆ ಮರಳಿದ ಬಾಲಕಿ

04:07 PM Jan 01, 2023 | Team Udayavani |

ಕೋಲಾರ: 6 ವರ್ಷದ ಬಾಲಕಿಯೊಬ್ಬಳು ಕಳೆದ 2019ರಲ್ಲಿ ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸುದ್ದಿ ತಿಳಿದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಖುದ್ದು ಮಗುವಿನ ಮನೆಗೆ ಹೋಗಿ ಚಿಕಿತ್ಸೆಗೆ 1.5 ಲಕ್ಷ ನೆರವು ಒದಗಿಸಿದ್ದರಿಂದಾಗಿ ಆಕೆ ಇದೀಗ ಆರೋಗ್ಯವಂತಳಾಗಿ ಹೊಸ ಬದುಕಿನತ್ತ ಹೆಜ್ಜೆ ಹಾಕಿ ದ್ದು, ಜೀವ ಉಳಿಸಿದ ನೆರವಿಗೆ ಬ್ಯಾಂಕಿಗೆ ಆಗಮಿಸಿ ಧನ್ಯವಾದ ಸಲ್ಲಿಸಿದ ಘಟನೆ ಶನಿವಾರ ನಡೆಯಿತು.

Advertisement

ತಾಲೂಕಿನ ಬೆತ್ತನಿ ಗ್ರಾಮದ ಸುಮಂತ್‌ ಕುಮಾರ್‌,ಚೈತ್ರಾ ದಂಪತಿಗಳ ಈ ಮುದ್ದಾದ 6 ವರ್ಷದ ಬಾಲಕಿ ಕಾರುಣ್ಯ ಮಾರಕ ಬ್ಲಡ್‌ ಕ್ಯಾನ್ಸರ್‌ ನಿಂದ ಬಳಲುತ್ತಿದ್ದು, ತಲೆಯಲ್ಲಿ ಪೂರ್ಣ ಕೂದಲು ಉದುರಿಹೋಗಿತ್ತಲ್ಲದೇ ರೋಗ ಪ್ರಥಮ ಹಂತದಲ್ಲಿರುವುದರಿಂದ ಕೂಡಲೇ ಚಿಕಿತ್ಸೆ ನೀಡಿದಲ್ಲಿ ಗುಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಖಾಸಗಿ ಶಾಲೆಯೊಂದರ ವಾಹನ ಚಾಲಕರಾಗಿದ್ದ ಸುಮಂತ್‌ ಕುಮಾರ್‌, ಸಾಲ ಮಾಡಿ 1.5 ಲಕ್ಷಕ್ಕೂ ಹೆಚ್ಚಿನ ಹಣವನ್ನು ಚಿಕಿತ್ಸೆಗೆ ಖರ್ಚು ಮಾಡಿದ್ದರು. ಉಳಿದಂತೆ ಸೆಂಟ್‌ಜಾನ್ಸ್‌ ಆಸ್ಪತ್ರೆಯ ವೈದ್ಯರ ಪ್ರಕಾರ ಚಿಕಿತ್ಸೆಗೆ 7.5 ಲಕ್ಷ ರೂಗಳ ಅಗತ್ಯವಿದ್ದು, ಈ ಹಣ ಸಂಗ್ರಹಿಸಲಾಗದೇ ಆತಂಕದಲ್ಲಿದ್ದರು.

ಗೋವಿಂದಗೌಡರಿಂದ ಮಾನವೀಯ ನೆರವು: ಮುದ್ದಾದ ಈ ಬಾಲಕಿ ಅನಾರೋಗ್ಯದ ಕುರಿತು ತಿಳಿದ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಪೋಷಕರನ್ನು ಕರೆಸಿಕೊಂಡು ವಿವರ ಪಡೆದು ತಕ್ಷಣವೇ 50 ಸಾವಿರ ನೆರವು ನೀಡಿ, ಉಳಿದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಒದಗಿಸುವುದಾಗಿ ತಿಳಿಸಿದ್ದಲ್ಲದೇ ಆಕೆಯ ಚಿಕಿತ್ಸೆಗೆ ಉಳಿದ ಹಣ ನೀಡಿ ಧೈರ್ಯ ತುಂಬಿದ್ದರು.

ಚಿಂತೆ ಮಾಡದಿರಿ, ಇಂತಹ ಮುದ್ದಾದ ಮಗುವನ್ನು ದೇವರು ಉಳಿಸಿಕೊಡುತ್ತಾನೆ, ಚಿಕಿತ್ಸೆಗೆ ಹಣದ ಕುರಿತು ಚಿಂತೆ ಮಾಡದಿರಿ, ಚಿಕಿತ್ಸೆ ಆರಂಭವಾಗುತ್ತಿದ್ದಂತೆ ಅಗತ್ಯ ನೆರವು ಪೂರ್ತಿ ನಾನೇ ಒದಗಿಸುವುದಾಗಿ ಭರವಸೆ ನೀಡಿ ಅದರಂತೆ ಚಿಕಿತ್ಸೆಗೆ ಅಗತ್ಯವಾದ ನೆರವನ್ನು ಮೂರು ಬಾರಿ ಒದಗಿಸಿದ್ದರು. ಗೋವಿಂದಗೌಡರ ಹೃದಯವಂತಿಕೆ ಹಾಗೂ ಹಾರೈಕೆಯಿಂದ ಇದೀಗ ಬ್ಲಡ್‌ ಕ್ಯಾನ್ಸರ್‌ ಅನ್ನು ಗೆದ್ದು ಚೇತರಿಸಿಕೊಂಡಿರುವ ಈ ಬಾಲಕಿ ಕಾರುಣ್ಯ ತಾನು ಬದುಕುಳಿಯಲು ನೆರವಾದ ಬ್ಯಾಲಹಳ್ಳಿ ಗೋವಿಂದಗೌಡರನ್ನು ತಮ್ಮ ಪೋಷಕರೊಂದಿಗೆ ಶನಿವಾರ ಭೇಟಿಯಾಗಿ ಧನ್ಯವಾದ ಸಲ್ಲಿಸಿದಳು.

ಈ ಮಗುವಿಗೆ ಇದೀಗ ಎದೆ ಬಳಿ ಕಿಮೋಪೋರ್ಟ್‌ ಅಳವಡಿಸಿದ್ದು, ಅದಕ್ಕಾಗಿ ಇನ್ನೂ 1.8 ಲಕ್ಷ ನೆರವಿನ ಅಗತ್ಯವಿದೆ ಎಂದು ಪೋಷಕರು ತಿಳಿಸಿದ್ದಾರೆ. ಈ ಚಿಕಿತ್ಸೆಗೂ ನೆರವಾಗುವ ಭರವಸೆ ನೀಡಿದ ಬ್ಯಾಲಹಳ್ಳಿ ಗೋವಿಂದಗೌಡರು ಆತ್ಮಸ್ಥೈರ್ಯ ತುಂಬಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next