ಆ ವೇದಿಕೆ ಮೇಲೆ ಹಿರಿಯ ನಿರ್ದೇಶಕ ಭಗವಾನ್ ನಿಂತಿದ್ದರು. ಅವರ ಎದುರು ರೆಟ್ರೋ ಶೈಲಿಯ ಕಾಸ್ಟೂಮ್‌ನಲ್ಲಿ ನಾಯಕ ಆದರ್ಶ್ ಮತ್ತು ನಾಯಕಿ ಇಶಿತಾ ವರ್ಷ ನಿಂತಿದ್ದರು. ಪಕ್ಕದಲ್ಲೇ ನಿರ್ದೇಶಕ ಅಶ್ವಿನ್ ಕೊಡಂಗಿ ಚಿಕ್ಕದ್ದೊಂದು ಕ್ಯಾಮೆರಾ ಹಿಡಿದು ನಿಂತಿದ್ದರು. ಎದುರಿಗಿದ್ದ ಕ್ಯಾಮೆರಾಗಳು ಅವರ ಮೇಲೆ ಫೋಕಸ್ ಆಗಿದ್ದವು. ಭಗವಾನ್ ಆ್ಯಕ್ಷನ್ ಹೇಳಿದರು. ಗಾಯಕ ಮೋಹನ್ ಕೃಷ್ಣ “ನೀ ಬಂದು ನಿಂತಾಗ…’ ಹಾಡು ಗುನುಗಿದರು. ವೇದಿಕೆ ಮೇಲೆ ಆದರ್ಶ್ ಮತ್ತು ಇಶಿತಾ ವರ್ಷ ಇಬ್ಬರೂ
ಕೈ ಹಿಡಿದು ಅತ್ತಿಂದಿತ್ತ, ಇತ್ತಿಂದತ್ತ ಹೆಜ್ಜೆ ಹಾಕಿದರು. ಭಗವಾನ್ ಕಟ್ ಇಟ್ ಅಂದರು. ಎಲ್ಲರೂ ಚಪ್ಪಾಳೆ ತಟ್ಟಿದರು. ವೇದಿಕೆ ಮೇಲಿದ್ದ ನಾಯಕಿ ನಾಚಿನೀರಾದರು… ಇದು ಯಾವುದೋ ಚಿತ್ರದ ಚಿತ್ರೀಕರಣದ ದೃಶ್ಯವಲ್ಲ. “ಸ್ವಾರ್ಥರತ್ನ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ ಕಂಡು ಬಂದ ದೃಶ್ಯ. ಇದಕ್ಕೆ ಕಾರಣ, ಚಿತ್ರದಲ್ಲೊಂದು “ನಿನ್ನಯನ..’ ಎಂಬ ರೆಟ್ರೋ ಶೈಲಿಯ ಕಪ್ಪು ಬಿಳುಪಿನ ಹಾಡಿದೆ. ಆ ಹಾಡನ್ನು ಬಿಡುಗಡೆ ಮಾಡಿದ್ದು ಹಿರಿಯ ನಿರ್ದೇಶಕ ಭಗವಾನ್. ಅಂದು ಭಗವಾನ್ ಆ್ಯಕ್ಷನ್ ಹೇಳುವ ಮೂಲಕ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷ. ಈ ವೇಳೆ ಭಗವಾನ್, ತಮ್ಮ ಹಳೆಯ ನೆನಪಿಗೆ ಜಾರಿದರಲ್ಲದೆ, “ನೀ ಬಂದು ನಿಂತಾಗ..’ ಹಾಡನ್ನು ಬೆಳಗ್ಗೆ 7 ಕ್ಕೆ ಶುರುಮಾಡಿ, ಸಂಜೆ 5 ಕ್ಕೆ ಮುಗಿಸಿದ ವಿಷಯ ಹಂಚಿಕೊಂಡರು. ಇದು ಮೊದಲ ಹಾಡಿನ ವಿಷಯವಾದರೆ,
ಎರಡನೇ ಹಾಡಿನ ಬಿಡುಗಡೆ ಕೂಡ ವಿಶೇಷವಾಗಿತ್ತು. ಯಶ್-ರಾಧಿಕಾ ಅವರ ಜೋಡಿ ಮೇಲೊಂದು “ಅವಳ ಕಂಡಂತೆ..’ ಎಂಬ ಹಾಡಿದೆ. ಆ ಹಾಡನ್ನು ಯಶ್ ಅವರ ಬಳಿ ಅನುಮತಿ ಪಡೆದು, ಅವರ ಅಭಿಮಾನಿಗಳಿಂದಲೇ ಹಾಡನ್ನು ಬಿಡುಗಡೆ ಮಾಡಿಸಿದರು ನಿರ್ದೇಶಕ ಅಶ್ವಿನ್ ಕೊಡಂಗಿ. ವೇದಿಕೆಗೆ ಬಂದ ಯಶ್ ಅಭಿಮಾನಿಗಳ ಸಂಘದ ವಜ್ರಮುನಿ, ಸತೀಶ್, ಬಸವರಾಜ್ ಬಳ್ಳಾರಿ, ನಿಖೀಲ್ ಸೇರಿದಂತೆ ಗದಗ್, ಚಿಕ್ಕಮಗಳೂರಿನಿಂದ ಆಗಮಿಸಿದ್ದ ಅಭಿಮಾನಿಗಳು, ಯಶ್ ಹಾಗು ರಾಧಿಕಾ ಅವರ ಭಾವಚಿತ್ರ ಬಿಡುಗಡೆ ಮಾಡುವ ಮೂಲಕ ಅವರ ಕುರಿತ ಹಾಡನ್ನು ಬಿಡುಗಡೆ ಮಾಡಿದರು.
ಆ ನಂತರ “ಅಯ್ಯೋ ಅಯ್ಯೋ..’ ಎಂಬ ಎಣ್ಣೆ ಹಾಡೊಂದನ್ನು ಸಭಾಂಗಣದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರನ್ನು ವೇದಿಕೆಗೆ ಆಹ್ವಾನಿಸಿ, ಅವರಿಂದ ಬಾಟಲ್ ಓಪನ್ ಮಾಡುವ ಮೂಲಕ ಬಿಡುಗಡೆ ಮಾಡಿಸಲಾಯಿತು. ಆ ಹಾಡಿಗೆ ಸಾಧುಕೋಕಿಲ ಹೆಜ್ಜೆ ಹಾಕಿದ್ದರಿಂದ, ಬಾಟಲ್ ಮೇಲೆ ಸಾಧು ಅವರ ಭಾವಚಿತ್ರ ರಾರಾಜಿಸುತ್ತಿದ್ದದ್ದು ವಿಶೇಷವಾಗಿತ್ತು. ಇದಾದ ಬಳಿಕ ವೇದಿಕೆಗೆ ಅಂಚೆಪೆಟ್ಟಿಗೆಯನ್ನೂ ತಂದಿಡಲಾಯಿತು. ಆಗಲೂ ವೇದಿಕೆಗೆ ಒಬ್ಬರನ್ನು ಆಹ್ವಾನಿಸಿ, ಅವರಿಂದ ಅದರೊಳಗಿದ್ದ ಲೆಟರ್‌ವೊಂದನ್ನು ತೆಗೆಸಿ ಜಯಂತ್ ಕಾಯ್ಕಿಣಿ ಅವರು ಬರೆದ “ಜೀವ ಕರೆಯೋಲೆ’ ಹಾಡನ್ನು ಬಿಡುಗಡೆ ಮಾಡಿಸಲಾಯಿತು. ಅಲ್ಲಿಗೆ ಸಮಯವೂ ಮೀರಿತ್ತು. ಚಿತ್ರದ ಬಗ್ಗೆ ಮಾತುಕತೆಗಿಂತ ಅಂದು ಹಾಡುಗಳನ್ನು ಬಿಡುಗಡೆ ಮಾಡಿಸುವುದರಲ್ಲೇ ನಿರ್ದೇಶಕರು ಸಮಯ ಕಳೆದರು.
ಸಂಗೀತ ನಿರ್ದೇಶಕ ಬಿ.ಜೆ.ಭರತ್ ಚಿತ್ರದಲ್ಲಿರುವ ಹಾಡುಗಳ ಬಗ್ಗೆ ಗುಣಗಾನ ಮಾಡಿದರು. ನಿರ್ದೇಶಕ ಅಶ್ವಿನ್ ಚಿತ್ರ ಮೂಡಿಬಂದ ಬಗೆ ವಿವರಿಸಿದರು. ನಾಯಕಿಯರಾದ ಇಶಿತಾ ವರ್ಷ ಹಾಗೂ ಸ್ನೇಹಾ ಸಿಂಗ್ ಪಾತ್ರ ಹಾಗೂ ಚಿತ್ರ ಬಗ್ಗೆ ಹೇಳಿಕೊಂಡರು. ಅಲ್ಲಿಗೆ ಹಾಡುಗಳ ಬಿಡುಗಡೆಗೆ ಬ್ರೇಕ್ ಬಿತ್ತು.