ಬೆಂಗಳೂರು: ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ಮೂಲದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಮಾರ್ಕ್ ಜಸ್ಟೀಸ್ (32) ಬಂಧಿತ. ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ 70 ಗ್ರಾಂ ಕೊಕೇನ್, 10 ಸಾವಿರ ರೂ.ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.
ಕೆಲ ವರ್ಷಗಳ ಹಿಂದೆ ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿರುವ ಆರೋಪಿ ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಜತೆ ಒಡನಾಟ ಬೆಳೆಸಿಕೊಂಡು ನಿಷೇಧಿತ ಮಾದಕ ವಸ್ತುಗಳನ್ನು ತರಿಸಿ ಮಾರಾಟ ಮಾಡುತ್ತಿದ್ದ ಎಂದು ಸಿಸಿಬಿ ಪೊಲೀಸರು ಹೇಳಿದರು.
ಡಿಕ್ಷನರಿಯಲ್ಲಿ ಡ್ರಗ್ಸ್!: ಮೇಲ್ಭಾಗದಲ್ಲಿ “ದಿ ನ್ಯೂ ಇಂಗ್ಲಿಷ್ ಡಿಕ್ಷನರಿ’ ಎಂಬ ಪುಸ್ತಕ. ಒಳಭಾಗದಲ್ಲಿ ಸಿಕ್ರೆಟ್ ಲಾಕರ್ ಹೊಂದಿರುವ ಡ್ರಗ್ಸ್ ಇಡುವ ಸ್ಥಳ. ಆರೋಪಿ ಪೊಲೀಸರ ಕಣ್ಣು ತಪ್ಪಿಸಲು ಇಂಗ್ಲಿಷ್ ಡಿಕ್ಷನರಿ ಎಂಬ ಮುಖಪುಟದ ಪುಸ್ತಕದ ಒಳ ಭಾಗದಲ್ಲಿ ಮಾದಕ ವಸ್ತು ಇಡಲು ಸಿಕ್ರಿಟ್ ಲಾಕರ್ ಮಾಡಿಸಿದ್ದಾನೆ. ಅದರಲ್ಲಿ ಮಾದಕ ವಸ್ತು ಗಳನ್ನು ಇಟ್ಟು ಗ್ರಾಹಕರಿಗೆ ಪೂರೈಕೆ ಮಾಡು ತ್ತಿದ್ದ. ಇತ್ತೀಚೆಗೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್ ನಡೆಸುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಮಾದಕವಸ್ತು ಸಮೇತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.