ಜೈಪುರ/ಹೊಸದಿಲ್ಲಿ: ಸಚಿನ್ ಪೈಲಟ್ ಸೇರಿದಂತೆ ರಾಜಸ್ಥಾನ ಕಾಂಗ್ರೆಸ್‌ನ 19 ಬಂಡಾಯ ಶಾಸಕರಿಗೆ ಹೈಕೋರ್ಟ್ 4 ದಿನಗಳ ರಿಲೀಫ್ ನೀಡಿದೆ. ಅನರ್ಹತೆಯ ನೋಟಿಸ್‌ಗೆ ಸಂಬಂಧಿಸಿ ಬಂಡಾಯ ಶಾಸಕರ ವಿರುದ್ಧ ಮಂಗಳವಾರ ಸಂಜೆ 5.30ರವರೆಗೂ ವಿಧಾನಸಭೆಯ ಸ್ಪೀಕರ್ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಹೇಳಿದೆ. ನ್ಯಾಯಾಲಯದ ಈ ಆದೇಶದಿಂದಾಗಿ ಆರಂಭಿಕ ಹೋರಾಟದಲ್ಲಿ ಪೈಲಟ್ ಬಣ ಮುನ್ನಡೆ ಸಾಧಿಸಿದಂತಾಗಿದೆ.
ತಮಗೆ ಜಾರಿ ಮಾಡಲಾಗಿದ್ದ ಅನರ್ಹತೆ ನೋಟಿಸ್ ಪ್ರಶ್ನಿಸಿ ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಸಂಜೆ ವಿಚಾರಣೆ ನಡೆಸಿದ ಕೋರ್ಟ್‌ನ ವಿಭಾಗೀಯ ಪೀಠ, ಈ ಆದೇಶ ನೀಡಿದೆ. ಮುಂದಿನ ವಿಚಾರಣೆ ಸೋಮವಾರ ನಡೆಯಲಿದ್ದು, ಅಂದು ಸ್ಪೀಕರ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು ತಮ್ಮ ವಾದವನ್ನು ಮುಂದಿಡಲಿದ್ದಾರೆ.
ಮುಖ್ಯಮಂತ್ರಿಯವರ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸುವುದು, ಅದಕ್ಕೆ ಪ್ರತಿರೋಧ ಒಡ್ಡುವುದು ಪಕ್ಷಾಂತರವಾ ಗುವುದಿಲ್ಲ. ಅದು ಶಾಸಕರ ಅಭಿವ್ಯಕ್ತಿ ಸ್ವಾತಂತ್ರ್ಯವಾಗುತ್ತದೆ. ಅಲ್ಲದೆ, ಬಂಡಾಯ ಶಾಸಕರು ಸಿಎಂ ಬದಲಾವಣೆಗೆ ಕೋರುತ್ತಿ ದ್ದಾರೆಯೇ ಹೊರತು, ಸರಕಾರದ ಬದಲಾವಣೆಯನ್ನು ಬಯಸುತ್ತಿಲ್ಲ ಎಂದು ಪೈಲಟ್ ಪರ ವಕೀಲರಾದ ಹರೀಶ್ ಸಾಳ್ವೆ ವಾದಿಸಿದ್ದಾರೆ.
ಎಫ್ಐಆರ್: ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿ ಶುಕ್ರವಾರ ಹಲವು ಬೆಳವಣಿಗೆಗಳು ನಡೆದಿವೆ. ಶಾಸಕರನ್ನು ಖರೀದಿಸುವ ಮೂಲಕ ಸರಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಹೇಳಲಾದ ಆಡಿಯೋ ಕ್ಲಿಪ್‌ಗ್ಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಜತೆಗೆ ದೂರನ್ನೂ ನೀಡಿದ್ದು, ರಾಜಸ್ಥಾನ ಪೊಲೀಸರು ಎರಡು ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಆದರೆ, ಶೇಖಾವತ್ ಅವರು ಆಡಿಯೋದ ಲ್ಲಿರುವ ಧ್ವನಿ ನನ್ನದಲ್ಲ. ಅದು ತಿರುಚಿದ ಆಡಿಯೋ ಕ್ಲಿಪ್. ನಾನು ಯಾವುದೇ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದೂರುದಾರ ಹಾಗೂ ಕಾಂಗ್ರೆಸ್ ಮುಖ್ಯ ಸಚೇತಕ ಮಹೇಶ್ ಜೋಷಿ, ಆಡಿಯೋ ಕೇಳಿಸಿಕೊಂಡವರೆಲ್ಲರೂ ಅದು ಶೇಖಾ ವತ್ ಅವರದ್ದು ಎಂದು ಗುರುತಿಸಿದ್ದಾರೆ. ತನಿಖೆಯ ನಂತರ ಎಲ್ಲವೂ ಸ್ಪಷ್ಟವಾಗಲಿದೆ. ಅವರಾಗಿಯೇ ವಿಶೇಷ ಕಾರ್ಯ ಪಡೆಯ ಬಳಿ ಬಂದು ತಮ್ಮ ಧ್ವನಿ ಮಾದರಿ ಯನ್ನು ಪರೀಕ್ಷೆಗೆ ಒಪ್ಪಿಸಲಿ ಎಂದಿದ್ದಾರೆ.
ಪೊಲೀಸರ ಪ್ರವೇಶ: ಬಂಡಾಯ ಶಾಸಕರು ತಂಗಿದ್ದ ಹರ್ಯಾಣ ಮನೇಸರ್‌ನ ರೆಸಾರ್ಟ್‌ಗೆ ರಾಜಸ್ಥಾನ ಪೊಲೀಸರು ಪ್ರವೇಶಿಸಲು ಯತ್ನಿಸಿದಾಗ ಹೈಡ್ರಾಮ ಉಂಟಾಯಿತು. ಬಹಳಷ್ಟು ಕೊಸರಾಟದ ಬಳಿಕ ಅವರಿಗೆ ಒಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು.
ಅಮಾನತು: ಇದೇ ವೇಳೆ, ಬಿಜೆಪಿ ನಾಯಕರೊಂದಿಗೆ ಡೀಲ್ ಕುದುರಿಸುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಇಬ್ಬರು ಬಂಡಾಯ ಶಾಸಕರನ್ನು ಕಾಂಗ್ರೆಸ್ ಅಮಾನತು ಮಾಡಿದೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಹೆಸರನ್ನು ಕಾಂಗ್ರೆಸ್ ವಿನಾ ಕಾರಣ ಎಳೆದುತಂದಿದೆ. ಈ ಕ್ಲಿಪ್‌ಗ್ಳು ರಾಜಸ್ಥಾನದಲ್ಲಿ ವಾಟರ್‌ಗೆಟ್ ಹಗರಣ ನಡೆದಿದೆ ಎಂಬುದನ್ನು ತೋರಿಸುತ್ತಿದೆ. ಕಾಂಗ್ರೆಸ್‌ಗೆ ಆಡಿಯೋ ಟೇಪ್ ಸಿಕ್ಕಿದ್ದಾದರೂ ಎಲ್ಲಿಂದ? ಇದಕ್ಕಾಗಿ ಸರ್ಕಾರಿ ಸಂಸ್ಥೆಯನ್ನು ಬಳಸಿಕೊಳ್ಳಲಾಗಿದೆಯೇ?
ಡಾ| ಸತೀಶ್ ಪೂನಿಯಾ, ರಾಜಸ್ಥಾನ ಬಿಜೆಪಿ ಅಧ್ಯಕ್ಷ