ಕೆಲವೊಮ್ಮೆ ಮನೆ ಕಟ್ಟುವಾಗ ಉದ್ದೇಶಿಸಿರುವ ಜಾಗದಲ್ಲಿ ಮರ ಇದ್ದರೆ ಅದನ್ನು ಕಡಿಯಬೇಕಾಗುತ್ತದೆ. ಆದರೆ ಇಲ್ಲೊಬ್ಬರು ಇದಕ್ಕಿಂತ ಭಿನ್ನ. ಮರವನ್ನು ಹಾಗೇ ಉಳಿಸಿ ಅದಕ್ಕೆ ಹೊಂದಿಕೊಂಡು ಮನೆ ನಿರ್ಮಿಸಿ ಪರಿಸರ ಪ್ರೇಮಕ್ಕೊಂದು ಮಾದರಿಯಾಗಿದ್ದಾರೆ. ಉದಯಪುರದ ಕುಲ್ ಪ್ರದೀಪ್ ಸಿಂಗ್ ಎನ್ನುವ ಎಂಜಿನಿಯರ್ ನಿರ್ಮಿಸಿದ ಈ ರೀತಿಯ ಮನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ. ಅವರು ಮನೆ ಕಟ್ಟಲು ಯೋಚಿಸಿದ್ದ ಜಾಗದಲ್ಲಿ ದೊಡ್ಡ ಮಾವಿನ ಮರವಿತ್ತು.
ಅದನ್ನು ಕಡಿದು ಅವರಿಗೆ ಅಲ್ಲಿ ಮನೆ ನಿರ್ಮಿಸಬಹುದಿತ್ತು. ಆದರೆ ಅವರು ಎಲ್ಲರಂತೆ ಯೋಚಿಸಲಿಲ್ಲ. ಬದಲಾಗಿ ಪ್ರಕೃತಿಯ ಜತೆ ಜತೆಗೇ ಸಾಗುವ ನಿರ್ಧಾರ ಮಾಡಿದರು. ಮರವನ್ನು ಒಳಗೊಂಡೇ ಮನೆ ನಿರ್ಮಿಸಿ ಇತರರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಕೆ.ಪಿ.ಸಿಂಗ್ ಅವರ ಮನೆಯ ಬೆಡ್ ರೂಂ, ಗೆಸ್ಟ್ ರೂಂ, ಅಡುಗೆ ಕೋಣೆ ಮಾವಿನ ಮರದ ರೆಂಬೆಯ ಅಡಿಯಲ್ಲಿದೆ. ಒಟ್ಟಿನಲ್ಲಿ ಇದು ಈಗ “ವೃಕ್ಷ ಮನೆ’ಯಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು ಆಗಿ ಬದಲಾಗಿದೆ.
ಯೋಜನೆ ಹೊಳೆದ ಬಗೆ
ಮರ ಬೆಲೆ ಬಾಳುವ ಸಂಪತ್ತು ಎನ್ನುವುದನ್ನು ಪ್ರಶಾಂತ್ ಯಾವತ್ತೂ ಪ್ರತಿಪಾದಿಸುತ್ತಿರುತ್ತಾರೆ. ಆದ್ದರಿಂದಲೇ ಅವರು ತನ್ನ ಮನೆ ನಿರ್ಮಿಸುವಾಗ ಅಲ್ಲಿದ್ದ ಸುಮಾರು 80 ವರ್ಷ ಹಳೆಯ ಮಾವಿನ ಮರವನ್ನು ಕಡಿಯಲು ಮುಂದಾಗಲಿಲ್ಲ. ಅದನ್ನು ಒಳಗೊಂಡೇ 2000ನೇ ಇಸವಿಯಲ್ಲಿ ಅವರು 4 ಅಂತಸ್ತಿನ ಮನೆ ನಿರ್ಮಿಸಿದರು. ಮರದ ರೆಂಬೆಗೆ ಅನುಸರಿಸಿ ಕೆ.ಪಿ.ಸಿಂಗ್ ಮನೆಯ ವಿನ್ಯಾಸ ರಚಿಸಿದ್ದರು. ಕೆಲವು ಕೊಂಬೆಗಳನ್ನು ಸೋಫಾದಂತೆಯೂ, ಟಿ.ವಿ. ಸ್ಟಾಂಡ್ ಆಗಿಯೂ ಅವರು ಉಪಯೋಗಿಸುತ್ತಿದ್ದಾರೆ. ಮೊದಲೇ ಹೇಳಿದಂತೆ ಅಡುಗೆ ಕೋಣೆ ಮತ್ತು ಬೆಡ್ ರೂಂನಿಂದ ರೆಂಬೆಗಳು ಬೆಳೆಯುತ್ತಿವೆ!
ಅಜ್ಮೀರ್‌ನಲ್ಲಿ ಹುಟ್ಟಿದ್ದ ಕೆ.ಪಿ.ಸಿಂಗ್ ಆಮೇಲೆ ಉದಯಪುರ್‌ನಲ್ಲಿ ಸ್ಥಳ ಕೊಂಡುಕೊಂಡರು. ಅವರು ಖರೀದಿಸಿದ ಜಾಗದಲ್ಲಿ ಹಿಂದೆ ಸಮೃದ್ಧವಾಗಿ ಮರಗಳಿದ್ದವು. ಅಲ್ಲಿದ್ದವರು ಮರದಲ್ಲಿನ ಹಣ್ಣುಗಳನ್ನು ಮಾರಿ ಆದಾಯ ಗಳಿಸುತ್ತಿದ್ದರು. ಕ್ರಮೇಣ ನಗರ ಬೆಳೆಯುತ್ತ ಹೋದಂತೆ ಮರಗಳನ್ನು ಕಡಿಯಲಾಯಿತು. ಆ ಜಾಗದಲ್ಲಿದ್ದ ಸುಮಾರು 4 ಸಾವಿರದಷ್ಟು ಮರಗಳನ್ನು ನೆಲಕ್ಕುರುಳಿಸಲಾಗಿತ್ತು ಎನ್ನುತ್ತದೆ ಲೆಕ್ಕಾಚಾರ. ಇದನ್ನೆಲ್ಲ ತಿಳಿದುಕೊಂಡಿದ್ದ ಕೆ.ಪಿ.ಸಿಂಗ್ ಆ ಸ್ಥಳದಲ್ಲಿದ್ದ ಮರ ಕಡಿಯದಿರಲು ದೃಢ ನಿರ್ಧಾರ ಕೈಗೊಂಡರು. ಮರವನ್ನು ಬೇರು ಸಮೇತ ಕಿತ್ತು ಬೇರೆಡೆ ನಡೆವ ಯೋಜನೆ ಇತ್ತಾದರೂ ಅದು ದುಬಾರಿಯಾಗಿತ್ತು. ಹೀಗಾಗಿ ಐಐಟಿಯಲ್ಲಿ ಎಂಜಿನಿಯರಿಂಗ್ ಓದಿದ್ದ ಅವರು ಮರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಮನೆಯ ನಕ್ಷೆ ತಯಾರಿಸಿದರು. ಮನೆ ನಿರ್ಮಿಸುವ ಮುನ್ನ ಅವರು ಮರದ ಸುತ್ತ ನಾಲ್ಕು ಕಂಬಗಳನ್ನು ನೆಟ್ಟರು. ಅದು ಎಲೆಕ್ಟ್ರಿಕಲ್ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತದೆ.
ಮಳೆಗಾಲದಲ್ಲಿ ಮಿಂಚಿನಿಂದ ಮರವನ್ನು ಈ ಕಂಬಗಳು ಸಂರಕ್ಷಿಸುತ್ತದೆ. ಮರಕ್ಕೆ ಘಾಸಿಯಾಗಬಾರದು ಎಂಬ ಕಾರಣಕ್ಕೆ ಮನೆ ನಿರ್ಮಾಣಕ್ಕೆ ಸಿಮೆಂಟ್ ಬಳಸಿಲ್ಲ. ಸ್ಟೀಲ್‌ನಿಂದಲೇ ಇಡೀ ಮನೆಯನ್ನು ರಚಿಸಲಾಗಿದೆ. ನೆಲ ಮತ್ತು ಗೋಡೆಗಳನ್ನು ಫೈಬರ್ ಮತ್ತು ಸೆಲ್ಯೂಲಾಸ್ ಬಳಸಿ ನಿರ್ಮಿಸಲಾಗಿದೆ ಎನ್ನುತ್ತಾರೆ ಕೆ.ಪಿ.ಸಿಂಗ್.
ಕೆ.ಪಿ.ಸಿಂಗ್ ಅವರ ಮನೆ ಫ್ಯಾನ್ ಬಳಸದೆಯೂ ಯಾವಾಗಲೂ ತಂಪಾಗಿರುತ್ತದೆ. ಅವರ ತಾಯಿಯ ಅನಾರೋಗ್ಯದ ಕಾರಣ ಈ ಮನೆಯ ಪಕ್ಕವೇ ಇನ್ನೊಂದು ಮನೆಯನ್ನು ನಿರ್ಮಿಸಿದ್ದು ಅವರು ಅಲ್ಲಿ ವಾಸಿಸುತ್ತಾರೆ. ಆದರೆ ಕೆ.ಪಿ.ಸಿಂಗ್ ಈ ವೃಕ್ಷ ಮನೆಯಲ್ಲಿಯೇ ಆರಾಮವಾಗಿ ವಾಸಿಸುತ್ತಿದ್ದಾರೆ.
ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ
ಈ ವೃಕ್ಷ ಮನೆ ಈಗಾಗಲೇ ಲಿಮ್ಕಾ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಮಾತ್ರವಲ್ಲ ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವೂ ಆಗಿದೆ. ಪ್ರಕೃತಿಯ ಪ್ರಾಧಾನ್ಯತೆ ಮತ್ತು ವಾಸ್ತುಶಾಸ್ತ್ರ ಎಂಜಿನಿಯರಿಂಗ್ ಕುರಿತು ಅಧ್ಯಯನ ಮಾಡಲೂ ಸಾಕಷ್ಟು ಮಂದಿ ಈ ಮನೆಗೆ ಭೇಟಿ ನೀಡುತ್ತಾರೆ.
-ರಮೇಶ್ ಬಿ.