ಆಗಷ್ಟೇ ಮಳೆರಾಯ ತನ್ನ ಕೆಲಸ ಪೂರ್ತಿಗೊಳಿಸಿ ತನ್ನ ಮನೆಗೆ ಹೊರಟಿದ್ದ. ನೆಲವು ನೀರಿನ ಹೊಳೆಯಾಗಿತ್ತು. ಹೊರಗೆ ಚಟಪಟ ಕುರುಹು ಇನ್ನು ಸ್ವಲ್ಪ ಸ್ವಲ್ಪವೇ ಉಳಿದಿತ್ತು. ಒಂದೊಂದು ಹನಿಯು ನನ್ನನ್ನು ನೆನಪಿನಾಳಕ್ಕೆ ಕರೆದೊಯ್ಯುತ್ತಿತ್ತು. ಹೌದು, ಆಗಿನ್ನು ನಾ ಪುಟ್ಟ ಹುಡುಗಿ, ಆಗ.
ಹಸಿರೆಲೆಯ ಜೊತೆ ಆಟವಾಡಿಕೊಂಡು ಬರುತ್ತಿದ್ದೆ ನಾನು. ಆ ಹಸಿರೆಲೆಗಳು ನನ್ನ ಅಚ್ಚುಮೆಚ್ಚಿನ ಗೆಳತಿಯರಾಗಿದ್ದರು. ಜೋರಾಗಿ ಮಳೆ ಸುರಿಯಲು ನಾನು ಪೂರ್ತಿ ನೆನೆದೆ. ಅಪ್ಪ ಕೊಡೆ ಹಿಡಿದು ಬಂದರು. ಅಮ್ಮ, “”ಏನ್ರೀ ನೀವು ಒದ್ದೆ ಆಗ್ತಿದ್ದಿರಾ, ತಡೀರಿ ನಾ ಇನ್ನೊಂದು ಕೊಡೆ ತರುವೆ” ಎನ್ನುವಾಗ ಅವರ ಪ್ರೀತಿ ಕಂಡು ನನ್ನ ಪುಟ್ಟ ಮನಸ್ಸು ಅದೆಷ್ಟು ಖುಷಿಪಡುತ್ತಿತ್ತು.
ಮಳೆರಾಯ ಎಂದಾಗ ನೆನಪಾಯ್ತು. ಇಂದಿಗೂ ಅಂದಿಗೂ ನನ್ನ ಜೀವನದ ವಿಶೇಷವಾದ ವಿಶೇಷವನ್ನು ತಂದುಕೊಟ್ಟಿರುವ ಕೊಡುತ್ತಿರುವ ಸ್ನೇಹಿತ. ಅಪ್ಪ ನನ್ನ ಬಳಿ ಬಂದು, “”ಪೂರ್ತಿ ಒದ್ದೆ ಆದೆಯಾ ಬಂಗಾರು?” ಎಂದು ನನ್ನ ಕೈಹಿಡಿಯಲು, ಅಮ್ಮ ಬ್ಯಾಗ್ ಹೆಗಲೇರಿಸಿಕೊಂಡು ಜೊತೆಜೊತೆಯಾಗಿ ನಡೆಯಲು ಎಲ್ಲೆಲ್ಲಿದ ಸಂತೋಷ ಸಡಗರ. ಹೀಗೆ ಮನೆ ತಲುಪಿದೆವು. ರಾತ್ರಿ ಅಪ್ಪನ ಜೊತೆ ಮುಂದುವರಿದ ಕಥೆ-ಕವನಗಳ ಮಾತುಕತೆ. ಅದು ಮುಕ್ತಾಯಗೊಳ್ಳುವುದು ನಿದ್ರಾದೇವಿಯ ಮಡಿಲಲ್ಲಿ.
ಮುಂಜಾನೆ ಸ್ಕೂಲಿಗೆ ಮತ್ತೆ ಪಯಣ ನನ್ನ ಮಳೆರಾಯನ ಸಂಗಡ! ಅವತ್ತು ನನಗೆ ಮತ್ತೂಬ್ಬ ಬಹುಮುಖ್ಯವಾದ ವ್ಯಕ್ತಿ ನನ್ನ ಜೀವನದಲ್ಲಿ ಸಿಗುತ್ತಾನೆಂದು ಎಣಿಸಿರಲಿಲ್ಲ. ಆ ಶುಭ ಗಳಿಗೆ ಬಂದೇಬಿಟ್ಟಿತು. ದಾರಿಯಲ್ಲಿ ಯಾವುದೋ ಪುಟ್ಟ ಧ್ವನಿ ನನ್ನ ಕೂಗಿದಂತೆ ಭಾಸವಾಯಿತು. ಅದೆಲ್ಲಿಂದ ಎಂದು ಹುಡುಕಿದಾಗ ಪುಟ್ಟ ಹಸಿರೆಲೆಯ ಗಿಡದ ಕೆಳಗೆ ಮುದ್ದಾದ ನಾಯಿಮರಿಯು ಚಳಿಯಲ್ಲಿ ನಡುಗಿ ಅಮ್ಮನಿಗಾಗಿ ಕಾಯುವಂತಿತ್ತು. ಅಂದಿನವರೆಗೂ ಪ್ರಾಣಿಗಳ ಜೊತೆ ಒಡನಾಡಿರದ ನಾನು, ಅದರ ಬಗ್ಗೆ ಅನುಕಂಪ-ಪ್ರೀತಿ ಇರದ ನಾನು, ನನಗೆ ಆಶ್ಚರ್ಯವಾಗುವಂತೆ ಎತ್ತಿಕೊಂಡು ಅಲ್ಲೇ ಇದ್ದ ಪಾಳುಗುಡಿಯಲ್ಲಿ ಬಿಟ್ಟೆ . ಜೊತೆಗೆ ನನ್ನ ಪುಟ್ಟ ಕಚೀìಫ್ ಹಾಕಿ ಅಮ್ಮ ಕೊಟ್ಟಿದ್ದ ಬಿಸ್ಕತ್‌ನ್ನು ತಿನಿಸಿ ಶಾಲೆ ಕಡೆ ಹೊರಟೆ.
ಎಂದಿನಂತೆ ಶಾಲೆಯಿಂದ ಹಿಂತಿರುಗುವಾಗ ನನಗೆ ತಿಳಿಯದಂತೆ ನನ್ನ ಮನಸು ಆ ನಾಯಿಮರಿಯ ಬಳಿ ಕರೆದುಕೊಂಡು ಹೋಯಿತು. ಅದು ಕೂಡ ನನಗಾಗಿ ಕಾಯುತ್ತಿರುವಂತೆ ತೋರಿತು. ಹೋಗಿ ಮತ್ತಷ್ಟು ಹೊತ್ತು ಅದರ ಜೊತೆ ಕಳೆದೆ. ಆದರೆ ಅಪ್ಪ-ಅಮ್ಮನ ನೆನಪಾದಾಗ “ಟಾಟಾ’ ಹೇಳಿ ಬರಲು ಹೃದಯವೇಕೋ ಭಾರವಾಗಿತ್ತು. ಮನೆಗೆ ಬಂದು ಅಪ್ಪ-ಅಮ್ಮನ ಬಳಿ ಹೇಳಿದೆ. ಅಪ್ಪ ನಮ್ಮ ಬಳಿಯೇ ಸಾಕೋಣವೆಂದರು. ತಕ್ಷಣ ಹೋಗಿ ಅವನನ್ನು ಕರೆದುಕೊಂಡು ಬಂದೆವು. ಅದೇ ದಿನ ಅವನ ಹುಟ್ಟುಹಬ್ಬವೆಂದು ಭಾವಿಸಿ “ರಾಮು’ ಎಂಬ ಹೆಸರನ್ನು ನಿರ್ಧರಿಸಿದೆವು.
ಹೀಗೆ ನೆನಪಿನಂಗಳದಲ್ಲಿ ನಾನಿರಲು ಒಂಬತ್ತು ವರ್ಷದ ರಾಮು ಕೂಗಿತು. ಈಗ ಅವನ ವಾಕಿಂಗ್ ಸಮಯ. ಸಂಜೆ ನನ್ನೊಡನೆ ಅವನು ಖಷಿಯಿಂದ ಕಳೆಯುವ ವೇಳೆ. “ಸರಿ ಬರ್ತೀನಪ್ಪ , ನೀ ನಡಿ’ ಎಂದಾಗ ಬಾಲ ತಿರುಗಿಸಿಕೊಂಡು ಅಪ್ಪ-ಅಮ್ಮನಿಗೆ ಕರೆ ನೀಡಲು ಹೋದ. ಎಲ್ಲರೂ ಪಾರ್ಕ್‌ಗೆ ಹೊರಟಾಗ ಮಳೆ ತಿಳಿ ತಿಳಿಯಾಗಿ ಭೂ ಒಡಲ ಸೋಕಿಸಿದಂತಿತ್ತು. ದಾರಿಯಲ್ಲಿ ರಾಮು ನಡೆಯುತ್ತಿರುವಾಗ ಬಾನೆತ್ತರ ನಾ ನೋಡಿದೆ, ಬಾನು ತಿಳಿಯಾಗಿತ್ತು!
ಯಶಸ್ವಿನಿ ಶಂಕರ್,
ಮೂರನೆಯ ವರ್ಷದ ಬಿ. ಇ. ಕೆನರಾ ಇಂಜಿನಿಯರಿಂಗ್ ಕಾಲೇಜು, ಬೆಂಜನಪದವು